F1 ಕಾರುಗಳ ಗಾಲಿಗಳ ಒಳಗುಟ್ಟು

ರಗುನಂದನ್.

Formula One World Championship, Rd8, British Grand Prix, Race Day, Silverstone, England, Sunday 30 June 2013.

ಜಗತ್ತಿನಲ್ಲಿ ತುಂಬಾ ವೇಗವಾಗಿ ಓಡುವ ಬಂಡಿಗಳು ಯಾವು ಎಂದರೆ ತಟ್ಟನೆ ನೆನಪಾಗುವುದು ಪಾರ‍್ಮುಲಾ ವನ್ ಕಾರುಗಳು. ಪಾರ‍್ಮುಲಾ 1 ಪಯ್ಪೋಟಿ ಒಂದು ವರುಶ ಇಡೀ ನಡೆಯುತ್ತದೆ. ಈ ಪಯ್ಪೋಟಿಗೆ ಗ್ರಾನ್‌ಪ್ರೀ (grandprix) ಎಂದು ಕೂಡ ಕರೆಯುತ್ತಾರೆ. ವರುಶದ ಕೊನೆಯಲ್ಲಿ ಯಾವ ತಂಡ ಹೆಚ್ಚು ಅಂಕಗಳನ್ನು ಗಳಿಸಿರುತ್ತದೋ ಅದು ಪಾರ‍್ಮುಲಾ 1 ಕಿರೀಟವನ್ನು ಮುಡಿಗೇರಿಸಿಕೊಳ್ಳುತ್ತದೆ. ಒಂದು ತಂಡದ ಗೆಲುವು ಬರಿ ಕಾರಿನ ಓಡಿಸುಗನೊಬ್ಬನ ಅಳವಿನ (capacity) ಮೇಲೆ ನಿಂತಿರುವುದಿಲ್ಲ. ಕಾರು ಕಯ್ಗಾರಿಕೆಗಳು ಪಾರ‍್ಮುಲಾ 1 ಪಯ್ಪೋಟಿಯನ್ನು ಪ್ರತಿಶ್ಟೆಯಾಗಿ ಪರಿಗಣಿಸುತ್ತವೆ. ಹಾಗಾಗಿ ಕಾರುಗಳ ಚಳಕರಿಮೆ (technology) ಮೇಲೆ ಕಂಪನಿಗಳು ಹೆಚ್ಚು ಹೆಚ್ಚು ಅರಕೆ ಮತ್ತು ಬೆಳವಣಿಗೆ (research and development) ಕಯ್ಗೊಳ್ಳುತ್ತವೆ.

ಪಾರ‍್ಮುಲಾ 1 ಪಯ್ಪೋಟಿಗೆ ತಂಡಗಳು ಪಾಲ್ಗೊಳ್ಳಬೇಕಾದರೆ ಪಾರ‍್ಮುಲಾ 1 ಕೆಲಸಗಳನ್ನು ನೋಡಿಕೊಳ್ಳುವ ಎಪ್.ಅಯ್.ಎ (FIA) ಎಂಬ ಒಕ್ಕೂಟದ ಕಟ್ಟಲೆಗಳನ್ನು ಪಾಲಿಸಬೇಕಾಗುತ್ತದೆ. ಕಾರಿನಲ್ಲಿ ಬಳಸುವ ಕೆಲವು ಮುಕ್ಯವಾದ ಬಾಗಗಳ ಕುರಿತಾಗಿ ಈ ಕಟ್ಟಲೆಗಳು ಮಾಡಲಾಗಿವೆ. ಗಾಲಿ (ಚಕ್ರ) ಗಳ ಬಗ್ಗೆ ಎಪ್.ಅಯ್.ಎ ಕೊಟ್ಟಿರುವ ಕಟ್ಟಲೆ ಹೀಗಿದೆ:

ಎಲ್ಲಾ ಪಾರ‍್ಮುಲಾ 1 ತಂಡಗಳು ಒಂದೇ ಬಗೆಯ, ಒಂದೇ ಕಂಪನಿ ಉಂಟುಮಾಡಿದ ಗಾಲಿಗಳನ್ನೇ ಬಳಸಬೇಕು.

ಈ ಕಟ್ಟಲೆ ಯಾಕೆ ಮುಕ್ಯವಾಗುತ್ತದೆ ಎಂದು ಮುಂದೆ ನೋಡೋಣ. ಅಂದಹಾಗೆ, ಪಾರ‍್ಮುಲಾ 1 ನಲ್ಲಿ ಬಳಸುವ ಗಾಲಿಗಳನ್ನು ಉಂಟುಮಾಡುವ ಕಂಪನಿ ಇಟಲಿಯ ಪಿರೆಲ್ಲಿ (Pirelli).

ಬಂಡಿ ಓಟದ ಪಯ್ಪೋಟಿಗಳಲ್ಲಿ ಪಿಟ್ ಸ್ಟಾಪಿನ ಮಹತ್ವ

ಬಂಡಿ ಓಟದ (motorsports) ಪಯ್ಪೋಟಿಗಳಲ್ಲಿ ಪಿಟ್ ಸ್ಟಾಪ್ ಎಂದು ಕರೆಯಲ್ಪಡುವ ಒಂದು ನಿಲುಗಡೆ ಹಾದಿಯ ಬದಿಯಲ್ಲಿ ಇರುತ್ತದೆ. ಇದನ್ನು ಬೇಕಾದಶ್ಟು ಕಾರಣಗಳಿಗೆ ಬಳಸಲಾಗುತ್ತದೆ. ಉರವಲನ್ನು (fuel) ಮತ್ತೆ ತುಂಬಿಸುವುದಕ್ಕೆ, ಗಾಲಿಗಳನ್ನು ಬದಲಾಯಿಸುವುದಕ್ಕೆ, ಓಡಿಸುಗನನ್ನು ಬದಲಾಯಿಸುವುದಕ್ಕೆ, ಚಿಕ್ಕಪುಟ್ಟ ರಿಪೇರಿಗಳಿಗೆ ಈ ಪಿಟ್ ನಿಲುಗಡೆಯನ್ನು ಬಳಸಲಾಗುತ್ತದೆ. ಬಂಡಿ ಓಟದ ನಡುವೆಯೇ ಈ ಕೆಲಸಗಳು ನಡೆಯುತ್ತದೆ. ಅಂದರೆ ಇದರರ‍್ತ ಪಿಟ್ ಸ್ಟಾಪಿನಲ್ಲಿ ಕಳೆಯುವ ಹೊತ್ತು ಬಂಡಿಗಳು ತಮ್ಮ ಗುರಿಯನ್ನು ತಲುಪುವ ಒಟ್ಟು ಹೊತ್ತಿನ ಮೇಲೆ ಪರಿಣಾಮ ಬೀರುತ್ತದೆ! ಹಾಗಾಗಿ ಪಿಟ್ ನಿಲುಗಡೆಗಳನ್ನು ಓಡಿಸುಗನು ತುಂಬಾ ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ. ಒಂದು ತಂಡದ ಗೆಲುವು ಬಂಡಿ ಓಡಿಸುಗನು ಎಶ್ಟು ಪಿಟ್ ನಿಲುಗಡೆಗಳನ್ನು ಬಳಸುತ್ತಾನೆ ಎಂಬುದರ ಮೇಲೆ ತೀರ‍್ಮಾನವಾಗಿರುತ್ತದೆ. ಮತ್ತೊಂದು ನೋಟದಿಂದ ನೋಡಿದರೆ ಹೆಚ್ಚು ಹೆಚ್ಚು ಪಿಟ್ ನಿಲುಗಡೆಗಳನ್ನು ಬಳಸುವಂತೆ ನೋಡಿಕೊಂಡರೆ ಆಟ ಇನ್ನೂ ರೋಚಕವಾಗುತ್ತದೆ. ತಂಡಗಳ ನಡುವಿನ ಪಯ್ಪೋಟಿ ಮತ್ತಶ್ಟು ಹೆಚ್ಚುತ್ತದೆ. ಗಾಲಿಗಳನ್ನು ತಯಾರಿಸುವ ಇಟಲಿಯ ಕಂಪನಿ ಪಿರೆಲ್ಲಿ ಮಾಡಿದ್ದು ಇದೇನೆ.

ಪಿರೆಲ್ಲಿ ಕಂಪನಿಯ ಗಾಲಿಗಳು

2011 ರಿಂದ ಪಾರ‍್ಮುಲಾ 1 ಕಾರುಗಳಿಗೆ ಗಾಲಿಗಳನ್ನು ತಯಾರು ಮಾಡುತ್ತಿರುವುದು ಪಿರೆಲ್ಲಿ ಕಂಪೆನಿ. ಪಾರ‍್ಮುಲಾ 1 ಪಯ್ಪೋಟಿಯು ಇನ್ನಶ್ಟು ಹುರುಪುಳ್ಳದ್ದಾಗಿರಲಿ ಎಂಬ ನಿಟ್ಟಿನಲ್ಲಿ ಎಪ್.ಅಯ್.ಎ ಒಕ್ಕೂಟ ಪಿರೆಲ್ಲಿ ಕಂಪನಿಗೆ ಅದಕ್ಕೆ ತಕ್ಕ ಹಾಗೆ ಗಾಲಿಗಳನ್ನು ತಯಾರಿಸಲು ಹೇಳಿತ್ತು. ಎಪ್.ಅಯ್.ಎ ಅಂದುಕೊಂಡಂತೆ ತಂಡಗಳ ಸ್ತಾನ ಬೇಗನೇ ಏರುಪೇರು ಕಾಣಲು ಶುರುವಾಯಿತು. ಆದರೆ ಪಾರ‍್ಮುಲಾ 1 ಪೋಟಿ ಎರಡು ಕಾರುಗಳ ನಡುವಿನ ತಿಕ್ಕಾಟವಾಗಿರದೆ ಗಾಲಿಗಳ ನಡುವಿನ ತಿಕ್ಕಾಟವಾಗಲು ಶುರುವಾಯಿತು. ಪಿರೆಲ್ಲಿಯು ಉಂಟುಮಾಡಿದ ಹೊಸಬಗೆಯ ಗಾಲಿಗಳಲ್ಲಿ ಬೇಗನೇ ಮೇಲ್ಪದರವು ಸವೆದುಹೋಗಿ ಆಚೆಬರುತ್ತದೆ. ಹಾಗಾಗಿ ಹೆಚ್ಚೆಚ್ಚು ಸರತಿ ಕಾರುಗಳು ಪಿಟ್ ನಿಲುಗಡೆಯ ಹತ್ತಿರ ಗಾಲಿಗಳನ್ನು ಬದಲಿಸಿಕೊಳ್ಳಲು ಬರಬೇಕಾಗುತ್ತದೆ. ಇದು ಎಪ್.ಅಯ್.ಎ ಅಂದುಕೊಂಡಂತೆ ಆಟದ ರೋಚಕತೆ ಹೆಚ್ಚಿಸಿದರೂ ಓಡಿಸುಗರಿಗೆ ಹೆಚ್ಚು ಸರತಿ ನಿಲ್ಲಿಸಬೇಕಾದ ಕಾರಣ ಅವರಿಗೆ ಇರಿಸುಮುರುಸು ಆಗಲು ಮೊದಲಾಯಿತು. ಇದರ ಪರಿಣಾಮ ತಂಡಗಳ ಓಡಿಸುಗರು ಎಪ್.ಅಯ್.ಎ ಗೆ ದೂರು ಸಲ್ಲಿಸಿದರು.

ಇದರ ಪರಿಣಾಮವಾಗಿ ಪಿರೆಲ್ಲಿ ಕಂಪನಿಯು ಒಂದು ಹೊಸ ಎಸರಿನ ಬೆಸವಿನಿಂದ (chemical composition) ತಯಾರಿಸಿದ ಗಾಲಿಗಳನ್ನು ತಯಾರು ಮಾಡಿತು. ಇದನ್ನು ಮೂರು ತಂಡಗಳು ಮೇನಲ್ಲಿ ಇನ್ನೂ ಒಪ್ಪಿಕೊಂಡಿರಲಿಲ್ಲ. ಮರ‍್ಸೀಡಿಸ್ ಕಂಪನಿಯ ಕಾರುಗಳನ್ನು ಹೊಸ ಗಾಲಿಗಳ ಪರೀಕ್ಶೆಗಾಗಿ ಬಳಸಿದ ಕಾರಣ ಮರ‍್ಸೀಡಿಸ್ ಪಾರ‍್ಮುಲಾ 1 ತಂಡವು ಎಪ್.ಅಯ್.ಎ. ಒಕ್ಕೂಟದ ಕೆಂಗಣ್ಣಿಗೆ ಗುರಿಯಾಗಿದೆ. ಈ ಎಲ್ಲಾ ಗೊಂದಲಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಕಾರಣ ಪಿರೆಲ್ಲಿಗೆ ಮುಂದಿನ ಸಲಿ ಗಾಲಿಗಳ ಗುತ್ತಿಗೆ ಸಿಗುವುದು ಕಶ್ಟ ಎಂದು ಬಲ್ಲವರ ಅನಿಸಿಕೆ.

ಇದೆಲ್ಲದರ ನಡುವೆ ವಾರದ ಹಿಂದೆ ನಡೆದ ಸಿಲ್ವರ್‌ಸ್ಟೋನ್ ಗ್ರಾನ್‌ಪ್ರೀಯಲ್ಲಿ ನಾಲ್ಕು ಕಾರುಗಳ ಗಾಲಿಗಳು ಸಿಡಿದು ಹೊಸ ವಿವಾದ ಹುಟ್ಟಿಕೊಂಡಿದೆ. ಇದರ ಪರಿಣಾಮವಾಗಿ ಕೆಲವು ಓಡಿಸುಗರು ಮುಂದಿನ ಜರ‍್ಮನಿಯ ಗ್ರಾನ್‍ಪ್ರೀಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದರು. ಆದರೆ ಪಿರೆಲ್ಲಿ ಕಂಪೆನಿಯು ತಪ್ಪನ್ನು ತಂಡಗಳ ಮೇಲೆಯೇ ಹೊರಿಸಿದೆ. ಅವರು ಹೇಳುವ ಪ್ರಕಾರ ಗಾಲಿಗಳನ್ನು ಸರಿಯಾಗಿ ಕೂರಿಸದ ಕಾರಣ, ಬಲಗಾಲಿಯನ್ನು ಎಡಗಡೆ ಹಾಕುತ್ತಿರುವ ಕಾರಣ, ಕಡಿಮೆ ಒತ್ತಡ ನೀಡುತ್ತಿರುವ ಕಾರಣ ಹೀಗೆ ಸಿಡಿಯುವಿಕೆ ಆಗುತ್ತಿದೆ ಎಂದು. ಮೊನ್ನೆ ನಡೆದ ಜರ‍್ಮನ್ ಗ್ರಾನ್‍ಪ್ರೀಯಲ್ಲಿ ಕೆವ್ಲಾರ್ ಎಂಬ ವಸ್ತುವಿನಿಂದ ಮಾಡಿದ ಗಾಲಿಗಳನ್ನು ಬಳಸಲಾಗಿತ್ತು. ಈ ವರುಶ ಪಿರೆಲ್ಲಿ ಮತ್ತು ಎಪ್.ಅಯ್.ಎ. ಒಕ್ಕೂಟದ ನಡುವೆ ತಿಕ್ಕಾಟಗಳು ಮುಂದುವರೆಯಲಿದ್ದು 2014ರಲ್ಲಿ ಯಾರಿಗೆ ಗುತ್ತಿಗೆ ಸಿಗುತ್ತದೆ ಎಂಬುದು ಕುತೂಹಲವಾಗಿದೆ.

(ಚಿತ್ರ: www.grandprix247.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications