ಅವ್ವನ ನೆರಳಲ್ಲಿ ಕಂದಮ್ಮನ ಕಲಿಕೆ – 3
ಹಿಂದಿನ ಬಾಗದಲ್ಲಿ ಮಕ್ಕಲಿಕೆ ಗುಟ್ಟುಗಳಾದ “ಮಕ್ಕಲಿಕೆ ಬಗೆ”, “ಮಮ್ಮಿಡಿತ” ಹಾಗೂ “ಮಕ್ಕಳ ಒಲ್ಲ-ಸಲ್ಲಗಳು” ಬಗ್ಗೆ ಅರಿತುಕೊಂಡೆವು ಮತ್ತು ಅವುಗಳ ಬಳಕೆಯ ಬಗ್ಗೆ ಎತ್ತುಗೆಯನ್ನೂ ನೋಡಿದೆವು. ಈ ಬಾರಿ ಆ ಗುಟ್ಟುಗಳ ಬಳಕೆ ಮಾಡುವ ಕೆಲ ಚಳಕಗಳು ಮತ್ತು ನಿಗಾವಹಿಸಬೇಕಾದ ಕೆಲ ಅಂಶಗಳನ್ನು ನೋಡೋಣ.
ಅವ್ವಂದಿರು ಮಕ್ಕಲಿಕೆ ಗುಟ್ಟುಗಳ ಬಗ್ಗೆ ಅರಿಯಬೇಕಾದ ಒಂದು ದಿಟವೆಂದರೆ, ಆ ಗುಟ್ಟುಗಳು ಬಯಲು ಮಾಡುವ ಎಲ್ಲಾ ವಿಚಾರಗಳು ಮತ್ತು ಅವನ್ನು ಬಳಸುವ ಬಗೆಗಳು ಎಲ್ಲಾ ಮಕ್ಕಳಿಗೆ ಎಲ್ಲಾ ಸಾರಿಯೂ ಒಂದೇ ಬಗೆಯಾಗಿರುವುದಿಲ್ಲ. ಹೇಗೆ “One size fits all” ಎಂಬುದು ಎಲ್ಲಕ್ಕೂ ತಕ್ಕುದಾಗುವುದಿಲ್ಲವೋ ಹಾಗೆಯೇ ಮಕ್ಕಲಿಕೆ ವಿಚಾರದಲ್ಲೂ ಯಾವ ಸಮಯದಲ್ಲಿ ಯಾವ ಚಳಕ ಬಳಸಬೇಕು ಎಂಬ ಅರಿವು ಮುಕ್ಯ.
ಎತ್ತುಗೆಗೆ:
ಮಕ್ಕಳು ಆಟವಾಡುವ ಹೊತ್ತಿನಲ್ಲಿ ಬಣ್ಣಗಳು, ಪ್ರಾಣಿಗಳು, ತರಕಾರಿಗಳು, ಹಣ್ಣುಗಳು ಮುಂತಾದವುಗಳನ್ನು ಗುರುತಿಸಲು ಕಲಿಸಬಹುದು. ಆದರೆ ಈವೆಲ್ಲವನ್ನೂ ಒಂದೇ ಬಗೆಯಲಿ ಕಲಿಸಲು ಆಗದಿರಬಹುದು. ಕೆಲ ಮಕ್ಕಳಿಗೆ ಆಟಿಕೆ ಮೂಲಕವೇ ಕಲಿಯಲು ಚೆನ್ನ. ಕೆಲವರಿಗೆ ನಿಜವಾದ ವಸ್ತುಗಳನ್ನೇ (ನಿಜವಾದ ತರಕಾರಿ, ಹಣ್ಣು, ಇತ್ಯಾದಿ..) ಬಳಸಬೇಕು. ಇನ್ನು ಕೆಲ ಮಕ್ಕಳಿಗೆ ಅವುಗಳ ಬಗ್ಗೆ ಬಿಳಿ ಹಾಳೆಯಲ್ಲಿ ಬರೆದು, ಚಿತ್ರಿಸಿ ತೋರಿದರೆ ಅಚ್ಚುಮೆಚ್ಚು.
ಹೀಗೆ, ಮಕ್ಕಳ ಒಲ್ಲ-ಸಲ್ಲಗಳ ನೆಲೆಯ ಮೇಲೆ ಬೇರೆ ಬೇರೆ ಬಗೆಯನ್ನು ಬಳಸುವುದು ಒಂದು ಗಳಿಕೆ-ಚಳಕ (acquired skill). ಅದನ್ನು ನಿಗಾ ಇಟ್ಟು ರೂಡಿಸಿಕೊಂಡರೆ ಮಾತ್ರ ಒಲಿಯುವುದು. ಇದನ್ನು ಅವ್ವಂದಿರು ನೆನಪಿಡಬೇಕು.
ಮೂರು ವರ್‍ಶಗಳ ಮೇಲ್ಪಟ್ಟ ಮಕ್ಕಳು ಕೆಲವೊಮ್ಮೆ ಕತೆ ಇಲ್ಲವೆ ಹಾಡು ಕೇಳುವ ಮೂಲಕ, ಮತ್ತೊಮ್ಮೆ ಟೀವಿ ಇಲ್ಲವೆ ದಿಟವಾಗಿ ನೋಡುವ ಮೂಲಕ ಅನೇಕ ವಿಚಾರಗಳನ್ನು ಕಲಿಯಲು ಬಯಸುತ್ತಾರೆ. ಅಂತ ಹೊತ್ತಿನಲ್ಲಿ ಅದಕ್ಕೆ ತಕ್ಕುದಾದ ದಾಟಿಯಲ್ಲಿ ಕಲಿಸುವುದು ಮುಕ್ಯ.
ಮಕ್ಕಲಿಕೆ ನಾಟುಗೆ (impact)
ಒಟ್ಟಾರೆ ಮಕ್ಕಲಿಕೆ ಆಗುವಾಗ ವಿಚಾರಗಳು ಮಕ್ಕಳ ಎದೆಯಲ್ಲಿ ಸರಿಯಾಗಿ ನಾಟಬೇಕಾದರೆ ಇವುಗಳ ಬಗ್ಗೆ ನಿಗಾ ಇಡಬೇಕು:
• ಮಕ್ಕಲಿಕೆಯ ವಿಚಾರಗಳು ಮಕ್ಕಳಲ್ಲಿ ಇನ್ನೂ ಕಲಿಯಬೇಕೆಂಬ ಸೆಲೆ ಎಬ್ಬಿಸುವಂತಿರಬೇಕು
• ಮಕ್ಕಲಿಕೆಗೆ ಬಳಸುವ ಸಾದನಗಳು/ಸಲಕರಣೆಗಳು ಅವರ ಒಲ್ಲ-ಸಲ್ಲಗಳಿಗೆ ತಕ್ಕುದಾಗಿರಬೇಕು
• ಮಕ್ಕಲಿಕೆಯು ಅವರ ಸಹಜ ಆಟ-ಪಾಟಗಳೊಡನೆ ಅಡಕವಾಗಿರಬೇಕು
• ಯಾವುದೇ ಮಕ್ಕಲಿಕೆ ಮಕ್ಕಳಿಗೆ ಮುದ ನೀಡುವಂತಿರಬೇಕು
ಕೊನೆ ಮಾತು:
ಮಕ್ಕಳ ಮಯ್ಯೊಳಿತು (ಆರೋಗ್ಯ) ಕುರಿತ ಒಂದು ಕಿವಿಮಾತು. ಕಂದಮ್ಮಗಳಿಗೆ ಯಾವಾಗ ಬಿಸುಪು ಆದರೂ (ಜ್ವರ ಬಂದರೂ), ಮಗುವನ್ನು ಮಾಂಜುಗರ (ವಯ್ದ್ಯರ) ಬಳಿ ಒಯ್ಯುವ ಮುನ್ನ ಈ ಕೆಳಗಿನ ರೀತಿಯಲ್ಲಿ ಬಿಸುಪಿನ ಮಟ್ಟ ಮತ್ತು ಬೇರೆಬೇರೆ ಸಮಯದಲ್ಲಿ ಅದು ಮಾರ್‍ಪಾಡಾದ ಬಗೆಯನ್ನು ಪಟ್ಟಿಮಾಡಿ:
ಇದನ್ನು ಮಾಂಜುಗರಿಗೆ ತೋರಿದಾಗ ಬಿಸುಪಿನ ಏರಿಳಿತಗಳನ್ನು ಗಮನಿಸಿ ಮಗುವಿಗೆ ಯಾವಬಗೆಯ ಬಿಸುಪಾಗಿರಬಹುದು (ವೈರಲ್ ಜ್ವರ, ಮಾಮೂಲಿ ಜ್ವರ, ಇತ್ಯಾದಿ…) ಎಂದು ಸರಿಯಾಗಿ ಅರಿತು ಒಮ್ಮೆಲೇ ಅದಕ್ಕೆ ತಕ್ಕುದಾದ ಮದ್ದು ನೀಡಲು ಅನುಕೂಲವಾಗುತ್ತದೆ.
ಎಲ್ಲ ಅವ್ವಂದಿರಿಗೂ ಒಳಿತಾಗಲಿ. ನಿಮ್ಮ ಮಕ್ಕಳ ಕಲಿಕೆಯೂ ಚೆಂದಗಾಗಲಿ.
ಚಿತ್ರಗಳ ನೆರವು: www.freedigitalphotos.net
ಇತ್ತೀಚಿನ ಅನಿಸಿಕೆಗಳು