ಎಲ್ಲಾ ನುಡಿಗಳೂ ಸಮಾನ ಎನ್ನಲು ಏನು ತೊಂದರೆ?

ಚೇತನ್ ಜೀರಾಳ್.

RAJNATH_SINGH_1339342f

ಬಾರತ ದೇಶದಲ್ಲಿರುವ ಹಲವು ನುಡಿ ಹಾಗೂ ನಡೆಗಳ ಬಗ್ಗೆ ರಾಶ್ಟ್ರೀಯ ಪಕ್ಶಗಳು ಅಂತ ಕರೆದುಕೊಳ್ಳುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಶಗಳು ಇಟ್ಟುಕೊಂಡಿರುವ ಕಾಳಜಿಯ ಬಗ್ಗೆ ತಮ್ಮ ನಿಜ ಬಣ್ಣ ತೋರಿಸಿದ್ದಾರೆ.

ಬಿಜೆಪಿ ಪಕ್ಶ:

ಶನಿವಾರ ಜುಲಯ್ 19 ರಂದು ನಡೆದ ಕಾರ್‍ಯಕ್ರಮವೊಂದರಲ್ಲಿ ಮಾತನಾಡಿರುವ ಬಿಜೆಪಿ ಪಕ್ಶದ ಮುಂದಾಳು ಶ್ರೀ ರಾಜನಾತ್ ಸಿಂಗ್ ಅವರು ಮಾತನಾಡುತ್ತಾ,

ಈ ದೇಶದಲ್ಲಿ ಈಗ ಕೇವಲ 14000 ಜನರು ಮಾತ್ರ ಸಂಸ್ಕ್ರುತ ನುಡಿಯನ್ನು ಬಲ್ಲವರಿದ್ದಾರೆ, ಇಂಗ್ಲಿಶ್ ನುಡಿ ಬಾರತಕ್ಕೆ ಬಹಳಶ್ಟು ಹಾನಿಯುಂಟುಮಾಡಿದೆ. ಇಂಗ್ಲಿಶ್ ನಿಂದ ಸಿಗುವ ಅರಿಮೆ ಕೆಟ್ಟದಲ್ಲ, ಆದರೆ ನಾವು ಇಂಗ್ಲಿಶ್ ನವರಂತೆ ಆಗುತ್ತಿರುವುದು ಅಪಾಯಕಾರಿ

ಎಂದು ಹೇಳಿರುವುದು ಸುದ್ದಿಹಾಳೆಗಳಲ್ಲಿ ವರದಿಯಾಗಿದೆ.

ಕಾಂಗ್ರೆಸ್ ಪಕ್ಶ:

ರಾಜನಾತ್ ಸಿಂಗ್ ಅವರ ಹೇಳಿಕೆಗೆ ಕೇಂದ್ರ ಸರಕಾರದಲ್ಲಿ ಸಚಿವರಾಗಿರುವ ಕಾಂಗ್ರೆಸ್ ಪಕ್ಶದ ಶ್ರೀ ರಾಜೀವ್ ಶುಕ್ಲಾ ಅವರು,

ನನ್ನ ನೋಟದಲ್ಲಿ ಜನರು ಹಿಂದಿ, ಇಂಗ್ಲಿಶ್, ಸಂಸ್ಕ್ರುತ ಮತ್ತು ಅವರ ತಾಯಿನುಡಿಯನ್ನು ಕಲಿಯಬೇಕು. ನೀವು ಈ ವಿಶಯಗಳ ಬಗ್ಗೆ ಸಂಕುಚಿತ ಬಾವನೆಯನ್ನು ಬೆಳೆಸಿಕೊಳ್ಳಬಾರದು. ಯಾವುದೇ ನುಡಿಯನ್ನು ಕಲಿಯುವುದು ಕೆಟ್ಟದ್ದಲ್ಲ. ಬಿಜೆಪಿ ಪಕ್ಶದ ಮುಂದಾಳುಗಳ ಆಲೋಚನೆಯೇ ಸಣ್ಣ ಮಟ್ಟದ್ದಾಗಿದೆ

ಎಂದು ಹೇಳಿದ್ದಾರೆ.

ಹಲತನದ (ವಯ್ವಿದ್ಯತೆ) ಬಗ್ಗೆ ರಾಶ್ಟ್ರೀಯ ಪಕ್ಶಗಳಿಗೆ ಒಲವಿಲ್ಲ

ಈ ಎರಡೂ ಪಕ್ಶಗಳ ಹೇಳಿಕೆ ಹಾಗೂ ಮರುಹೇಳಿಕೆಗಳನ್ನು ನೋಡಿದರೆ, ಈ ರಾಶ್ಟ್ರೀಯ ಪಕ್ಶಗಳಿಗೆ ಬಾರತದಲ್ಲಿರುವ ಹಲ ನುಡಿ ಹಾಗೂ ನಡೆಯ ಬಗ್ಗೆ ಒಲವಿದ್ದಂತಿಲ್ಲ ಎಂಬುದು ಕಂಡುಬರುತ್ತದೆ. ಸಂಸ್ಕ್ರುತ ಬೆಳೆಯದಿರುವುದಕ್ಕೆ ಬಿಜೆಪಿಯವರಿಗೆ ನೋವಾದರೆ, ನೀವು ಹಾಗೆಲ್ಲ ಹೇಳಬಾರದು ಕೇವಲ ಸಂಸ್ಕ್ರುತ ಅಶ್ಟೇ ಅಲ್ಲ, ಜನರು ಹಿಂದಿ ಹಾಗೂ ಸಂಸ್ಕ್ರುತವನ್ನು ಕಲಿಯಲೇಬೇಕು ಎಂದು ಕಾಂಗ್ರೆಸ್ಸಿನವರು ಹೇಳಿಕೆ ನೀಡುತ್ತಿದ್ದಾರೆ. ಕೇವಲ ಕನ್ನಡ ಗೊತ್ತಿರುವ ಕನ್ನಡಿಗ, ತಮಿಳು ಗೊತ್ತಿರುವ ತಮಿಳಿನವನು, ತೆಲುಗು ಗೊತ್ತಿರುವ ತೆಲುಗಿನವನು ಹಿಂದಿ ಹಾಗೂ ಸಂಸ್ಕ್ರುತ ಬಲ್ಲ ಆಳಿಗಿಂತ ಕಡಿಮೆಯೇ? ಕನ್ನಡಿಗರು, ತಮಿಳರು, ತೆಲುಗರು, ಹಿಂದಿ ಅತವಾ ಸಂಸ್ಕ್ರುತವನ್ನು ಕಲಿಯಲೇಬೇಕು ಎಂಬ ವಾತಾವರಣವನ್ನು ಕಟ್ಟುವ ಆಸೆ ಇವರಿಗ್ಯಾಕೆ? ಯಾಕೆ ಸಂಸ್ಕ್ರುತ ಹಾಗೂ ಹಿಂದಿಗೆ ಬೇರೆ ನುಡಿಗಳಿಗಿಲ್ಲದ ಹಿರಿಮೆ?
ಇದಕ್ಕೆಲ್ಲಾ ಉತ್ತರ ಈ ಪಕ್ಶಗಳ ಸಿದ್ದಾಂತಗಳಲ್ಲೇ ಇದೆ. ಮೊದಲಿನಿಂದಲೂ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಶಗಳು ಬಾರತದ ಹಲತನವನ್ನು ಒಂದು ಶಾಪದಂತೆಯೇ ಕಾಣುತ್ತಾ ಬಂದಿವೆ. ಬಿಜೆಪಿಯವರಿಗೆ ಒಂದು ದೇಶ ಒಂದು ಬಾಶೆ, ಸಂಸ್ಕ್ರುತ ಬಾಶೆ ಎಲ್ಲಾದಕ್ಕಿಂತ ಹೆಚ್ಚು ಅನ್ನುವ ಸಿದ್ದಾಂತವಾದರೆ, ಕಾಂಗ್ರೆಸ್ ನವರಿಗೆ ಹಿಂದಿಯು ದೇಶದ ಎಲ್ಲರೂ ಬಲ್ಲ ಬಾಶೆಯಾಗಬೇಕು ಅನ್ನುವ ಆಸೆ.

ಹೇರಿಕೆಯನ್ನು ಬೆಂಬಲಿಸುವ ಪಕ್ಶಗಳಿವು

ಈ ಮೇಲೆ ಹೇಳಿದಂತೆ ಈ ಪಕ್ಶಗಳಿಗೆ ಹಿಂದಿ ಹಾಗೂ ಸಂಸ್ಕ್ರುತದಲ್ಲೇ ಹೆಚ್ಚಿನ ಹಿರಿಮೆ ಕಾಣಿಸುತ್ತಿದೆ, ಅದರೆ ಇದಕ್ಕೆ ಯಾವುದೇ ಕಾರಣವಿಲ್ಲ ಅನ್ನೋದು ಅವರಿಗೆ ಅರ್‍ತವಾಗುತ್ತಿಲ್ಲ. ದುರಂತವೆಂದರೆ ಈ ಪಕ್ಶಗಳಿಗೆ ಬಾರತದಲ್ಲೇ ಇರುವ ಹಲವಾರು ನುಡಿಗಳನ್ನು ಗವ್ರವಿಸುವುದು ಗೊತ್ತಿಲ್ಲ ಆದರೆ ಇಂಗ್ಲಿಶ್ ಜೊತೆಗೆ ಹಲವಾರು ನುಡಿಗಳನ್ನು ಕಲಿಯಲಿ ಎನ್ನುವ ಬಿಟ್ಟಿ ಉಪದೇಶ ಬೇರೆ. ಎತ್ತುಗೆಗೆ ಹಣಮನೆಗಳಲ್ಲಿ (banks) ಕೊಡಲಾಗುವ ಕಾಸೋಲೆಗಳನ್ನೇ (cheque book) ನೋಡಿ. ಈಗ ಕಾಸೋಲೆಗಳಲ್ಲಿ ಸದ್ಯಕ್ಕೆ ಹಿಂದಿ ಮತ್ತು ಇಂಗ್ಲಿಶ್ ನುಡಿಯಲ್ಲಿ ಮುದ್ರಿಸಲಾಗಿರುತ್ತದೆ. ಆದರೆ ಕರ್‍ನಾಟಕದಲ್ಲಿರುವ ಹಣಮನೆಗಳು ಕನ್ನಡವನ್ನು ಕಾಸೋಲೆಗಳಲ್ಲಿ ಮುದ್ರಿಸಿರುವುದಿಲ್ಲ. ಅದೇ ರೀತಿ ಬೇರೆ ರಾಜ್ಯಗಳಲ್ಲೂ ಸಹ ಬೇಕೋ ಬೇಡವೋ ಹಿಂದಿ ಮತ್ತು ಇಂಗ್ಲಿಶಿನಲ್ಲಿ ಮಾತ್ರ ಸಿಗುತ್ತವೆ, ಕಾರಣ ಕೇಳಿದರೆ ಆಡಳಿತ ಬಾಶೆ ಅನ್ನುವ ಹಾರಿಕೆಯ ಉತ್ತರ.

ದೇಶದ ಬಾಶೆಗಳಲ್ಲೇ ಈ ರೀತಿಯ ತಾರತಮ್ಯ ಮಾಡುವ ಈ ಪಕ್ಶಗಳಿಂದ ಹೆಚ್ಚಿನದ್ದೇನು ನಾವು ಬಯಸಬಹುದು? ಸಂಸ್ಕ್ರುತವೇ ಹೆಚ್ಚು ಅನ್ನುವ ಪಕ್ಶ ಒಂದೆಡೆಯಾದರೆ, ಹಿಂದಿಯನ್ನು ಎಲ್ಲರೂ ಕಲಿಯಲೇಬೇಕು ಎಂದು ಹೇಳುವ ಪಕ್ಶ ಇನ್ನೊಂದೆಡೆ. ಹಾಗಾಗಿಯೇ ಕೇಂದ್ರ ಸರ್‍ಕಾರದ ಮೂಲಕ ಹಿಂದಿ ಹೇರಿಕೆ ಹಿಂದಿಯೇತರ ನುಡಿಗಳ ಮೇಲೆ ನಿರಂತರವಾಗಿ ನಡೆಯುತ್ತಿದೆ ಮತ್ತು ಇದು ಜನರಲ್ಲಿ ಕೀಳರಿಮೆ ಬಿತ್ತುತ್ತಿದೆ.

ಮೊದಲಿಗೆ ದೇಶದಲ್ಲಿರುವ ಎಲ್ಲಾ ನುಡಿಗಳೂ ಸಮಾನ ಅನ್ನುವುದು ಇವರಿಗೆ ಅರ್‍ತವಾಗಬೇಕಿದೆ. ಸಮಾನ ಗವ್ರವ, ಪ್ರೀತಿಗಳಿಂದ ಮಾತ್ರ ಒಗ್ಗಟ್ಟನ್ನು ಮೂಡಿಸಲು ಸಾದ್ಯ, ಹೇರಿಕೆ ಅತವಾ ಕೀಳರಿಮೆಯಿಂದಲ್ಲ. ಜನರು ತಮ್ಮ ತಾಯಿನುಡಿಯಲ್ಲೇ ಪ್ರಪಂಚದ ಎಲ್ಲಾ ವಿಶಯಗಳನ್ನು ತಿಳಿಯಲು ಸಾದ್ಯವಾಗುವಂತಹ ವಾತಾವರಣವನ್ನು ಕಟ್ಟುವುದು ಇಂದಿನ ಅಗತ್ಯವಾಗಿದೆ. ಅದಕ್ಕೆ ಬೇಕಿರುವ ಕಲಿಕೆಯೇರ‍್ಪಾಡು, ಸುದಾರಣೆ, ಅರಿಮೆ ಮುಂತಾದವುಗಳನ್ನು ಮಾಡಲು ಬೆಂಬಲ ಬೇಕಾಗಿದೆ. ಆದರೆ ನುಡಿಗಳ ಹೇರಿಕೆಯನ್ನು ಬೆಂಬಲಿಸುವ ನಿಲುವನ್ನು ಇಟ್ಟುಕೊಂಡಿರುವ ಪಕ್ಶಗಳು ಕೇಂದ್ರದಲ್ಲಿ ಸರ್‍ಕಾರ ಮಾಡಿ ನಮ್ಮನ್ನು ಆಳುವುದರಿಂದ ನಮ್ಮತನವನ್ನು ನಾವು ಉಳಿಸಿಕೊಳ್ಳಲು ಸಾದ್ಯವೇ? ಜನರು ತಮ್ಮ ತಮ್ಮ ಕೆಲಸಕ್ಕೆ ಬೇಕಿರುವ ನುಡಿಗಳನ್ನು ತಾವೇ ಕಲಿತುಕೊಳ್ಳುತ್ತಾರೆ, ಅದನ್ನು ಸರಕಾರವು ಹೇಳಿಕೊಡಬೇಕಾದ ಅಗತ್ಯವಿಲ್ಲ. ನೀವೇನಂತೀರಿ?

(ಚತ್ರ: www.thehindubusinessline.com)

ನಿಮಗೆ ಹಿಡಿಸಬಹುದಾದ ಬರಹಗಳು

5 Responses

  1. smhamaha says:

    ಒಳ್ಳೆಯ ಬರಹ .. ಆದರೆ ತಾಯಿನುಡಿಯನ್ನು ಕಲಿಯಿರಿ ಅಂದಿದ್ದಾರೆ ರಾಜೀವ್ ಶುಕ್ಲಾ ರವರು … ಆದರಿಂದ “ಹಲತನದ ಬಗ್ಗೆ ರಾಶ್ಟ್ರೀಯ ಪಕ್ಶಗಳಿಗೆ ಒಲವಿಲ್ಲ ” ಎಂಬ ಕುರಳಿನಲ್ಲಿ ಯಾವ ಹುರುಳು ಇಲ್ಲದೆ ಹೊಯಿತಲ್ಲವೇ ?

  2. kspriyank says:

    ಮಾನ್ಯರೇ,
    ತಾಯಿನುಡಿಯನ್ನು ಕಲಿಯಬೇಡಿ ಎಂದು ಹೇಳಿ ಹಲನುಡಿಯನ್ನಾಡುವ ಜನರ ಕೆಂಗಣ್ಣಿಗೆ ಗುರಿಯಾಗುವ ಹೆದರಿಕೆಯಿಂದಲೇ ಆ ಮಾತು ಬಂದಿರುವುದು ಶುಕ್ಲಾ ಅವರಿಂದ.
    ಹಲತನದ ಬಗ್ಗೆ ಅವರಿಗೆ ಒಲವಿದ್ದಿದ್ದರೆ, ಸಂಸ್ಕ್ರುತ, ಹಿಂದಿ ಮತ್ತು ಇಂಗ್ಲೀಶನ್ನು ಎಲ್ಲರೂ ಕಲಿಯಬೇಕು ಎಂದು ಹೇಳುತ್ತಿರಲಿಲ್ಲ. ಹೇರಿಕೆ ಮನಸ್ತಿತಿ ಹೊಂದಿರುವುದರಿಂದಲೇ ತಾನೇ ಕಾಂಗ್ರೆಸ್ ಇಶ್ಟು ವರುಶಗಳಿಂದ ಉಳಿದೆಲ್ಲಾ ನುಡಿಯ ಜನರ ಮೇಲೆ ಹಿಂದಿ ಹೇರಿಕೆಯನ್ನು ಬೆಂಬಲಿಸುತ್ತಾ ಬಂದಿರುವುದು. ಹಲತನದಿಂದ ನಿದಾನವಾಗಿ ಒಂತನಕ್ಕೆ ಸಾಗುವ ಯೋಜನೆಯದು.

  3. smhamaha says:

    ಅಣ್ಣ ,

    “ತಾಯಿನುಡಿಯನ್ನು ಕಲಿಯಬೇಡಿ ಎಂದು ಹೇಳಿ ಹಲನುಡಿಯನ್ನಾಡುವ ಜನರ ಕೆಂಗಣ್ಣಿಗೆ ಗುರಿಯಾಗುವ ಹೆದರಿಕೆಯಿಂದಲೇ ಆ ಮಾತು ಬಂದಿರುವುದು ಶುಕ್ಲಾ ಅವರಿಂದ”

    ಈಗೂ ಇರುತ್ತೆ ಅಂತ ನಾನು ಉಂಕಿಸಲಿಲ್ಲ … ಮಂದಿಗಾಗಿ ಏನು ಬೇಕಾದರೂ ಮಾಡುವರು ಈ ಆಳುಗರು … ನಿಮ್ಮ ಹೇಳಿಕೆಗೆ ನನ್ನ ನಣ್ಮೆಗಳು

  4. ತಾಯ್ನುಡಿಯನ್ನ ಇವರ ಮಾತು ಕೇಳಿ ಯಾರೂ ಕಲಿಯಬೇಕಿಲ್ಲ. ಇವರ ಮಾತು ಕೇಳಿ ಕಲಿತುಕೊಳ್ಳುವ ನುಡಿ ತಾಯ್ನುಡಿಯಲ್ಲ. ‘ತಾಯ್ನುಡಿಯನ್ನೂ ಕಲಿಯಿರಿ’ ಅನ್ನುವ ಮಾತು ನಂಜಿಗೆ ಮೆತ್ತುವ ಸಕ್ಕರೆ ಅಶ್ಟೆ.

  1. 26/08/2013

    […] ಎಲ್ಲಾ ನುಡಿಗಳೂ ರಾಶ್ಟ್ರಬಾಶೆಗಳಾಗಬೇಕು, ಎಲ್ಲಾ ನುಡಿಗಳೂ ಸಮಾನ ಎನ್ನಲು ಏನು ತೊಂದರೆ?, ನ್ಯೂಯಾರ‍್ಕಿನಲ್ಲಿ ಬಂಗಾಳಿಗಿರುವ ಸ್ತಾನ […]

ಸಿದ್ದರಾಜು ವಳಗೆರೆಹಳ್ಳಿ ಬೋರೇಗವ್ಡ ಗೆ ಅನಿಸಿಕೆ ನೀಡಿ Cancel reply

%d bloggers like this: