’ಸಂಸ್ಕ್ರುತ’ ಎಂದ ಕೂಡಲೆ ನಾವು ಹೀಗೇಕೆ?

ಕಿರಣ್ ಬಾಟ್ನಿ.
sanskrit-tattoo-meanings_KGUf9_6943

18-07-2013 ರಂದು ವಿಜಯಕರ‍್ನಾಟಕ ಪತ್ರಿಕೆಯ ’ನಮ್ಮ ಮಯ್ಸೂರು’ ಪುಟವನ್ನು ಓದಿದಾಗ ಒಂದು ಸುದ್ದಿ ನನ್ನ ಗಮನ ಸೆಳೆಯಿತು. ಅದರ ಒಟ್ಟಾರೆ ಸಾರಾಂಶವೆಂಬಂತಿದ್ದ ಈ ಸೊಲ್ಲನ್ನು ಗಮನಿಸಿ:

ಸಾವಿರಾರು ವರ‍್ಶದಿಂದ ಪ್ರಪಂಚದೆಲ್ಲೆಡೆ ಜನರ ಮೆಚ್ಚುಗೆ ಪಡೆದಿರುವ ಸಂಸ್ಕ್ರುತ ಇಂದು ತನ್ನ ತವರು ನೆಲದಲ್ಲೇ ಕಡೆಗಣಿಸಲ್ಪಡುತ್ತಿದೆ ಎಂದು ಕಾಲೇಜು ಶಿಕ್ಶಣ ಇಲಾಕೆ ಜಂಟಿ ನಿರ‍್ದೇಶಕ ಪ್ರೊ. ಟಿ. ಎನ್. ಪ್ರಬಾಕರ್ ಹೇಳಿದ್ದಾರೆ.

’ಸಂಸ್ಕ್ರುತ’ ಎಂದ ಕೂಡಲೆ ಅದೇಕೆ ನಮ್ಮ ಮಿದುಳು ಕೆಲಸ ಮಾಡುವುದು ನಿಲ್ಲಿಸಿ, ತಲೆ ತನ್ನಶ್ಟಕ್ಕೆ ತಾನೇ ಹಿಂದಿನವರ ತಾಳಕ್ಕೆ ತೂಗಲು ಶುರುವಾಗಿ, ನಾಲಗೆ ತನ್ನಶ್ಟಕ್ಕೆ ತಾನೇ ಹಳೆಯ ಪೊಳ್ಳುಮಾತುಗಳನ್ನೇ ನುಡಿಯುತ್ತದೆಯೋ ನಾ ಕಾಣೆ.

ನಿಜಕ್ಕೂ ಸಂಸ್ಕ್ರುತ ಎಂಬುದು ಯೂರೂಪು-ಅಮೇರಿಕ ಸೇರಿದಂತೆ ಒಟ್ಟಾರೆ ಪಡುವಣದಲ್ಲಿ ಮೊಟ್ಟಮೊದಲು ಗಮನಿಸಲ್ಪಟ್ಟಿದ್ದೇ 1651ನೇ ಇಸವಿಯಲ್ಲಿ ಅಬ್ರಹಾಮ್ ರೋಜರ್ ಎನ್ನುವವರು ಬರ‍್ತ್ರುಹರಿಯ ಕವಿತೆಯನ್ನು ಪೋರ‍್ಚುಗೀಸಿಗೆ ನುಡಿಮಾರಿದಾಗ. ಈಗ 2013. ಅಂದಮೇಲೆ ಸರಿಯಾಗಿ 362 ವರುಶಗಳಾದವು. ಇನ್ನು ಆಪ್ರಿಕಾದಲ್ಲಾಗಲಿ ಅರೇಬಿಯಾದಲ್ಲಾಗಲಿ ಸಂಸ್ಕ್ರುತವನ್ನು ಇಂದಿಗೂ ಹಾಡಿ ಕೊಂಡಾಡುತ್ತಿರುವವರು ಅಶ್ಟಕ್ಕಶ್ಟೇ. ಹೀಗಿರುವಾಗ ’ಸಾವಿರಾರು’ ವರುಶದಿಂದ ಸಂಸ್ಕ್ರುತ ’ಪ್ರಪಂಚದೆಲ್ಲೆಡೆ’ ಮೆಚ್ಚುಗೆ ಪಡೆದಿತ್ತು ಎಂದು ಇವರು ಹೇಳುವುದಕ್ಕೆ ಕಾರಣವೇನು – ಕುರುಡು ಬಕ್ತಿಯೊಂದನ್ನು ಬಿಟ್ಟರೆ?

ಇನ್ನು ತವರು ನೆಲದ ಮಾತು. ಶ್ರೀ ಟಿ. ಎನ್. ಪ್ರಬಾಕರ್ ಅವರು ಮಾತನಾಡುತ್ತಿರುವುದು ಮಯ್ಸೂರಿನಲ್ಲಿ. ಮಯ್ಸೂರು ಸಂಸ್ಕ್ರುತಕ್ಕೆ ತವರು ನೆಲ ಹೇಗಾಯಿತು? ಹೋಗಲಿ, ಅಚ್ಚ ದ್ರಾವಿಡ ನುಡಿಯಾದ ಕನ್ನಡದ ನೆಲವಾದ ಕರ‍್ನಾಟಕವಾದರೂ ಸಂಸ್ಕ್ರುತಕ್ಕೆ ತವರು ಹೇಗಾಯಿತು? ಬಾರತವು ಸಂಸ್ಕ್ರುತದ ತವರು ನೆಲವಾದರೆ ಅದಕ್ಕೂ ಕನ್ನಡಿಗರಿಗೂ ಏನು ನಂಟು? ಬಾರತ ಹಿಂದಿಗೂ ತವರು. ಹಾಗೆಂದ ಮಾತ್ರಕ್ಕೆ ಹಿಂದಿ ಕಡೆಗಣಿಸಲಾಗುತ್ತಿದೆ ಎಂದು ಹಿಂದಿ ಹೇರುವವರಿಗೂ ಇವರಿಗೂ ಏನು ವ್ಯತ್ಯಾಸ? ಬಾರತ ನಾಗಾ, ಮಣಿಪುರಿ, ಬೋಡೋ ಮುಂತಾದ ನುಡಿಗಳಿಗೂ ತವರು. ಹಾಗೆಂದ ಮಾತ್ರಕ್ಕೆ ಇವೆಲ್ಲ ಮಯ್ಸೂರಿನಲ್ಲೋ ಕರ‍್ನಾಟಕದಲ್ಲೋ ಕಡೆಗಣಿಸಲ್ಪಡುತ್ತಿವೆ ಎಂದು ಇವರೇಕೆ ಕಣ್ಣೀರಿಡುತ್ತಿಲ್ಲ?

(ಚಿತ್ರ: http://www.instablogs.com/)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: