ನಾವು ನುಡಿದಿದ್ದೇ ರಾಜನುಡಿ, ನಮ್ಮ ಮನೆಯೇ ಆಸ್ತಾನ!

ಪ್ರಿಯಾಂಕ್ ಕತ್ತಲಗಿರಿ.

RajasthaniFilmMahotsav93

ಹಿಂದಿಯ ಒಳನುಡಿಯೆಂದು (dialect) ತಪ್ಪಾಗಿ ಕರೆಸಿಕೊಳ್ಳುತ್ತಿದ್ದ ರಾಜಸ್ತಾನಿ ನುಡಿಯನ್ನು ಹಿಂದಿಗಿಂತ ಬೇರೆಯೇ ನುಡಿಯೆಂದು ಗುರುತಿಸಿ ಅದನ್ನು ಸಂವಿದಾನದ ಎಂಟನೇ ಪರಿಚ್ಚೇದದಲ್ಲಿ ಸೇರಿಸಬೇಕು ಎಂಬ ಕೂಗು ಇತ್ತೀಚೆಗೆ ರಾಜಸ್ತಾನದಿಂದ ಹೊರಟಿದೆ. ಕೇಂದ್ರ ಸರಕಾರದಲ್ಲಿ ಮಂತ್ರಿಯಾಗಿರುವ ಚಂದ್ರೇಶ್ ಕುಮಾರಿ ಕಟೋಚ್ ಅವರು, ಪ್ರದಾನ ಮಂತ್ರಿ ಮನಮೋಹನ್ ಸಿಂಗ್ ಅವರಲ್ಲಿ ಈ ಕುರಿತು ಬೇಡಿಕೆಯೊಂದನ್ನು ಇಟ್ಟಿರುವುದು ಸುದ್ದಿಯಾಗಿದೆ. 2003ರಲ್ಲಿ ರಾಜಸ್ತಾನದ ರಾಜ್ಯ ಸರಕಾರವು ಈ ಬಗ್ಗೆ ನಿಲುವು ಮಂಡಿಸಿತ್ತಾದರೂ ಅದಕ್ಕೆ ತಕ್ಕ ಬೆಂಬಲ ಕೇಂದ್ರ ಸರಕಾರದಿಂದ ದೊರೆತಿರಲಿಲ್ಲ. ಈ ಬಾರಿ ಕೇಂದ್ರ ಸರಕಾರವು ಏನು ಹೆಜ್ಜೆ ಇಡಲಿದೆ ಎಂದು ಕಾದು ನೋಡಬೇಕಿದೆ.

ಇಂಡಿಯಾದಲ್ಲಿ ಸುಮಾರು 40% ಮಂದಿಯಾಡುವ ನುಡಿ ಹಿಂದಿ ಎಂದು ಎಲ್ಲೆಡೆ ಸಾರಲಾಗುತ್ತದೆ. ಆದರೆ, ಹಿಂದಿಯೆಂದು ಕರೆಯಲಾಗುವ ನುಡಿಯಲ್ಲಿ ಬ್ರಜ್ ಬಾಶಾ, ಹರ‍್ಯಾಣವೀ, ಬುಂದೇಲಿ, ಕನ್ನವ್ಜೀ, ಕರೀ ಬೋಲೀ, ಅವದೀ, ಬಗೇಲಿ ಮತ್ತು ಚತ್ತೀಸ್‍ಗರೀ ಎಂಬ ಒಳನುಡಿಗಳು ಸೇರಿವೆ. ಇವುಗಳಲ್ಲಿ ಕೆಲವು ಹಿಂದಿಗಿಂತಾ ಬೇರೆಯೇ ನುಡಿ ಎಂಬುದು ನುಡಿಯರಿಗರ ನಡುವಣ ಚರ‍್ಚೆಯ ವಿಶಯವಾಗಿದೆ. ಇವಶ್ಟೇ ಅಲ್ಲದೇ, ರಾಜಸ್ತಾನಿ, ಬೋಜಪುರೀ ನುಡಿಗಳನ್ನೂ ಹಿಂದಿಯ ಒಳನುಡಿಗಳೆಂದೇ ಕರೆಯುವವರಿದ್ದಾರೆ. ಹೀಗೆ ಸಾರುವುದರಿಂದ, ಹಲವು ನುಡಿಗಳು ತಮಗೆ ಸಿಗಬೇಕಾದ ನೆಲೆಯಿಂದ, ತಮಗೆ ಸಿಗಬೇಕಾದ ಬೆಂಬಲದಿಂದ ವಂಚಿತವಾಗಿವೆ.

1950 – 1960ರ ನಡುವೆ ಪಂಜಾಬಿ ನುಡಿಯನ್ನೂ ಹಿಂದಿಯ ಒಳನುಡಿಯೆಂದೇ ಕರೆಯಹೊರಟಿದ್ದರು. ಅದಕ್ಕಾಗಿ ಬಳಸಿಕೊಂಡ ವಾದದ ಸರಣಿಯೂ ಪಂಜಾಬಿಯಲ್ಲಿ ಹಲವಾರು ಪದಗಳಿಲ್ಲ, ಪಂಜಾಬಿಯು ಹಲವಾರು ಪದಗಳನ್ನು ಹಿಂದಿಯಿಂದ ಎರವಲು ಪಡೆದುಕೊಂಡಿದೆ, ಪಂಜಾಬಿಯಲ್ಲಿ ನಲ್ಬರಹ (literature) ಹೆಚ್ಚಿಲ್ಲ ಎಂಬುದರ ಸುತ್ತ ಸುತ್ತುತ್ತಿತ್ತು. ಆದರೆ, ಹಲವು ನುಡಿಯರಿಗರು ಈ ವಾದವನ್ನು ಅಲ್ಲಗಳೆದು ಪಂಜಾಬಿ ನುಡಿಯನ್ನು ಹಿಂದಿಗಿಂತಾ ಬೇರೆಯೇ ನುಡಿಯೆಂದು ತೋರಿಸಿಕೊಟ್ಟರು. ಆಮೇಲಶ್ಟೇ ಪಂಜಾಬಿಯು ಎಂಟನೇ ಪರಿಚ್ಚೇದದಲ್ಲಿ ನೆಲೆ ಕಂಡುಕೊಂಡಿತು. ಪಂಜಾಬಿ ನುಡಿಯನ್ನೂ ಹಿಂದಿಯ ಒಳನುಡಿಯೆಂದು ಬಿಂಬಿಸಿ, ಹಿಂದಿ ನುಡಿಯಾಡುಗರ ಎಣಿಕೆ ಹೆಚ್ಚಿದೆಯೆಂದು ತೋರಿಸುವ ಸಂಚಿಗೆ ಹಿನ್ನಡೆಯಾಗಿತ್ತು.

ಇಂಡಿಯಾದಲ್ಲಿ ಹಿಂದಿ ನುಡಿಯನ್ನಾಡುವವರು ಹೆಚ್ಚೆಣಿಕೆಯಲ್ಲಿದ್ದಾರೆ ಎಂದು ತೋರಿಸುವ, ಮತ್ತು ಆ ಮೂಲಕ ಎಲ್ಲರೂ ಹಿಂದಿ ಕಲಿಯಬೇಕು ಎಂದನ್ನಿಸುವ ವಾತಾವರಣ ಕಟ್ಟುವ ಹಟಕ್ಕೆ ಬಿದ್ದು ಇನ್ನೂ ಹಲವು ನುಡಿಗಳನ್ನು ಆಪೋಶನ ತೆಗೆದುಕೊಳ್ಳುವುದು ನಿಲ್ಲಲಿ. ನಮ್ಮಲ್ಲಿರುವ ಹಲತನವನ್ನು ಕೊಂಡಾಡುವುದೇ (celebrate) ನಾವು ಆಯ್ದುಕೊಳ್ಳಬೇಕಾದ ಹಾದಿ. ಇಂಡಿಯಾದಲ್ಲಿರುವ ಒಂದೊಂದು ನುಡಿಯೂ ಒಂದೊಂದು ಬೇರ‍್ಮೆಯುಳ್ಳ ಸಂಸ್ಕ್ರುತಿಯನ್ನು ಸಾರುತ್ತದೆ. ಅವನ್ನು ಉಳಿಸಿ ಬೆಳೆಸುವುದೇ ನಮ್ಮಲ್ಲಿ ಎಂದೆಂದಿಗೂ ನೆಲೆಯೂರಬಲ್ಲ ಒಗ್ಗಟ್ಟು ಕಟ್ಟಲು ಹಾದಿ. ಹಿಂದಿ ಹೇರಿಕೆಯ ಬಗ್ಗೆ ಒಲವು ಹೊಂದಿರುವವರು ಈ ಬಗ್ಗೆ ಇನ್ನೊಮ್ಮೆ ಯೋಚಿಸುವುದೊಳಿತು.

ಮಾಹಿತಿ ಸೆಲೆ: ಇಂಡಿಯನ್ ಎಕ್‍ಸ್ಪ್ರೆಸ್, ವಿಕಿಪೀಡಿಯಾ

ಚಿತ್ರ: maitrimanthan.wordpress.com

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.