ಕನ್ನಡ ಪದಕಟ್ಟುವಿಕೆ – ಒಂದು ಸೀಳುನೋಟ

– ವಿವೇಕ್ ಶಂಕರ್

ವಿಜಯಕರ‍್ನಾಟಕ ಪತ್ರಿಕೆಯು ಇತ್ತೀಚಿಗೆ ‘ವಿಕ ಪದ ಲೋಕ’ ಎಂಬ ಪದಕಟ್ಟಣೆಯ ಹೊಸ ಅಂಕಣವನ್ನು ಶುರು ಮಾಡಿದೆ. ನುಡಿಗಳಿಗೆ ಪದಗಳು ಕಟ್ಟಡಗಳಿಗೆ ಇಟ್ಟಿಗೆಗಳಿದ್ದ ಹಾಗೆ. ಈ ನಿಟ್ಟಿನಲ್ಲಿ ಕನ್ನಡದ ಮುಂಚೂಣಿ ಸುದ್ದಿಹಾಳೆಯೊಂದು ಈಗಲಾದರೂ ಕನ್ನಡ ಪದಕಟ್ಟಣೆ ಮಹತ್ವ ಅರಿತದ್ದು ನಲಿವಿನ ಸಂಗತಿ. ಕೆಲ ದಿನಗಳ ಹಿಂದೆ ಈ ಅಂಕಣದಲ್ಲಿ whistle blower ಎಂಬ ಇಂಗ್ಲಿಶ್ ಪದಕ್ಕೆ ಕನ್ನಡ ಪದ ಕಟ್ಟಿ ಎಂದು ಓದುಗರಲ್ಲಿ ಕೋರಲಾಗಿತ್ತು. ಈ ಅಂಕಣದ ಕೋರಿಕೆಗೆ ಮಾರ‍್ನುಡಿಯಾಗಿ ಹಲವು ಓದುಗರು, ಹಲವು ಬಗೆಯ ಪದಗಳನ್ನು ಕಟ್ಟಿ ವಿಜಯ ಕರ‍್ನಾಟಕಕ್ಕೆ ಕಳುಹಿಸಿದ್ದರು. ಓದುಗರು ಕಟ್ಟಿದ ಪದಗಳ ಪಟ್ಟಿ ಇಲ್ಲಿದೆ:

whistle_blower_Kannada_oregaLu

ಇಂತಲ್ಲಿ ಕನ್ನಡ ಪದ ಕಟ್ಟುವ ಮೊದಲು ಇಂಗ್ಲಿಶ್ (ಬೇರೊಂದು ನುಡಿ) ಪದದ ಹುರುಳನ್ನು ಚೆನ್ನಾಗಿ ತಿಳಿದುಕೊಂಡು ಪದ ಕಟ್ಟುವುದು ಒಳ್ಳೆಯದು. ಮೇಲಿನ ಇಂಗ್ಲಿಶ್ ಪದದ ಹುರುಳು ಹೀಗಿದೆ (ಸೆಲೆ- wiktionary):

whistle-blower (noun) 

One who reports a problem or violation to the authorities

ಇದರ ಕನ್ನಡದ ಹುರುಳು, ’ಯಾವುದಾದರೊಂದು ತೊಡಕಿನ ಇಲ್ಲವೇ ಕಟ್ಟಳೆ ಮೀರಿದ್ದರ ಕುರಿತು ಅದಿಕಾರಿಗಳಿಗೆ ತಿಳಿಸಿ ಕೊಡುವವ’. ಹೀಗೆ ಕನ್ನಡದಲ್ಲಿ ಹುರುಳು ತಿಳಿದಮೇಲೆ ಅದರಿಂದ ಕನ್ನಡದ್ದೇ ಪದ ಕಟ್ಟಿದರೆ ಲೇಸು.

ಮಂದಿ ಸೂಚಿಸಿರುವ ಹಲವು ಆಯ್ಕೆಗಳು ಇಂಗ್ಲಿಶ್ ಪದದ ನೇರ ನುಡಿಮಾರ‍್ಪಿನಂತೆ (direct translation) ತೋರುತ್ತವೆ. ಎತ್ತುಗೆಗೆ: ಶಿಳ್ಳುಗಾರ, ಸೀಟಿ ಊದುವವ ಮುಂತಾದವು. ಇಲ್ಲಿ ನೇರ ನುಡಿಮಾರ‍್ಪು ಮಾಡಿದರೆ ಇಂಗ್ಲಿಶ್ ಪದ ನೀಡುವ ಹುರುಳಿಗೆ ಅಶ್ಟಾಗಿ ಹೊಂದಿಕೊಳ್ಳುವುದಿಲ್ಲ ಅನಿಸುತ್ತದೆ. ಇನ್ನು ಕೆಲವು ಕಡೆ ಹುರುಳಿನ ಬೆನ್ನತ್ತಿ ’ಜಾಗ್ರುತಿ’, ’ಜನಜಾಗ್ರುತಿದಾರ’ ಅನ್ನುವಂತ ಪದಗಳ ಆಯ್ಕೆಗಳನ್ನು ಓದುಗರು ನೀಡಿದ್ದರೂ ’ಜಾಗ್ರತಿ ಕೆಲಸ’ ನಡೆಸುವಲ್ಲಿ whistle blower ಪದ ಬಳಕೆಯಾಗಿರುಂತೆ ತೋರುವುದು ಕಡಿಮೆ.

ಈ ಪದಕಟ್ಟಣೆಯ ಹುರುಪಿನಲ್ಲಿ ತುಂಬಾ ತೊಡಕಿನ ಪದಗಳನ್ನೂ ಕೆಲವು ಓದುಗರು ಸಂಸ್ಕ್ರುತದಲ್ಲಿ ಕಟ್ಟಿ ಕನ್ನಡದವೆಂದು ಕರೆದಿರುವುದು ಕಂಡುಬರುತ್ತದೆ. ಎತ್ತುಗೆಗೆ: ಗ್ರುದ್ರದ್ರುಶ್ಟಕ, ಕ್ಶ-ವೀಕ್ಶಕ ಮುಂತಾದವು. ಹಾಗೆಯೇ, ಕಹಳೆಗಾರ, ರಟ್ಟಿಗ, ರಟ್ಟುಗಾರ ಮುಂತಾದ ಒಳ್ಳೊಳ್ಳೆಯ ಕನ್ನಡದ್ದೇ ಪದಗಳನ್ನು ಕೂಡ ಓದುಗರು ಕಟ್ಟಿರುವುದು ನಲಿವಿನ ವಿಶಯ. ಪದ ಕಟ್ಟುವ ಬಗ್ಗೆ ಕನ್ನಡಿಗರಲ್ಲಿ ಈ ಬಗೆಯ ಹುರುಪು ಕನ್ನಡದ ಕೂಡಣಕ್ಕೆ ತುಂಬಾ ಒಳ್ಳೆಯದು. ಇದು ಮುಂಬರುವ ನಾಳುಗಳಲ್ಲಿ ಇನ್ನೂ ಹೆಚ್ಚಲಿ, ನಲ್ನುಡಿ ಕನ್ನಡಕ್ಕೆ ತನ್ನದೇ ಆದ ಹೊಸ ಪದಗಳು ಹರಿದು ಬರಲಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: