ಈ ಸರಕಾರಿ ಶಾಲೆ ಅಂದ್ರೆ ಸುಮ್ನೆ ಅಲ್ಲ!!

– ರತೀಶ ರತ್ನಾಕರ

school

ಬೆಟ್ಟ ಗುಡ್ಡಗಳ ಹಸಿರು ಕಾಡು, ಆ ಹಸಿರಿಗೆ ಅಲ್ಲಲ್ಲಿ ತೇಪೆ ಹಚ್ಚಿದಂತೆ ಚಿಕ್ಕ ಪುಟ್ಟ ಊರುಗಳು, ಊರು ಅಂದರೆ ಅಯ್ವತ್ತು ನೂರು ಮನೆಗಳಿರುವ ಊರಲ್ಲ ಅಯ್ದಾರು ಮನೆಗಳಿರುವ ಊರು! ಮಳೆಗಾಲದಲ್ಲಿ ಮುಗಿಲಿಗೆ ತೂತು ಬಿದ್ದಂತೆ ಬೀಳುವ ಮಳೆ, ಚಳಿಗಾಲದಲ್ಲಿ ಚಳಿಯೇ ದೊರೆ, ಬೇಸಿಗೆಗೆ ಇಲ್ಲಿ ಬೆಚ್ಚನೆಯ ಬಿಸಿಲು. ಕಾಡಿನ ನಡುವೆ ಇರುವ ಊರು ಎಂದರೆ ಹೊರಗಿನ ಜಗತ್ತಿಗೆ ಪರಿಚಯವೇ ಇಲ್ಲ ಎಂದಲ್ಲ, ಎಲ್ಲಾ ಮನೆಗಳಿಗೆ ಹಾಗೂ ಊರಿಗೆ ಇರಬೇಕಾದ ಮೂಲಬೂತ ಸವ್ಕರ್‍ಯಗಳು ಇಲ್ಲಿಯೂ ಇವೆ. ಗ್ರಾಮ ಪಂಚಾಯತಿ, ಹಣಮನೆ, ಅಂಚೆ ಕಚೇರಿ, ದಿನಸಿ ಅಂಗಡಿ, ಕಲಿಕೆಮನೆ (School) ಗಳು ಹೀಗೆ ಬದುಕಿಗೆ ಬೇಕಾದ ಹಲವು ಸವಲತ್ತುಗಳು ಇಲ್ಲಿವೆ. ಹೀಗಿರುವ ಮಲೆನಾಡಿನ ಊರಿನಲ್ಲಿ ಮಿಂಚುತ್ತಿರುವ ಒಂದು ಕಲಿಕೆಮನೆಯ ಕುರಿತು ನಾನೀಗ ಹೇಳಹೊರಟಿದ್ದೇನೆ.

ಸರಕಾರಿ ಹಯ್‍ಸ್ಕೂಲು, ಕಣತಿ. ಸುತ್ತ ಮುತ್ತಲಿನ ಹತ್ತು ಊರಿಗೆ ಇದೇ ಒಂದು ಹಯ್‍ಸ್ಕೂಲು. ಚಿಕ್ಕಮಗಳೂರಿನಿಂದ ಶ್ರಿಂಗೇರಿಗೆ ಹೋಗುವ ದಾರಿಯಲ್ಲಿ ಸುಮಾರು 33 ಕಿಲೋಮೀಟರ್‍ನಶ್ಟು ತಲುಪಿದರೆ ಈ ಕಲಿಕೆಮನೆ ಸಿಗುವುದು. 1984 ರಲ್ಲಿ ಆರಂಬವಾದ ಈ ಕಲಿಕೆಮನೆ 8, 9 ಮತ್ತು 10 ನೇ ತರಗತಿಯನ್ನು ಹೊಂದಿದೆ. ಮೊದಮೊದಲು ಊರಿಗೆ ಒಂದೇ ಕಲಿಕೆಮನೆಯಾಗಿ ಇದು ಇದ್ದುದರಿಂದ ಮಕ್ಕಳ ಎಣಿಕೆಯೂ ಚೆನ್ನಾಗಿತ್ತು, ಹತ್ತಿರದ ಊರಿನ ಹೆಚ್ಚಿನ ಮಕ್ಕಳು ಇಲ್ಲಿಗೆ ಕಲಿಯಲು ಬರುತ್ತಿದ್ದರು. ಹೀಗೆ ಇದರ ಪಾಡಿಗೆ ಇದು ನಡೆದುಕೊಂಡು ಹೋಗುತ್ತಿತ್ತು.

ಬರುಬರುತ್ತಾ ಕಲಿಕೆಮನೆಯ 8 ನೇ ತರಗತಿಗೆ ಸೇರುವ ಮಕ್ಕಳ ಎಣಿಕೆ ತುಸು ಕಡಿಮೆಯಾಗ ತೊಡಗಿತು, ಇದಕ್ಕೆ ಹಲವು ಕಾರಣಗಳೂ ಇದ್ದವು. ಕಲಿಕೆಮನೆ ಆರಂಬವಾದ ವರುಶದಿಂದ ಯಾವ ವರುಶವು ಹತ್ತನೇ ತರಗತಿಯಲ್ಲಿ 100% ಪಾಸಾಗಿರಲಿಲ್ಲ. ಅಕ್ಕ-ಪಕ್ಕದ ಊರುಗಳಲ್ಲಿ ಕಾನ್ವೆಂಟ್‍ಗಳು ಹಾಗು ಬೇರೆ ಸರಕಾರಿ ಕಲಿಕೆಮನೆಗಳು ತಲೆ ಎತ್ತಿದವು, ಹತ್ತನೇ ತರಗತಿಯಲ್ಲಿ 100% ಪಲಿತಾಂಶ ತೋರಿಸಿ ಊರಿನ ಮಕ್ಕಳು ಮತ್ತು ತಂದೆ-ತಾಯಂದಿರನ್ನು ತನ್ನತ್ತ ಈ ಕಾನ್ವೆಂಟ್‍ಗಳು ಸೆಳೆದವು. ಅದಕ್ಕೆ ತಕ್ಕಂತೆ ದೂರದ ಊರಿನ ಕಲಿಕೆಮನೆಗೆ ಹೋಗಿಬರಲು ಬಸ್ಸಿನ ಏರ್‍ಪಾಡು ಕೂಡ ಚೆನ್ನಾಗಿತ್ತು.

ಅಲ್ಲದೇ ಊರಿನ ಹೊರಗೆ ಒಂಟಿಯಾಗಿದ್ದ ಈ ಕಲಿಕೆಮನೆಗೆ ಮಕ್ಕಳನ್ನು ಕಳಿಸಲು ಕೆಲವು ತಂದೆ-ತಾಯಂದಿರು ಹಿಂಜರಿದಿದ್ದರು, ಈ ಎಲ್ಲಾ ಕಾರಣಗಳಿಂದಾಗಿ ವರುಶದಿಂದ ವರುಶಕ್ಕೆ ಕಣತಿ ಕಲಿಕೆಮನೆಗೆ ಸೇರುವ ಮಕ್ಕಳ ಎಣಿಕೆ ಕಡಿಮೆಯಾಗುತ್ತಾ ಬಂದಿತು. ಅಲ್ಲಲ್ಲಿ ಕೆಲವು ಕಲಿಸುಗರು ಗುಣಮಟ್ಟದ ಕಲಿಕೆ ನೀಡಿ ಇದರ ಏಳಿಗೆಗೆ ದುಡಿದರು, ಆದರೆ ‘ಸರಕಾರಿ ಕಲಿಕೆಮನೆ’ ಎಂಬ ಅಸಡ್ಡೆ ಮಂದಿಯಲ್ಲಿ ಆಗಲೇ ಮನೆಮಾಡಿದ್ದರಿಂದ ಹಾಗು ಹತ್ತನೇ ತರಗತಿಯಲ್ಲಿ 100% ಪಲಿತಾಂಶ ನೀಡಿರದ ಕಾರಣ ಯಾವ ಏಳಿಗೆಯೂ ಆಗಲಿಲ್ಲ. ಇತ್ತೀಚೆಗೆ ಅಂದರೆ 2012 ರಲ್ಲಿ ಕೇವಲ 17 ಮಕ್ಕಳು ಈ ಕಲಿಕೆಮನೆಯ 8 ನೆ ತರಗತಿಗೆ ಸೇರಿದ್ದಾರೆ.

ಹೀಗೆ ಕುಂಟುತ್ತಾ ಸಾಗುತ್ತಿದ್ದ ಕಲಿಕೆಮನೆಯು ಮುಂದೊಂದು ದಿನ ಮಕ್ಕಳೇ ಇಲ್ಲದೆ ಮುಚ್ಚಿ ಹೋಗಬಹುದೇನೊ ಎಂಬ ಹೆದರಿಕೆ ಇತ್ತು. ಆ ಹೊತ್ತಿಗೆ ಸರಿಯಾಗಿ 2012 ರಲ್ಲಿ ಶಶಿದರ ಬಿ. ಆರ್‍. ಎಂಬುವವರು ಸ್ಕೂಲಿನ ಮುಂದಾಳಾಗಿ ಬಂದರು, ಜೊತೆಗೆ ಹೊಸ ಹೊಸ ಕಲಿಸುಗರು ಇದ್ದರು. ಹೇಗಾದರು ಸರಿ ಈ ಬಾರಿಯ (2012-2013) ಹತ್ತನೇ ತರಗತಿಯಲ್ಲಿ ಒಳ್ಳೆಯ ಪಲಿತಾಂಶ ನೀಡಬೇಕು, ಹೆಚ್ಚು ಹೆಚ್ಚು ಮಕ್ಕಳು ಬಂದು ಸೇರುವಂತೆ ಮಾಡಬೇಕು, ಈ ಕಲಿಕೆಮನೆಯನ್ನು ಬೆಳಸಲೇಬೇಕು ಎಂಬ ನಿರ್‍ದಾರಕ್ಕೆ ಬಂದರು.

ಗುಣಮಟ್ಟದ ಕಲಿಕೆಯನ್ನು ನೀಡಲು ಒಂದು ಉತ್ಸಾಹಿ ಕಲಿಸುಗರ ತಂಡ ಸಿದ್ದವಾಯಿತು. ಮೊದಲು, ಇವರು ಕಲಿಕೆಗೆ ಬರುವ ಮಕ್ಕಳಿಗೆ ಕಲಿಯಲು ಇರುವ ತೊಡಕುಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದರು. ನಾಲ್ಕು ಗೋಡೆಯ ನಡುವೆ ಪಾಟ ಕೇಳಿಸಿಕೊಂಡ ಮಕ್ಕಳು ಮನೆಗೆ ಹೋಗಿ ತಿರುಗಿ ಓದುವ ಅಬ್ಯಾಸ ಇಲ್ಲದಿರುವುದನ್ನು ಗುರುತಿಸಿದರು. ಇದಕ್ಕೆ ಕೆಲವು ಕಾರಣಗಳಿದ್ದವು, ಅಲ್ಲಿಗೆ ಬರುವ ಮಕ್ಕಳ ಮನೆಯಲ್ಲಿ ಕೆಲವು ತಂದೆ-ತಾಯಂದಿರಿಗೆ ಪಾಟ ಹೇಳಿಕೊಡಲು ಗೊತ್ತಿರಲಿಲ್ಲ, ಸಂಜೆ ಓದಿಕೊಳ್ಳಲು ಕೆಲವು ಮನೆಗಳಲ್ಲಿ ಮಿಂಚು (Electric Current) ಇರಲಿಲ್ಲ, ಮಿಂಚಿದ್ದರು ಸರಿಯಾಗಿ ಪೂರಯ್ಕೆ ಆಗುತ್ತಿರಲಿಲ್ಲ. ಮನೆಗಳು ದೂರ ದೂರವಿದ್ದದ್ದರಿಂದ ಒಬ್ಬರಿಗೊಬ್ಬರು ಹೇಳಿಕೊಂಡು ಗುಂಪಾಗಿ ಓದಿಕೊಳ್ಳಲು ಮಕ್ಕಳಿಗೆ ಆಗುತ್ತಿರಲಿಲ್ಲ.

ಹೀಗೆ ಮಕ್ಕಳ ಕಲಿಕೆಯಲ್ಲಿನ ತೊಂದರೆಗಳನ್ನು ಗುರುತಿಸಿದ ಕಲಿಸುಗರು ಅವರ ಕಲಿಕೆಗೆ ನೆರವಾಗಲು ನಿಂತರು. ಕಲಿಕೆಮನೆಯಲ್ಲಿ ರಾತ್ರಿಯ ಬೆಳಕಿನ ಏರ್‍ಪಾಡನ್ನು ಮಾಡಿ 10 ನೇ ತರಗತಿಯ ಮಕ್ಕಳಿಗೆ ರಾತ್ರಿಯ ಊಟ ಮತ್ತು ಮಲಗುವ ಏರ್‍ಪಾಡನ್ನು ಕೂಡ ಅಲ್ಲಿಯೇ ಮಾಡಿದರು. ಸಂಜೆ 5.30 ರಿಂದ 8 ಗಂಟೆಯವರೆಗೆ ಓದು, 8 ರಿಂದ 9 ಕ್ಕೆ ಊಟದ ಬಿಡುವು, 9 ರಿಂದ 10 ಗಂಟೆಯವರೆಗೆ ಓದು, ಮತ್ತೆ ಬೆಳಗ್ಗೆ 6 ರಿಂದ 7 ಗಂಟೆಯವರೆಗೆ ಓದು. ಬಳಿಕ ಮಕ್ಕಳು ಮನೆಗೆ ತೆರಳಿ ಎಂದಿನಂತೆ 10 ಗಂಟೆಗೆ ಕಲಿಕೆಗೆ ಬರುವಂತೆ ಮಾಡಿದರು. ರಾತ್ರಿ ಊಟದ ಕರ್‍ಚಿನ ಹೊರೆಯನ್ನು ಕಲಿಸುಗರೆ ಹೊತ್ತುಕೊಂಡರು. ಕಲಿಸುಗರು ಕೂಡ ಸರದಿಯಲ್ಲಿ ಮಕ್ಕಳ ಜೊತೆ ಉಳಿದು ಪಾಟ ಹೇಳಿ ಕೊಟ್ಟರು. ಹೆಣ್ಣುಮಕ್ಕಳ ಕಾವಲಿಗೆ ಅವರ ತಾಯಂದಿರನ್ನು ಸರದಿಯಂತೆ ಬಂದು ಉಳಿದುಕೊಳ್ಳುವಂತೆ ಮಾಡಿದ್ದರು.

ಈ ಪ್ರಯೋಗವನ್ನು ಸುಮಾರು ಮೂರು ತಿಂಗಳುಗಳ ಕಾಲ ನಡೆಸಿ 10 ನೇ ತರಗತಿ ಮಕ್ಕಳಿಗೆ ಒಳ್ಳೆಯ ಕಲಿಕೆಯನ್ನು ನೀಡಿ ಪರೀಕ್ಶೆಗೆ ಅಣಿಗೊಳಿಸಿದರು. ಮಕ್ಕಳು ಕೂಡ ಹುಮ್ಮಸ್ಸಿನಿಂದ ಕಲಿತು, ಓದಿ ಪರೀಕ್ಶೆಗೆ ಸಿದ್ದವಾದರು, ಪರೀಕ್ಶೆಯನ್ನೂ ಬರೆದರು. ಎಲ್ಲರೂ ಉಸಿರು ಕಟ್ಟಿಕೊಂಡು ಪಲಿತಾಂಶಕ್ಕಾಗಿ ಕಾಯುತ್ತಿದ್ದರು. 2012 ರಲ್ಲಿ 78% ಪಲಿತಾಂಶ ಬಂದಿತ್ತು, ಇಲ್ಲಿಯವರೆಗಿನ ಅತಿ ಹೆಚ್ಚಿನ ಪಲಿತಾಂಶವೆಂದರೆ 89% ಆಗಿತ್ತು. ಈ ಬಾರಿ 90% ಬಂದರೆ ಸಾಕು ಅದೇ ಒಂದು ದಾಕಲೆ ಎಂದು ಕಲಿಸಗರು ಎಣಿಸುತ್ತಿದ್ದರು. ಕೊನೆಗೂ ಬಂದಿತು 2013 ರ ಪಲಿತಾಂಶ ಕಣತಿ ಕಲಿಕೆಮನೆಯ ಹತ್ತನೇ ತರಗತಿ ಮಕ್ಕಳು ನೂರಕ್ಕೆ ನೂರರಶ್ಟು ಪಾಸು! ಕಲಿಕೆಮನೆಯ ಹಳಮೆಯಲ್ಲಿ ಮೊತ್ತಮೊದಲ ಬಾರಿಗೆ ನೂರಕ್ಕೆ ನೂರು ಪಾಸು! ಮಕ್ಕಳ, ಪೋಶಕರ ಹಾಗು ಕಲಿಸುಗರ ನಲಿವಿಗೆ ಎಲ್ಲೆ ಇರಲಿಲ್ಲ. ಊರಿಗೆ ಊರೆ ಹುಬ್ಬೇರಿಸಿ ಹಿಂತಿರುಗೆ ನೋಡುವಂತೆ ಮಾಡಿತು ಈ ಬಾರಿಯ ಪಲಿತಾಂಶ.

ಇಶ್ಟಕ್ಕೆ ಸುಮ್ಮನಾಗಲಿಲ್ಲ ಕಲಿಸುಗರ ತಂಡ, ಹತ್ತಿರದ ಊರುಗಳಿಗೆ ಪಲಿತಾಂಶದ ಬಯಲರಿಕೆಗಳನ್ನು ಹಾಕಿದರು, ಗುಣಮಟ್ಟದ ಕಲಿಕೆಗೆ ಕಣತಿ ಕಲಿಕೆಮನೆಗೆ ಸೇರಿಸುವಂತೆ ಪ್ರಚಾರ ನೀಡಿದರು. ಇವೆಲ್ಲದರ ಪಲವಾಗಿ ಈ ಬಾರಿ 25 ಮಕ್ಕಳು 8 ನೆ ತರಗತಿಗೆ ಸೇರಿದ್ದಾರೆ! ಅಂದರೆ ಕಳೆದ ಸಾಲಿಗಿಂತ 50% ಹೆಚ್ಚು ಮಕ್ಕಳು ಸೇರಿದ್ದಾರೆ. ಮಕ್ಕಳ ಸೇರಿಕೆಯಲ್ಲಿ ಏರಿಕೆ ಕಂಡಿದೆ. ಈಗ ಮತ್ತಶ್ಟು ಹುಮ್ಮಸ್ಸಿನಿಂದ ಮಕ್ಕಳು ಮತ್ತು ಕಲಿಸುಗರು ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಮಕ್ಕಳು ಒಳ್ಳೆಯ ಕಲಿಕೆ ಕಲಿತು ಹೆಚ್ಚಿನ ಅಂಕಗಳಿಸಿ ಪಾಸಗಬೇಕು ಎಂಬುದು ಇವರ ಮುಂದಿನ ಗುರಿಯಾಗಿದೆ. ಹಾಗೆಯೇ ಆಟೋಟದಲ್ಲಿಯೂ ಕೂಡ ಹೆಸರುಗಳಿಸುವ ಗುರಿಯಿದೆ.

ಸರಕಾರಿ ಕಲಿಕೆಮನೆಯಲ್ಲೂ ಕೂಡ ಗುಣಮಟ್ಟದ ಕಲಿಕೆ ನೀಡಿದಲ್ಲಿ ಒಳ್ಳೆಯ ಪಲಿತಾಂಶ ನೀಡಬಹುದು ಎಂಬುದನ್ನು ಈ ಕಲಿಕೆಮನೆ ತೋರಿಸಿದೆ. ಈ ಗೆಲುವಿನ ಹಿಂದಿರುವ ಕಲಿಸುಗರ ಹೆಸರುಗಳು ಇಂತಿವೆ, ಬಿ. ಆರ್‍. ಶಶಿದರ, ಕೆ. ಬಿ. ಬಸವರಾಜಪ್ಪ, ಶಂಶಾದ್ ಜಾನ್, ಎಮ್. ರಾಜಮ್ಮ, ಸಿ. ಡಿ. ಪದ್ಮಾವತಿ, ಕೆ. ಮಾಲ, ವಿ. ರವಿಕುಮಾರ್‍, ಕೆ. ಆರ್‍. ಹರೀಶ್. ಇವರಿಗೆ ನೀವೂ ನಿಮ್ಮ ನಲವರಿಕೆಗಳನ್ನು ತಿಳಿಸಬಹುದು GHSkanathi5912ಅಟ್gmailಡಾಟ್com ಗೆ ಮಿಂಚೆ ಬರೆದು ಹುರಿದುಂಬಿಸಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications