ಇಂಗ್ಲಿಶ್ ಕಲಿಕೆಗೆ ಕನ್ನಡದ ನೆರವು ಬೇಕು

– ಡಿ.ಎನ್.ಶಂಕರ ಬಟ್

ನುಡಿಯರಿಮೆಯ ಇಣುಕುನೋಟ – 4

nudi_inuku

ಶಾಲೆಯಲ್ಲಿ ಮಕ್ಕಳಿಗೆ ಇಂಗ್ಲಿಶ್ ಕಲಿಸುವುದನ್ನು ಯಾವ ತರಗತಿಯಲ್ಲಿ ತೊಡಗಬೇಕು ಎಂಬ ವಿಶಯದಲ್ಲಿ ಇವತ್ತು ಬಹಳಶ್ಟು ಚರ‍್ಚೆಗಳು ನಡೆಯುತ್ತಿವೆ. ಎಲ್ಲರಿಗೂ ಮೊದಲನೇ ತರಗತಿಯಿಂದಲೇ ಕಲಿಸಲು ತೊಡಗಬೇಕೆಂದು ಕೆಲವರು ಹೇಳುತ್ತಾರೆ, ಮತ್ತು ಮೂರು ಇಲ್ಲವೇ ಅಯ್ದನೇ ತರಗತಿಯಿಂದ ಕಲಿಸಲು ತೊಡಗಿದರೆ ಸಾಕೆಂದು ಬೇರೆ ಕೆಲವರು ಹೇಳುತ್ತಾರೆ.

ಮೊದಲನೇ ತರಗತಿಯಿಂದಲೇ ಇಂಗ್ಲಿಶ್ ನುಡಿಯನ್ನು ಕಲಿಸಲು ತೊಡಗಬೇಕೆಂದು ಹೇಳುವವರು ನಿಜಕ್ಕೂ ಕೆಲವು ತಪ್ಪು ಅನಿಸಿಕೆಗಳನ್ನಿರಿಸಿಕೊಂಡು ಹಾಗೆ ಹೇಳುತ್ತಿದ್ದಾರೆ. ಚಿಕ್ಕಮಕ್ಕಳು ದೊಡ್ಡವರಿಗಿಂತ ಬೇಗನೆ ನುಡಿಯನ್ನು ಕಲಿತುಕೊಳ್ಳಬಲ್ಲರು; ಹಾಗಾಗಿ, ಚಿಕ್ಕವರಾಗಿರುವಾಗಲೇ ಇಂಗ್ಲಿಶ್ ಕಲಿಸಲು ತೊಡಗಿದರೆ, ಅವರು ಬೇಗನೆ ಮತ್ತು ಸುಲಬವಾಗಿ ಆ ನುಡಿಯನ್ನು ಕಲಿತುಕೊಳ್ಳಬಲ್ಲರೆಂಬುದು ಅವರ ಒಂದು ತಪ್ಪು ಅನಿಸಿಕೆ.

ಮೊದಲನೇ ತರಗತಿಯಿಂದಲೇ ಕಲಿಸತೊಡಗಿದರೆ, ಕಾಲೇಜಿಗೆ ಹೋಗುವಶ್ಟರ ಹೊತ್ತಿಗೆ ಅವರಿಗೆ ಹೆಚ್ಚು ಸಮಯದ ಇಂಗ್ಲಿಶ್ ಕಲಿಕೆ ದೊರೆಯುತ್ತದೆ; ಹಾಗಾಗಿ, ಆ ನುಡಿಯಲ್ಲಿ ಅವರಿಗೆ ಎಲ್ಲಾ ವಿಶಯಗಳನ್ನೂ ಇಂಗ್ಲಿಶ್‌ನಲ್ಲೇ ಕಲಿಯುತ್ತಿರುವ ಮಕ್ಕಳೊಂದಿಗೆ ಸೆಣಸಲು ಹೆಚ್ಚು ಅನುಕೂಲವಾಗುತ್ತದೆ ಎಂಬುದು ಇನ್ನೊಂದು ತಪ್ಪು ಅನಿಸಿಕೆ.

ಈ ಎರಡು ಅನಿಸಿಕೆಗಳೂ ತಪ್ಪೆಂಬುದಾಗಿ ಇದುವರೆಗೆ ನಡೆಸಿರುವ ಹಲವಾರು ಸಂಶೋದನೆಗಳು ತೋರಿಸಿಕೊಟ್ಟಿವೆ: ಶಾಲೆಯಲ್ಲಿ ಪ್ರೆಂಚ್ ನುಡಿಯನ್ನು ಕಲಿಯುತ್ತಿದ್ದ ಹದಿನೇಳು ಸಾವಿರ ಬ್ರಿಟಿಶ್ ಮಕ್ಕಳ ಕಲಿಕೆಯನ್ನು ಒಂದು ಅರಕೆಯಲ್ಲಿ ಗಮನಿಸಲಾಗಿತ್ತು. ಅವರಲ್ಲಿ ಕೆಲವು ಮಕ್ಕಳು ಈ ಕಲಿಕೆಯನ್ನು ಎಂಟನೇ ವರ‍್ಶದಲ್ಲೇನೇ ತೊಡಗಿದ್ದರು; ಆದರೆ, ಬೇರೆ ಕೆಲವು ಮಕ್ಕಳು ಈ ಕಲಿಕೆಯನ್ನು ತೊಡಗುವಾಗ ಹತ್ತು ಕಳೆದು ಹನ್ನೊಂದು ವರ‍್ಶವಾಗಿತ್ತು.

ಅಯ್ದು ವರ‍್ಶದ ಕಲಿಕೆಯ ಬಳಿಕ, ಎಂಟನೇ ವರ‍್ಶದಲ್ಲಿ ಕಲಿಯಲು ತೊಡಗಿದವರಿಗಿಂತಲೂ ಹನ್ನೊಂದನೇ ವರ‍್ಶದಲ್ಲಿ ಕಲಿಯಲು ತೊಡಗಿದವರೇ ಹೆಚ್ಚು ಚನ್ನಾಗಿ ಪ್ರೆಂಚ್ ಬಳಸಬಲ್ಲವರಾಗಿದ್ದರು. ಚಿಕ್ಕಮಕ್ಕಳು ದೊಡ್ಡವರಿಗಿಂತ ಬೇಗನೆ ತಮ್ಮ ಎರಡನೇ ನುಡಿಯನ್ನು ಕಲಿಯಬಲ್ಲರೆಂಬ ಅನಿಸಿಕೆ ತಪ್ಪು ಎಂಬುದು ಇದರಿಂದ ಗೊತ್ತಾಗುತ್ತದೆ.

ಇಂಗ್ಲಿಶ್ ಕಲಿಯುವ ಸ್ವೀಡಿಶ್ ಮತ್ತು ಡೇನಿಶ್ ಮಕ್ಕಳ ಕಲಿಕೆಯನ್ನು ಮತ್ತು ಪ್ರೆಂಚ್ ಕಲಿಯುವ ಸ್ವಿಸ್ ಮಕ್ಕಳ ಕಲಿಕೆಯನ್ನು ಪರಿಶೀಲಿಸಿದಾಗಲೂ ಚಿಕ್ಕ ಮಕ್ಕಳಿಗಿಂತ ದೊಡ್ಡ ಮಕ್ಕಳೇ ತಮ್ಮ ಎರಡನೇ ನುಡಿಯನ್ನು ಹೆಚ್ಚು ಸುಲಬವಾಗಿ ಮತ್ತು ಬೇಗನೆ ಕಲಿಯಬಲ್ಲರೆಂದು ಕಂಡುಬಂದಿದೆ.

ಹಲವು ಜನರಲ್ಲಿರುವ ಈ ಮೊದಲನೇ ತಪ್ಪು ಅನಿಸಿಕೆಗೆ ಚಿಕ್ಕ ಮಕ್ಕಳು ತಮ್ಮ ತಾಯ್ನುಡಿಯನ್ನು ಬಹಳ ಬೇಗನೆ ಯಾರ ಸಹಾಯವೂ ಇಲ್ಲದೆ ಪಡೆಯಬಲ್ಲರೆಂಬುದೇ ಆದಾರವಾಗಿರಬೇಕು. ಆದರೆ ಮಕ್ಕಳು ತಮ್ಮ ಮೊದಲನೆಯ ತಾಯ್ನುಡಿಯನ್ನು ಪಡೆಯುವುದಕ್ಕೂ, ಆಮೇಲೆ ಶಾಲೆಯಲ್ಲಿ ತಮ್ಮ ಎರಡನೆಯ ನುಡಿಯನ್ನು ಕಲಿಯುವುದಕ್ಕೂ ನಡುವೆ ಹಲವು ವ್ಯತ್ಯಾಸಗಳಿವೆ.

ಮೊದಲನೆಯ ನುಡಿಯನ್ನು ಪಡೆಯುವಾಗ ಮಕ್ಕಳಿಗೆ ಸಿಗುವಂತಹ ಹುಟ್ಟಿನಿಂದ ಬಂದ ಅಳವು ಎರಡನೆಯ ನುಡಿಯನ್ನು ಕಲಿಯುವಾಗ ದೊರಕುವುದಿಲ್ಲ. ಹಾಗಾಗಿ, ಎರಡನೆಯ ನುಡಿಯನ್ನು ಅವರು ಬೇರೆಯೇ ರೀತಿಯಲ್ಲಿ ಕಲಿಯಬೇಕಾಗುತ್ತದೆ.

ಇದಲ್ಲದೆ, ಎರಡನೆಯ ನುಡಿಯನ್ನು ಕಲಿಯುವ ಮಕ್ಕಳ ಮಿದುಳಿನಲ್ಲಿ ಮೊದಲನೆಯ ನುಡಿ ನೆಲೆನಿಂತಿರುತ್ತದೆ; ಹಾಗಾಗಿ, ಆ ನುಡಿಯ ಮೂಲಕವೇನೇ ಅವರು ಎರಡನೆಯ ನುಡಿಯನ್ನು ಕಲಿಯಬೇಕಾಗುತ್ತದೆ. ಮೊದಲನೆಯ ನುಡಿಯನ್ನು ಬಳಸುವಲ್ಲಿ ಸಾಕಶ್ಟು ಪಳಗುವ ಮೊದಲೇ ಎರಡನೆಯ ನುಡಿಯನ್ನು ಅವರ ಮೇಲೆ ಹೇರಿದಲ್ಲಿ, ಅವರು ತಡವರಿಸುತ್ತಾರೆ.  ಅದರಲ್ಲೂ ಮೊದಲನೆಯ ನುಡಿಯಲ್ಲಿ ಓದುವ ಮತ್ತು ಬರೆಯುವ ಕೆಲಸಗಳನ್ನು ನಡೆಸಲು ಕಲಿಯುವ ಮೊದಲೇ ಎರಡನೆಯ ನುಡಿಯಲ್ಲಿ ಅವನ್ನು ನಡೆಸುವಂತೆ ಮಾಡಿದಲ್ಲಿ, ಹೆಚ್ಚಿನ ಮಕ್ಕಳೂ ಹಿಂದೆ ಬೀಳುತ್ತಾರೆ.

ಇಂಗ್ಲಿಶ್ ಬಳಸಲು ಸಮಯ ಹೆಚ್ಚು ದೊರೆತಶ್ಟೂ ಮಕ್ಕಳು ಆ ನುಡಿಯನ್ನು ಹೆಚ್ಚು ಚನ್ನಾಗಿ ಕಲಿಯಬಲ್ಲರು ಎಂಬ ಎರಡನೆಯ ಅನಿಸಿಕೆಯೂ ತಪ್ಪು ಎಂಬುದಾಗಿ ಹಲವು ಸಂಶೋದನೆಗಳು ತೋರಿಸಿಕೊಟ್ಟಿವೆ: ಕೆಮರೂನ್‌ನ ಶಾಲೆಗಳಲ್ಲಿ ಇಂಗ್ಲಿಶ್ ಕಲಿಕೆನುಡಿಯಾಗಿರುವ ಮಕ್ಕಳು ವಾರಕ್ಕೆ ೨೨ ಗಂಟೆಗಳಶ್ಟು ಸಮಯ ಇಂಗ್ಲಿಶ್ ಬಳಸುತ್ತಿರುತ್ತಾರೆ, ಮತ್ತು ತಾಯ್ನುಡಿ ಕಲಿಕೆನುಡಿಯಾಗಿರುವ ಶಾಲೆಗಳಲ್ಲಿ ವಾರಕ್ಕೆ ಬರೇ ೩ ಗಂಟೆಗಳಶ್ಟು ಸಮಯ ಇಂಗ್ಲಿಶ್ ಬಳಸುತ್ತಿರುತ್ತಾರೆ.

ಹೀಗಿದ್ದರೂ, ೧೨ ಇಂಗ್ಲಿಶ್ ಶಾಲೆಗಳಲ್ಲಿರುವ ಮಕ್ಕಳ ಇಂಗ್ಲಿಶ್ ತಿಳಿವನ್ನು ೧೨ ತಾಯ್ನುಡಿ ಶಾಲೆಗಳಲ್ಲಿರುವ ಮಕ್ಕಳ ಇಂಗ್ಲಿಶ್ ತಿಳಿವಿನೊಂದಿಗೆ ಹೋಲಿಸಿ ನೋಡಿದಾಗ, ತಾಯ್ನುಡಿ ಶಾಲೆಗಳಲ್ಲಿರುವ ಮಕ್ಕಳೇ ಮುಂದಿರುವುದು ಕಂಡುಬಂದಿದೆ. ಅಮೆರಿಕಾದಲ್ಲಿ ನಡೆಸಿದ ಇಂತಹದೇ ಇನ್ನೊಂದು ಅರಕೆ, ಮತ್ತು ಬೇರೆಯೂ ಕೆಲವು ಅರಕೆಗಳು ಇದೇ ತೀರ‍್ಮಾನಕ್ಕೆ ಬಂದಿವೆ.

ಇಲ್ಲಿ ಒಂದು ಮುಕ್ಯವಾದ ವಿಶಯವನ್ನು ನಾವು ಗಮನಿಸುವುದು ಅವಶ್ಯ. ನುಡಿಯ ಕಲಿಕೆಯೆಂಬುದು ನಿಜಕ್ಕೂ ಎರಡು ರೀತಿಯದು. ದಿನಬಳಕೆಗೆ ಬೇಕಾಗುವ ಮಾತುಗಳನ್ನು ಸಲೀಸಾಗಿ ನುಡಿಯಲು ಕಲಿಯುವುದು ಒಂದು ರೀತಿಯ ಕಲಿಕೆ; ಮತ್ತು ಗಣಿತ, ವಿಜ್ನಾನ ಮೊದಲಾದ ವಿಶಯಗಳನ್ನು ತಿಳಿಯುವುದಕ್ಕಾಗಿ, ಮತ್ತು ಹಾಗೆ ತಿಳಿದುದನ್ನು ಇನ್ನೊಬ್ಬರಿಗೆ ವಿವರಿಸಿ ಹೇಳುವುದಕ್ಕಾಗಿ, ನುಡಿಯನ್ನು ಬಳಸಲು ಕಲಿಯುವುದು ಇನ್ನೊಂದು ರೀತಿಯ ಕಲಿಕೆ.

ಒಂದು ನುಡಿಯಲ್ಲಿ ಸಲೀಸಾಗಿ ಮಾತನಾಡಲು ಎರಡರಿಂದ ಮೂರು ವರ‍್ಶಗಳ ಕಲಿಕೆ ಸಾಕಾಗುತ್ತದೆ; ಆದರೆ, ಅದರ ಮೂಲಕ ಸಿಕ್ಕಲು ಸಿಕ್ಕಲಾದ ವಿಶಯಗಳನ್ನು ತಿಳಿಯುವ, ಮತ್ತು ಇತರರಿಗೆ ಅವನ್ನು ತಿಳಿಸುವ ಅಳವನ್ನು ಪಡೆಯಲು ಆರೇಳು ವರ‍್ಶಗಳ ಕಲಿಕೆ ಬೇಕಾಗುತ್ತದೆ. ಇಂಗ್ಲಿಶ್‌ನಲ್ಲಿ ಕಲಿಯುವ ಮಕ್ಕಳು ಮೊದಲನೆಯ ಕಲಿಕೆಯನ್ನು ಪಡೆಯುವಲ್ಲಿ ಇತರರಿಗಿಂತ ಮುಂದಿರುತ್ತಾರೆ; ಆದರೆ ಎರಡನೇ ರೀತಿಯ ಕಲಿಕೆಯನ್ನು ನಡೆಸಬೇಕಾದಾಗ, ಅವರು ಹಿಂದೆ ಬೀಳತೊಡಗುತ್ತಾರೆ, ಮತ್ತು ಆಮೇಲೆ ಅವರು ಮುಂದೆ ಹೋಗುವುದೇ ಇಲ್ಲ.

ಎರಡನೇ ರೀತಿಯ ಕಲಿಕೆಯನ್ನು ನಡೆಸಲು ಮಕ್ಕಳಿಗೆ ಅವರ ತಾಯ್ನುಡಿಯ ನೆರವು ಬೇಕಾಗುತ್ತದೆ ಎಂಬುದೇ ಇದಕ್ಕೆ ಕಾರಣ ಎಂಬುದನ್ನು ಕಂಡುಕೊಳ್ಳಲಾಗಿದೆ. ಸಾಮಾನ್ಯವಾಗಿ, ಇಂಗ್ಲಿಶ್ ಶಾಲೆಗಳಲ್ಲಿ ಮಕ್ಕಳಿಗೆ ಅವರ ತಾಯ್ನುಡಿಯ ಮೇಲೆ ಕೀಳರಿಮೆಯುಂಟಾಗುವ ಹಾಗೆ ಮಾಡಲಾಗುತ್ತದೆ; ಆ ನುಡಿಯ ಸಹಾಯವನ್ನು ಸ್ಪಲ್ಪವೂ ಪಡೆಯದೆ ಎರಡನೇ ನುಡಿಯನ್ನು ಕಲಿಯುವಂತೆ ಅವರ ಮೇಲೆ ಒತ್ತಡ ಹೇರಲಾಗುತ್ತದೆ. ಇದರಿಂದಾಗಿ ಅವರಿಗೆ ಇಂಗ್ಲಿಶ್‌ನಲ್ಲಿ ಎರಡನೇ ರೀತಿಯ ಕಲಿಕೆಯನ್ನು ನಡೆಸಲು ತುಂಬಾ ಕಶ್ಟವಾಗುತ್ತದೆ.

ತಾಯ್ನುಡಿಯಲ್ಲಿ ಮಾತನಾಡುವುದನ್ನು ಮಾತ್ರವಲ್ಲದೆ ಓದುವುದನ್ನು ಮತ್ತು ಬರೆಯುವುದನ್ನೂ ಕಲಿತಿರುವ ಮಕ್ಕಳಿಗೆ ಎರಡನೇ ನುಡಿಯಲ್ಲಿ ಅಂತಹದೇ ಕಲಿಕೆಯನ್ನು ನಡೆಸಲು ಆ ತಿಳಿವು ಒಂದು ಕೊಂಡಿಯಾಗಿ ಕೆಲಸ ಮಾಡುತ್ತದೆ. ಅಂತಹ ಕಲಿಕೆಯನ್ನು ನಡೆಸುವ ಮೊದಲೇ ಮಕ್ಕಳಿಂದ ಅವರ ತಾಯ್ನುಡಿಯನ್ನು ದೂರಮಾಡಿದಲ್ಲಿ ಅವರಿಗೆ ಈ ಕೊಂಡಿ ಸಿಗುವುದಿಲ್ಲ.

ಇದಲ್ಲದೆ, ಮಕ್ಕಳಲ್ಲಿ ತಿಳಿವಿನ ಬೆಳವಣಿಗೆ ಸರಿಯಾಗಿ ನಡೆಯಬೇಕಾದರೆ, ಅವರು ತಮ್ಮ ತಾಯ್ನುಡಿಯಲ್ಲಿ ತೊಡಗಿರುವಂತಹ ತಿಳಿವು ಪಡೆಯುವ ಕೆಲಸವನ್ನು ಅದರಲ್ಲೇನೇ ಮುಂದುವರಿಸಿಕೊಂಡು ಹೋಗುವ ಹಾಗೆ ಮಾಡುವುದು ಅವಶ್ಯ; ಅದನ್ನು ನಡುವೆಯೇ ನಿಲ್ಲಿಸಿ, ಆ ಕೆಲಸವನ್ನು ಬೇರೊಂದು ನುಡಿಯಲ್ಲಿ ನಡೆಸುವಂತೆ ಅವರ ಮೇಲೆ ಒತ್ತಡ ಹೇರಿದಲ್ಲಿ, ಹೆಚ್ಚಿನವರಲ್ಲೂ ಗೊಂದಲವುಂಟಾಗುತ್ತದೆ, ಮತ್ತು ಬಳಿಕ ಅವರಲ್ಲಿ ತಿಳಿವಿನ ಬೆಳವಣಿಗೆ ಸರಿಯಾಗಿ ನಡೆಯುವುದೇ ಇಲ್ಲ.

ಕಳೆದ ಹತ್ತು-ಹದಿನಯ್ದು ವರ‍್ಶಗಳಲ್ಲಿ ನಡೆಸಿದ ಎಲ್ಲಾ ಅರಕೆಗಳೂ ಮೇಲಿನ ತೀರ‍್ಮಾನಗಳನ್ನು ಬೆಂಬಲಿಸಿವೆ; ಶಾಲೆಗೆ ಬರುವ ಹೊತ್ತಿಗೆ ಚನ್ನಾಗಿ ಬಳಸಲು ತಿಳಿದಿರುವ ನುಡಿಯಲ್ಲಿ ಮಕ್ಕಳ ಕಲಿಕೆಯನ್ನು ಮುಂದುವರಿಸಿದಲ್ಲಿ ಮಾತ್ರ ಅವರು ಬೇರೊಂದು ನುಡಿಯ ಕಲಿಕೆಯನ್ನು ಚನ್ನಾಗಿ ನಡೆಸಬಲ್ಲರು. ಅದನ್ನು ಕಡೆಗಣಿಸುವಂತೆ ಮಾಡಿದಲ್ಲಿ, ಅವರು ಹಲವಾರು ತೊಡಕುಗಳಿಗೆ ಮತ್ತು ಗೊಂದಲಗಳಿಗೆ ಒಳಗಾಗುತ್ತಾರೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

<< ನುಡಿಯರಿಮೆಯ ಇಣುಕುನೋಟ – 3

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 28/08/2013

    […] << ನುಡಿಯರಿಮೆಯ ಇಣುಕುನೋಟ – 4 […]

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *