ಇಂಗ್ಲಿಶ್ ಹೇರಿಕೆಯಿಂದ ಬಿಡಿಸಿಕೊಳ್ಳುತ್ತಿರುವ ಸ್ಕಾಟ್ಲೆಂಡ್!

ಪ್ರಿಯಾಂಕ್ ಕತ್ತಲಗಿರಿ.

flickriverdotcom

ಯುನಯ್ಟೆಡ್ ಕಿಂಗ್‍ಡಮ್ಮಿನ ಮೇಲ್ಬಾಗದಲ್ಲಿರುವ ನಾಡೇ ಸ್ಕಾಟ್ಲೆಂಡ್. ಇಂಗ್ಲೀಶರ ನಾಡಾದ ಇಂಗ್ಲೆಂಡಿಗೆ ತಾಕಿಕೊಂಡೇ ಇರುವ ಸ್ಕಾಟ್ಲೆಂಡಿನಲ್ಲಿ ಹೆಚ್ಚಿನ ಜನರ ಮಾತು ಇಂಗ್ಲೀಶ್ ಆಗಿಹೋಗಿದೆ. ಸ್ಕಾಟ್ಲೆಂಡಿನ ಬಡಗಣ ತುದಿಯಲ್ಲಿ ನೆಲೆಸಿರುವವರಲ್ಲಿ ಸುಮಾರು 50,000 ಮಂದಿಯ ನುಡಿಯೇ ಸ್ಕಾಟಿಶ್ ಗೇಲಿಕ್. ತಮ್ಮ ನೆಲದಲ್ಲಿ ಬೇರೊಂದು ನುಡಿಯಿರುವುದನ್ನು ಹೆಮ್ಮೆಯಿಂದ ಕಾಣುವ ಸ್ಕಾಟ್ಲೆಂಡ್, ಗೇಲಿಕ್ ನುಡಿಯನ್ನು ಮುಂಚೂಣಿಗೆ ತರಲು ಸಾಕಶ್ಟು ಕೆಲಸಗಳನ್ನು ಕಯ್ಗೆತ್ತಿಕೊಂಡಿದೆ.

ದಾರಿತೋರುಗಗಳಲ್ಲಿ ಮೊದಲ ಜಾಗ ಗೇಲಿಕ್ ನುಡಿಗೆ

ಗೇಲಿಕ್ ನುಡಿಯಾಡುವ ಮಂದಿ ಮುಂಚಿಂದ ನೆಲೆಸಿದ್ದ ಜಾಗಗಳಲ್ಲಿ ಗೇಲಿಕ್ ನುಡಿಯು ಕಣ್ಣಿಗೆ ಬೀಳುವಂತೆ ಮಾಡಲಾಗಿದೆ. ದಾರಿಯುದ್ದಕ್ಕೂ ಸಿಗುವ ದಾರಿತೋರುಗಗಳಲ್ಲಿ ಮೊದಲ ಜಾಗ ಗೇಲಿಕ್ ನುಡಿಗೆ ನೀಡಲಾಗಿ, ಬಳಿಕ ಇಂಗ್ಲೀಶಿನಲ್ಲೂ ಮಾಹಿತಿ ಬರೆಯಲಾಗಿರುತ್ತದೆ. ಆಯಾ ಊರುಗಳಲ್ಲಿ ಇವತ್ತಿನ ದಿನ ಗೇಲಿಕ್ ನುಡಿಯಾಡುವವರಿಗಿಂತಾ ಹೆಚ್ಚು ಇಂಗ್ಲೀಶ್ ನುಡಿಯಾಡುಗರೇ ಇದ್ದರೂ, ಗೇಲಿಕ್ ಬಲ್ಲವರೆಲ್ಲರಿಗೂ ಇಂಗ್ಲೀಶ್ ಗೊತ್ತಿದ್ದರೂ, ಊರಿನ ಮೂಲನುಡಿಗೆ ತಕ್ಕ ಸ್ತಾನವನ್ನು ನೀಡಲಾಗಿದೆ.

ಗೇಲಿಕ್ ಮಾದ್ಯಮ ಶಾಲೆಗಳನ್ನು ಕಟ್ಟಲಾಗಿದೆ

ಇವತ್ತಿನ ದಿನಗಳಲ್ಲಿ ಬೆಂಗಳೂರಿನ ಕೆಲವು ಇಂಗ್ಲೀಶ್ ಮಾದ್ಯಮ ಶಾಲೆಗಳಲ್ಲಿ ಕನ್ನಡದಲ್ಲಿ ಮಾತನಾಡಿದರೆ ದಂಡ ಹಾಕುವುದು ತಿಳಿದ ವಿಶಯವೇ. ಅಂತಹದೇ ಪರಿಸ್ತಿತಿಯು ಗೇಲಿಕ್ ನುಡಿಗೂ ಸುಮಾರು ವರುಶಗಳ ಹಿಂದೆ ಇದ್ದಿತ್ತಂತೆ. ಇಂಗ್ಲೀಶ್ ಮಾದ್ಯಮಗಳಲ್ಲಿ ಕಲಿಯುತ್ತಿದ್ದ ಮಕ್ಕಳು ಶಾಲೆಯಲ್ಲಿ ಗೇಲಿಕ್ ಮಾತನಾಡಿಬಿಟ್ಟರೆ ಅವರಿಗೆ ಒದೆ ಬೀಳುತ್ತಿತ್ತಂತೆ. ಆದರೆ, ಇವತ್ತಿನ ದಿನ ಸ್ಕಾಟ್ಲೆಂಡ್ ಎಚ್ಚೆತ್ತುಕೊಂಡಿದೆ ಮತ್ತು ಗೇಲಿಕ್ ಮಾದ್ಯಮ ಶಾಲೆಗಳನ್ನು ಕಟ್ಟುತ್ತಿದೆ. ಸುಮಾರು 12 ಗೇಲಿಕ್ ಮಾದ್ಯಮ ಶಾಲೆಗಳು ಮತ್ತು 61 ಅರೆ-ಗೇಲಿಕ್ ಮಾದ್ಯಮ ಶಾಲೆಗಳು ಈಗಾಗಲೇ ಕೆಲಸ ಮಾಡುತ್ತಿವೆ ಸ್ಕಾಟ್ಲೆಂಡಿನಲ್ಲಿ. 2008-09ರಲ್ಲಿ ಸುಮಾರು 2,092 ಮಕ್ಕಳು ಗೇಲಿಕ್ ಮಾದ್ಯಮ ಶಾಲೆಗಳಲ್ಲಿ ಓದುತ್ತಿದ್ದರು ಎಂಬ ಅಂಕಿ-ಅಂಶ ಸಿಗುತ್ತದೆ. 1985ರಲ್ಲಿ ಗೇಲಿಕ್ ಮಾದ್ಯಮ ಶಾಲೆಗಳಲ್ಲಿ ಓದುತ್ತಿದ್ದವರ ಎಣಿಕೆ ಕೇವಲ 24 ಇದ್ದಿತ್ತು ಎಂಬುದನ್ನು ಗಮನಿಸಿದಾಗ, ಸ್ಕಾಟ್ಲೆಂಡಿನವರು ನಡೆದಿರುವ ದೂರದ ಅರಿವಾಗುತ್ತದೆ.

ಒಕ್ಕೂಟದ ಜೊತೆ ಮಾತನಾಡಲೂ ಗೇಲಿಕ್ ಬಳಸಬಹುದಾಗಿದೆ

ಯುರೋಪ್ ಒಕ್ಕೂಟದ ಜೊತೆ ಸ್ಕಾಟ್ಲೆಂಡಿನ ಮಂದಿ ಒಡನಾಟ ಹೊಂದಿರುತ್ತಾರೆ. ಯುರೋಪ್ ಒಕ್ಕೂಟದ ಜೊತೆಗೆ ಯಾವುದೇ ಬಗೆಯ ಒಡನಾಟವನ್ನೂ ಗೇಲಿಕ್ ನುಡಿಯಲ್ಲಿ ಮಾಡಬಹುದು ಎಂದು 2009ರಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಗೇಲಿಕ್ ನುಡಿಯಾಡುಗರು ಯುರೋಪ್ ಒಕ್ಕೂಟದ ಸಂಸ್ತೆಗಳಿಗೆ ಗೇಲಿಕ್ ನುಡಿಯಲ್ಲೇ ಓಲೆ ಬರೆಯಬಹುದಾಗಿದೆ ಮತ್ತವರಿಗೆ ಉತ್ತರವೂ ಗೇಲಿಕ್ ನುಡಿಯಲ್ಲೇ ಸಿಗುತ್ತದೆ. ಯುರೋಪ್ ಒಕ್ಕೂಟದ ಅಪೀಶಿಯಲ್ ನುಡಿಗಳಲ್ಲಿ ಒಂದಾಗಿ ಗೇಲಿಕ್ ಇನ್ನೂ ಸೇರ‍್ಪಡೆಗೊಳ್ಳದೇ ಇರುವುದರಿಂದ, ಯುರೋಪ್ ಒಕ್ಕೂಟದ ಯಾವುದೇ ಬಗೆಯ ಸೇವೆ ನೀಡಲು ಇತರೆ ನುಡಿಗಳಿಂದ ಗೇಲಿಕ್ ನುಡಿಗೆ ನುಡಿಮಾರ‍್ಪು (translation) ಮಾಡಲು ತಗಲುವ ವೆಚ್ಚವನ್ನು ಸ್ಕಾಟ್ಲೆಂಡ್ ತುಂಬಬೇಕಾಗಿದೆ. ತನ್ನ ಜನರಿಗೆ ಸಲೀಸಾಗುವುದರಿಂದ ಈ ವೆಚ್ಚವನ್ನು ತುಂಬಲು ಸ್ಕಾಟ್ಲೆಂಡ್ ಮುಂದಾಗಿದೆ.

50,000 ಜನರು ಮಾತ್ರ ಮಾತನಾಡುವ ನುಡಿಯ ಬಗ್ಗೆ ಸ್ಕಾಟ್ಲೆಂಡಿನಂತಹ ಸಣ್ಣ ನಾಡು ಇಶ್ಟೆಲ್ಲಾ ಕಾಳಜಿ ತೋರಿಸುವುದನ್ನು ನೋಡಿದಾಗ, ಆರು ಕೋಟಿ ಕನ್ನಡಿಗರ ನುಡಿಯಾದ ಕನ್ನಡದಲ್ಲಿ ಬಾರತ ಒಕ್ಕೂಟ ಸರಕಾರದ ಜೊತೆ ಯಾವುದೇ ವ್ಯವಹಾರ ನಡೆಸಲು ಸಾದ್ಯವಿಲ್ಲ ಎಂಬಂತಹ ಏರ‍್ಪಾಡು ಕಟ್ಟಿರುವುದು ನೋಡಿ ಬೇಸರವೆನಿಸುತ್ತದೆ. ತೆರಿಗೆ ಕಟ್ಟಿದುದಕ್ಕೆ ಸಿಗುವ ತಲುಪೊಪ್ಪಿಗೆಯೂ (acknowledgement) ಕನ್ನಡದಲ್ಲಿರುವುದಿಲ್ಲ, ರಯ್ಲಿನ ಟಿಕೆಟ್ಟೂ ಕನ್ನಡದಲ್ಲಿರುವುದಿಲ್ಲ. ಇವೆಲ್ಲವನ್ನೂ ಕನ್ನಡದಲ್ಲಿ ನೀಡಲು ಸಾದ್ಯವಿಲ್ಲವೆಂದೇನಿಲ್ಲ, ಜನರಿಗೆ ಸಲೀಸೆನಿಸುವಂತಹ ಏರ‍್ಪಾಡು ಕಟ್ಟುವ ಮನಸಿರಬೇಕಶ್ಟೇ.

ಮಾಹಿತಿ ಸೆಲೆ: ವಿಕಿಪೀಡಿಯಾ, ಬಿಬಿಸಿ

(ಚಿತ್ರ: flickriver.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: