ಶಿಕ್ಶಣ ಇಲಾಕೆ ನಮ್ಮ ಆಡಳಿತದಲ್ಲೇ ಇರಬೇಕು

ಪ್ರಿಯಾಂಕ್ ಕತ್ತಲಗಿರಿ

K3

ಕರ‍್ನಾಟಕ ಸರಕಾರದಲ್ಲಿ ಶಿಕ್ಶಣ ಸಚಿವರಾದ ಕಿಮ್ಮನೆ ರತ್ನಾಕರ ಅವರು, ಇನ್ನು ಮುಂದೆ ಆರ್.ಎಸ್.ಎಮ್.ಎ.ಗೆ (ರಾಶ್ಟ್ರೀಯ ಮಾದ್ಯಮಿಕ ಶಿಕ್ಶಾ ಅಬಿಯಾನ) ತಕ್ಕಂತೆ ಶಾಲೆಗಳ ಆಡಳಿತ ನಡೆಸಲಾಗುವುದು ಎಂದು ಇತ್ತೀಚೆಗೆ ಹೇಳಿರುವುದು ಸುದ್ದಿಹಾಳೆಗಳಲ್ಲಿ ಮೂಡಿ ಬಂದಿದೆ. ಮುಂದಿನ ವರುಶದಿಂದ ಎಲ್ಲ ಶಾಲೆಗಳಲ್ಲಿ ಸಿ.ಬಿ.ಎಸ್.ಇ ಪಟ್ಯಕ್ರಮವನ್ನೇ ಅಳವಡಿಸಲಾಗುತ್ತದೆ ಎಂದೂ, ಕಲಿಸುಗರಿಗೆ ಸಂಬಳದಿಂದ ಹಿಡಿದು ಶಾಲೆ ಕಟ್ಟಲು ತಗಲುವ ಹಣವೆಲ್ಲಾ ಕೇಂದ್ರ ಸರಕಾರದಿಂದಲೇ ಬರುತ್ತದೆಂದೂ ವರದಿಯಾಗಿದೆ.

ಕಲಿಕೆ ಎಂಬುದು ರಾಜ್ಯದ ಆಡಳಿತದಲ್ಲಿರಬೇಕು

ಸಂವಿದಾನವನ್ನು ಮೊದಲ ಬಾರಿಗೆ ಬರೆದಾಗ ಕಲಿಕೆ ಎಂಬ ವಿಶಯದ ಮೇಲೆ ರಾಜ್ಯ ಸರಕಾರಗಳಿಗೆ ಇಡಿಯಾಗಿ ಅದಿಕಾರ ನೀಡಲಾಗಿತ್ತು. ಹಲತನದ ತವರೂರಾದ ಇಂಡಿಯಾದಲ್ಲಿ ಕಲಿಕೆ ಎಂಬುದನ್ನು ಒಂದೆಡೆ ಕೂತುಕೊಂಡು ಆಡಳಿತ ಮಾಡುವುದು ಪರಿಣಾಮಕಾರಿಯಾಗಿರುವುದಿಲ್ಲ. ಪರಿಣಾಮಕಾರಿ ಆಡಳಿತ ನೀಡುವ ಸಲುವಾಗಿ ರಾಜ್ಯ ಸರಕಾರವೇ ಇದರ ಹೊಣೆ ಹೊರಬೇಕು ಎಂಬುದು ಇದರ ಹಿಂದಿದ್ದ ಆಲೋಚನೆಯಾಗಿದ್ದಿರಬಹುದು. ಆದರೆ 1975ರಲ್ಲಿ ತುರ‍್ತು ಪರಿಸ್ತಿತಿ ಇದ್ದ ಹೊತ್ತಿನಲ್ಲಿ ಕಲಿಕೆ ಎಂಬುದನ್ನು ರಾಜ್ಯಪಟ್ಟಿಯಿಂದ ಜಂಟಿಪಟ್ಟಿಗೆ ಎಳೆದುಕೊಳ್ಳಲಾಯಿತು. ಅವತ್ತಿನಿಂದ ಕೇಂದ್ರ ಸರಕಾರದ ಹಿಡಿತ ಕಲಿಕೆ ವಲಯದಲ್ಲಿ ಹೆಚ್ಚಾಗುತ್ತಲೇ ಸಾಗಿದೆ. ರಾಜ್ಯ ಸರಕಾರಗಳು ಮೇಲಿಂದ ಮೇಲೆ ಕಲಿಕೆಯನ್ನು ರಾಜ್ಯ ಪಟ್ಟಿಗೆ ಸೇರಿಸುವಂತೆ ಕೇಳಿಕೊಂಡರೂ ಕೇಂದ್ರ ಸರಕಾರವು ಬೇಡಿಕೆಗಳನ್ನು ಕಡೆಗಣಿಸುತ್ತಾ ಬಂದಿದೆ.

ಆರ್.ಎಸ್.ಎಮ್.ಎ ಎಂಬ ಯೋಜನೆಯೊಂದನ್ನು ಹೊರತಂದು, ಕಲಿಸುಗರ ಸಂಬಳವನ್ನೂ ತಾನೇ ಕೊಡುತ್ತೀನಿ, ಕಟ್ಟಡ ಕಟ್ಟಲು ಹಣವನ್ನೂ ತಾನೇ ಕೊಡುತ್ತೀನಿ ಎನ್ನುತ್ತಾ ಕಲಿಕೆಯ ಆಡಳಿತವನ್ನು ತನ್ನ ತೆಕ್ಕೆಗೆ ಎತ್ತುಕೊಳ್ಳಲು ಕೇಂದ್ರ ಸರಕಾರ ನೋಡುತ್ತಿರುವಾಗ, ನಮ್ಮ ರಾಜ್ಯ ಸರಕಾರದವರು ದನಿಯೆತ್ತಬೇಕಿತ್ತು. ಅದರ ಬದಲು ನಮ್ಮ ರಾಜ್ಯ ಸರಕಾರದವರು ಎರಡೂ ಕಯ್ಗಳಿಂದ ಕೇಂದ್ರದ ಈ ನಡೆಯನ್ನು ಬರಮಾಡಿಕೊಳ್ಳುತ್ತಿರುವಂತಿದೆ. ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಕಾಂಗ್ರೆಸ್ ಪಕ್ಶದ ಆಡಳಿತವಿರುವುದೇ ಇದಕ್ಕೆ ಕಾರಣವಿರಬಹುದು. ಕಲಿಕೆಯ ಆಡಳಿತವನ್ನು ರಾಜ್ಯ ಪಟ್ಟಿಯಿಂದ ಜಂಟಿ ಪಟ್ಟಿಗೆ ಎಳೆದುಕೊಂಡಿದ್ದೂ ಕಾಂಗ್ರೆಸ್ಸು, ಈಗ ಜಂಟಿಪಟ್ಟಿಯಿಂದ ಇಡಿಯಾಗಿ ಕೇಂದ್ರ ಪಟ್ಟಿಗೆ ಎಳೆದುಕೊಳ್ಳಲು ಹೊರಟಿರುವುದೂ ಕಾಂಗ್ರೆಸ್ಸು.

ಪಟ್ಯಕ್ರಮ ಕಟ್ಟುವ ಹೊಣೆಯೂ ನಮ್ಮದಾಗಿರಬೇಕು

ಎಲ್ಲಾ ಶಾಲೆಗಳಲ್ಲಿ ಮುಂದಿನ ವರುಶದಿಂದ ಸಿ.ಬಿ.ಎಸ್.ಇ ಪಟ್ಯಕ್ರಮ ಅಳವಡಿಸಲಾಗುತ್ತದೆ ಎಂದು ಕೂಡ ವರದಿಯಾಗಿದೆ. ಆರ್.ಎಸ್.ಎಮ್.ಎ.ಗೆ ತಕ್ಕಂತ ಕಲಿಕೆಯೇರ‍್ಪಾಡನ್ನು ಕಟ್ಟಲು ಸಿ.ಬಿ.ಎಸ್.ಇ ಪಟ್ಯಕ್ರಮವನ್ನು ಅಳವಡಿಸಬೇಕೆಂದೇನಿಲ್ಲ. ಆದರೂ ಈ ಒಂದು ಕೆಲಸಕ್ಕೆ ರಾಜ್ಯ ಸರಕಾರ ಮುಂದಾಗಿರುವುದಾಗಿ ವರದಿಗಳು ಹೇಳುತ್ತಿವೆ. ಪಟ್ಯಕ್ರಮ ಕಟ್ಟುವ ಕೆಲಸವನ್ನೂ ಕೇಂದ್ರ ಸರಕಾರಕ್ಕೆ ಬಿಟ್ಟುಕೊಟ್ಟರೆ, ನಮಗೆ ಬೇಕೆನಿಸಿದ ರೀತಿಯಲ್ಲಿ ಪಟ್ಯಕ್ರಮ ಕಟ್ಟಲು ಸಾದ್ಯವೇ ಇಲ್ಲ. ಪಾಟಗಳಲ್ಲಿ ಏನಾದರೂ ತಪ್ಪಾಗಿ ಅಚ್ಚಾಗಿದ್ದರೆ, ಅದನ್ನು ಸರಿಪಡಿಸಲು ದೆಹಲಿಯ ಬಾಗಿಲು ತಟ್ಟಬೇಕೆಂಬಂತ ಬವಣೆ ನಮ್ಮದಾಗುತ್ತದೆ.

ಇವತ್ತಿನ ರಾಜ್ಯ ಸರಕಾರದ ಪಟ್ಯಕ್ರಮವು ಗುಣಮಟ್ಟದ್ದಲ್ಲ ಎಂದರೆ, ಗುಣಮಟ್ಟದ ಪಟ್ಯಕ್ರಮ ಕಟ್ಟುವಂತೆ ಕನ್ನಡಿಗರು ದುಡಿಯಬೇಕಾಗಿದೆ ಮತ್ತು ಆ ಕೆಲಸದಲ್ಲಿ ಪಳಗಬೇಕಾಗಿದೆ. ನಾವು ಪಳಗುವ ಬದಲು ನಮ್ಮ ಕೆಲಸಗಳನ್ನೆಲ್ಲಾ ಬೇರೆಯವರಿಗೇ ವಹಿಸಿಕೊಡತೊಡಗಿದರೆ, ನಮ್ಮ ಏಳಿಗೆಯಾದರೂ ಹೇಗಾದೀತು. ಏನನ್ನು ಬೇಕಾದರೂ ಮಾಡಬಲ್ಲೆ, ಏನನ್ನು ಬೇಕಾದರೂ ಸಾದಿಸಬಲ್ಲೆ ಎಂಬಂತಹ ಮನಸ್ತಿತಿಯನ್ನೇ ಬೆಳೆಸಿಕೊಳ್ಳದಿದ್ದರೆ ಜಗತ್ತಿಗೆ ಇನ್ಯಾವ ಕೊಡುಗೆ ನೀಡಬಲ್ಲೆವು ನಾವು ಕನ್ನಡಿಗರು? ಇಡೀ ಜಗತ್ತೇ ಮೆಚ್ಚುವಂತಹ ಕಲಿಕೆಯೇರ‍್ಪಾಡನ್ನು ಕಟ್ಟುತ್ತೇನೆ ಎಂದು ಹೊರಡಬೇಕಾಗಿದ್ದ ಸರಕಾರ, ನನ್ನ ಹೊಣೆಯೆಲ್ಲವನ್ನ ಬೇರೆಯವರಿಗೆ ಹೊರಿಸಿ ಕಯ್ ತೊಳೆದುಬಿಡುತ್ತೇನೆ ಎಂದು ಹೊರಟಿರುವುದು ದುಗುಡದ ಸಂಗತಿ.

ನಮ್ಮ ರಾಜ್ಯದ ಪಟ್ಯಕ್ರಮಕ್ಕಿಂತಾ ಸಿ.ಬಿ.ಎಸ್.ಇ. ಪಟ್ಯಕ್ರಮವೇ ಚೆನ್ನ ಎಂಬ ಅನಿಸಿಕೆ ಮಾನ್ಯ ಮಂತ್ರಿಗಳದ್ದಾಗಿದ್ದರೆ, ಸಿ.ಬಿ.ಎಸ್.ಇ.ಗಿಂತಾ ಚೆನ್ನಾದ ಪಟ್ಯಕ್ರಮ ಹೊಂದಿರುವ ಜರ‍್ಮನಿಯವರದ್ದೋ, ಕೆನಡಾದವರದ್ದೋ ಪಟ್ಯಕ್ರಮವನ್ನು ಅಳವಡಿಸಬಹುದಿತ್ತಲ್ಲವೇ! “ಯಾವ ಪಟ್ಯಕ್ರಮ ಚೆನ್ನ” ಎಂಬುದು ಪ್ರಶ್ನೆಯಾಗಬಾರದು. “ಜಗತ್ತಿನ ಒಳ್ಳೆಯ ಪಟ್ಯಕ್ರಮಗಳ ಸಾಲಿಗೆ ನಿಲ್ಲಬಲ್ಲ ಪಟ್ಯಕ್ರಮ ಹೇಗೆ ಕಟ್ಟುವುದು” ಎಂಬುದು ನಮ್ಮೆದುರಿನ ಪ್ರಶ್ನೆಯಾಗಬೇಕು. ಇನ್ನು ದೆಹಲಿಯಲ್ಲಿ ಕಟ್ಟಲಾಗುವ ಪಟ್ಯಪುಸ್ತಕಗಳಲ್ಲಿ ನಮ್ಮ ಇತಿಹಾಸಕ್ಕೆ ಜಾಗ ದೊರಕಿಸಿಕೊಡುವುದೇ ಕಶ್ಟವಾಗುತ್ತದೆ. ನಮ್ಮ ಇತಿಹಾಸವನ್ನು ಕರ‍್ನಾಟಕದ ಮಕ್ಕಳೇ ಓದಲಿಲ್ಲ ಎಂದರೆ, ಇನ್ಯಾರು ಓದಿಯಾರು? ಬಡಗಣ ಬಾರತದ ಇತಿಹಾಸವನ್ನೇ ಹೆಚ್ಚಾಗಿ ಓದುವ ಕನ್ನಡದ ಮಕ್ಕಳು, ನಮ್ಮದು ಹೆಮ್ಮೆಯ ಇತಿಹಾಸವಿಲ್ಲದ ನಾಡು ಎಂಬ ಕೀಳರಿಮೆಯಲ್ಲಿ ಕೊರಗುವಂತಾಗುತ್ತಾರೆ ಮಕ್ಕಳು.

ಮಾನ್ಯ ಕಿಮ್ಮನೆ ರತ್ನಾಕರ ಅವರೇ, ಕಲಿಕೆಯ ಆಡಳಿತ ನಮ್ಮ ಕಯ್ಯಲ್ಲೇ ಇರಲಿ. ಅದನ್ನು ಬೆಳೆಸುವ ಹೊಣೆಯೂ ನಮ್ಮದೇ ಆಗಿರಲಿ. ಕಲಿಕೆಯನ್ನು ರಾಜ್ಯಪಟ್ಟಿಗೆ ತರುವತ್ತ ನಮ್ಮ ದುಡಿಮೆಯಿರಲಿ, ನಾವಾಗೇ ಕಲಿಕೆಯನ್ನು ಕೇಂದ್ರ ಪಟ್ಟಿಗೆ ವಹಿಸಿಕೊಡುವುದು ಬೇಡ.

(ಚಿತ್ರ: vknewz.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: