ಬರಹವನ್ನು ಮಾರ್ಪಡಿಸಿ ಗೆದ್ದವರು
ನುಡಿಯರಿಮೆಯ ಇಣುಕುನೋಟ – 8
ಜಗತ್ತಿನ ಹಲವು ನುಡಿಗಳಲ್ಲಿ ಇತ್ತೀಚೆಗೆ, ಎಂದರೆ ಕಳೆದ ನೂರು-ನೂರಯ್ವತ್ತು ವರ್ಶಗಳಲ್ಲಿ, ನೂರಾರು ವರ್ಶಗಳಿಂದ ಬಳಕೆಯಲ್ಲಿದ್ದ ಬರಹಗಳನ್ನು ಮಾರ್ಪಡಿಸಿ, ಅವುಗಳಲ್ಲಿ ಹೆಚ್ಚು ಕಡಿಮೆ ಓದುವ ಹಾಗೆಯೇ ಬರೆಯುವಂತೆ ಮಾಡಲಾಗಿದೆ, ಮತ್ತು ಇದರಿಂದಾಗಿ ಆ ನುಡಿಗಳನ್ನಾಡುವ ಜನರಲ್ಲಿ ಬರಹಬಲ್ಲವರ ಎಣಿಕೆ ತುಂಬಾ ಹೆಚ್ಚಾಗಿದೆ.
ಜನರ ಜೀವನದಲ್ಲಿ ಇತ್ತೀಚೆಗೆ ಬರಹ ಹೆಚ್ಚು ಹೆಚ್ಚು ಮುಕ್ಯವಾಗುತ್ತಿರುವುದು, ಮತ್ತು ಒಂದು ನಾಡಿನಲ್ಲಿರುವ ಎಲ್ಲಾ ಜನರೂ ಬರಹಬಲ್ಲವರಾಗದೆ ಆ ನಾಡಿನ ಏಳಿಗೆಯಾಗಲಾರದೆಂಬ ಪರಿಸ್ತಿತಿ ಉಂಟಾಗಿರುವುದು ಅವರು ಇಂತಹ ಮಾರ್ಪಾಡುಗಳನ್ನು ನಡೆಸಲು ಮುಕ್ಯ ಕಾರಣ.
ಬರಹಗಳನ್ನು ಎರಡು ಬಗೆಗಳಲ್ಲಿ ಈ ಕಾರಣಕ್ಕಾಗಿ ಮಾರ್ಪಡಿಸಲಾಗಿದೆ: ಅವುಗಳ ಬರಿಗೆ(ಅಕ್ಶರ)ಗಳಲ್ಲಿ ಬೇಕಾದವುಗಳನ್ನು ಮಾತ್ರ ಉಳಿಸಿಕೊಂಡು ಬೇಡದವುಗಳನ್ನು ತೆಗೆದುಹಾಕಿರುವುದು ಒಂದು ಬಗೆಯ ಮಾರ್ಪಾಡು, ಮತ್ತು ಬಳಕೆಯಲ್ಲಿರುವ ಬರಿಗೆಗಳನ್ನೇ ಬಿಟ್ಟುಕೊಟ್ಟು, ಅವುಗಳ ಬದಲಿಗೆ ಬೇರೆ ಬಗೆಯ ಬರಿಗೆಗಳನ್ನು ಬಳಸತೊಡಗಿರುವುದು ಇನ್ನೊಂದು ಬಗೆಯ ಮಾರ್ಪಾಡು.
ಗ್ರೀಕ್ ಬರಹದಲ್ಲಿ ಪದಗಳನ್ನು ಹಿಂದಿನ ಕಾಲದಲ್ಲಿದ್ದಂತೆ ಬರೆಯಲು ಹಲವು ಹೆಚ್ಚಿನ ಬರಿಗೆಗಳನ್ನು ಬಳಸಲಾಗುತ್ತಿತ್ತು; ಪದಗಳನ್ನು ಓದುವ ಹಾಗೆಯೇ ಬರೆಯುವಂತೆ ಮಾಡಲು, 1982ರಲ್ಲಿ ಬೇಡದಿರುವ ಬರಿಗೆಗಳನ್ನೆಲ್ಲ ಬಿಟ್ಟುಕೊಡಲಾಯಿತು. ಇವತ್ತು ಹೆಚ್ಚಿನ ಬರಹಗಳಲ್ಲೂ ಈ ಬರಿಗೆಗಳ ಬಳಕೆಯಿಲ್ಲ; ಕೆಲವರು ಗ್ರೀಕ್ ಪಂಡಿತರು ಮಾತ್ರ ಅವನ್ನು ಬಳಸುತ್ತಿದ್ದಾರೆ.
ಜಪಾನೀಸ್ ಬರಹದ ಕನ ಬರಿಗೆಗಳು ಒಂಬತ್ತನೇ ಶತಮಾನದಲ್ಲಿ ಸರಿಯಾಗಿದ್ದುವು; ಆದರೆ, ಆಮೇಲೆ ಮಾತಿನಲ್ಲಿ ನಡೆದ ಮಾರ್ಪಾಡುಗಳಿಂದಾಗಿ ಅವಕ್ಕೂ ಅವುಗಳ ಓದಿಗೂ ನಡುವೆ ಹಲವು ವ್ಯತ್ಯಾಸಗಳು ಮೂಡಿಬಂದುವು. 1946ರಲ್ಲಿ ಇವನ್ನು ಹೆಚ್ಚುಕಡಿಮೆ ಓದುವ ಹಾಗೆಯೇ ಬರೆಯುವಂತೆ ಮಾರ್ಪಡಿಸಲಾಯಿತು, ಮತ್ತು ಓದಿನಲ್ಲಿಲ್ಲದ ಕೆಲವು ಬರಿಗೆಗಳನ್ನು ಬಿಟ್ಟುಕೊಡಲಾಯಿತು.
ಕೊರಿಯನ್ ಬರಹದಲ್ಲಿ ಅವರವೇ ಆದ ಪದಗಳನ್ನು ಬರೆಯಲು ಹಂಗುಲ್ ಎಂಬ ತುಂಬಾ ಚನ್ನಾಗಿರುವ ಬರಿಗೆಗಳನ್ನು ಬಳಸಲಾಗುತ್ತಿದೆ; ಆದರೆ, ಚಯ್ನೀಸ್ನಿಂದ ಎರವಲು ಪಡೆದ ಪದಗಳನ್ನು ಬರೆಯಲು ತೊಡಕು ತೊಡಕಾಗಿರುವ ಚಯ್ನೀಸ್ ಮೂಲದ ಹಂಜ ಎಂಬ ಬರಿಗೆಗಳನ್ನು ಬಳಸಲಾಗುತ್ತಿದೆ. 1949ರಲ್ಲಿ ಈ ಚಯ್ನೀಸ್ ಎರವಲು ಪದಗಳನ್ನೂ ಹಂಗುಲ್ನಲ್ಲಿಯೇ ಬರೆಯುವ ನಿರ್ದಾರವನ್ನು ಉತ್ತರ ಕೊರಿಯಾದಲ್ಲಿ ಮಾಡಲಾಯಿತು, ಮತ್ತು ಇದರಿಂದಾಗಿ ಆ ನಾಡಿನಲ್ಲಿ ಓದುಬಲ್ಲವರ ಎಣಿಕೆ ತುಂಬಾ ಹೆಚ್ಚಾಯಿತು.
ದಕ್ಶಿಣ ಕೊರಿಯಾದಲ್ಲೂ ಹಂಜ ಬರಿಗೆಗಳ ಎಣಿಕೆಯನ್ನು ಸಾಕಶ್ಟು ಕಡಿಮೆ ಮಾಡಲಾಗಿದೆ, ಮತ್ತು ಅವನ್ನು ಎಲಿಮೆಂಟರಿ ಶಾಲೆಗಳಲ್ಲಿ ಕಲಿಸದಿರುವಂತೆ, ಮತ್ತು ಮಕ್ಕಳ ಪುಸ್ತಕಗಳಲ್ಲಿ, ಮತ್ತು ಎಲ್ಲಾ ಜನರೂ ಓದಬೇಕಾಗಿರುವ ಬರಹಗಳಲ್ಲಿ ಬಳಸದಿರುವಂತೆ ನೋಡಿಕೊಳ್ಳಲಾಗುತ್ತಿದೆ.
ಬರಹಗಳಲ್ಲಿ ಬರುವ ಪದಗಳನ್ನು ಓದುವ ಹಾಗೆಯೇ ಬರೆಯುವಂತೆ ಮಾಡುವುದಕ್ಕಾಗಿ ಟರ್ಕಿ, ಇಂಡೊನೇಶ್ಯಾ, ಮಲಯೇಶ್ಯಾ, ಸೋಮಾಲಿಯಾ ಮೊದಲಾದೆಡೆಗಳಲ್ಲಿ, ಮತ್ತು ಸೋವಿಯಟ್ ಯೂನಿಯನ್ನ ಹಲವು ನಾಡುಗಳಲ್ಲಿ ಅರೇಬಿಕ್ ಮೂಲದ ಬರಿಗೆಗಳನ್ನು ಬಿಟ್ಟುಕೊಟ್ಟು ರೋಮನ್ ಮೂಲದ ಬರಿಗೆಗಳನ್ನು ಬಳಕೆಗೆ ತರಲಾಗಿದೆ. ಇದರಿಂದಾಗಿ ಈ ನಾಡುಗಳಲ್ಲಿಯೂ ಬರಹಬಲ್ಲವರ ಎಣಿಕೆ ತುಂಬಾ ಹೆಚ್ಚಾಗಿದೆಯೆಂದು ಹೇಳಲಾಗುತ್ತಿದೆ.
ಇದಕ್ಕೆ ಬದಲು, ಅರೇಬಿಕ್ ಬರಿಗೆಗಳನ್ನು ಬಳಸುತ್ತಿರುವ ಇರಾನ್, ಇರಾಕ್ ಮೊದಲಾದ ಹಲವು ನಾಡುಗಳಲ್ಲಿ ಇವತ್ತಿಗೂ ಬರಹ ಬಲ್ಲವರ ಎಣಿಕೆ ತುಂಬಾ ಕಡಿಮೆಯಿದೆ. ಇದಕ್ಕೆ ಕೆಲವು ಸಾಮಾಜಿಕ ತೊಡಕುಗಳೂ ಕಾರಣವಿರಬಹುದು; ಆದರೆ, ಬರಹಗಳಲ್ಲಿ ಪದಗಳನ್ನು ಓದುವ ಹಾಗೆ ಬರೆಯದಿರುವುದು, ಮತ್ತು ಇದರಿಂದಾಗಿ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ತುಂಬಾ ತೊಡಕಿನದಾಗಿರುವುದೂ ಒಂದು ಕಾರಣವೆಂಬುದರಲ್ಲಿ ಸಂಶಯವಿಲ್ಲ.
ಪದಗಳನ್ನು ಹೆಚ್ಚು ಕಡಿಮೆ ಓದುವ ಹಾಗೆಯೇ ಬರೆಯುವಂತೆ ಮಾಡಲು ಇತ್ತೀಚೆಗೆ ಬೇರೆ ಹಲವಾರು ನುಡಿಗಳ ಬರಹಗಳಲ್ಲೂ ಮಾರ್ಪಾಡುಗಳನ್ನು ನಡೆಸಲಾಗಿದೆ. ವಿಯೆಟ್ನಾಮ್ನಲ್ಲಿ ಚಯ್ನೀಸ್ ಬರಿಗೆಗಳ ಬದಲು ರೋಮನ್ ಮೂಲದ ಬರಿಗೆಗಳನ್ನು ಬಳಸಲು ತೊಡಗಿದುದರಿಂದಾಗಿ ಇವತ್ತು ವಿಯೆಟ್ನಮೀಸ್ ಬರಹಗಳಲ್ಲಿ ಚಯ್ನೀಸ್ ಎರವಲುಗಳನ್ನೂ ಓದುವ ಹಾಗೆಯೇ ಬರೆಯಲು ಸಾದ್ಯವಾಗಿದೆ; ಈ ಮಾರ್ಪಾಡನ್ನು ನಡೆಸಿದ ಬಳಿಕ ಅಲ್ಲಿಯೂ ಓದುಬಲ್ಲವರ ಎಣಿಕೆ ತುಂಬಾ ಹೆಚ್ಚಾಗಿದೆಯೆಂದು ಹೇಳಲಾಗುತ್ತದೆ.
ಯುರೋಪಿನ ಹಲವಾರು ನುಡಿಗಳಲ್ಲೂ ಇತ್ತೀಚೆಗೆ ಬರಹಗಳಲ್ಲಿ ಮಾರ್ಪಾಡುಗಳನ್ನು ನಡೆಸುವ ಮೂಲಕ ಓದಿಗೂ ಬರಹಕ್ಕೂ ನಡುವಿರುವ ಅಂತರವನ್ನು ಕಡಿಮೆ ಮಾಡಲಾಗಿದೆ. ಹೆಸರು(ನಾಮ)ಪದಗಳನ್ನು ಬರೆಯುವಾಗ ಅವುಗಳ ಮೊದಲಿಗೆ ದೊಡ್ಡ ಬರಿಗೆಯನ್ನು ಬಳಸಬೇಕೆಂಬ ಕಟ್ಟಲೆಯನ್ನು ಡೇನಿಶ್ನಲ್ಲಿ ಬಿಟ್ಟುಕೊಡಲಾಗಿದೆ; ಕೊಟ್ಟಹೆಸರುಗಳಲ್ಲಿ ಮಾತ್ರ ಈ ಕಟ್ಟಲೆಯನ್ನು ಉಳಿಸಿಕೊಳ್ಳಲಾಗಿದೆ.
ಜರ್ಮನಿ, ಆಸ್ಟ್ರಿಯಾ, ಮತ್ತು ಸ್ವಿಜರ್ಲೇಂಡ್ಗಳಲ್ಲಿಯೂ ಜರ್ಮನ್ ಬರಹಗಳಲ್ಲಿರುವ ಬರಿಗೆಗಳ ಬಳಕೆಯಲ್ಲಿ ಹಲವು ಮಾರ್ಪಾಡುಗಳನ್ನು ನಡೆಸಬೇಕೆಂಬ ತೀರ್ಮಾನಕ್ಕೆ ಇತ್ತೀಚೆಗೆ ಬರಲಾಗಿತ್ತು; ಪದಗಳನ್ನು ಹೆಚ್ಚುಕಡಿಮೆ ಓದುವ ಹಾಗೆಯೇ ಬರೆಯಬೇಕೆಂಬುದೇ ಈ ಮಾರ್ಪಾಡುಗಳ ಮುಕ್ಯ ಉದ್ದೇಶವಾಗಿತ್ತು. ಈ ತೀರ್ಮಾನವನ್ನು 1996ರಲ್ಲಿ ಬಳಕೆಗೆ ತರಲಾಯಿತು.
ಆದರೆ, ಇದನ್ನು ವಿರೋದಿಸುವವರೂ ಕೆಲವರಿದ್ದು, ಜರ್ಮನಿಯಲ್ಲಿ ಈ ಮಾರ್ಪಾಡುಗಳನ್ನು ಬಳಸುವುದು ಶಾಲೆಗಳಲ್ಲಿ ಮಾತ್ರ ಕಡ್ಡಾಯವಾಗಿದೆ. ಹೀಗಿದ್ದರೂ, ಇವತ್ತು ಹೆಚ್ಚಿನ ಬರಹಗಳಲ್ಲೂ ಈ ಮಾರ್ಪಡಿಸಿದ ಬರಿಗೆಗಳೇ ಬಳಕೆಯಾಗುತ್ತಿವೆ; ಕೆಲವು ಪತ್ರಿಕೆಗಳು ಮತ್ತು ಪುಸ್ತಕಗಳು ಮಾತ್ರ ಹಳೇ ಬರಹಕ್ಕೆ ಜೋತುಬಿದ್ದಿವೆ.
ಪೋರ್ಚುಗೀಸ್ ಬರಹದಲ್ಲೂ ಅದನ್ನು ಬಳಸುವ ಹಲವು ನಾಡುಗಳು ಒಟ್ಟುಸೇರಿ ಇಂತಹದೇ ಮಾರ್ಪಾಡನ್ನು ಬಳಕೆಗೆ ತಂದಿವೆ; ಇದಕ್ಕೆ ಮೊದಲು, ಪದಗಳನ್ನು ಅವುಗಳ ಮೂಲರೂಪ ಎಂತಹದು ಎಂಬುದನ್ನು ಸೂಚಿಸುವಂತೆ ಬರೆಯಲಾಗುತ್ತಿತ್ತು; ಆದರೆ, ಈ ರೂಪಗಳಿಗೂ ಅವನ್ನು ಓದುವ ಬಗೆಗೂ ನಡುವೆ ಯಾವ ಹೊಂದಾಣಿಕೆಯೂ ಇರಲಿಲ್ಲ; ಹಾಗಾಗಿ, ಅವುಗಳ ಈ ಹಳೆಯ ರೂಪಗಳನ್ನು ಬಿಟ್ಟುಕೊಟ್ಟು, ಆದಶ್ಟು ಮಟ್ಟಿಗೆ ಇವತ್ತು ಅವನ್ನು ಹೇಗೆ ಓದಲಾಗುತ್ತದೆಯೋ ಹಾಗೆಯೇ ಬರೆಯುವಂತೆ ಅವುಗಳಲ್ಲಿ ಮಾರ್ಪಾಡುಗಳನ್ನು ಮಾಡಲಾಗಿದೆ.
ಒಂದು ನಾಡಿನಲ್ಲಿ ಓದು-ಬರಹ ಬಲ್ಲವರ ಎಣಿಕೆ ಎಶ್ಟಿದೆ ಎಂಬುದು ಆ ನಾಡಿನ ಬರಹಗಳಲ್ಲಿ ಬಳಕೆಯಾಗುತ್ತಿರುವ ಬರಿಗೆಗಳನ್ನು ಕಲಿಯಲು ಮತ್ತು ಬಳಸಲು ಎಶ್ಟು ಸುಲಬ ಎಂಬುದರ ಮೇಲೆ ಮಾತ್ರವಲ್ಲದೆ, ಅಲ್ಲಿನ ಜನರ ಮೇಲೆ ಓದಿನ ಕುರಿತಾಗಿ ಎಂತಹ ಆಳ್ವಿಕೆಯ ಒತ್ತಡ, ನೆರೆಹೊರೆಯ ಒತ್ತಡ, ಮತ್ತು ಮನೆಯವರ ಒತ್ತಡವಿದೆ ಎಂಬುದರ ಮೇಲೂ ಅವಲಂಬಿಸಿರುತ್ತದೆ; ಹಾಗಾಗಿ, ಕನ್ನಡದ ಬರಿಗೆಗಳಲ್ಲಿ ಮಾರ್ಪಾಡುಗಳನ್ನು ಮಾಡದಿದ್ದರೂ ಬರಹ ಬಲ್ಲವರ ಎಣಿಕೆ ಹೆಚ್ಚಬಲ್ಲುದು ಎಂಬುದಾಗಿ ಕೆಲವರಿಗೆ ಅನಿಸಬಹುದು.
ಆದರೆ, ಬರಿಗೆಗಳ ತೊಡಕೂ ಬರಹ ಬಲ್ಲವರ ಎಣಿಕೆ ಕಡಿಮೆಯಿರಲು ಒಂದು ಕಾರಣ ಎಂಬುದನ್ನು ಕಂಡುಕೊಂಡು, ಮೇಲೆ ಕೊಟ್ಟಿರುವಂತಹ ಹಲವಾರು ನುಡಿಗಳ ಬರಹಗಳಲ್ಲಿ ಬರಿಗೆಗಳನ್ನು ಮಾರ್ಪಡಿಸಲಾಗಿದೆ, ಮತ್ತು ಹಾಗೆ ಮಾಡುವ ಮೂಲಕ ಬರಹ ಬಲ್ಲವರ ಎಣಿಕೆಯನ್ನು ಹೆಚ್ಚಿಸಿಕೊಳ್ಳಲಾಗಿದೆ ಎಂಬುದನ್ನು ಮರೆಯಬಾರದು.
ಇಂಗ್ಲಿಶ್ನಲ್ಲಿ ಉಲಿಕೆಗೂ ಬರಿಗೆಗೂ ನಡುವೆ ಹೊಂದಾಣಿಕೆ ತುಂಬಾ ಕಡಿಮೆಯಿದೆಯಾದರೂ ಅದನ್ನು ಕಲಿಯುವವರ ಎಣಿಕೆ ತುಂಬಾ ಹೆಚ್ಚಿದೆಯಲ್ಲ ಎಂದು ಕೆಲವರು ಹೇಳಬಹುದು. ಆದರೆ, ಇಂಗ್ಲಿಶ್ ಬರಹದ ಈ ಸ್ಪೆಲ್ಲಿಂಗ್ ತೊಡಕಿನಿಂದಾಗಿ, ಅದನ್ನು ಕಲಿಯುವ ಮಕ್ಕಳಿಗೆ ಬೇರೆ ಬರಹಗಳನ್ನು ಕಲಿಯಲು ಬೇಕಾಗುವ ಸಮಯದ ಮೂರು ಪಾಲಶ್ಟು ಸಮಯ ಬೇಕಾಗುತ್ತದೆ.
ಇದಲ್ಲದೆ, ಹಾಗೆ ಕಶ್ಟಪಟ್ಟು ಕಲಿತವರಲ್ಲಿಯೂ ಹಲವರಿಗೆ ಸರಿಯಾಗಿ ಓದುವುದು ಹೇಗೆ ಎಂಬುದೇ ಗೊತ್ತಾಗಿರುವುದಿಲ್ಲ, ಮತ್ತು ಇದರಿಂದಾಗಿ ಅವರು ಆದಶ್ಟು ಮಟ್ಟಿಗೆ ಓದಿನಿಂದ ದೂರವೇ ಉಳಿಯಲು ಬಯಸುತ್ತಾರೆ. ಅಮೆರಿಕಾದಂತಹ ಮುಂದುವರಿದ ನಾಡುಗಳಲ್ಲೂ ಈ ತೊಂದರೆಯಿದೆ.
ಕನ್ನಡದ ಮಕ್ಕಳು ಈ ರೀತಿ ಕನ್ನಡ ಬರಹಗಳನ್ನು ಕಲಿಯುವಲ್ಲಿ ಮತ್ತು ಬಳಸುವಲ್ಲಿ ತೊಂದರೆಗೊಳಗಾಗದಂತೆ ಮಾಡಲು, ಮತ್ತು ಅವನ್ನು ಎಲ್ಲಾ ಮಕ್ಕಳೂ ಸುಲಬವಾಗಿ ಮತ್ತು ಸರಿಯಾಗಿ ಓದಲು ಸಾದ್ಯವಾಗುವಂತೆ ಮಾಡಲು ಋ, ಷ, ಮಹಾಪ್ರಾಣ ಮೊದಲಾದ ಕನ್ನಡದ ಮಟ್ಟಿಗೆ ಬೇಡದಿರುವ ಕೆಲವು ಬರಿಗೆಗಳನ್ನು ಇವತ್ತು ಬಿಟ್ಟುಕೊಡಬೇಕಾಗಿದೆ. ಕನ್ನಡಿಗರಿಗೆ ತಮ್ಮ ನುಡಿಯ ಮೇಲಿರುವ ಕೀಳರಿಮೆಯನ್ನು ಇಲ್ಲವಾಗಿಸುವಲ್ಲಿಯೂ ಇದು ನೆರವಾಗಬಲ್ಲುದು.
(ಈ ಬರಹ ವಿಜಯ ಕರ್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
1 Response
[…] << ನುಡಿಯರಿಮೆಯ ಇಣುಕುನೋಟ – 8 […]