ಗಾಂದಿಯವರಿಂದ ಎರಡನೇ ಬಿಡುಗಡೆಯ ಹೋರಾಟ?

ಸಂದೀಪ್ ಕಂಬಿ.

mahatma-gandhi-posters

ಇಂದು ಮಾಹಾತ್ಮ ಗಾಂದಿಯವರ 144ನೇ ಹುಟ್ಟುಹಬ್ಬ. ದೇಶದ ಜನರ ಬೇಗುದಿಗೆ ತುಡಿಯುವ ಮನಸ್ಸು, ಅವರುಗಳನ್ನು ಆ ನೋವಿನಿಂದ ಬಿಡಿಸಿ ಮೇಲೆತ್ತಬೇಕೆಂಬ ಕಾಳಜಿ, ಬ್ರಿಟೀಶರ ಹಿಡಿತದಿಂದ ದೇಶವನ್ನು ಬಿಡುಗಡೆಗೊಳಿಸಬೇಕೆಂಬ ಹಂಬಲ, ಹೆಬ್ಬಯಕೆಗಳು ಗಾಂದಿಯವರನ್ನು ಹೋರಾಟದ ಹಾದಿಯನ್ನು ಹಿಡಿಯುವಂತೆ ಮಾಡಿದವು. ಮತ್ತು ಇವೆಲ್ಲಕ್ಕಾಗಿ ತಮ್ಮ ಎಲ್ಲವನ್ನೂ ಬಿಟ್ಟು ತಮ್ಮ ಬದುಕನ್ನೇ ಒಂದು ತಪಸ್ಸನ್ನಾಗಿ ಮಾಡಿಕೊಂಡರು ಗಾಂದಿಯವರು. ಅವರ ಈ ತ್ಯಾಗ ಬಲಿದಾನಗಳನ್ನು ಗವ್ರವದಿಂದ ನೆನೆದು ಅವರಿಗೆ ಮಣಿಯಬೇಕಾದ ದಿನ ಇದು.

ಇಂದು ದೇಶದ ಒಕ್ಕೂಟ ವ್ಯವಸ್ತೆ ಮತ್ತು ನುಡಿನೀತಿಗಳ ಬಗ್ಗೆ ಚರ್‍ಚೆಗಳಾಗುತ್ತಿರುವ ಹಿನ್ನೆಲೆಯಲ್ಲೇ, ನುಡಿನೀತಿಯ ಬಗ್ಗೆ ಗಾಂದಿಯವರ ಅನಿಸಿಕೆಗಳೇನಾಗಿದ್ದವೆಂಬುದನ್ನು ನೋಡೋಣ.

Thus Hindi is destined to be the national language. We have made use of it as such in times gone by.

ಬಾರತಕ್ಕೆ ಒಂದು ರಾಶ್ಟ್ರ ಬಾಶೆ ಬೇಕೇ, ಹಾಗಿದ್ದರೆ ಅಂತಹ ಬಾಶೆಯ ಲಕ್ಶಣಗಳೇನಿರಬೇಕು, ಮತ್ತು ಆ ಬಾಶೆ ಯಾವುದಿರಬೇಕು ಎಂಬುದರ ಬಗ್ಗೆ ಚರ್‍ಚೆ ಮಾಡುತ್ತ, ಗಾಂದಿಯವರು ಹೇಳಿದ ಮಾತುಗಳಿವು. ದೇಶಕ್ಕೊಂದು ಬಾಶೆಯ ಅಗತ್ಯವಿದೆ, ಅಂತಹ ಒಂದು ರಾಶ್ಟ್ರಬಾಶೆಯಾಗುವ ಯೋಗ್ಯತೆ ಇರುವುದು ಬರೀ ಹಿಂದಿಗೆ ಮಾತ್ರ ಮತ್ತು ದೇಶದ ಒಗ್ಗಟ್ಟಿಗಾಗಿ ದೇಶದ ಎಲ್ಲರೂ ಅದನ್ನು ಕಲಿಯಬೇಕು ಎಂಬುದು ಅವರ ನಿಲುವಾಗಿತ್ತು. ಹಾಗಾಗಿ ಬಿಡುಗಡೆಯ ಹೋರಾಟದ ಜೊತೆಯಲ್ಲೇ ದೇಶದೆಲ್ಲೆಡೆ ಹಿಂದಿಯ ಪ್ರಚಾರ ಮಾಡುವ ಕೆಲಸವನ್ನೂ ಕಯ್ಗೊಂಡರು. ದೇಶವನ್ನು ಒಗ್ಗೂಡಿಸುವ ಅವರ ಈ ಕಾಳಜಿಯನ್ನೇ ಬಿಡುಗಡೆಯ ಬಳಿಕ ನಮ್ಮ ಒಕ್ಕೂಟ ಸರಕಾರವೂ ಮುಂದುವರಿಸುತ್ತ ಹಿಂದಿಯನ್ನು ಎಲ್ಲೆಡೆ ಹಬ್ಬಲು ಎಡೆಬಿಡದೆ ಯತ್ನಿಸಿದೆ. ಇದರಿಂದ ಕಳೆದ 66 ವರುಶಗಳಲ್ಲಿ ನಾವು ಒಗ್ಗಟ್ಟನ್ನು ಸಾದಿಸಿದ್ದೇವೆಂದು ಹೇಳಲಾಗಿದೆಯಾದರೂ ನಿಜವಾಗಿಯೂ ಹೆಚ್ಚು ಒಡಕುಗಳೇ ಉಂಟಾಗಿವೆ.

ಹಿಂದಿಯನ್ನು ರಾಶ್ಟ್ರಬಾಶೆಯನ್ನಾಗಿಸುವ ಪ್ರಸ್ತಾಪ ಬಂದಾಗಿನಿಂದ ಬಂಗಾಳ, ತೆಂಕಣ ಬಾರತ, ಅದರಲ್ಲೂ ತಮಿಳುನಾಡಿನಲ್ಲಿ ದೊಡ್ಡ ಮಟ್ಟದ ಹೋರಾಟಗಳಾಗಿವೆ. 1965ರಲ್ಲಂತೂ ಹಲವರು ಈ ಹೋರಾಟದ ಸಲುವಾಗಿ ತಮ್ಮ ಜೀವವನ್ನು ಕಳೆದುಕೊಂಡರು. ಹೋರಾಟಗಳು ಇಂತಹ ಕಡು ಸ್ವರೂಪವನ್ನು ಮಯ್ತಳೆದುದರ ಕಾರಣ ಹಿಂದಿಯನ್ನು ರಾಶ್ಟ್ರಬಾಶೆಯನ್ನಾಗಿಸುವ ಇರಾದೆಯನ್ನು ಕಯ್ ಬಿಡಲಾಯಿತು. ಆದರೆ ಇದರಿಂದಾದ ಗಾಯಗಳು, ಕಹಿ ಅನುಬವಗಳು, ಹಿಂದಿ ಮತ್ತು ಹಿಂದಿಯೆತರರ ನಡುವೆ ಬಿರುಕುಗಳನ್ನು ಹೆಚ್ಚು ಮಾಡಿದವು. ಇದಾಗಿ ಹಲವು ವರುಶಗಳಾಗಿರುವುದರಿಂದ ಇದರ ನೆನಪುಗಳು ಮಾಸಿವೆ ನಿಜ. ಆದರೆ ಹಿಂದಿಯನ್ನು ರಾಶ್ಟ್ರಬಾಶೆಯನ್ನಾಗಿ ಮಾಡದಿದ್ದರೂ ಅದನ್ನು ಹಬ್ಬುವುದಕ್ಕೆ ಅನುಕೂಲವಾಗುವಂತೆ (ಬೇರೆ ನುಡಿಯಾಡುಗರ ಹಕ್ಕುಗಳಿಗೆ ತೊಂದರೆಯುಂಟಾದರೂ) ದೇಶದ ನುಡಿನೀತಿಯನ್ನು ರೂಪಿಸಿರುವುದು ಮೆಲ್ಲನೆ ದಿನೇ ದಿನೇ ಮಂದಿಯ ಮನಸಲ್ಲಿ ಅನುಮಾನ, ದ್ವೇಶಗಳ ನಂಜು ಆಳವಾಗಿ ಬೇರೂರುವಂತೆ ಮಾಡುತ್ತಿದೆ. ಈ ನಂಜಿನ ಕಹಿ ಹೆಚ್ಚಾದಾಗ, ಆಗಾಗ ತಮ್ಮ ನುಡಿ ಹಕ್ಕುಗಳನ್ನು ಕೇಳುವುದಕ್ಕಾಗಿ ಹಲವು ರಾಜ್ಯಗಳಲ್ಲಿ ಹೋರಾಟಗಳಾಗಿವೆ. ಈ ಹೋರಾಟಗಳು ಹಿಂಸೆಗೂ ತಿರುಗಿವೆ. ಆದರೆ ನಮ್ಮಲ್ಲಿ ಹಲವರು ಈ ಹೋರಾಟಗಳನ್ನು ನುಡಿಹಕ್ಕುಗಳ ನೋಟದಿಂದ ನೋಡದೇ, ಬರೀ ಕೆಲವು ಹಿತಾಸಕ್ತಿಗಳ ರಾಜಕೀಯ ದಕ್ಕುಗಳ ದುರಾಸೆಯೇ ಇವುಗಳ ಮೂಲ ಕಾರಣ ಎಂದು ತಪ್ಪಾಗಿ ಬಗೆದಿದ್ದಾರೆ.

ಆದರೆ ಯಾವುದೇ ಒಂದು ನುಡಿ ಸಮುದಾಯದ ಹಕ್ಕುಗಳನ್ನು ಕಸಿದುಕೊಂಡರೆ ಅದು ಹೋರಾಟಕ್ಕಿಳಿಯುವುದು ಸಹಜ. ಬದಲಾಗಿ ಎಲ್ಲ ನುಡಿ ಹಕ್ಕುಗಳು ಅದಕ್ಕೆ ಸಿಕ್ಕರೆ, ಇತರೆ ನುಡಿಯಾಡುಗರಿಂದ ಸಿಗಬೇಕಾದ ಗವ್ರವ ದೊರಕಿದರೆ ಅದು ಹೋರಾಟಕ್ಕಿಳಿಯುವ ಅವಶ್ಯಕತೆಯೇ ಇರುವುದಿಲ್ಲ. ಪ್ರಪಂಚದೆಲ್ಲೆಡೆ, ಈ ಬಗೆಯಲ್ಲಿ, ನುಡಿ ಸಮುದಾಯಗಳ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿರುವುದನ್ನು ಅರಿತುಕೊಂಡೇ ವಿಶ್ವ ಸಂಸ್ತೆಯು ನುಡಿ ಹಕ್ಕುಗಳ ಗೋಶಣೆಯನ್ನು ಮಾಡಿದೆ. ಆದರೆ ನಮ್ಮ ಒಕ್ಕೂಟ ಸರಕಾರವು ಇದಾವುದನ್ನೂ ಗೊತ್ತಿದ್ದೂ ಗಮನಿಸದೆ ತನ್ನ ಹಿಂದಿ ಹೇರಿಕೆಯ ವಾಡಿಕೆಯನ್ನು ಒಗ್ಗಟ್ಟಿನ ಸುಳ್ಳು ಮುಕವಾಡ ಹಾಕಿಕೊಂಡು, ಗಾಂದಿಯವರ ಹೆಸರನ್ನೂ ಹೇಳಿಕೊಂಡು ಮುಂದುವರಿಸುತ್ತಿದೆ.

ಆದರೆ ನಮ್ಮ ದೇಶದ ಮಂದಿಯ ಸ್ವಾತಂತ್ರ್ಯ ಮತ್ತು ಹಕ್ಕುಗಳಿಗಾಗಿಯೇ ತಮ್ಮ ಬದುಕನ್ನು ಮುಡಿಪಾಗಿಟ್ಟ ಮಹಾತ್ಮ ಗಾಂದಿಯವರು, ಈ ಬಗೆಯಲ್ಲಿ ತಮ್ಮ ಜನರ ನುಡಿ ಹಕ್ಕುಗಳ ಕಸಿಯುವಿಕೆ ತಮ್ಮ ಒಕ್ಕೂಟ ಸರಕಾರದಿಂದಲೇ ನಡೆಯುತ್ತಿದೆ ಎಂದು ಅವರು ಕಂಡಿದ್ದರೆ ಸುಮ್ಮನಿರುತ್ತಿದ್ದರೆ? ಕಂಡಿತವಾಗಿಯೂ ಇಲ್ಲ. ತಮ್ಮ ಜೀವಮಾನದಲ್ಲಿ ತಮ್ಮ ಕೆಲವು ಅನಿಸಿಕೆ-ನಂಬಿಕೆಗಳನ್ನು, ಅವು ತಪ್ಪೆಂದು ತಿಳಿದ ಬಳಿಕ, ಗಾಂದಿಯವರು ಬದಲಿಸಿಕೊಂಡಿದ್ದರು. ಮೇಲು ವ್ಯಕ್ತಿಗಳ ಲಕ್ಶಣವೇ ಅದು. ಅವರು ಎಂದಿಗೂ ಒಂದು ವಾಡಿಕೆ ಇಲ್ಲವೇ ನಂಬಿಕೆಗೆ ಕಟ್ಟು ಬೀಳುವುದಿಲ್ಲ. ಹೊಸ ಸತ್ಯಗಳು ಅವರ ಕಣ್ಣಿಗೆ ಬಿದ್ದಂತೆ ಅದರ ತಕ್ಕಂತೆ ತಮ್ಮ ನಂಬಿಕೆಗಳನ್ನು ಬದಲಿಸಿಕೊಳ್ಳುತ್ತಾರೆ, ಮತ್ತು ಅದರೊಂದಿಗೆ ತಮ್ಮ ಸುತ್ತಲಿನ ಕೂಡಣವನ್ನೂ ಬದಲಿಸಲು ಮುಂದಾಗುತ್ತಾರೆ.

ಗಾಂದಿಯವರು ಇಂದು ಬದುಕಿದ್ದರೆ ಬಹುಶಹ, ತಾವು ಹಿಂದೆ ಹಿಂದಿಯನ್ನು ಹಬ್ಬಲು ಹೊರಟಿದ್ದು ಸರಿಯಿಲ್ಲವೆಂದು ಒಪ್ಪಿಕೊಂಡು ಹಿಂದಿ ಹೇರಿಕೆಯಿಂದ ಬಿಡುಗಡೆಗಾಗಿ ಹೋರಾಟ ನಡೆಸುತ್ತಿದ್ದರೇನೋ. ಮಹಾತ್ಮರ ಹುಟ್ಟುಹಬ್ಬವಾದ ಇಂದು ಅವರ ಆದರ್‍ಶಗಳು ಎಲ್ಲ ನಾಡುಗಳ ಮಂದಿಯನ್ನೂ ಪ್ರೇರೇಪಿಸಲಿ. ನಾಡು ನಾಡುಗಳಲ್ಲಿಯೂ ಗಾಂದಿಯರು ಮತ್ತೆ ಹುಟ್ಟಿ ಬರಲಿ. ಬ್ರಿಟೀಶರ ಆಡಳಿತದಿಂದ ಬಿಡುಗಡೆ ಹೊಂದಿ, ಒಂದು ಹಂತದ ಬಿಡುಗಡೆಯನ್ನು ಕಂಡ ನಾವು, ಎಲ್ಲ ಹಂತಗಳಲ್ಲೂ ಎಲ್ಲ ಬಗೆಯಲ್ಲೂ ಬಿಡುಗಡೆಯನ್ನು ಕಾಣುವಂತಾಗಲಿ.

(ಮಾಹಿತಿ ಸೆಲೆ: mkgandhi.org)

(ಚಿತ್ರ ಸೆಲೆ: cbrainard.blogspot.in)

 

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: