ಕಿವುಡಿಯ ನಂಬಿಕೆ

ಸಿ.ಪಿ.ನಾಗರಾಜ

ಮೂರು ಮಂದಿ ಮಕ್ಕಳು ಮತ್ತು ಗಂಡನೊಡನೆ ಸಂಸಾರ ಮಾಡುತ್ತಿರುವ ಕಿವುಡಿ…..ಸುಮಾರು ನಲವತ್ತು ವರುಶದ ಹೆಂಗಸು. ಜಾತಿಯಿಂದ ಒಡ್ಡರವಳು , ತಾಯ್ನುಡಿ ತಮಿಳು. ಇವಳಿಗೆ ಕಿವಿ ತುಸು ಮಂದವಾಗಿದ್ದುದರಿಂದ ’ಕಿವುಡಿ’ಎಂಬ ಅಡ್ಡ ಹೆಸರು ಶಾಶ್ವತವಾಗಿ ಅಂಟಿಕೊಂಡಿತ್ತು. ತಮಿಳ್ನಾಡಿನಿಂದ ಮದ್ದೂರಿಗೆ ಬಂದು ನೆಲೆಸಿ, ಹತ್ತಾರು ವರುಶಗಳಾಗಿದ್ದುದರಿಂದ ಕನ್ನಡವನ್ನು ಚೆನ್ನಾಗಿ ಮಾತನಾಡುತ್ತಾಳೆ. ಇವಳ ಸಂಸಾರದ ತೇರು ಕೂಲಿಯ ಕಾಯಕದಿಂದ ಉರುಳುತ್ತಿದೆ. ಕಿವುಡಿ ಅಕ್ಕರದ ಅರಿವಿಲ್ಲದ ಮಡ್ಡಿ.
ಒಂದು ದಿನ ನಮ್ಮ ಮನೆಗೆ ಅಕ್ಕಿ ಮಾಡುವುದಕ್ಕೆಂದು ಕಿವುಡಿ ಬಂದಿದ್ದಳು. ಸಾಯಂಕಾಲದವರೆಗೂ ಅಕ್ಕಿಯನ್ನು ಹಸನು ಮಾಡಿ, ಸಂಜೆ ಆರು ಗಂಟೆಯ ಸಮಯದಲ್ಲಿ ನಮ್ಮ ಮನೆಯಿಂದ ಹೊರಟಳು . ಅಕ್ಕಿಯನ್ನು ಹಸ ಮಾಡಿದ ಕೂಲಿಯಾಗಿ ಅವಳಿಗೆ ನುಚ್ಚಕ್ಕಿಯನ್ನು ಕೊಟ್ಟಿತ್ತು. ನುಚ್ಚಕ್ಕಿಯ ಆ ಗಂಟನ್ನು ನಮ್ಮ ಮನೆಯಲ್ಲಿಯೇ ಬಿಟ್ಟು ಹೋಗುತ್ತಿರುವುದನ್ನು ಗಮನಿಸಿದ ನಾನು-
“ಇದೇನಮ್ಮ…..ಅಕ್ಕಿ ಗಂಟನ್ನ ಇಲ್ಲೇ ಬಿಟ್ಟು ಹೊಯ್ತಾ ಇದ್ದೀಯಾ ?”
“ಇವತ್ತು ಬ್ಯಾಡ ಸಾಮಿ…..ನಾಳೆ ತಕೊಂಡೊಯ್ತಿನಿ”.
“ಯಾಕಮ್ಮ?”
“ಇವತ್ತು ಶುಕ್ರವಾರ ಸಾಮಿ…..ಮುಸ್ಸಂಜೆ ಹೊತ್ನಲ್ಲಿ ಲಚ್ಮಿ ಮನೇಲಿ ಸಂಚಾರ ಇರ‍್ತಾಳೆ…..ಅದಕ್ಕೆ ಬ್ಯಾಡ. ನಾಳೆ ತಕೊಂಡೊಯ್ತಿನಿ”.
“ಏನಮ್ಮ ಹಂಗಂದ್ರೆ! ನಮ್ಮ ಮನೇಲಿ ಲಕ್ಶ್ಮಿ ಸಂಚಾರ ಇದ್ರೆ…..ನೀನ್ಯಾಕೆ ಅಕ್ಕಿ ತಕೊಂಡ್ ಹೋಗ್ಬಾರದು ? ”
“ಅಕ್ಕಿ ಸಂಪತ್ತಿದ್ದಂಗೆ ಸಾಮಿ…..ಈಗ ನಾನು ಅಕ್ಕಿ ತಕೊಂಡು ಹೊರಟ್ರೆ…..ಲಚ್ಮಿ ನನ್ ಹಿಂದೇನೆ ನನ್ ಮನೇಗೆ ಬಂದ್ಬುಡ್ತಳೆ. ಆಗ ನಿಮ್ ಮನೆ ಬಡವಾಗ್ಹೋಯ್ತದೆ…..ಅದಕ್ಕೆ ಬ್ಯಾಡ”
“ಏನಮ್ಮ ನೀನ್ ಮಾತಾಡ್ತ ಇರೋದು? ಯಾವ ಲಕ್ಶ್ಮಿನೂ ಎಲ್ಲಿಗೂ ಹೋಗಲ್ಲ…..ಬರಲ್ಲ. ಅಲ್ಲಿ ಗುಡಿಸಲಲ್ಲಿ ನಿನ್ ಮಕ್ಕಳು ಹಸಗೊಂಡು ಇರ‍್ತವೆ. ಅವಕ್ಕೆ ಗಂಜಿ-ಗಿಂಜಿ ಮಾಡ್ಕೊಡೋದು ಬುಟ್ಬುಟ್ಟು…..ಬರೀ ಕಯ್ಯಲ್ಲಿ ಹೋಗ್ತಾ ಇದ್ದೀಯಲ್ಲಮ್ಮ ! ”
“ಮಕ್ಕಳದು ಹೆಂಗೊ ಆಯ್ತದೆ ಸಾಮಿ”
“ಹೆಂಗೊ ಹೇಗಾಗುತ್ತಮ್ಮ? ಇಂತ ದಡ್ಡ ಕೆಲಸ ಮಾಡ್ಬೇಡ. ಮನೆಗೆ ಅಕ್ಕಿ ತಕೊಂಡು ಹೋಗು”
“ಸಾಮಿ, ನೀನ್ ಏನ್ ಹೇಳುದ್ರು…..ನಂಗೆ ಇವತ್ತು ಅಕ್ಕಿ ಬ್ಯಾಡ. ನಾಳೆ ಹೊತ್ತುಗು ಮುಂಚೇನೆ ಬಂದು ತಕೊಂಡೊಯ್ತಿನಿ” ಎಂದು ಹೇಳಿ, ಬರಿ ಕಯ್ಯಲ್ಲಿ ಹೊರಟೇ ಹೋದಳು .
ಕಿವುಡಿಯ ವರ‍್ತನೆಯನ್ನು ಕಂಡು ನನಗೆ ಅಚ್ಚರಿ ಮತ್ತು ಆಕ್ರೋಶಗಳೆರಡೂ ಒಂದೇ ಕಾಲದಲ್ಲಿ ಉಂಟಾದವು. ಕಿವುಡಿಯ ಮನದಲ್ಲಿನ ಲಕ್ಶ್ಮಿಯ ಬಗೆಗಿನ ನಂಬಿಕೆಯು ಹೆಡ್ಡತನದಿಂದ ಕೂಡಿದೆ. ಅವಳಿಗೆ ಸರಿಯಾದ ತಿಳುವಳಿಕೆಯಿಲ್ಲದಿರುವುದು ಇಂತಹ ನಡವಳಿಕೆಗೆ ಕಾರಣವಾಗಿದೆ. ಆದರೆ ಕಡು ಬಡವಳಾದ ಆಕೆಯ ತಿಳಿಗೇಡಿತನದ ಹಿನ್ನಲೆಯಲ್ಲಿರುವ ತಾನು ದುಡಿಯುತ್ತಿರುವ ನೆಲೆ ಹಾಳಾಗಬಾರದೆಂಬ ಆಶಯವನ್ನು ಗುರುತಿಸಿ ಒಂದು ಗಳಿಗೆ ಮೂಕನಾದೆ. ಕಿವುಡಿಯು ತನ್ನ ಜೀವನದಲ್ಲಿ ಹೊಂದಿರುವ ಈ ಮಟ್ಟದ ಆದರ‍್ಶದ ಹಂಬಲ ನನ್ನಲ್ಲಿ ಇದೆಯೇ ಎಂಬ ಪ್ರಶ್ನೆಗೆ-
“ಇಲ್ಲ” ವೆಂಬುದೇ ಉತ್ತರ.

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Subbanna.K says:

    ?ಅದು ನಂಬಿಕೆಯೋ, ಮೂಡ ನಂಬಿಕೆಯೂ ಅದು ಬೇರೆ ವಿಷಯ ಆದರೆ ಇದನ್ನ ಓದಿದಾಗ ಹೃದಯ ತುಂಬಿ ಬರುವುದು ತನ್ನ ಮಕ್ಕಳು ಹಸಿದು ಕೊಂಡಿದ್ದರೂ ತನ್ನ ಯಜಮಾನನ ಮನೆಗೆ ಕೆಡಕಾಗಬಾರದೆಂಬ ಉದ್ದಾತ ಮನಸ್ಸಿನವರು ಈಗ ಯಾರಿದ್ದಾರೆ ಇದ್ದನ್ನು ಬರೆದವರಿಗೆ ಕೋಟಿ ವಂದನೆಗಳು?

ಅನಿಸಿಕೆ ಬರೆಯಿರಿ: