ಅರಿಮೆಯ ಪದಗಳಿಗೆ ಕನ್ನಡವೇ ಮೇಲು

ಡಿ.ಎನ್.ಶಂಕರ ಬಟ್.

ನುಡಿಯರಿಮೆಯ ಇಣುಕುನೋಟ – 11

nudi_inukuಕನ್ನಡದಲ್ಲಿ ಅರಿಮೆಯ (ಪಾರಿಬಾಶಿಕ) ಪದಗಳನ್ನು ಉಂಟುಮಾಡಬೇಕಾದಾಗಲೆಲ್ಲ ಹೆಚ್ಚಿನ ಅರಿವಿಗರೂ ಸಂಸ್ಕ್ರುತ ಪದಗಳನ್ನೇ ಆರಿಸಿಕೊಳ್ಳುತ್ತಾರೆ; ಇದಕ್ಕಾಗಿ ಕನ್ನಡದವೇ ಆದ ಪದಗಳನ್ನು ಬಳಸುವುದು ತುಂಬಾ ಅಪರೂಪ.

ಈ ಕಾರಣಕ್ಕಾಗಿ, ಕನ್ನಡದವೆಂದು ಹೇಳಲಾಗುವ ಹೆಚ್ಚಿನ ಅರಿಮೆಯ ಪದಕೋಶಗಳಲ್ಲೂ ಇವತ್ತು ನೂರಕ್ಕೆ ಎಂಬತ್ತರಶ್ಟು ಇಲ್ಲವೇ ಅದಕ್ಕಿಂತಲೂ ಹೆಚ್ಚು ಸಂಸ್ಕ್ರುತ ಪದಗಳನ್ನು ಕಾಣಬಹುದು. ಕನ್ನಡ ಅರಿವಿಗರ ಈ ನಿಲುವಿನಿಂದಾಗಿ, ಇವತ್ತು ಕನ್ನಡದ ಅರಿಮೆಯ ಬರಹಗಳು ಸಂಸ್ಕ್ರುತ ಪದಗಳಿಂದ ತುಂಬಿ ತುಳುಕುತ್ತಿವೆ.

ಹಿಂದಿನ ಕಾಲದಲ್ಲಿ ಕನ್ನಡದಲ್ಲಿ ಬರೆಯುವವರಿಗೆ ಬೇಕಾಗಿರುವ ಹೆಚ್ಚಿನ ತಿಳಿವುಗಳೂ ಸಂಸ್ಕ್ರುತದಲ್ಲಿದ್ದುವು; ಹಾಗಾಗಿ, ಅವನ್ನು ಕನ್ನಡಕ್ಕೆ ತರಬೇಕಾದಾಗ, ಅದಕ್ಕೆ ಬೇಕಾಗುವ ಅರಿಮೆಯ ಪದಗಳಲ್ಲಿ ಹೆಚ್ಚಿನವನ್ನೂ ಸಂಸ್ಕ್ರುತದಿಂದಲೇನೇ ಎರವಲು ಪಡೆಯಲಾಗುತ್ತಿತ್ತು, ಮತ್ತು ಆವತ್ತಿಗೆ ಅದು ಸರಿಯಾದ ದಾರಿಯಾಗಿತ್ತು.

ಆದರೆ, ಇವತ್ತು ಅರಿಮೆಯ (ವಿಜ್ನಾನದ) ಬರಹಗಾರರಿಗೆ ಬೇಕಾಗುವ ಹೆಚ್ಚಿನ ತಿಳಿವುಗಳೂ ಇಂಗ್ಲಿಶ್‌ನಲ್ಲಿವೆ; ಹಾಗಾಗಿ, ಅವನ್ನು ಇಂಗ್ಲಿಶ್‌ನಿಂದ ಕನ್ನಡಕ್ಕೆ ತರಬೇಕಾದಾಗ, ಅದಕ್ಕೆ ಬೇಕಾಗುವ ಪದಗಳನ್ನು ಇಂಗ್ಲಿಶ್‌ನಿಂದ ಎರವಲು ಪಡೆಯುವುದು, ಇಲ್ಲವೇ ಕನ್ನಡದಲ್ಲೇನೇ ಹೊಸದಾಗಿ ಉಂಟುಮಾಡಿಕೊಳ್ಳುವುದು ಎಂಬ ಎರಡು ದಾರಿಗಳು ಇವತ್ತಿನ ಮಟ್ಟಿಗೆ ಸರಿಯಾದುವು.

ಹೀಗಿದ್ದರೂ, ಕನ್ನಡದ ಬರಹಗಾರರು ಇವತ್ತಿಗೂ ಅರಿಮೆಯ ಪದಗಳಾಗಿ ಸಂಸ್ಕ್ರುತ ಪದಗಳನ್ನು ಬಳಸುವ ಹಳೆಯ ಸಂಪ್ರದಾಯವನ್ನೇ ಮುಂದುವರಿಸುತ್ತಿದ್ದಾರೆ; ತಮಗೆ ಬೇಕಾಗಿರುವ ಪದಗಳು ಸಂಸ್ಕ್ರುತದಲ್ಲಿಲ್ಲವಾದರೆ, ಹೊಸ ಪದಗಳನ್ನು ಸಂಸ್ಕ್ರುತದಲ್ಲೇನೇ ಉಂಟುಮಾಡಿ ಕನ್ನಡಕ್ಕೆ ತರುವಂತಹ ಇನ್ನೊಂದು ವಿಚಿತ್ರವಾದ ಸಂಪ್ರದಾಯವನ್ನೂ ಅವರು ಹುಟ್ಟುಹಾಕಿಕೊಂಡಿದ್ದಾರೆ.

ಹೀಗೆ ಮಾಡುತ್ತಿರುವುದಕ್ಕಾಗಿ, ಅವರು ಕೆಲವು ನೆವಗಳನ್ನೂ ಕೊಡುತ್ತಿದ್ದಾರೆ: ಇಂಗ್ಲಿಶ್‌ನಲ್ಲಿ ಅರಿಮೆಯ ಪದಗಳಾಗಿ ಲ್ಯಾಟಿನ್ ಇಲ್ಲವೇ ಗ್ರೀಕ್ ಪದಗಳನ್ನು ಬಳಸುವ ಹಾಗೆ ಕನ್ನಡದಲ್ಲಿ ಸಂಸ್ಕ್ರುತ ಪದಗಳನ್ನು ಬಳಸಲಾಗುತ್ತದೆಯೆಂಬುದು ಇವುಗಳಲ್ಲೊಂದು.

ಆದರೆ, ಇಂಗ್ಲಿಶ್‌ಗೆ ಲ್ಯಾಟಿನ್ ಇರುವ ಹಾಗೆ ಕನ್ನಡಕ್ಕೆ ಸಂಸ್ಕ್ರುತ ಅಲ್ಲ; ಯಾಕೆಂದರೆ, ಇಂಗ್ಲಿಶ್ ಮತ್ತು ಲ್ಯಾಟಿನ್‌ಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆ, ಮತ್ತು ಕನ್ನಡ ಮತ್ತು ಸಂಸ್ಕ್ರುತಗಳು ಬೇರೆ ಬೇರೆ ನುಡಿಕುಟುಂಬಗಳಿಗೆ ಸೇರಿವೆ. ಇಂಗ್ಲಿಶ್‌ಗೆ ಬೇಕಾಗುವ ಪದಗಳನ್ನು ಲ್ಯಾಟಿನ್‌ನಲ್ಲಿ ಉಂಟುಮಾಡಿದಾಗ ಹೆಚ್ಚಿನ ತೊಂದರೆಗಳೇನೂ ಎದುರಾಗುವುದಿಲ್ಲ; ಆದರೆ, ಕನ್ನಡಕ್ಕೆ ಬೇಕಾಗುವ ಪದಗಳನ್ನು ಸಂಸ್ಕ್ರುತದಲ್ಲಿ ಉಂಟುಮಾಡಿದಾಗ ಹಲವು ತೊಂದರೆಗಳು ಎದುರಾಗುತ್ತವೆ:

ಇಂಗ್ಲಿಶ್‌ನಲ್ಲಿ ಮುಕ್ಯವಾಗಿ ನವ್ನ್, ವರ‍್ಬ್, ಮತ್ತು ಎಜಕ್ಟಿವ್ ಎಂಬುದಾಗಿ ಮೂರು ಬಗೆಯ ಪದಗಳಿವೆ; ಕನ್ನಡದಲ್ಲೂ ಇಂತಹವೇ ಮೂರು ಬಗೆಯ ಪದಗಳಿವೆ. ಆದರೆ, ಸಂಸ್ಕ್ರುತದಲ್ಲಿ ಮುಕ್ಯವಾಗಿ ನಾಮಪದ ಮತ್ತು ಕ್ರಿಯಾಪದ ಎಂಬ ಎರಡು ಬಗೆಯ ಪದಗಳು ಮಾತ್ರ ಇವೆ.

ಹಾಗಾಗಿ, ಇಂಗ್ಲಿಶ್‌ನ ಅರಿಮೆಯ ಪದಗಳಿಗೆ ಸಮನಾದ ಪದಗಳನ್ನು ಸಂಸ್ಕ್ರುತದಲ್ಲಿ ಉಂಟುಮಾಡಿ ಕನ್ನಡಕ್ಕೆ ತರಹೋದರೆ, ನವ್ನ್ ಮತ್ತು ಎಜಕ್ಟಿವ್‌ಗಳ ನಡುವಿನ ವ್ಯತ್ಯಾಸವನ್ನು ಅವುಗಳಲ್ಲಿ ಸರಿಯಾಗಿ ತೋರಿಸಲು ಬರುವುದಿಲ್ಲ. ಈ ತೊಂದರೆಯಿಂದಾಗಿ, ಇವತ್ತು ಬಳಕೆಯಲ್ಲಿರುವ ಅರಿಮೆಯ ಪದಕೋಶಗಳಲ್ಲಿ ತುಂಬಾ ಗೊಂದಲವುಂಟಾಗಿರುವುದನ್ನು ಕಾಣಬಹುದು.

ಅರಿಮೆಯ ಬರಹಗಳಲ್ಲಿ ಕನ್ನಡ ಪದಗಳನ್ನು ಬಳಸಿದರೆ, ಅವು ಸಂಸ್ಕ್ರುತ ಪದಗಳ ಹಾಗೆ ಕಚಿತವಾದ ಹುರುಳನ್ನು ಕೊಡಲಾರವು ಎಂಬುದು ಇನ್ನೊಂದು ನೆವ; ಆದರೆ, ಸಂಸ್ಕ್ರುತ ಪದಗಳು ಕನ್ನಡದಲ್ಲಿ ಉಂಟುಮಾಡುತ್ತಿರುವ ಮೇಲಿನ ಗೊಂದಲವೇ ಇದನ್ನು ತಳ್ಳಿಹಾಕುತ್ತದೆ.

ಇವತ್ತು ಇಂಗ್ಲಿಶ್‌ನಲ್ಲಿ ಕಂಪ್ಯೂಟರ್‌ಗೆ ಸಂಬಂದಿಸಿದ ಹಲವು ಅರಿಮೆಯ ಪದಗಳನ್ನು ದಿನಬಳಕೆಯ ಪದಗಳನ್ನು ಬಳಸಿಯೇ ಉಂಟುಮಾಡಲಾಗುತ್ತಿದೆ; ಮವ್ಸ್ ‘ಇಲಿ’, ವಿಂಡೋಸ್ ‘ಕಿಟಿಕಿ’, ಟ್ರೀ ‘ಮರ’, ವೆಬ್ ‘ಬಲೆ’ ಎಂಬಂತಹ ಈ ಪದಗಳಿಂದಾಗಿ ಗೊಂದಲವೇನೂ ಉಂಟಾದ ಹಾಗೆ ಕಾಣಿಸುವುದಿಲ್ಲ.

ಹಾಗಾಗಿ, ಕನ್ನಡದ ಅರಿಮೆಯ ಪದಗಳಿಗಾಗಿ ಸಂಸ್ಕ್ರುತದ ಮೊರೆಹೊಗುವ ಇವತ್ತಿನ ಸಂಪ್ರದಾಯವನ್ನು ಬಿಟ್ಟುಕೊಡುವುದೇ ಒಳ್ಳೆಯದು. ಇಂಗ್ಲಿಶ್‌ನಿಂದ ಅರಿಮೆಯ ಬರಹಗಳನ್ನು ಕನ್ನಡಕ್ಕೆ ತರುವಾಗ, ಕನ್ನಡ ಪದಗಳ ಸೊಗಡನ್ನು ಕೆಡಿಸದಂತಹ ಇಂಗ್ಲಿಶ್ ಪದಗಳನ್ನು ಉಳಿಸಿಕೊಳ್ಳಬಹುದು, ಮತ್ತು ಅದನ್ನು ಕೆಡಿಸುವಂತಹ ಪದಗಳ ಬದಲು ಕನ್ನಡದವೇ ಆದ ಪದಗಳನ್ನು ಬಳಸಿ ಹೊಸ ಪದಗಳನ್ನು ಉಂಟುಮಾಡಿಕೊಳ್ಳಬಹುದು; ಇದೇ ಕನ್ನಡಕ್ಕೆ ಸರಿಯಾದ ದಾರಿ.

ಇಲ್ಲಿ ಇನ್ನೊಂದು ವಿಶಯವನ್ನೂ ಒತ್ತಿ ಹೇಳಬೇಕಾಗಿದೆ: ಇಂಗ್ಲಿಶ್‌ನಿಂದ ಅರಿಮೆಯ ಬರಹಗಳನ್ನು ಕನ್ನಡಕ್ಕೆ ತರುವಾಗ, ಎರಡು ಮುಕ್ಯ ಗುರಿಗಳಿಗಾಗಿ ನಾವು ಅವುಗಳಲ್ಲಿರುವ ಇಂಗ್ಲಿಶ್ ಪದಗಳಿಗೆ ಬದಲಾಗಿ ಕನ್ನಡದವೇ ಆದ ಪದಗಳನ್ನು ಬಳಸಲು ಹೋಗುತ್ತೇವೆ: ಹಾಗೆ ಮಾಡುವ ಮೂಲಕ ಬರಹ ಏನನ್ನು ತಿಳಿಸುತ್ತದೆ ಎಂಬುದು ಕನ್ನಡಿಗರಿಗೆ ಸುಲಬವಾಗಿ ತಿಳಿಯುವಂತಾಗಬೇಕು ಎಂಬುದೊಂದು, ಮತ್ತು ಕನ್ನಡದ ಸೊಗಡು ಕೆಡದಂತೆ ಉಳಿಯಬೇಕು ಎಂಬುದಿನ್ನೊಂದು.

ಇತ್ತೀಚೆಗೆ ಕಂಪ್ಯೂಟರ್‌ಗಳಿಗೆ ಸಂಬಂದಿಸಿದ ಕೆಲವು ಕಯ್ಪಿಡಿಗಳಲ್ಲಿ ಹೆಚ್ಚಿನ ಇಂಗ್ಲಿಶ್ ಪದಗಳನ್ನೂ ಹಾಗೆಯೇ ಉಳಿಸಿರುವುದನ್ನು ಕಾಣಬಹುದು. ಇಂಗ್ಲಿಶ್ ಪದಗಳ ಹುರುಳು ಗೊತ್ತಿರುವವರು ಮಾತ್ರ ಅವನ್ನು ಓದಿ ತಿಳಿದುಕೊಳ್ಳಬಲ್ಲರು, ಮತ್ತು ಅವುಗಳಲ್ಲಿ ಕನ್ನಡದ ಸೊಗಡು ಪೂರ‍್ತಿ ಕೆಟ್ಟುಹೋಗಿರುತ್ತದೆ; ಎಂದರೆ, ಮೇಲಿನ ಎರಡು ಗುರಿಗಳನ್ನೂ ಅವು ತಲಪುವುದೇ ಇಲ್ಲ.

ಇಂತಹ ಕಯ್ಪಿಡಿಗಳಲ್ಲಿ ಬರುವ ಇಂಗ್ಲಿಶ್ ಪದಗಳಿಗೆ ಬದಲಾಗಿ ಸಂಸ್ಕ್ರುತ ಪದಗಳನ್ನು ಬಳಸಿದರೂ ಪರಿಣಾಮ ಒಂದೇ: ಅವನ್ನು ಓದಿ ತಿಳಿಯಲು ಇಂಗ್ಲಿಶ್ ಪದಗಳ ಬದಲು ಸಂಸ್ಕ್ರುತ ಪದಗಳ ಹುರುಳು ಗೊತ್ತಿರಬೇಕು, ಮತ್ತು ಅವು ಕನ್ನಡದ ಸೊಗಡನ್ನು ಕೆಡಿಸದಿರುವುದಿಲ್ಲ. ಎಂದರೆ, ಇಂತಹ ಬರಹಗಳೂ ಮೇಲಿನ ಎರಡು ಗುರಿಗಳನ್ನು ತಲಪುವುದೇ ಇಲ್ಲ.

ಹಲವು ಹೆಚ್ಚಿನ ಸಂಸ್ಕ್ರುತ ಪದಗಳ ಹುರುಳುಗಳನ್ನು ಕಲಿಯುವುದಕ್ಕಿಂತಲೂ ಮೂಲ ಬರಹದಲ್ಲಿದ್ದ ಇಂಗ್ಲಿಶ್ ಪದಗಳ ಹುರುಳುಗಳನ್ನು ಕಲಿಯುವುದೇ ಕನ್ನಡಿಗರ ಮಟ್ಟಿಗೆ ಒಳ್ಳೆಯದಲ್ಲವೇ? ಯಾಕೆಂದರೆ, ಮುಂದೆ ಹೆಚ್ಚಿನ ತಿಳಿವನ್ನು ಪಡೆಯಬೇಕೆಂದಿರುವವರಿಗೆ ಇಂಗ್ಲಿಶ್ ಪದಗಳ ತಿಳಿವು ನೆರವಾಗಬಲ್ಲುದು; ಆದರೆ, ಸಂಸ್ಕ್ರುತ ಪದಗಳ ತಿಳಿವು ಯಾವ ನೆರವನ್ನೂ ನೀಡಲಾರವು.

ಅರಿಮೆಯ ಬರಹಗಳಿಂದ ತಿಳಿವನ್ನು ಪಡೆಯುವುದು ಮಾತ್ರವಲ್ಲದೆ, ಅದನ್ನು ಒರೆಗೆ ಹಚ್ಚುವ ಮತ್ತು ಅವುಗಳಲ್ಲಿಲ್ಲದ ಹೊಸ ತಿಳಿವನ್ನು ಕಂಡುಹಿಡಿಯುವ ಕೆಲಸವನ್ನೂ ನಾವಿಂದು ನಡೆಸಬೇಕಾಗಿದೆ. ಹೆಚ್ಚು ಹೆಚ್ಚು ಸಂಸ್ಕ್ರುತ ಇಲ್ಲವೇ ಇಂಗ್ಲಿಶ್ ಪದಗಳನ್ನು ಬಳಸಿರುವ ಬರಹಗಳನ್ನು ಕಶ್ಟಪಟ್ಟು ಅರಿಯುವುದರಲ್ಲಿಯೇ ನಮ್ಮ ಸಮಯವೆಲ್ಲ ಕಳೆದುಹೋಗುತ್ತದೆ. ಅವನ್ನು ಒರೆಗೆ ಹಚ್ಚುವ ಮತ್ತು ಹೊಸ ತಿಳಿವನ್ನು ಕಂಡುಹಿಡಿಯುವ ಕೆಲಸದಲ್ಲೂ ನಮ್ಮ ಕಲಿವಿಗರು ತೊಡಗಬೇಕಿದ್ದಲ್ಲಿ, ಅರಿಮೆಯ ಪದಗಳಲ್ಲಿ ಹೆಚ್ಚಿನವೂ ಕನ್ನಡದವೇ ಆಗಿರಬೇಕು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

<< ನುಡಿಯರಿಮೆಯ ಇಣುಕುನೋಟ – 10

5 ಅನಿಸಿಕೆಗಳು

  1. ಕೆಲವು ಬಾರಿ ನಮಗೆ ಕನ್ನಡ ಪದಗಳ ಹುರುಳು ಗೊತ್ತಿರುವುದಿಲ್ಲ .. kannada wiktionary ನಲ್ಲೂ ಇರುವುದಿಲ್ಲ .. ಅಂತ ಪದಗಳನ್ನು ನಾನು ಇಲ್ಲಿ ಬರೆದು ತಿಳಿಯಬಹುದೇ ?? ಅತವ ಅಂತ ಕೆಳ್ವಿಗಳನ್ನು ಕೇಳಲು ಬೇರೆ ಜಾಗ ಇದೆಯೇ ?

    1. @smhamaha

      /groups/papakapa ಈ ಗುಂಪಿನಲ್ಲಿ ಹೊಸ ಹೊಸ ಪದಗಳನ್ನು ಕಟ್ಟುವ ಅದರ ಬಗ್ಗೆ ತಿಳಿಸುಕೊಳ್ಳುವ ಮನಸ್ಸುಳ್ಳವರಿದ್ದಾರೆ. ನೀವು ಈ ಗುಂಪಿಗೆ ಸೇರಿಕೊಳ್ಳಿ, ಪದಗಳ ಬಗ್ಗೆ ಚರ್ಚಿಸಿ ಹೊಸ ಪದಗಳನ್ನು ಕಟ್ಟುವ ಕೆಲಸದಲ್ಲಿ ನೀವೂ ತೊಡಗಿಕೊಳ್ಳಿ!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.