ಕನ್ನಡದ ತಾಯ್ನುಡಿ ಸಂಸ್ಕ್ರುತವಲ್ಲ
– ರಗುನಂದನ್.
ಎರಡು ನುಡಿಗಳ ನಡುವಿನ ನಂಟನ್ನು ಹೇಗೆ ತಿಳಿದುಕೊಳ್ಳಬಹುದು? ಒಂದು ನುಡಿಯ ಪದಗಳು ಮತ್ತೊಂದು ನುಡಿಯಲ್ಲಿ ಇದ್ದರೆ ಅವರೆಡಕ್ಕು ನಂಟನ್ನು ಕಲ್ಪಿಸಬಹುದೇ? ಈ ಬರಹದಲ್ಲಿ ಉಲಿ ಮಾರ‍್ಪು ಎಂಬ ನುಡಿಯರಿಮೆಯ ಒಂದು ಎಣಿಕೆಯ (concept) ಮೂಲಕ ನುಡಿ-ಬೇರುನುಡಿ ಹೇಗೆ ನಂಟನ್ನು ಹೊಂದಿರುತ್ತದೆ ಎಂಬುದನ್ನು ನೋಡೋಣ.
ಮೊದಲು ಉಲಿ ಮಾರ‍್ಪು (sound Change) ಎಂದರೆ ಏನೆಂದು ತಿಳಿದುಕೊಳ್ಳೋಣ ?
ಉಲಿ ಮಾರ‍್ಪಾಟುಗಳು ಶಬ್ದಗಳ ಉಚ್ಚಾರಣೆಯಲ್ಲಿ ಆಗುವ ಬದಲಾವಣೆಯಲ್ಲಿ ಕಂಡುಕೊಳ್ಳುವ ಒಂದು ವಿಶಯವಾಗಿದೆ. ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ನುಡಿಯನ್ನು ಪಡೆದುಕೊಳ್ಳುವಾಗ ಉಲಿ ಮಾರ‍್ಪಾಟುಗಳು ಆಗುತ್ತವೆ. ಒಂದು ನುಡಿಯ ಸೊಲ್ಲರಿಮೆಯಾಗಲೀ (grammar) ಇಲ್ಲವೇ ಅದರ ಪದನೆರಕೆಯಾಗಲೀ (dictionary/lexicon) ಆ ನುಡಿಯಲ್ಲಿ ಆಗುವ ಉಲಿಗಳ ಮಾರ‍್ಪಾಟಿನ ಮೇಲೆ ಯಾವುದೇ ಒತ್ತು ಬೀರುವುದಿಲ್ಲ.
ಕನ್ನಡವು ಸಂಸ್ಕ್ರುತದಿಂದ ಬಂದಿರುವ ನುಡಿಯೆಂದು ಸಾಕಶ್ಟು ಮಂದಿ ತಿಳಿದಿದ್ದಾರೆ. ಇದಕ್ಕೆ ಮುಕ್ಯವಾಗಿ ಎರಡು ಕಾರಣಗಳಿವೆ.
(1) ಬರಹ ಕನ್ನಡದಲ್ಲಿ (written Kannada) ಹೇರಳವಾಗಿ ಬಳಸಲಾಗುವ ಸಂಸ್ಕ್ರುತ ಪದಗಳು. ಪತ್ರಿಕೆ ಮತ್ತು ಪಟ್ಯಪುಸ್ತಕಗಳಲ್ಲಿ ಸಂಸ್ಕ್ರುತ ಬಳಸಿದರೆ ಮೇಲು ಎಂಬ ಅನಿಸಿಕೆಯಿಂದ ಹೀಗೆ ಆಗಿರಬಹುದು. ದರ‍್ಮ ಮತ್ತು ಅದ್ಯಾತ್ಮದ ವಿಶಯಗಳಿಂದ ಕೂಡ ಸಾಕಶ್ಟು ಸಂಸ್ಕ್ರುತ ಪದಗಳು ಕನ್ನಡಕ್ಕೆ ಬಂದಿವೆ.
(2) ಕನ್ನಡದ 2000 ವರುಶದ ಹಳಮೆಯಲ್ಲಿ (history) ಸೊಲ್ಲರಿಗರು (ವ್ಯಾಕರಣಕಾರರು) ಕನ್ನಡವು ಸಂಸ್ಕ್ರುತದಿಂದ ಬಂದಿದೆ ಎಂಬ ತಪ್ಪನಿಸಿಕೆಯಿಂದ ಸಂಸ್ಕ್ರುತ ಸೊಲ್ಲರಿಮೆಯ ಎಣಿಕೆಗಳನ್ನು ಕನ್ನಡದಲ್ಲಿ ಟಂಕಿಸುವುದಕ್ಕೆ ಪ್ರಯತ್ನಿಸಿದ್ದಾರೆ. ಮತ್ತೆ ಅಲ್ಲಿ ಬಳಸಲಾಗಿರುವ ಪದಗಳನ್ನೇ ಕನ್ನಡದಲ್ಲಿಯೂ ಬಳಸಿದ್ದಾರೆ.
ಆದರೆ ನುಡಿಯರಿಮೆ (linguistics) ವಯ್‌ಜ್ನಾನಿಕವಾಗಿ ಬೆಳೆಯುತ್ತಾ ಹೋದಂತೆ ನುಡಿ-ಮೂಲನುಡಿ ಕುರಿತಾಗಿ ಇರುವ ಗೊಂದಲಗಳು ಕಡಿಮೆಯಾಗಿವೆ. ಕನ್ನಡ ಮತ್ತು ಸಂಸ್ಕ್ರುತದ ನಡುವಿನ ನಂಟಿನ ಬಗ್ಗೆ ಅರಕೆ ಮಾಡಿರುವ ತಿಳಿವಿಗರು ಇವೆರಡು ಬೇರೆ ಬೇರೆ ನುಡಿಗುಂಪುಗಳಿಗೆ ಸೇರುತ್ತದೆ ಎಂದು ದ್ರುಡ ಪಡಿಸಿದ್ದಾರೆ. ಉಲಿ ಮಾರ‍್ಪಾಟುಗಳ ನೆರವಿನಿಂದ ಇದನ್ನು ಹೇಗೆ ತಿಳಿದುಕೊಳ್ಳಬಹುದು ಎಂಬುದನ್ನು ನೋಡೋಣ. ಕೆಳಗೆ ಕೊಟ್ಟಿರುವ ಪಟ್ಟಿಯನ್ನು ನೋಡಿರಿ.
ಇದರಲ್ಲಿ ಇಂಗ್ಲಿಶ್ ಪದ, ಪಕ್ಕದಲ್ಲಿ ಸಂಸ್ಕ್ರುತ ಮತ್ತದರ ಪಕ್ಕದಲ್ಲಿ ಉಲಿ ಮಾರ‍್ಪಾಟಿನ ಪರಿಣಾಮವಾಗಿ ಹಿಂದಿಯಲ್ಲಿ ಆ ಪದ ಈಗ ಹೇಗಾಗಿದೆ ಎಂಬುದನ್ನು ಕಾಣಬಹುದು. ಅದರ ಪಕ್ಕದಲ್ಲಿ ಕನ್ನಡ ನುಡಿಯ ಪದಗಳನ್ನು ಕಾಣಬಹುದು.
ಕನ್ನಡ ಮೂಲನುಡಿಯಲ್ಲಿ ಇದ್ದ ಪದಗಳು ಈಗ ಹೀಗೆ ಬದಲಾಗಿವೆ. ಸಂಸ್ಕ್ರುತ ಪಟ್ಟಿಯಲ್ಲಿರುವ ಪದಗಳು ಕನ್ನಡದಲ್ಲಿ ಬಳಸುವುದಿಲ್ಲವೇ ಎನಿಸಬಹುದು, ಆದರೆ ಅವುಗಳು ಹೆಚ್ಚಾಗಿ ಬರಹ ಕನ್ನಡದಲ್ಲಿ ಮಾತ್ರ. ಮಾತಿನಲ್ಲಿ ಬಳಸಿಲ್ಲದ ಕಾರಣಕ್ಕಾಗಿಯೇ ಅವುಗಳು ಸಂಸ್ಕ್ರುತದಲ್ಲಿ ಇರುವಂತೆಯೇ ಇಂದಿಗೂ ಕನ್ನಡದಲ್ಲಿ ಇರುವುದು. ಹಿಂದಿಯಲ್ಲಿ ಅವನ್ನು ಮಾತಿನಲ್ಲಿ ಬಳಸಿದ ಕಾರಣ ಅವು ಈಗಿನ ರೂಪಕ್ಕೆ ಬದಲಾಗಿವೆ.
ಈ ರೀತಿಯಾಗಿ ನಾವು ಉಲಿ ಮಾರ‍್ಪಾಟುಗಳ ಅರಿವಿನಿಂದ ನುಡಿ-ಮೂಲನುಡಿಯ ನಡುವಿನ ನಂಟನ್ನು ತಿಳಿದುಕೊಳ್ಳಬಹುದು. ಬರಿ ಎರಡು ನುಡಿಗಳಲ್ಲಿ ಸಾಮಾನ್ಯ ಪದಗಳಿವೆ ಎಂಬ ಕಾರಣಕ್ಕೆ ಅವು ಒಂದೇ ಮೂಲನುಡಿಯಿಂದ ಬಂದದ್ದು ಎಂದು ತೀರ‍್ಮಾನಿಸಲಾಗದು ಎಂಬುದು ಇದರ ತಿರುಳು.
(ತಿಳಿವಿನ ಸೆಲೆ: Sound Change, D.N. Shankar Bhat, First Edition, 2001)
ಇತ್ತೀಚಿನ ಅನಿಸಿಕೆಗಳು