ಕಡಲಿನಡಿಯ ಸುರಂಗ
ತಲೆಬರಹ ನೋಡಿ ಬೆರಗಾದ್ರೆ ಮಾರಾಯ್ರೆ, ಇದೇನು ಕಡಲಿನಡಿಯ ಸುರಂಗ ಸಾದ್ಯಾನಾ ಎಂಬ ಕೇಳ್ವಿ ನಿಮ್ಮ ಮನದಲ್ಲಿ ಮೂಡಿರಲುಬಹುದು. ಏಲೊನ್ ಮಸ್ಕರ ಕೊಳವೆ ಸಾರಿಗೆಯು ಇತ್ತಿಚೀಗೆ ಜಗತ್ತಿನೆಲ್ಲರ ಗಮನಸೆಳೆದಿದ್ದರೆ, ಈಗ ಕಡಲಿನಡಿಯ ಸುರಂಗದ ಸುದ್ದಿ ಎಲ್ಲರ ಕಣ್ಣು ತನ್ನೆಡೆಗೆ ಸೆಳೆದಿದೆ.
ಯೂರೋಪ್ ಕಂಡವನ್ನು ಏಶಿಯಾದೊಂದಿಗೆ ಸೇರಿಸುವ ಹೆಬ್ಬಯಕೆಯಿಂದ 2004 ರಲ್ಲಿ ಟರ‍್ಕಿ ದೇಶ ಕಯ್ಗೆತ್ತಿಕೊಂಡ ಹಮ್ಮುಗೆ ಪಯಣಿಗರ ಓಡಾಟಕ್ಕೆ ಅಣಿಯಾಗುತ್ತಿದೆ. ಟರ‍್ಕಿ ದೇಶದ ಪ್ರದಾನಿ ರಿಸಿಪ್ ತಯ್ಯಿಪ್ ಎರ‍್ಡೊಗಾನ್ ಇದೇ ಆಗಸ್ಟ್ 4 ರಂದು ಈ ಕಡಲತಳದ ಸುರಂಗದ ರಯ್ಲು ಬಂಡಿಯಲ್ಲಿ ಪಯಣಿಸುವ ಮೂಲಕ ಒರೆಹಚ್ಚುವಿಕೆಯ ಓಟವನ್ನು ಗಟ್ಟಿಗೊಳಿಸಿದ್ದಾರೆ.
ಮರ‍್ಮರಾ ಕಡಲ ತೀರದಲ್ಲಿರುವ ಈ ಹಮ್ಮುಗೆ, ಟರ‍್ಕಿಶ್ ಪದ ರಯ್ ಅನ್ನು ಸೇರಿಸಿಕೊಂಡು ಮರ‍್ಮಾರಯ್ ಎಂಬ ಹೆಸರು ಪಡೆದಿದೆ. ಬೊಸ್ಪೊರಸ್ ಗೊಂದುವಿನ ಮೂಲಕ ಈ ಸುರಂಗ ತೂರಿಕೊಂಡು ಸಾಗಲಿದೆ. ಮರ‍್ಮಾರಯ್ ನ ಒಟ್ಟು ದೂರ 76.3 ಕಿಲೋಮೀಟರಗಳಾಗಿದ್ದು ಇದರಲ್ಲಿ ಸುರಂಗದ ದಾರಿ 13.6 ಕಿ.ಮೀ. ಜಗತ್ತಿನಲ್ಲೇ ಎಲ್ಲಕ್ಕಿಂತ ಆಳದಲ್ಲಿ ಮುಳುಗಿದ ಕಡಲ್ಗೊಳವೆಯಲ್ಲಿ ಬಂಡಿ ಸಾಗುವುದರೊಂದಿಗೆ ಮರ‍್ಮಾರಯ್ ದಾಕಲೆಯೊಂದನ್ನು ತನ್ನ ಮುಡಿಗೇರಿಸಿಕೊಂಡಿದೆ.
ಟರ‍್ಕಿ ದೇಶದ ಪ್ರಮುಕ ಊರುಗಳಲ್ಲಿ ಒಂದಾದ ಇಸ್ತಾಂಬುಲ್ ಹಳೆಯ ಕಾಲದಲ್ಲಿ ಕಾನ್ಸ್ಟಾಂಟಿನೋಪಲ್ ಎಂಬ ಹೆಸರಿನಲ್ಲಿ ಕ್ಯಾತಿಯಾಗಿತ್ತು. ಇಸ್ತಾಂಬುಲ್ ಊರು ಏಶಿಯಾ ಮತ್ತು ಯೂರೋಪ್ ಎರಡು ಕಂಡಗಳಲ್ಲಿ ಹಂಚಿಹೋಗಿದ್ದು, ಮರ‍್ಮರಾ ಕಡಲು ಈ ನಗರವನ್ನು ಬೇರ‍್ಪಡಿಸಿ, ನಡುವೆ ಈ ಬೊಸ್ಪೊರಸ್ ಗೊಂದುವನ್ನು ಹುಟ್ಟುಹಾಕಿದೆ. ಬೊಸ್ಪೊರಸ್ ಗೊಂದುವಿನ ಮೂಲಕ ಸಾಗಲು 1.4 ಕಿ.ಮೀ.ಉದ್ದದ ನೆಲನಡುಕದಂತಹ ಕೆಡುಕಗಳಿಗೂ ಜಗ್ಗದೇ ಹಲವು ಕಾಲದವರೆಗೆ ತಾಳಿಕೆ ಬರುವ ಕೊಳವೆಯನ್ನು ಬಳಸಿಕೊಳ್ಳಲಾಗಿದೆ.
ನಾರ‍್ವೆಯ ವಿಶೇಶ ಬೆಂಕಿ ತಡೆತನದ ಕಾಂಕ್ರೀಟ್ ಚಳಕ ಬಳಸಿ ಸುರಂಗದ ಒಳಗೋಡೆ ಕಟ್ಟಲಾಗಿದ್ದು, ಪಯಣಿಗರ ಕಾಪಿಗೆ ಹೆಚ್ಚಿನ ಗಮನಹರಿಸಲಾಗಿದೆ. ಬೊಸ್ಪೊರಸ್ ಗೊಂದುವಿನೊಳಗೆ ಸುರಂಗ ಕೊರೆದು ಲಕ್ಶಾಂತರ ಜನರನ್ನು ಸಾಗಿಸುವುದು ಕಬ್ಬಿಣದ ಕಡಲೆಯೇ. ಇಸ್ತಾಂಬುಲ್ ನ ಒಂದು ಮೂಲೆಯಲ್ಲಿರುವ ಹಲ್ಕಲಿ ಜಾಗವನ್ನು ಇನ್ನೊಂದು ಮೂಲೆಯಲ್ಲಿರುವ ಗೆಜೆಬ್ ನೊಂದಿಗೆ ಸೇರಿಸುವ ಮರ‍್ಮಾರಯ್ ಒಟ್ಟು 76.3 ಕಿ.ಮೀ ದೂರದ ರಯ್ಲು ದಾರಿಯಾಗಿದೆ. ಹಲ್ಕಲಿ ಯೂರೋಪ್ ಬಾಗದಲ್ಲಿದ್ದರೆ ಗೆಜೆಬ್ ಏಶಿಯಾ ಬಾಗದಲ್ಲಿ ಸೇರಿಕೊಂಡಿದೆ.
2004 ರಲ್ಲೇ ಈ ಹಮ್ಮುಗೆ ಹುಟ್ಟುಪಡೆದು ಕೆಲಸ ಆರಂಬವಾಯ್ತು, 2009 ರ ಹೊತ್ತಿಗೆ ಇದನ್ನು ಮುಗಿಸುವ ಗುರಿಯನ್ನೂ ಕೂಡ ಹೊಂದಲಾಗಿತ್ತು. ಬಯ್ಜಂಟಾಯಿನ್ ಕಾಲದ ಹಳಮೆಯರಿಮೆಗೆ ಸಂಬಂದಪಟ್ಟ ಕೆಲವು ಸಾಮಾನುಗಳು, ಹಳೆಯ ಹಡಗು ಅಲ್ಲದೆ ಇಸ್ತಾಂಬುಲ್ ನಗರದ ಹಳೆಗೋಡೆಯ ಪಳೆಯುಳಿಕೆಗಳು ಸಿಕ್ಕಿದ್ದು ಬಿರುಸಿನ ಆರಂಬ ಪಡೆದ ಹಮ್ಮುಗೆಗೆ ತಡೆಯೊಡ್ಡಿತ್ತು. ಆದರೆ ಇಂತ ಹಲವು ಅಡೆತಡೆಗಳನ್ನು ಎದುರಿಸಿ ಇದೀಗ ಕೊನೆಗೊಳ್ಳುವ ಹಂತ ತಲುಪಿದ್ದು ಎರಡು ಕಂಡಗಳ ನಡುವೆ ಓಡಾಡುವವರಿಗೆ ನೆಮ್ಮದಿ ತಂದಿದೆ.
ಅಂಕಿ ಅಂಶಗಳ ಲೆಕ್ಕಕ್ಕೆ ಬಂದರೆ, ಜಪಾನ್-ಟರ‍್ಕಿಶ್ ನಾಡಿನ ಒಪ್ಪಂದದಂತೆ ಜಪಾನ್ ಬ್ಯಾಂಕ್ ಪಾರ್ ಇಂಟರ್‍ನ್ಯಾಶನಲ್ ಕೋ-ಆಪರೇಶನ್ ಮತ್ತು ಯೂರೋಪಿಯನ್ ಇನ್ವೆಸ್ಟ್ಮೆಂಟ್ ಬ್ಯಾಂಕ್ ಈ ಕೆಲಸಕ್ಕೆ ಹಣಕಾಸಿನ ನೆರವು ಒದಗಿಸಿವೆ. ದಿನವೊಂದಕ್ಕೆ ಸುಮಾರು 15 ಲಕ್ಶಕ್ಕಿಂತಲೂ ಹೆಚ್ಚಿನ ಜನರನ್ನು ಏಶಿಯಾ ಕಂಡದ ಒಂದು ತುದಿಯಿಂದ ಯೂರೋಪ್ ಕಂಡದ ಮತ್ತೊಂದು ತುದಿಗೆ ಈ ಬಂಡಿ ತಲುಪಿಸಲಿದೆಯಂತೆ.
440 ರಯ್ಲು ಕೋಚ್‍ಗಳನ್ನು ಒಳಗೊಂಡ ದೊಡ್ಡ ಕೆಲಸ ಮರ‍್ಮಾರಯ್ ಹಮ್ಮುಗೆಯಲ್ಲಿ ಸೇರಿದೆ. ಇದನ್ನೊದಗಿಸುವ ಪೂರ‍್ತಿ ಕೆಲಸದ ಗುತ್ತಿಗೆ ಪಡೆಯಲು ಜಗತ್ತಿನ ಹೆಸರುವಾಸಿ ಬಂಡಿ ತಯಾರಕರುಗಳಾದ ಬಂಬಾರ‍್ಡಿಯರ್, ಅಲ್-ಸ್ಟೊಮ್, ಸೀಮನ್ಸ್ ಕೂಟಗಳು ತುರುಸಿನ ಪಯ್ಪೋಟಿಯೇ ನಡೆಸಿದ್ದವು. ಕೊನೆಯಲ್ಲಿ 580 ಮಿಲಿಯನ್ ಯುರೋ (ಅಂದರೆ ಸುಮಾರು ನಾಲ್ಕು ಸಾವಿರದ ಒಂಬತ್ತುನೂರು ಕೋಟಿ ರುಪಾಯಿ) ಮೊತ್ತದ ಗುತ್ತಿಗೆ ತೆಂಕಣ ಕೊರಿಯಾದ ಹ್ಯುಂಡಾಯ್ ರೋಟೆಮ್ ಕೂಟದ ಪಾಲಾಗಿದೆ. ಹ್ಯುಂಡಾಯ್ ರೋಟೆಮ್ ಕೂಟ ಈಗಾಗಲೇ ಇಂತ ಹಲವಾರು ಹಮ್ಮುಗೆಗಳನ್ನು ಪೂರ‍್ತಿಗೊಳಿಸಿರುವ ಅನುಬವ ಹೊಂದಿದೆ. ತೆಂಕಣ ಕೊರಿಯಾ ದೇಶದ ಸೆಳೆಗಲ್ಲಿನ ರಬಸದ ಬಂಡಿ ಮುಗಿಸಿಕೊಟ್ಟಿದ್ದು ಇವರ ಪ್ರಮುಕ ಸಾದನೆ.
ಜಗತ್ತಿನ ವಿವಿದ ನಾಡಿನ ಬಿಣಿಗೆಯರಿಗರ ಒಗ್ಗೂಡಿಸಿ ಕಟ್ಟುತ್ತಿರುವ ಈ ಕಡಲಾಳದ ಸುರಂಗ ಇಸ್ತಾಂಬುಲ್ ಊರಿನ ರಯ್ಲು ಸಾರಿಗೆ ಬಳಕೆಯನ್ನು ಈಗಿರುವ ಶೇಕಡಾ 3.6 ರಿಂದ 27.7 ಕ್ಕೆ ಏರಿಸಲಿದೆಯಂತೆ.
ಮರ‍್ಮಾರಯ್ ಹಮ್ಮುಗೆಯ ಅಂಕಿ-ಅಂಶಗಳು
ಒಟ್ಟು ನಿಲುಗಡೆಗಳು : 41
ಒಟ್ಟು ಉದ್ದ : 76.3 ಕಿ.ಮೀ
ಬಂಡಿಯ ವೇಗ : ಪ್ರತಿಗಂಟೆಗೆ 45 ಕಿ.ಮೀ
ಸುರಂಗದ ಉದ್ದ : 13.6 ಕಿ.ಮೀ
ರಯ್ಲು ಹಳಿಯ ಉದ್ದ : 1.4 ಮೀ
ಬಿಡುಗಡೆ ದಿನಾಂಕ : 29ನೇ ಅಕ್ಟೋಬರ್, 2013.
ಇದೇ ತರಹದ ಹಮ್ಮುಗೆಯೊಂದು ಆಪ್ರಿಕಾದ ಮೊರ‍್ಯಾಕ್ಕೊನಿಂದ ಯೂರೋಪ್ ನ ಸ್ಪೇನ್ ನಾಡನ್ನು ಕೂಡಿಸುವ ಸುದ್ದಿ ಇತ್ತಿಚೀಗೆ ಕೇಳಿಬಂದಿತ್ತು! ಅಂದಹಾಗೆ ನೀವು ಮುಂದಿನ ದಿನಗಳಲ್ಲಿ ಇಸ್ತಾಂಬುಲ್ ಗೆ ಬೆಟ್ಟಿಕೊಟ್ಟರೆ ಒಮ್ಮೆ ಇದರ ಅನುಬವ ಪಡೆದು ಬನ್ನಿ, ನಿಮ್ಮ ಪಯಣಕ್ಕೆ ಒಳಿತಾಗಲಿ.
ಕಡೆನುಡಿ:
ಜಗತ್ತನ್ನೇ ಬೆರಗುಗೊಳಿಸುವ ಇಂತ ಹಮ್ಮುಗೆಯನ್ನು ತನ್ನ ನಾಡಿನಲ್ಲಿ ಅಣಿಗೊಳಿಸುತ್ತಿರುವ ಟರ‍್ಕಿ ಮತ್ತು ತನ್ನ ಜಾಣ್ಮೆಯಿಂದ ಈ ಕೆಲಸವನ್ನು ನನಸುಗೊಳಿಸಲು ಗುತ್ತಿಗೆ ಪಡೆದಿರುವ ತೆಂಕಣ ಕೊರಿಯಾ, ಎರಡರಲ್ಲೂ ಲಿಪಿ ಸುದಾರಣೆ ನಡೆದಿರುವುದು ಮತ್ತು ಅದರಿಂದಾಗಿ ಅವೆರಡೂ ನಾಡಿಗೂ, ನಾಡಿಗರಿಗೂ ಒಳಿತಾಗುತ್ತಿರುವುದು ಎಲ್ಲರ ಕಣ್ಣ ಮುಂದೆಯೇ ಇದ್ದು, ಕನ್ನಡಿಗರು ಇಡುತ್ತಿರುವ ಎಲ್ಲರ ಕನ್ನಡದ ಗಟ್ಟಿ ಹೆಜ್ಜೆಗಳು ಸರಿಯಾದ ದಾರಿಯಲ್ಲಿವೆ ಅಂತಾ ಮನದಟ್ಟು ಮಾಡುತ್ತಿವೆ.
(ಸುದ್ದಿಸೆಲೆಗಳು: http://gbtimes.com/, http://vosizneias.com/, http://turksemedia.nl/)
1 Response
[…] ಮತ್ತು ಯುರೋಪಿನ ನಡುವೆ ಸೇತುವೆಯಂತಿರುವ ನಾಡು ಟರ‍್ಕಿ. ಟರ‍್ಕಿಶ್ ಎಂದು ಕರೆಯಲಾಗುವ […]