ಟರ‍್ಕಿಯಲ್ಲಿ ನಡೆದ ಲಿಪಿ ಬದಲಾವಣೆ

ಪ್ರಿಯಾಂಕ್ ಕತ್ತಲಗಿರಿ.

OLYMPUS DIGITAL CAMERA

ಏಶಿಯಾ ಮತ್ತು ಯುರೋಪಿನ ನಡುವೆ ಸೇತುವೆಯಂತಿರುವ ನಾಡು ಟರ‍್ಕಿ. ಟರ‍್ಕಿಶ್ ಎಂದು ಕರೆಯಲಾಗುವ ಅಲ್ಲಿನ ನುಡಿಯನ್ನು ಸಾವಿರಾರು ವರುಶಗಳಿಂದ ಅರೇಬಿಕ್ ಲಿಪಿಯನ್ನು ಬಳಸಿ ಬರೆಯಲಾಗುತ್ತಿತ್ತು. ಒಂದೇ ಲಿಪಿಯನ್ನು ಬಳಸುತ್ತಿದ್ದರೂ ನುಡಿಯಾಗಿ ಅರೇಬಿಕ್ ಮತ್ತು ಟರ‍್ಕಿಶ್ ನಡುವೆ ಸಾಕಶ್ಟು ಬೇರ‍್ಮೆಯಿದ್ದುದರಿಂದ, ಅರೇಬಿಕ್ ಲಿಪಿಯು ಟರ‍್ಕಿಶ್ ನುಡಿಗೆ ಸರಿಹೊಂದುತ್ತಿರಲಿಲ್ಲ.

ನುಡಿಗಳ ನಡುವಣ ಬೇರ‍್ಮೆ

ಯಾವುದೇ ಎರಡು ನುಡಿಗಳ ಲಿಪಿಗಳು ಒಂದೇ ತೆರನಾಗಿದ್ದರೆ, ಆ ಎರಡು ನುಡಿಗಳೂ ಹೆಚ್ಚು-ಕಮ್ಮಿ ಒಂದೇ ತೆರನಾದವು ಎಂಬ ತಪ್ಪು ನಂಬಿಕೆ ನಮ್ಮಲ್ಲಿ ಹಲವರಲ್ಲಿದೆ. ಒಂದೇ ಲಿಪಿಯನ್ನು ಹೊಂದಿರುವ ಮಲೇಶಿಯಾದ ನುಡಿಗೂ ಇಂಗ್ಲೀಶ್ ನುಡಿಗೂ ನಡುವಣ ಇರುವ ಬೇರ‍್ಮೆಯನ್ನು ನೋಡಿದಾಗ, ಲಿಪಿ ಒಂದೇ ಇದ್ದರೂ ನುಡಿ ನೆಂಟಸ್ತನ ಇರಬೇಕಿಲ್ಲ ಎಂಬುದರ ಅರಿವಾಗುತ್ತದೆ.
ಹಾಗೆಯೇ, ಅರೇಬಿಕ್ ಮತ್ತು ಟರ‍್ಕಿಶ್ ನುಡಿಗಳೂ ಸಾವಿರ ವರುಶಗಳಿಂದ ಒಂದೇ ಲಿಪಿಯನ್ನು ಬಳಸುತ್ತಿದ್ದರೂ ಅವುಗಳ ನಡುವೆ ಬೇರ‍್ಮೆ ದೊಡ್ಡದಿತ್ತು. ಟರ‍್ಕಿಶ್ ನುಡಿಯಲ್ಲಿನ ಅರೇಬಿಕ್ ಮತ್ತು ಪರ‍್ಶಿಯನ್ ಬೇರಿನ ಪದಗಳನ್ನು ಬರೆಯಲು ಅರೇಬಿಕ್ ಲಿಪಿಯು ತಕ್ಕುದಾಗಿತ್ತು, ಆದರೆ ಟರ‍್ಕಿಶ್ ನುಡಿಯದೇ ಪದಗಳನ್ನು ಬರೆಯಲು ಅರೇಬಿಕ್ ಲಿಪಿಯು ತೊಡಕಿನದಾಗಿತ್ತು. ಅರೇಬಿಕ್ ನುಡಿಯಲ್ಲಿ ಸ್ವರಗಳು ಕಮ್ಮಿಯಿದ್ದು ವ್ಯಂಜನಗಳು ಹೇರಳವಾಗಿದ್ದುದರಿಂದ, ಅರೇಬಿಕ್ ಲಿಪಿಯನ್ನೂ ಹಾಗೆಯೇ ಕಟ್ಟುಕೊಳ್ಳಲಾಗಿತ್ತು. ಆದರೆ, ಟರ‍್ಕಿಶ್ ನುಡಿಯಲ್ಲಿ ಸ್ವರಗಳು ಹೆಚ್ಚಿದ್ದು, ವ್ಯಂಜನಗಳು ಕಮ್ಮಿಯಿದ್ದುದರಿಂದ ಅರೇಬಿಕ್ ಲಿಪಿಯು ಟರ‍್ಕಿಶ್ ನುಡಿಗೆ ಸರಿಹೊಂದುತ್ತಿರಲಿಲ್ಲ. ಟರ‍್ಕಿಶ್ ನುಡಿಯಲ್ಲಿನ ಹಲವಾರು ಸ್ವರಗಳಿಗೆ ನೇರವಾದ ಬರಿಗೆಗಳೇ ಇರಲಿಲ್ಲ. 1900ನೇ ಇಸವಿಯ ಹೊತ್ತಿಗೆ ಅಚ್ಚುಮಣೆಗಳು ಬಳಕೆಗೆ ಬಂದಮೇಲೆ, ಅರೇಬಿಕ್ ಲಿಪಿಯ ತೊಡಕು ದೊಡ್ಡದಾಗಿ ಕಾಣಿಸಿಕೊಳ್ಳತೊಡಗಿತು.

ಲಿಪಿ ಬದಲಾವಣೆಗಾಗಿ ಕೂಗು

1862ರಲ್ಲಿ ಮುನುಪ್ ಪಾಶಾ ಎಂಬುವರು ಟರ‍್ಕಿಶ್ ಲಿಪಿಯ ಸುದಾರಣೆಯಾಗಬೇಕು ಎಂದು ಹೇಳಿದ್ದರು ಎನ್ನಲಾಗುತ್ತದೆ. 1900ರ ಹೊತ್ತಿಗೆ ಈ ಕೂಗಿಗೆ ಇನ್ನೂ ಹಲವರು ದನಿ ಸೇರಿಸಿದರು. 1923ರಲ್ಲಿ ಟರ‍್ಕಿ ದೇಶದ ಮೊದಲ ಎಕನಾಮಿಕ್ ಕಾಂಗ್ರೆಸ್‍ನಲ್ಲಿ ಲಿಪಿ ಬದಲಾವಣೆಯ ಚರ‍್ಚೆ ನಡೆಯಿತು. ಆ ಬಳಿಕ ಹುಟ್ಟಿಕೊಂಡ ಚರ‍್ಚೆಯು ಹಲವು ವರುಶಗಳೇ ನಡೆಯಿತು. ಮುಸ್ಲಿಮ್ ಸಂಪ್ರದಾಯವಾದಿಗಳು ಲಿಪಿ ಬದಲಾವಣೆಯನ್ನು ಗಟ್ಟಿಯಾಗಿ ವಿರೋದಿಸಿದರು. ರೋಮನ್ ಲಿಪಿಯನ್ನು ಅಳವಡಿಸಿಕೊಳ್ಳುವುದು, ಟರ‍್ಕಿಯ ಜನರನ್ನು ಇಸ್ಲಾಂ ಸಂಪ್ರದಾಯದಿಂದ ದೂರ ಮಾಡಿ ಹೊಸದೊಂದು ಸಂಸ್ಕ್ರುತಿಯತ್ತ ಹೊರಳಿಸುವುದು ಎಂಬ ಅಂಜಿಕೆ ಅವರದಾಗಿತ್ತು. ರೋಮನ್ ಲಿಪಿಯು ಟರ‍್ಕಿಶ್ ನುಡಿಗೆ ಹೊಂದಿಕೊಳ್ಳುವುದಿಲ್ಲ ಎಂಬ ವಾದ ಇನ್ನು ಕೆಲವರದಾಗಿದ್ದರೆ, ಇರುವ ಅರೇಬಿಕ್ ಲಿಪಿಯನ್ನಿಟ್ಟುಕೊಂಡೇ ಇನ್ನೊಂದಿಶ್ಟು ಬರಿಗೆಗಳನ್ನು ಸೇರಿಸುವುದೊಳಿತು ಎಂಬ ವಾದವನ್ನು ಕೆಲವರು ಮುಂದಿಟ್ಟರು.

ರೋಮನ್ ಲಿಪಿಯ ಅಳವಡಿಕೆ

ಟರ‍್ಕಿಶ್ ರಿಪಬ್ಲಿಕ್ಕನ್ನು ಹುಟ್ಟು ಹಾಕಿದ್ದ ಮುಸ್ತಾಪಾ ಕೇಮಲ್ ಅಟಾಟುರ‍್ಕ್ ಎಂಬುವರು 1929ರಲ್ಲಿ, ರೋಮನ್ ಲಿಪಿಯ ನೆಲೆಯ ಮೇಲೆ, 29 ಬರಿಗೆಗಳಿರುವ ಲಿಪಿಯೊಂದನ್ನು ಟರ‍್ಕಿಶ್ ನುಡಿಗೆ ಅಳವಡಿಸಿದರು. ಆಡಳಿತಕ್ಕೆ ಸಂಬಂದಪಟ್ಟ ಎಲ್ಲಾ ಕಡತಗಳಲ್ಲೂ ಈ ಹೊಸಲಿಪಿಯನ್ನೇ ಬಳಸಬೇಕು ಎಂಬ ಆದೇಶ ಹೊರಡಿಸಲಾಯಿತು. ಸಂಪ್ರದಾಯವಾದಿಗಳ ಹೆಚ್ಚುಮಟ್ಟದ ವಿರೋದದ ನಡುವೆಯೂ ಅಂದಿನ ಸರ‍್ಕಾರವು ಈ ಕೆಲಸವನ್ನು ಕಯ್ಗೆತ್ತಿಕೊಂಡಿತ್ತು. ಟರ‍್ಕಿಯ ಜನರೆಲ್ಲರನ್ನು ಬರಿಗೆ-ಬಲ್ಲವರನ್ನಾಗಿ (Literates) ಮಾಡಲು ಈ ಹೆಜ್ಜೆ ಇಡಲೇಬೇಕಾಗಿದೆ ಎಂದು ಅಟಾಟುರ‍್ಕ್ ಅವರು ಹೇಳುತ್ತಿದ್ದರೆನ್ನಲಾಗಿದೆ. ಲಿಪಿ ಬದಲಾವಣೆಯ ಬಳಿಕ ಟರ‍್ಕಿಯಲ್ಲಿ ಬರಿಗೆ-ಬಲ್ಲವರ ಎಣಿಕೆ 10%ನಿಂದಾ 90%ವರೆಗೆ ಮುಟ್ಟಿದೆ. ಹೀಗಾಗಲು ಲಿಪಿ ಬದಲಾವಣೆಯ ಜೊತೆಗೇ, ಕಲಿಕೆಯನ್ನು ಹಬ್ಬಿಸುವ ಸಲುವಾಗಿ ಸರ‍್ಕಾರ ಕಯ್ಗೊಂಡ ಇತರೆ ಕೆಲಸಗಳೂ ಕಾರಣವೆನ್ನಲಾಗುತ್ತದೆ. ಇಂದಿಗೆ ಟರ‍್ಕಿಯು ಯುರೋಪಿಯನ್ ಒಕ್ಕೂಟ ಸೇರಲು ಸಜ್ಜಾಗುತ್ತಿದ್ದು, ಮುಂದುವರೆಯುತ್ತಿರುವ ನಾಡು ಎಂದು ಕರೆಯಿಸಿಕೊಳ್ಳುತ್ತಿದೆ.

(ಮಾಹಿತಿ ಸೆಲೆ: en.wikipedia.org)
(ಚಿತ್ರ ಸೆಲೆ: freepublic.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 19/12/2014

    […] ( ಮಾಹಿತಿ ಸೆಲೆ: english.al-akhbar.com, wiki-turkey, wiki-ottoman-turkish, wiki-turkish-language, ಟರ‍್ಕಿ:ಲಿಪಿ ಬದಲಾವಣೆ ) […]

ಅನಿಸಿಕೆ ಬರೆಯಿರಿ: