ನಾನೇ ಪ್ರೆಶರ್ ಕುಕ್ಕರ್

pressure-cooker

ನಲ್ಮೆಯ ಪುಟಾಣಿಗಳೇ, ನಿಮಗೆ ಕನ್ನಡ ನಾಡಹಬ್ಬದ ನಲವರಿಕೆಗಳು. ನನ್ನ ಹೆಸರು ಪ್ರೆಶರ್ ಕುಕ್ಕರ್. ಕನ್ನಡದಲ್ಲಿ ನನ್ನನ್ನು ಒತ್ತು ಬೇಯುಕ ಅಂತಾ ಕರೆಯಬಹುದು. ನಿಮ್ಮೆಲ್ಲರ ಅಡುಗೆಮನೆಯಲ್ಲಿ ನಾನಿರುವುದು ನಿಮಗೆ ತಿಳಿದೇ ಇದೆ ಆದರೆ ನನ್ನ ಕೆಲಸದ ಅರಿಮೆಯ ಹಿನ್ನೆಲೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ ಹಾಗಾಗಿ ನನ್ನ ಕುರಿತು ನಿಮಗೆ ಇಲ್ಲಿ ತಿಳಿಸಬೇಕೆಂದಿರುವೆ.

ನಾನು ಕೆಲಸ ಮಾಡುವ ಬಗೆಯನ್ನು ತಿಳಿಸುವ ಮೊದಲು ನಾವು ಬೆಳೆದುಬಂದ ಹಿನ್ನಲೆಯನ್ನು ಒಂಚೂರು ಹೇಳಿ ಬಿಡ್ತೀನಿ. ನಾವು, ಒತ್ತು ಬೇಯುಕರು ಹುಟ್ಟುವ ಮುಂಚೆ ಸಾಮಾನ್ಯವಾಗಿ ತೆರೆದ ಪಾತ್ರೆಗಳಲ್ಲಿ ಇಲ್ಲವೇ ಪಾತ್ರೆಗಳ ಮೇಲೆ ಏನಾದರೂ ಮುಚ್ಚಿ ಅಡುಗೆಯನ್ನು ಬೇಯಿಸುತ್ತಿದ್ದರು ಹಾಗೇ ಮಾಡುವುದರಿಂದ ಉರುವಲು ಹಾಳಾಗುತ್ತಿತ್ತು ಮತ್ತು ಇದಕ್ಕೆ ಹೆಚ್ಚು ಹೊತ್ತೂ ಹಿಡಿಯುತ್ತಿತ್ತು.

1679 ರಲ್ಲಿ ಇದರೆಡೆಗೆ ಪ್ರೆಂಚ್ ನಾಡಿನವರಾದ ಡೆನ್ನಿಸ್ ಪಾಪಿನ್ (Denis Papin) ಎಂಬುವರ ಗಮನ ಹರಿಯಿತು. ಅವರು ಮಾಡಿದ ಕೆಲಸದಿಂದಾಗಿಯೇ ನಾವು ಹುಟ್ಟಿಕೊಂಡೆವು. 1864 ರಲ್ಲಿ ಜರ‍್ಮನಿ ನಾಡಿನ ಜಾರ‍್ಜ ಗುಟ್‍ಬ್ರಾಡ್ (Georg Gutbrod) ಅವರು ಬೀಡುಕಬ್ಬಿಣದಿಂದ ನಮ್ಮನ್ನು ಮಾಡಿ ಎಲ್ಲರಿಗೂ ದೊರೆಯುವಂತೆ ಮಾಡಿದರು.

ಸರಿ. ಇದು ನಮ್ಮ ಹಿನ್ನೆಲೆಯಾಯಿತು. ಈಗ ನಾನು ಕೆಲಸ ಮಾಡುವ ಬಗೆಯನ್ನು ತಿಳಿದುಕೊಳ್ಳೋಣ. ನಿಮಗೆ ಕಯ್, ಕಾಲು, ಹೊಟ್ಟೆ ಇರುವಂತೆ ನನಗೂ ಇವೆ. ಹೊಟ್ಟೆ, ತಲೆ, ಕಯ್ ಇವು ನನ್ನ ಮುಕ್ಯ ಅಂಗಗಳು. ಇದರ ಜತೆಗೆ ನನ್ನ ತಲೆಯ ಮೇಲೊಂದು ಸಿಳ್ಳು (whistle) ಮತ್ತು ಒಂದು ಕಾಪು ತೆರ‍್ಪು (safety valve) ಇರುತ್ತವೆ.

ನನ್ನ ಹೊಟ್ಟೆಯ ಒಳಗಡೆ ಬೇಯಿಸಬೇಕಾದ ದಿನಸಿಗಳನ್ನು ನೀರಿನೊಂದಿಗೆ ಪಾತ್ರೆಯಲ್ಲಿ ಇಡಬೇಕು ಆಮೇಲೆ ನನ್ನ ತಲೆಯಂತಿರುವ ಮುಚ್ಚಳವನ್ನು ಮುಚ್ಚಬೇಕು. ನನ್ನೊಳಗಿಂದ ಬಿಸಿ ಆವಿ ಹೊರಹೋಗದಂತೆ ಹೊಟ್ಟೆ ಮತ್ತು ತಲೆಯ ನಡುವೆ, ರಬ್ಬರಿನ ‘ಸೋರುತಡೆ’ಯನ್ನು (gasket) ಅಳವಡಿಸಲಾಗಿರುತ್ತದೆ.

Cooker_Parts

ಹೀಗೆ ಅಣಿಗೊಂಡ ನನ್ನನ್ನು ಒಲೆಯ ಮೇಲೆ ಬೇಯಿಸಲು ಇಟ್ಟಾಗ ಉರುವಲಿನಿಂದ ಪಡೆಯುವ ಬಿಸುಪು ನನ್ನೊಳಗಿರುವ ನೀರನ್ನು ಕುದಿಸಲು ತೊಡಗುತ್ತದೆ. ನೀರು ಹೊರಗಿನ ಒತ್ತಡದಲ್ಲಿ 100 ಡಿ.ಸೆ. ಬಿಸುಪಿಗೆ ಆವಿಯಾದರೆ ನನ್ನೊಳಗಿನ ಹೆಚ್ಚಿನ ಒತ್ತಡದಿಂದಾಗಿ (ಸುಮಾರು 1.03 ಬಾರ್ ಹೆಚ್ಚು ಒತ್ತಡ) ನೀರು ಕುದ್ದು ಆವಿಯಾಗಲು 121 ಡಿ.ಸೆ. ಬಿಸುಪು ಇರಬೇಕು. ಆವಿಯಾದ ನೀರು ಹೆಚ್ಚಿನ ಒತ್ತಡ ಉಂಟುಮಾಡಿ ದಿನಸಿಗಳಿಗೆ ತಾಗಿ ಅವುಗಳನ್ನು ಬೇಗನೇ ಬೇಯಿಸಲು ತೊಡಗುತ್ತದೆ.

ಒತ್ತಡ ಒಂದು ಮಿತಿಯನ್ನು ದಾಟಿದ ಮೇಲೆ ನನ್ನ ತಲೆಯ ಮೇಲೆ ಇರುವ ಸಿಳ್ಳು ತೆರೆದುಕೊಳ್ಳುತ್ತದೆ. (‘ಪೀಪಿ’ ಸದ್ದು ಈಗ ನಿಮಗೆ ನೆನಪಾಗಿರಬಹುದು) ತೆರೆದ ಸಿಳ್ಳಿನಿಂದ ಆವಿ ಹೊರಹೋಗುತ್ತದೆ. ಹೀಗೆ ಹೆಚ್ಚು ಒತ್ತಡ ಮತ್ತು ಹೆಚ್ಚು ಬಿಸುಪಿನಿಂದಾಗಿ ನನ್ನೊಳಗಿಟ್ಟ ದಿನಸಿಗಳು ಬೇಗನೇ ಬೇಯುತ್ತವೆ.

ಒತ್ತಡದ ಮಿತಿ ದಾಟಿದಾಗ ಸಿಳ್ಳಿನಿಂದ ಹೊರಬರಬೇಕಾಗಿದ್ದ ಆವಿಗೆ ಅಡ್ಡಿಯಾಗಿ ಸಿಳ್ಳಿನಲ್ಲಿ ಏನಾದರೂ ಸಿಲುಕಿದ್ದು, ಹೆಚ್ಚೊತ್ತಡದ ಆವಿ ಹೊರಹೋಗದಂತಿದ್ದರೆ ನನಗೆ ಮತ್ತು ನಿಮಗೆ ಕುತ್ತು ಎದುರಾದಂತೆಯೇ! ಇದನ್ನು ತಡೆಗಟ್ಟಲೆಂದೇ ಕಾಪು ತೆರ‍್ಪನ್ನು (safety valve) ನನ್ನ ತಲೆಯಲ್ಲಿ ಅಳವಡಿಸಿರುತ್ತಾರೆ.

ಸಿಳ್ಳು ಕೆಲಸ ಮಾಡದಿದ್ದಾಗ ಕಾಪು ತೆರ‍್ಪು ತಂತಾನೇ ತೆರೆದುಕೊಂಡು ಹೆಚ್ಚೊತ್ತಡದ ಆವಿಯನ್ನು ಹೊರಹಾಕುತ್ತದೆ. ಇದನ್ನು ನೀವು ಮತ್ತೊಮ್ಮೆ ಗಮನಿಸಬೇಕು ನನ್ನ ತಲೆಯ ಮೇಲಿರುವ ಈ ಕಾಪು ತೆರ‍್ಪು ಸರಿಯಾಗಿದೆಯೇ ಎಂದು ನೋಡುತ್ತಾ ಇರಬೇಕು. ಅದರಲ್ಲಿ ಏನಾದರೂ ಕೊರತೆ ಕಂಡುಬಂದರೆ ಹೊಸದೊಂದನ್ನು ಹಾಕಿಸಬೇಕು.

ಇಶ್ಟನ್ನು ನಾನು ನಿಮ್ಮೊಡನೆ ಹಂಚಿಕೊಳ್ಳಲು ಇಲ್ಲಿಗೆ ಬಂದಿದ್ದೆ. ನನ್ನ ಕುರಿತು ಇನ್ನೇನಾದರೂ ಕೇಳ್ವಿಗಳಿದ್ದರೆ ದಯವಿಟ್ಟು ಈ ಪುಟದ ಕೆಳಗಡೆ ಬರೆಯಿರಿ. ನಾನು ಮತ್ತೊಮ್ಮೆ ಇಲ್ಲಿಗೆ ಬಂದು ಅವುಗಳಿಗೆ ಮಾರ‍್ನುಡಿಯುವೆ. ನಿಮಗೆಲ್ಲರಿಗೂ ಒಳಿತಾಗಲಿ.

(ತಿಟ್ಟದ ಸೆಲೆ: www.hawkinscookers.com

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. udupavinay says:

    ಇಡ್ಲಿ ಬೇಯಿಸೋ ಪಾತ್ರೆಗೆ ಅಟ್ಟ ಅಂತಿದ್ವಿ. ಒತ್ತಡದಟ್ಟ ಅಂತಲೂ ಹೇಳಬಹುದು.

ಅನಿಸಿಕೆ ಬರೆಯಿರಿ: