‘ಜೊತೆಯಲಿ’ ಶಂಕರ್ ನಾಗ್ ನೆನಪಲಿ…

ಪ್ರಶಾಂತ್ ಇಗ್ನೇಶಿಯಸ್.

ಇಂದು ಶಂಕರ್ ನಾಗ್ ಜನ್ಮ ದಿನ. ಇಂದಿಗೂ ಶಂಕರ್ ನಾಗರು ತಾವು ಅಬಿನಯಿಸಿದ, ನಿರ‍್ದೇಶಿಸಿದ ಚಿತ್ರಗಳಿಂದ ಅದೆಶ್ಟು ಪರಿಚಿತರೋ ಅವರ ಕನಸು ಹಾಗೂ ಕ್ರಿಯಾಶೀಲತೆಯಿಂದಲೂ ಅಶ್ಟೇ ಅಜರಾಮರರು. ಕಣ್ಮರೆಯಾಗಿ ಎರಡು ದಶಕಗಳೇ ಕಳೆದಿದ್ದರೂ ಅವರ ಕ್ರಿಯಾಶೀಲ ಕನಸುಗಳೇ ಅವರ ನೆನಪನ್ನು ಇನ್ನೂ ಹಚ್ಚ ಹಸಿರಾಗಿಸಿವೆ. ‘ಮಾಲ್ಗುಡಿ ಡೇಸ್’ನಂತಹ ದಾರವಾಹಿಯಿಂದ ದೇಶ ವ್ಯಾಪ್ತಿ ಪ್ರಸಿದ್ದಿ, ಮನ್ನಣೆ ದೊರಕಿದರೂ ಕನ್ನಡಿಗರ ಪಾಲಿಗೆ ಗಗನ ಕುಸುಮವಾಗದೆ, ಕನ್ನಡ ಚಿತ್ರರಂಗವನ್ನೇ, ರಂಗಬೂಮಿಯನ್ನೇ ಕರ‍್ಮ ಬೂಮಿಯನ್ನಾಗಿಸಿಕೊಂಡು ಅಪಾರ ಬರವಸೆ ಮೂಡಿಸುತ್ತಿರುವಾಗಲೇ ಮಿಂಚಿನಂತೆ ಮರೆಯಾದ ಶಂಕರ್ ನಾಗ್ ಕನ್ನಡಿಗರ ಪಾಲಿಗೆ ಎಂದಿಗೂ ಮುಗಿಯದ ಎದೆಯಲ್ಲಿನ ಸಣ್ಣ ನೋವು. 

ಹಾಗೇ ನೋಡಿದರೆ ಶಂಕರ್ ನಾಗರನ್ನು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡುವಲ್ಲಿ ರಂಗ ಶಂಕರದಂತೆ ನಮ್ಮ ಆಟೋ ಡ್ರಯ್ವರ್ ಬಾಂದವರ ಪಾತ್ರವೂ ದೊಡ್ಡದು. ಇಂದಿಗೂ ಯಾವುದಾದರೂ ಆಟೋದ ಹಿಂದೆಯೋ ಇಲ್ಲವೇ ನಿಲ್ದಾಣದ ಮುಂದಿನ ಪಲಕದಲ್ಲೋ ಶಂಕರ್ ನಾಗ್ ಜೀವಂತ. ಆಟೋ ರಾಜ ಎಂಬ ಚಿತ್ರದಲ್ಲಿನ ನಾಯಕ ಎಂಬ ಅಬಿಮಾನವನ್ನು ಮೀರಿದ ಯಾವುದೋ ಒಂದು ಪ್ರೀತಿಯ ಬಂದ ಅವರಿಬ್ಬರನ್ನು ಇಂದಿಗೂ ಕೂಡಿಸಿ ಮುನ್ನಡೆಸಿದೆ.

ಕನ್ನಡ ಚಿತ್ರರಂಗದಲ್ಲಿ ಶಂಕರನಾಗರಿಗೆ ಮೊದಲಿನಿಂದಲೂ ಒಂದು ಒರಟಾದ ಇಮೇಜ್ ಸೇರಿಕೊಂಡು ಬಂದಿತು ಎಂದರೆ ತಪ್ಪಗಲಾರದೇನೋ. ನಟಿಸಿದ ಮೊದಲ ಚಿತ್ರದ ಪಾತ್ರವೇ ಅತ್ಯಂತ ಒರಟಾದ ಪಾತ್ರವಾಗಿದ್ದರ ಜೊತೆಗೆ ಅವರ ಹಾವ ಬಾವ, ಕರಾಟೆ ಕಿಂಗ್ ಎಂಬ ಬಿರುದು, ದೊರಕಿದ ಪಾತ್ರಗಳು, ಮುಕ ಮೇಲಿನ ಆ ಗಡ್ಡ, ಸದಾ ಗಡಿಬಿಡಿಯಲ್ಲಿ ಓಡಾಡುತ್ತಿದ್ದ ಪರಿ ಎಲ್ಲವೂ ಆ ನಂಬಿಕೆಗೆ ಪುಶ್ಟಿ ನೀಡಿದ್ದವು. ಆದರೆ ಆ ಒಂದು ಒರಟು ವ್ಯಕ್ತಿತ್ವದ ಹಿಂದೆ ಆತ್ಮೀಯತೆ, ಅಪಾರ ಮಮತೆ, ಮತ್ತು ಅಗಾದ ಪ್ರೀತಿ ತುಂಬಿದ ಶಂಕರನನ್ನು ಬಲ್ಲವರು ನೆನೆಯುತ್ತಾರೆ.

ಇದೆಲ್ಲದರ ನಡುವೆಯೇ ಈ ಸಂದರ್‍ಬದಲ್ಲಿ ಹೆಚ್ಚಾಗಿ ನೆನಪಾಗುವುದು ಶಂಕರ್ ನಾಗರ ಸಂಗೀತ ಪ್ರೇಮ ಹಾಗೂ ಸಂಗೀತದ ಅರಿವು . ಹಾಗೆಯೇ ಗಮನಿಸುತ್ತಾ ಹೋದರೆ ಇಶ್ಟು ವರ‍್ಶಗಳಲ್ಲಿ ಶಂಕರರ ಸಂಗೀತದ ನಂಟಿನ ಬಗ್ಗೆ ಚರ‍್ಚೆಯಾದದ್ದು ಕಡಿಮೆಯೇ. ಶಂಕರ್ ನಿರ‍್ದೇಶಿಸಿದ ಚಿತ್ರಗಳತ್ತ ಒಂದು ಬಾರಿ ಕಣ್ಣಾಡಿಸಿದರೆ ಅವರ ಸಂಗಿತ ಪ್ರೇಮದ ಬಗ್ಗೆ ಸ್ಪಶ್ಟ ಚಿತ್ರ ದೊರಕುತ್ತದೆ. ಗೀತಾ ಚಿತ್ರದ ಹಾಡುಗಳಂತೂ ಮನೆ ಮತು. ‘ನೋಡಿ ಸ್ವಾಮಿ..’ ಚಿತ್ರದಲ್ಲಿ ಇತರ ಗೀತೆಗಳೊಂದಿಗೆ ‘ಬಾಗ್ಯದ ಲಕ್ಶ್ಮಿ ಬಾರಮ್ಮ ಗೀತೆ’ ಬಳಕೆಯಾಗಿರುವ ರೀತಿ, ಆಕ್ಸಿಡೆಂಟ್ ಚಿತ್ರದಲ್ಲಿ ಸ್ವತಹ ನಟರುಗಳೇ ಹಾಡಿರುವ ಬೆಳ್ಳಿ ಚುಕ್ಕಿ ಗೀತೆ, ಒಂದು ಮುತ್ತಿನ ಕತೆ ಚಿತ್ರದ ಹಾಡುಗಳಲ್ಲಿನ ದ್ವನಿ ಗ್ರಹಣ, ಮಾಲ್ಗುಡಿ ಡೇಸ್‍ನ ಶೀರ್‍ಶಿಕೆ ಗೀತೆ, ಇವೆಲ್ಲವೂ ಅವರ ಸಂಗೀತ ಪ್ರೇಮಕ್ಕೆ ಉದಾಹರಣೆ. ಸಂಕೇತ್ ಸ್ಟುಡಿಯೋ ಪ್ರಾರಂಬಿಸಲು ಪಟ್ಟ ಶ್ರಮದ ಹಿಂದೆಯೂ ಸಂಗೀತವೇ ಮುಕ್ಯ ಪ್ರೇರಣೆ.

ಇಂದಿಗೂ ಯಾವುದೇ ಕನ್ನಡದ ಚಿತ್ರ ಸಂಗೀತ ಗೋಶ್ಟಿಯಲ್ಲಿ ಅಣ್ಣಾವ್ರ ‘ಹುಟ್ಟಿದರೆ ಕನ್ನಡ ನಾಡಲ್ಲಿ’ ಅತವಾ ‘ಕುಲದಲ್ಲಿ ಕೀಳಾವುದೋ ಹುಚ್ಚಪ್ಪ’ನಶ್ಟೇ ಜನಪ್ರಿಯತೆ ಗೀತಾ ಚಿತ್ರದ ‘ಜೊತೆಯಲಿ ಜೊತೆ ಜೊತೆಯಲ್ಲಿ’ ಹಾಡಿಗಿದೆ. ಸಾಮಾನ್ಯವಾಗಿ ರಸ್ತೆಗಳಲ್ಲಿ ನಡೆಯುವ ಆರ‍್ಕೇಶ್ಟ್ರಾಗಳಲ್ಲಿ ಕುಣಿತಕ್ಕೆ ತಕ್ಕ ಹಾಡುಗಳಿಗೇ ಹೆಚ್ಚು ಬೇಡಿಕೆ. ಆದರೆ ಅಲ್ಲಿ ಕೂಡ “ಶಂಕ್ರಣ್ಣಂದು ಜೊತೆಯಲ್ಲಿ ಹಾಕ್ರಣ್ಣೋ” ಅನ್ನೋ ಕೂಗು ಕತ್ತಲಲ್ಲಿ ಕೇಳಿ ಬರುತ್ತದೆ. ಇನ್ನೂ ಮದುವೆ ಸಮಾರಂಬಗಳಲ್ಲಿ ಗಾಯಕರಿಗೆ ರವಾನೆ ಆಗುವ ಸಣ್ಣ ಚೀಟಿಗಳಲ್ಲಿ ಬಹುತೇಕರು ಕೇಳುವುದು ‘ಜೊತೆಯಲಿ’ ಹಾಡನ್ನೇ.

ಈ ‘ಜೊತೆಯಲಿ’ ಹಾಡಿಗೂ ಶಂಕರ್ ನಾಗರಿಗೂ ಒಂದಶ್ಟು ಸಾಮ್ಯತೆ ಇದೆ. ಇಳಯರಾಜ ಬತ್ತಳಿಕೆಯಿಂದ ಬಂದ ಈ ಗೀತೆ ಬಿಡುಗಡೆ ಆದ ಕಾಲಕ್ಕೆ ತನ್ನ ಸಮಯಕ್ಕಿಂತ ತುಸು ಮುಂದೆ ಇತ್ತೇನೋ. ಏಕೆಂದರೆ ಅದು ಆ ಸಮಯಕ್ಕಿಂತ ಹೆಚ್ಚು ಜನಪ್ರಿಯವಾಗಿದ್ದು ನಂತರದ ದಿನಗಳಲ್ಲೇ. ಶಂಕರರ ಮವ್‍ಲ್ಯವನ್ನು ಕೂಡ ನಮ್ಮ ಚಿತ್ರರಂಗ ಹಾಗೂ ಜನರು, ಅವರು ಮರೆಯಾದ ಮೇಲೆಯೇ ಹೆಚ್ಚು ಅರಿತುಕೊಂಡರು ಎಂದರೆ ತಪ್ಪಾಗಲಾರದೇನೋ. ಈ ಹಾಡನ್ನು ಕೇಳುತ್ತ ಕೇಳುತ್ತ ಹೋದಂತೆ ಅದು ಇನ್ನಶ್ಟು ಇಶ್ಟವಾಗುತ್ತ ಹೊಗುತ್ತದೆ. ಶಂಕರ್ ಹಾಗೂ ಅವರ ಕನಸುಗಳ ಬಗ್ಗೆ ತಿಳಿಯುತ್ತಾ ಹೋದಂತೆ ಅವರ ಮೇಲಿನ ಅಬಿಮಾನ ಹಾಗೂ ಪ್ರೀತಿ ಸಹ ಹೆಚ್ಚುತ್ತಾ ಹೋಗುತ್ತದೆ. ಒಂದು ಸುಶ್ರಾವ್ಯ ಗೀತೆ ಮುಗಿದು ಹೋದರೂ ಅದು ಎದೆಯಲ್ಲಿ ಉಳಿಸುವ ಗುನುಗು ಸುಲಬವಾಗಿ ಮರೆಯಲಾಗದು ಎನ್ನುವುದಕ್ಕೆ, ಇನ್ನಶ್ಟು ಮುಂದುವರಿಯಬೇಕಿತ್ತು ಎನ್ನುವ ಬಾವಕ್ಕೆ ಈ ಗೀತೆ ಉದಾಹರಣೆಯಾದರೆ, ಆ ಬಾವ ಶಂಕರರ ಬಗ್ಗೆಯೂ ಮೂಡುತ್ತದೆ. ಅವರು ಇನ್ನಶ್ಟು ವರ‍್ಶಗಳು ಇರಬೇಕಿತ್ತು ಎನ್ನುವ ಬಾವಕ್ಕೆ ಕೊನೆಯೇ ಇಲ್ಲ. ಅದೆಶ್ಟೋ ಗೀತೆಗಳು ಬಂದು ಹೋಗಿದ್ದರೂ ಜೊತೆಯಲಿ ಗೀತೆಗೆ ತನ್ನದೇ ಸ್ತಾನವಿರುವಂತೆ ಕನ್ನಡಿಗರ ಮನದಲ್ಲಿ ಶಂಕರರ ಸ್ತಾನ ವಿಶಿಶ್ಟವಾದುದು.

ಶಂಕರ್ ಕನ್ನಡ ಚಿತ್ರರಂಗದಲ್ಲಿ ಇದ್ದದ್ದು ಹತ್ತು ಹನ್ನೆರೆಡು ವರ‍್ಶಗಳ ಕಾಲ ಮಾತ್ರವಿರಬಹುದು. ಆದರೂ ಮರೆಯಾದ ಇಪ್ಪತ್ತು ವರ‍್ಶಗಳಾದರೂ ಇಂದಿಗೂ ನೆನಪಿನ ಚಾಲ್ತಿಯಲ್ಲಿದ್ದಾರೆ ಎನ್ನುವುದು ನಿಜಕ್ಕೂ ಆಶ್ಚರ‍್ಯದ, ಸಂತೋಶದ ಸಂಗತಿ. ಈ ರೀತಿಯ ನೆನಪಿನ ಗವ್ರವ ಪ್ರೀತಿ ಶಂಕರ್ ನಾಗರಂತಹ ಆತ್ಮೀಯ, ಕ್ರಿಯಾಶೀಲ ವ್ಯಕ್ತಿತ್ವಗಳಿಗೆ ಮಾತ್ರ ಸಾದ್ಯವೇನೋ.

(ಚಿತ್ರ ಸೆಲೆ: rajuhiremath.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications