ಮಿಂಬಲೆಯಲಿ ಮಿನುಗಲಿದೆ ಕನ್ನಡ

– ರತೀಶ ರತ್ನಾಕರ.

facebook2

ಇಂಗ್ಲೀಶಿನಲ್ಲಿ ಒಂದು ಮಾತಿದೆ

Today’s exciting needs become tomorrow’s basic needs.

ಹವ್ದು, ಒಂದು ಕಾಲದಲ್ಲಿ ಟಿವಿ ಹಾಗೂ ಅಲೆಯುಲಿಯಂತಹ ವಸ್ತುಗಳು ಕೇವಲ ಸುಕದ ವಸ್ತುಗಳಾಗಿ ಕಣ್ಣಿಗೆ ಕಾಣುತ್ತಿದ್ದವು, ಆದರೆ ಇಂದು ಅವು ನಮ್ಮ ಬಾಳಿನ ಬಹು ಮುಕ್ಯ ಅಗತ್ಯತೆಗಳಾಗಿ ಹೋಗಿವೆ. ಹಾಗೆಯೇ ಮಿಂಬಲೆ (Internet) ಎಂಬುದು ಕೂಡ, ಹಲವು ವರುಶಗಳ ಕೆಳಗೆ ಕೇವಲ ಎಂಜಿನಿಯರುಗಳು ಇಲ್ಲವೇ ಹೆಚ್ಚು ತಿಳಿದವರು ಮಾತ್ರ ಬಳಕೆ ಮಾಡುತ್ತಿದ್ದ ಕಾಲವಿತ್ತು. ಬೆಳೆಯುತ್ತಿರುವ ಮಾರುಕಟ್ಟೆ ಹಾಗೂ ಗ್ರಾಹಕನ ಬೇಡಿಕೆಗಳಿಂದ ಇಂದು ಮಿಂಬಲೆಯ ಬಳಕೆ ಕೂಡ ಮಕ್ಕಳಿಂದ ಹಿಡಿದು ಹಿರಿಯರವರೆಗೂ, ಪಟ್ಟಣದವರಿಂದ ಹಿಡಿದು ಹಳ್ಳಿಯವರವರೆಗೂ ತಲುಪಿದೆ.

ಕಯ್ಗೆಟುಕುವ ದರದಲ್ಲಿ ಹೊಸದಾಗಿ ಸಿಗುತ್ತಿರುವ ಚೂಟಿಯುಲಿಗಳು, ಎಣ್ಣುಕಗಳು ಹಾಗೂ ಮಿಂಬಲೆಯ ಸೇವೆಗಳು ಹೆಚ್ಚು ಮಂದಿಯನ್ನು ಸೆಳೆದಿವೆ. ಪೇಸ್‍ಬುಕ್ , ಟ್ವಿಟರ್ ಹಾಗೂ ಗೂಗಲ್ ಪ್ಲಸ್ ನಂತಹ ಕೂಡಣದ ತಾಣಗಳು, ವಿಕಿಪೀಡಿಯಾದಂತಹ ಮಾಹಿತಿ ತಾಣಗಳು, ಜೀಮೆಲ್, ಯಾಹೂದಂತಹ ಮಿಂಚಂಚೆಯ ತಾಣಗಳು, ಯೂಟ್ಯೂಬಿನಂತಹ ಮನರಂಜನೆ ಹಾಗೂ ಮಾಹಿತಿಯ ತಾಣಗಳು, ಹಣಮನೆಯ ಮಿನ್ನೇರದ ಸೇವೆಗಳು (online services) ಹಾಗೂ ಸರಕಾರದ ಮಿನ್ನೇರದ ಮಾಹಿತಿ ಹಾಗೂ ಸೇವೆಗಳು. ಹೀಗೆ ಹತ್ತು ಹಲವು ಸಾದ್ಯತೆಗಳನ್ನು ಹೊತ್ತು ಮಿಂಬಲೆಯು ಬೆಳೆಯುತ್ತಿದೆ.

ಚೂಟಿಯುಲಿಗಳಲ್ಲೂ ಕೂಡ ಮಿಂಬಲೆಯ ಸೇವೆ ಸಿಗುತ್ತಿರುವುದು ಈ ಮಿಂಬಲೆಯ ಬಳಕೆದಾರರು ದಿನೇ ದಿನೇ ಹೆಚ್ಚುತ್ತಿದ್ದಾರೆ. ಮಿಂಬಲೆಯ ಹಲವಾರು ಸೇವೆಗಳು ಹಾಗೂ ಮಾಹಿತಿಗಳು ಮಂದಿಯ ನುಡಿಯಲ್ಲಿ ಸಿಗುತ್ತಿರುವುದು ಕೂಡ ಇದರ ಮಂದಿಮೆಚ್ಚುಗೆಗೆ ಕಾರಣವಾಗಿದೆ.

‘ಇಂಟರ್‍ನೆಟ್ ಅಂಡ್ ಮೊಬಯ್ಲ್ ಅಸೋಸಿಯೇಶನ್ ಅಪ್ ಇಂಡಿಯಾ’ (IAMAI) ನೀಡಿರುವ ಮಾಹಿತಿಯ ಪ್ರಕಾರ ಇಂಡಿಯಾದಲ್ಲಿ ಈಗ 20 ಕೋಟಿಗೂ ಹೆಚ್ಚು ಮಂದಿ ಮಿಂಬಲೆಯ ಬಳಕೆ ಮಾಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಮತ್ತಶ್ಟು ಹೆಚ್ಚು ಮಂದಿ ಮಿಂಬಲೆಯ ಬಳಕೆ ಮಾಡಲಿದ್ದಾರೆ ಎಂದು ಕೂಡ ಅಂದಾಜಿಸಲಾಗಿದೆ. ಕೆಳಗಿನ ಈ ತಿಟ್ಟವನ್ನು ಗಮನಿಸಿ:

mint

ಇದರಲ್ಲಿ ನಾವು ಗಮನಿಸಲೇಬೇಕಾದ ಸುದ್ದಿಯೊಂದಿದೆ, ಹೆಚ್ಚುತ್ತಿರುವ ಮಿಂಬಲೆಯ ಬಳಕೆಯಿಂದ ಮುಂಬರುವ ದಿನಗಳಲ್ಲಿ ಮಂದಿಯ ನುಡಿಯಲ್ಲಿ ಸಿಗುವ ಮಿಂಬಲೆಯ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಹೆಚ್ಚಲಿದೆ. ಎತ್ತುಗೆಗೆ, ಕರ್‍ನಾಟಕದ ಹಳ್ಳಿ ಮತ್ತು ಪಟ್ಟಣಗಳಲ್ಲಿ ಮಿಂಬಲೆ ಬಳಕೆದಾರರು ಹೆಚ್ಚುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಕನ್ನಡದ ಸುದ್ದಿಸೆಲೆಗಳು, ಕನ್ನಡದ ಮಿಂಬಲೆಗಳಿಗೆ ಹಾಗೂ ಕನ್ನಡ ಮಿಂದಾಣಗಳಿಗೆ ಬೇಡಿಕೆ ಹೆಚ್ಚಲಿದೆ.

ಕನ್ನಡಿಗರಿಗೆ ಕನ್ನಡದಲ್ಲೇ ಮಿಂಬಲೆಗಳು ದೊರೆತರೆ ಅದು ಹೆಚ್ಚು ಅನುಕೂಲವಾಗಿರುತ್ತದೆ ಹಾಗಾಗಿ ಅದರ ಬಳಕೆ ತನ್ನಿಂದ ತಾನೆ ಹೆಚ್ಚುತ್ತಾ ಹೋಗುತ್ತದೆ. ಮಿಂಬಲೆಯನ್ನು ಬಳಸಲು ಇಂಗ್ಲೀಶಿನ ಅನಿವಾರ್‍ಯತೆ ಇರದೆ ಕನ್ನಡದಲ್ಲೇ ಬಹಳ ಸುಲಬವಾಗಿ ಇದನ್ನು ಬಳಸಲು ಸಿಗುವುದರಿಂದ, ಕನ್ನಡ ಮಾತ್ರ ಬರುವ ಮಂದಿ ಮತ್ತು ಇಂಗ್ಲೀಶಿನ ಅರಿವು ಅಶ್ಟಾಗಿ ಇರದ ಮಂದಿ ಇದನ್ನು ಬಳಸಲು ತೊಡಗುತ್ತಾರೆ. ಹೀಗೆ, ಮಂದಿಯ ನುಡಿಯಲ್ಲಿಯೇ ಸಿಗುವ ಮಿಂಬಲೆಯು ಮತ್ತಶ್ಟು ಮಂದಿಯನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳಲಿದೆ.

ಇನ್ನು, ಇಶ್ಟೆಲ್ಲಾ ಆಗುತ್ತಿರುವಾಗ ಮಿಂಬಲೆಯಲ್ಲಿ ತಮ್ಮ ವಹಿವಾಟು ಕಟ್ಟಿಕೊಂಡಿರುವ ಕಂಪನಿಗಳು ಸುಮ್ಮನೆ ಕೂಡುವರೇ? ಮಿಂಬಲೆಯಲ್ಲಿ, ಮಂದಿಯ ನುಡಿಯಲ್ಲಿಯೇ ಅವರು ಹೆಚ್ಚು ಹೆಚ್ಚು ಮಂದಿಯನ್ನು ತಲುಪಬಹುದು. ತಮ್ಮ ಸೇವೆಗಳನ್ನು ಮಂದಿ ನುಡಿಯಲ್ಲಿ ಕೊಡುವ ಏರ್‍ಪಾಡನ್ನು ಮಾಡಿಕೊಂಡು ಉದ್ದಿಮೆಯ ಗಳಿಕೆಯನ್ನು ಹೆಚ್ಚಿಸಿಕೊಳ್ಳಬಹುದು. ಈಗಾಗಲೇ ಹಲವು ಕಂಪನಿಗಳ ಮಿಂಬಲೆ ತಾಣಗಳು ಕನ್ನಡದಲ್ಲಿ ಸಿಗುತ್ತಿವೆ, ಇವುಗಳ ಜೊತೆ ಪಯ್ಪೋಟಿಗೆ ಬಿದ್ದು ಕನ್ನಡ ಮಿಂಬಲೆಗಳು ಹೆಚ್ಚಾಗಬಹುದು.

ಹೆಚ್ಚುತ್ತಿರುವ ಮಿಂಬಲೆ ಬಳಕೆದಾರರನ್ನು ತನ್ನತ್ತ ಸೆಳೆಯಲು ಹಾಗೂ ಬಳಕೆದಾರರ ಅನುಕೂಲಕ್ಕಾಗಿ, ಮಂದಿಯ ನುಡಿಯಲ್ಲಿ ಮಿಂಬಲೆಗಳನ್ನು ನೀಡಬೇಕಿದೆ. “ಕೋಳಿ ಮೊದಲೋ ಮೊಟ್ಟೆ ಮೊದಲೋ” ಎಂದು ಕಾಯುತ್ತಾ ಕುಳಿತಿರುವುದು ಬೇಡ. “ಕನ್ನಡಿಗರು ಕನ್ನಡದಲ್ಲಿ ಮಿಂಬಲೆ ಬಳಕೆ ಮಾಡುವುದನ್ನು ಹೆಚ್ಚಿಸಿದ ಮೇಲೆ ಕನ್ನಡ ಮಿಂಬಲೆಯನ್ನು ಕೊಡುವುದೋ? ಇಲ್ಲವೇ ಕನ್ನಡದಲ್ಲಿ ಮಿಂಬಲೆಯನ್ನು ಕೊಟ್ಟು ಬಳಸುವಂತೆ ಮಾಡುವುದೋ?” ಎಂದು ಕಾಯುವ ಕೆಲಸವನ್ನು ಬಿಟ್ಟು ಕಂಪನಿಗಳು ಕನ್ನಡದಲ್ಲಿ ಮಿಂಬಲೆಗಳನ್ನು ಕೊಡಲು ಅನುವಾಗಬಹುದು.

ಮಿಂಬಲೆಯ ಸಾದ್ಯತೆಗಳು ಕನ್ನಡದಲ್ಲಿ ಸಿಗುತ್ತಿವೆ ಹಾಗೂ ಅದನ್ನು ಕನ್ನಡಿಗರು ಬಳಸತೊಡಗಿದ್ದಾರೆ. ಇನ್ನು ಕಂಪನಿಗಳು ಕನ್ನಡದಲ್ಲಿ ತಮ್ಮ ಮಿಂಬಲೆ ಸೇವೆಗಳನ್ನು ಕೊಡುವ ಮೂಲಕ ಮಂದಿಯನ್ನು ತಲುಪುವ ಪ್ರಯತ್ನ ಮಾಡಲಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಕನ್ನಡದ ಸುದ್ದಿಸೆಲೆ ಹಾಗೂ ಕನ್ನಡ ತಾಣಗಳ ಎಣಿಕೆ ಮಿಂಬಲೆಯಲ್ಲಿ ತುಂಬಾ ಹೆಚ್ಚಾಗಬಹುದು.

(ಮಾಹಿತಿ ಮತ್ತು ಚಿತ್ರ ಸೆಲೆ: livemint.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: