ಬುದ್ದನ ಹುಟ್ಟು ತೇದಿ ಇನ್ನೂ ಹಿಂದಕ್ಕೆ?

ಸಂದೀಪ್ ಕಂಬಿ.

buddha

ಬುದ್ದ ಮತದ ಮೂಲ ಮುನಿಯಾದ ಗವ್ತಮ ಬುದ್ದನ ಹುಟ್ಟು ವರುಶ ಮೊದಲಿಂದಲೂ ತೀರಾ ಚರ್‍ಚೆಗೊಳಗಾದ ವಿಶಯ. ಈಗ ರಾಬಿನ್ ಕಾನಿಂಗಂ ಎಂಬುವರ ಮುಂದಾಳುತನದ ಡರ್‍ಹಮ್ ಕಲಿವೀಡಿನ ಅರಿಗರ ತಂಡವೊಂದು ಕಂಡುಹಿಡಿದಿಗಿರುವ ಒಂದು ಹಳೆಯ ಬುದ್ದನ ಹಿಂಬಾಲಕರ ಗುಡಿಯಿಂದಾಗಿ ಈ ಚರ್‍ಚೆ ಮತ್ತೆ ಎದ್ದಿದೆ. ಈಗ ಸಾಮಾನ್ಯವಾಗಿ ಎಲ್ಲರೂ ಒಪ್ಪಿರುವ ಕಾಲಕ್ಕಿಂತ, ಕಡಿಮೆ ಎಂದರೆ, ಸುಮಾರು 100 ವರುಶಗಳಶ್ಟು ಹಿಂದಕ್ಕೆ ಬುದ್ದನು ಹುಟ್ಟಿದ ವರುಶವನ್ನು ಎಳೆದುಕೊಂಡು ಹೋಗುತ್ತದೆ ಈ ಹೊಸ ಕಂಡುಹಿಡಿತ.

ಬುದ್ದನು ಹುಟ್ಟಿದ ತಾಣವೆಂದು ನಂಬಲಾದ ಲುಂಬಿನಿಯ ಗುಡಿಯಲ್ಲಿ ನಡೆಸಿದ ಅಗೆತದಿಂದ ಹಳೆಯ ಒಂದು ಕಟ್ಟಡ ಬೆಳಕಿಗೆ ಬಂದಿದೆ. ಈಗಿರುವ ಇಟ್ಟಿಗೆಯ ಕಟ್ಟಡದ ಕೆಳಗೆ ಹಳೆಯ ಮರದ ಕಟ್ಟಡವೊಂದು ಕಂಡು ಬಂದಿದೆ. ಸರಿಯಾದ ತೇದಿ ಗುರುತಿಸುವ ಚಳಕದರಿಮೆಗಳಿಂದ ಇದರ ಕಾಲ ಕ್ರಿಸ್ತ ಮೊದಲಿನ ಆರನೇ ನೂರ್‍ಮಾನ ಎಂದು ಅರಿಗರು ನಿಗದಿ ಪಡಿಸಿದ್ದಾರೆ. ಈ ವಿಶಯವೇ ಬುದ್ದನ ಹುಟ್ಟು ತೇದಿಯನ್ನು ಮತ್ತೆ ಚರ್‍ಚೆಗೆ ಈಡು ಮಾಡಿದೆ.

ಲುಂಬಿನಿಯ ಈ ತೋಟದಲ್ಲಿ ಶಾಕ್ಯರ ಅರಸಿಯಾದ ಮಾಯಾ ದೇವಿಯು ಬುದ್ದನನ್ನು ಹೆತ್ತಳೆಂಬ ನಂಬಿಕೆಯಿದೆ. ಕ್ರಿಸ್ತ ಮೊದಲು 249ಕ್ಕೆ ಅಶೋಕನು ಬರೆಸಿದ ಕಲ್ಬರಹವೊಂದು, ಲುಂಬಿನಿಯ ಈ ಜಾಗದಲ್ಲಿ ಸಿಗುವುದರಿಂದ ಈ ವಿಶಯವು ತಿಳಿದು ಬರುತ್ತದೆ ಮತ್ತು ಇದು ಆಶ್ಟು ಹೊತ್ತಿಗೆ ಆಗಲೇ ಬುದ್ದನ ಹಿಂಬಾಲಕರ ನೆಲೆಯಾಗಿತ್ತು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಬುದ್ದನು ಹುಟ್ಟು ಪಡೆದ ಜಾಗಕ್ಕಿಂತ ಅವನ ಹುಟ್ಟಿನ ತೇದಿಯ ಬಗ್ಗೆಯೇ ಹಲವು ವಿವಾದಗಳು ಇವೆ.

ಕೆಲವರು ಬುದ್ದನ ಹುಟ್ಟು ಆರನೇ ನೂರ್‍ಮಾನದಲ್ಲೇ ಆಗಿತ್ತೆಂದು ಅಬಿಪ್ರಾಯ ಪಟ್ಟಿದ್ದರೂ ಇನ್ನೂ ಹಲವರು 450ರ ಸುತ್ತ ಮುತ್ತಕ್ಕೆ ತರುತ್ತಾರೆ. ಆದರೆ ಈ ಹೊಸ ಕಂಡುಹಿಡಿತವು ಅಲ್ಲಿ ಆರಾದನೆಯ ನೆಲೆಯೊಂದು ಸುಮಾರು ಕ್ರಿಸ್ತ ಮೊದಲು 550ರಲ್ಲೇ ಇತ್ತೆಂಬುದನ್ನು ಗಟ್ಟಿ ಮಾಡುತ್ತದೆ.

ಕಟ್ಟಡವನ್ನು ಗಮನಿಸಿ ಇದು ಮರವನ್ನು ಪೂಜಿಸುವ ನೆಲೆಯಾಗಿರಬಹುದೆಂಬುದು ಅರಿಗರ ಊಹೆ. ಬುದ್ದನನ್ನು ಹೆರುವಾಗ ಮಾಯಾ ದೇವಿಯು ಒಂದು ಮರವನ್ನು ಗಟ್ಟಿಯಾಗಿ ಹಿಡಿದುಕೊಂಡಳೆಂಬ ನಂಬಿಕೆಯಿದೆ. ಇದು ಅದೇ ಮರದ ಆರಾದನೆಯ ನೆಲೆ ಎಂಬುದು ಸಹಜವಾಗಿ ಊಹಿಸಬಹುದಾದ ಸಂಗತಿ.

ಆದರೆ ಜೂಲಿಯಾ ಶಾ ಎಂಬ ಯೂನಿವರ್‍ಸಿಟಿ ಲಂಡನ್ ಕಾಲೇಜಿನ ಅರಿಗರು ಈಗಲೇ ಈ ಬಗೆಯಲ್ಲಿ ಊಹಾಪೋಹಕ್ಕೆ ಎಡೆಕೊಡಬಾರದೆಂದು ಎಚ್ಚರಿಸಿದ್ದಾರೆ. ಇದು ಮರವನ್ನು ಪೂಜಿಸುವ ನೆಲೆಯೆಂದು ಇನ್ನೂ ಕಚಿತ ಪಡಿಸಿಕೊಳ್ಳಬೇಕು ಮತ್ತು ಹೀಗೆ ಮರದ ಪೂಜೆಯ ಗುಡಿಯೇ ಆಗಿದ್ದಲ್ಲಿ ಅದು ಬುದ್ದನ ಹಿಂಬಾಲಕರ ನೆಲೆಯೇ ಎಂದು ಇನ್ನೂ ಹೆಚ್ಚಿನ ಅರಕೆ ನಡೆದ ಮೇಲೆಯೇ ಗಟ್ಟಿ ಮಾಡಲು ಬರುತ್ತದೆ ಎಂದು ತಿಳಿಸಿದ್ದಾರೆ. ‘ಎಲ್ಲಕ್ಕೂ ಹಳೆಯ ಬುದ್ದನ ಹಿಂಬಾಲಕರ ನೆಲೆ’ ಎಂದು ಬಗೆಯುವುದು ಅನುಕೂಲಕರವಾಗಿದ್ದರೂ ಬುದ್ದನಿಗೂ ಮೊದಲೇ ಇದ್ದ ಮರದ ಪೂಜೆಯ ವಾಡಿಕೆಗಳ ಗುಡಿಯಿರಲೂ ಸಾದ್ಯ.

ನೂರಾರು ವರುಶಗಳ ಕಾಲ ಕಳೆದು ಹೋಗಿದ್ದ ಈ ನೆಲೆ, 1896ರಲ್ಲಿ ಅಶೋಕನ ಕಲ್ಬರಹ ದೊರೆತ ಬಳಿಕ ಮತ್ತೆ ಬುದ್ದನ ಹಿಂಬಾಲಕರು ಆರಾದಿಸುವ ಗುಡಿಯಾಗಿ ಮರುಬಾಳು ಪಡೆಯಿತು. ಈಗ ಇದು ಬುದ್ದನ ಹಿಂಬಾಲಕರಿಗೆ ಮುಕ್ಯವಾದ ಯಾತ್ರೆಯ ನೆಲೆಗಳಲ್ಲಿ ಒಂದು. ವರುಶವೊಂದಕ್ಕೆ ಸಾವಿರಾರು ಯಾತ್ರಿಗಳು ಇಲ್ಲಿಗೆ ಬರುತ್ತಾರೆ. 2020ರ ಹೊತ್ತಿಗೆ ಇಲ್ಲಿಗೆ 40ಲಕ್ಶ ಮಂದಿ ಬರಬಹುದೆಂಬ ಅಂದಾಜಿದೆ. ಇಂತಹ ಮಂದಿ ದಟ್ಟಣೆಯ ನಡುವೆಯೇ ಅರಕೆಗಳನ್ನು ನಡೆಸುತ್ತ ಹಳಮೆಯ ಕುರುಹುಗಳನ್ನು ಕಾಪಾಡಿಕೊಳ್ಳುವುದು ಅಲ್ಲಿನ ಆಡಳಿತಕ್ಕೂ, ಅರಿಗರಿಗೂ ಇರುವ ಇನ್ನೊಂದು ದೊಡ್ಡ ಸವಾಲಾಗಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: news.nationalgeographic.com)

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: