ಈ ಕಾರನ್ನು ಮಡಚಿಡಬಹುದು!

ಜಯತೀರ‍್ತ ನಾಡಗವ್ಡ.

foldable car 1

ಹೆಚ್ಚುತ್ತಿರುವ ಕಯ್ಗಾರಿಕೆಗಳಿಂದ ಪಟ್ಟಣಗಳಲ್ಲಿ ಮಂದಿ ಸಂಕೆ ಹೆಚ್ಚುತ್ತಿದೆ ಅದರಂತೆ ಕಾರು ಬಂಡಿಗಳ ಸಂಕ್ಯೆಯೂ ಏರುತ್ತಿದೆ. ಇದರಿಂದ ಒಯ್ಯಾಟವು (traffic jam) ಹೆಚ್ಚಿ ಅದರಿಂದ ಉಂಟಾಗುವ ತೊಂದರೆಗಳು ನಮಗೆ ಹೊಸದೇನಲ್ಲ.

ಇವುಗಳನ್ನೆಲ್ಲ ಬದಿಗಿರಿಸಿ ಕಿರಿದಾದ ದಾರಿಗಳಲ್ಲಿ ಸಾಗಲು ಇದೀಗ ತೆಂಕಣ ಕೊರಿಯಾದಲ್ಲಿ ಮಡಚಿಡುವ ಕಾರುಗಳು ಬಂದಿವೆ. ಕೊರಿಯಾದ ಪ್ರಮುಕ ಚಳಕರಿಮೆಯ ಕಲಿಕೆವೀಡುಗಳಲ್ಲೊಂದಾದ ‘ಕೆ.ಎ.ಆಯ್.ಎಸ್.ಟಿ’ (ಕಯ್-ಸ್ಟ್) ನಲ್ಲಿ ಕೆಲವು ಅರಕೆಗಾರರು ಇದರ ಮಾದರಿಯೊಂದನ್ನು ಅಣಿಗೊಳಿಸಿದ್ದಾರೆ. ಹ್ಯುಂಡಾಯ್ ಕೂಟದ ಹಯ್ಡ್ರೋಜನ್ ಕಾರಿನ ಬೆಳವಣಿಗೆಯಲ್ಲೂ ಇದೇ ಕಲಿಕೆವೀಡಿನ ಅರಕೆಗಾರರು ನೆರವಾಗಿದ್ದನ್ನು ಇಲ್ಲಿ ನೆನೆಸಿಕೊಳ್ಳಬಹುದು.

ಕಯ್-ಸ್ಟ್ ನ ಹಸಿರು ಸಾರಿಗೆ ವಿಬಾಗದ ಪ್ರೊಪೆಸರ್‍ ಇನ್-ಸೂ ಸುಹ್ (In-Soo Suh)ರವರ ಮುಂದಾಳುತನದಲ್ಲಿ ಕಲಿಕೆವೀಡಿನ ತಂಡ ಇದೀಗ ಪುಟಾಣಿ ಮಾದರಿ ಮಡಚಿಡುವ ಕಾರು ಅರ‍್ಮಾಡಿಲ್ಲೊ-ಟಿ ಮಾದರಿಯನ್ನು ತಯಾರಿಸಿದೆ. ಅರ‍್ಮಾಡಿಲ್ಲೊ ಎಂಬುದು ತೆಂಕಣ ಅಮೆರಿಕಾದ ಒಂದು ಪ್ರಾಣಿ. ಅರ‍್ಮಾಡಿಲ್ಲೊ ವಯ್ರಿಗಳು ತನ್ನ ಬಳಿಗೆ ಬಂದಾಗ ತನ್ನ ಕಾಪಿಗಾಗಿ ಒಂದು ವಿಶೇಶ ಗುಣ ಹೊಂದಿದೆ ಅದೆಂದರೆ ತನ್ನ ಮಯ್ಯಿನ್ನು ಚೆಂಡಿನಂತೆ ಸುತ್ತುಕೊಂಡು ಆಕಾರ ಕಿರಿದಾಗಿಸಿ ಗೂಡಿನಲ್ಲಿರುವಂತೆ ಕುಳಿತುಕೊಳ್ಳುತ್ತದೆ. ಇದರ ಈ ಗುಣವನ್ನು ಅಣಕಿಸುವಂತೆ ಇನ್-ಸೂ ಸುಹ್‍‍ರವರ ತಂಡ ಬೆಳಸಿದ ಕಾರು ತನ್ನ ಮಯ್ ಕಿರಿದಾಗಿಸಬಲ್ಲದು.

foldable car 3

(ಅರ‍್ಮಾಡಿಲ್ಲೊ ಪ್ರಾಣಿಯಂತೆಯೇ ಮಡಚಿಕೊಳ್ಳುವ ಅರ‍್ಮಾಡಿಲ್ಲೊ-ಟಿ ಕಾರು)

ಅರ‍್ಮಾಡಿಲ್ಲೊ-ಟಿ 2.8 ಮೀಟರ್‍ ಉದ್ದದ ತನ್ನ ಹಿಂಬಾಗವನ್ನು 1.65 ಮೀಟರ್‍‍ಗಳಶ್ಟು ಕುಗ್ಗಿಸಿಕೊಳ್ಳುತ್ತದೆ. ಮಡಕೆಗೊಂಡ ಕಾರನ್ನು 5 ಮೀಟರ್‍‍ನ ಒಂದನೇ ಮೂರು ಬಾಗದಲ್ಲಿ ಆರಾಮಾಗಿ ನಿಲ್ಲಿಸಬಹುದು. 5 ಮೀಟರ್‍ ಜಾಗ ಕೊರಿಯಾದಲ್ಲಿ ಬಂಡಿ ನಿಲ್ಲಿಸಲು ಬಳಸುವ ಸಾಮಾನ್ಯ ಅಳತೆಗೋಲು, ಇದರಲ್ಲಿ ಮೂರು ಕಾರುಗಳು ಸಲೀಸಾಗಿ ನಿಲ್ಲುತ್ತವೆ. ನಿಮ್ಮ ಚೂಟಿಯುಲಿಯನ್ನೇ ರಿಮೊಟ್ ಕಂಟ್ರೋಲ್ ನಂತೆ ಬಳಸಿ ಇದನ್ನು ಅಂಕೆಯಲ್ಲಿಟ್ಟು ಕೊಳ್ಳಲು ಸಾದ್ಯ. 360 ಡಿಗ್ರಿ ಕೋನಗಳಲ್ಲಿ ಈ ಕಾರು ತಿರುಗಬಲ್ಲದು ಅದಕ್ಕೆ ಇದನ್ನು ದೊಡ್ಡ ಮನೆಗಳ ನಡುವಿನ ಮೂಲೆಯಲ್ಲೂ ಚಿಕ್ಕ ಚಿಕ್ಕ ಸಂದಿಗಳಲ್ಲೂ ನಿಲ್ಲಿಸುವುದು ಸುಲಬ.

450 ಕೆ.ಜಿ ಯಶ್ಟು ತೂಗುವ ಅರ‍್ಮಾಡಿಲ್ಲೊ-ಟಿ ಕಾರು ಮಿಂಚಿನ ಕಸುವಿನಿಂದ  (electric power) ಓಡುತ್ತದೆ. ಇಬ್ಬರು ಕುಳಿತು ಪಯಣಿಸುವಂತೆ ಇದನ್ನು ಅಣಿಗೊಳಿಸಲಾಗಿದೆ. ಇದರಲ್ಲಿ ಮಿಂಚಿನ ಓಡುಗೆ ಗಾಲಿಗಳ ಹತ್ತಿರದಲ್ಲೇ ಇದೆ. 13.6 ಕಿಲೋ ವ್ಯಾಟ್ ಬಲ ನೀಡುವ ಲಿತಿಯಂ-ಅಯಾನ್ ಬ್ಯಾಟರಿಗಳ ಗೊಂಚಲು ಕೂಡ ಮುಂಬಾಗದಲ್ಲಿರುವುದರಿಂದ ಕಾರು ಮಡಚುವಾಗ ಬಂಡಿಯ ಯಾವುದೇ ಬಾಗ ಹಿಂದುಮುಂದು ಆಗುವ ಅಗತ್ಯವೂ ಇರುವುದಿಲ್ಲ. ಇದರಿಂದ ಕಸುವಿನ ಅಳವುತನವು (efficiency) ಹೆಚ್ಚಲಿದ್ದು, ಓಡಿಸುಗ ಮತ್ತು ಇದರ ಪಯಣಿಗರಿಗೆ ಹೆಚ್ಚಿನ ಸ್ತಳಾವಕಾಶವೂ ಇರಲಿದೆಯಂತೆ.

ಅರ‍್ಮಡಿಲ್ಲೊ-ಟಿ ಚೂಟಿ-ಕಾರು ಇದ್ದಂತೆ. ಇದಕ್ಕೆ ಕನ್ನಡಿಗಳು ಇಲ್ಲ, ಬಂಡಿಯ ಒಳಗೆ ಒಂದು ತಿಟ್ಟಕವಿದ್ದು (Camera) ಓಡಿಸುಗರಿಗೆ ಇದರ ಮೂಲಕವೇ ತನ್ನ ಅಕ್ಕ-ಪಕ್ಕ, ಮುಂದೆ, ಹಿಂದೆ ಸಾಗುವ ಬೇರೆ ಬಂಡಿಗಳ ಮಾಹಿತಿ ಒದಗಿಸುತ್ತದೆ. ಈ ಮುಂಚೆ ಹೇಳಿದಂತೆ ನಿಮ್ಮಲ್ಲಿ ಒಂದು ಚೂಟಿಯುಲಿ ಇದ್ದರೆ ಅದನ್ನೇ ರಿಮೊಟ್ ಕಂಟ್ರೋಲ್ ನಂತೆ ಬಳಸಿ ಬಂಡಿಯ ಮೇಲೆ ಹಿಡಿತ ಸಾದಿಸಬಹುದು. 100 ಕಿ.ಮೀ ಓಡಿಸಲು ಕೇವಲ ನೀವು ಹತ್ತು ನಿಮಿಶ ಇದನ್ನು ಚಾರ‍್ಜ್ ಗೊಳಿಸಿದರೆ ಸಾಕು. ಗಂಟೆಗೆ 60 ಕಿ.ಮೀ ಈ ಕಾರಿನ ವೇಗದ ಮಿತಿಯಾಗಿದೆ.

Foldable car 2

(ಚೂಟಿಯುಲಿ ಬಳಸಿ ಅರ‍್ಮಾಡಿಲ್ಲೊ-ಟಿ ಕಾರು ಮಡಚುತ್ತಿರುವ ಬಿಣಿಗೆಯರಿಗ)

ದೊಡ್ಡ ಹಾಗೂ ತೂಕದ ಒಳ-ಉರಿಯುವಿಕೆಯ ಪೆಟ್ರೋಲ್ ಇಲ್ಲವೇ ಡಿಸೇಲ್ ಬಿಣಿಗೆ ಬಂಡಿಗಳ ಬದಲು ಅರ‍್ಮಾಡಿಲ್ಲೊ-ಟಿ ಒಳ್ಳೆಯ ಆಯ್ಕೆ. ಪಟ್ಟಣದ ಒಯ್ಯಾಟದಲ್ಲಿ ದಿನ ನಿತ್ಯ ಓಡಾಡುವ ಮಂದಿ ಕಂಡಿತವಾಗಿಯೂ ಈ ಹೊಸ ಕಾರಿನತ್ತ ವಾಲುತ್ತಾರೆ ಎಂಬುದು ಇನ್-ಸೂ ಸುಹ್‍ರವರ ಬಲವಾದ ನಂಬಿಕೆ. ಊರಿನಲ್ಲಿ ಅಶ್ಟೇ ಅಲ್ಲದೆ ಇದನ್ನೂ ಟ್ಯಾಕ್ಸಿಯಂತೆ ಊರ ಹೊರಗಡೆ ಇರುವ ಬಾನೋಡ ತಾಣಗಳಿಗೆ ಮಂದಿ ಸಾಗಣೆಗೆ, ಊರಿನ ಹೊರವಲಯಗಳಿಗೆ, ಊರಿನ ಸುತ್ತಾಟದಂತಹ ಕೆಲಸಕ್ಕೆ ಹೇಳಿ ಮಾಡಿಸಿದಂತಿದೆ ಎನ್ನುತ್ತಾರೆ ಇನ್-ಸೂ ಸುಹ್.

ತನ್ಬಳಕೆಯ ಕಿರುಬಂಡಿಗಳ ವಿಶೇಶ ಅರಕೆಯಲ್ಲಿ ತೊಡಗಿರುವ ಪ್ರೊ.ಇನ್-ಸೂ ಸುಹ್ ರವರು 2011 ರಲ್ಲಿ ಇಂತ ಒಂದು ಮಡಚುವ ಕಾರಿನ ಹೊಳಹು(Concept) ಆದರಿಸಿ ಕೆಲಸ ಶುರುಮಾಡಿದರಂತೆ. ಅಂದಿನಿಂದಲೇ ಅರಕೆ ಆರಂಬ ಮಾಡಿ ಈಗ ಮಾದರಿ ಒರೆಗೆಹಚ್ಚುವಲ್ಲಿ ಗೆಲುವು ಕಂಡಿದ್ದಾರೆ.

ವೇಗದಿ ಹೆಚ್ಚಳಗೊಳ್ಳುತ್ತಿರುವ ಇಂದಿನ ಜನಸಂಕ್ಯೆಗೆ, ದಿನೇ ದಿನೇ ಬದಲಾಗುತ್ತಿರುವ ವಾತಾವರಣಕ್ಕೆ ಈಗಿರುವ ಪುಟಾಣಿ ಕಾರಿಗಿಂತಲೂ ಚಿಕ್ಕದಾದ ಕಾರುಗಳ ಅಗತ್ಯವಿದೆ ಅದಕ್ಕೆ ಅರ‍್ಮಾಡಿಲ್ಲೊ-ಟಿ ಸರಿಯಾದ ವೇದಿಕೆ ಒದಗಿಸಿಕೊಡಲಿದೆ ಎಂಬುದು ತಾನೋಡಗಳ ಅರಕೆಗಾರರ ಅಂಬೋಣ.

ಇದಕ್ಕೆ ಹೆಚ್ಚಿನ ಚಳಕದರಿಮೆ ಬಳಸಿ, ಅರಕೆಗಾರಿಕೆಯನ್ನು ಹುರಿದುಂಬಿಸುವತ್ತ ಸರ‍್ಕಾರಗಳು, ಕೂಟಗಳು ಒತ್ತು ನೀಡಿದರೆ ಜಗತ್ತಿನೆಲ್ಲೆಡೆ ಸಾರಿಗೆ ಏರ‍್ಪಾಟು ಹಸಿರುಗೊಳ್ಳುವುದು ಕಚಿತ. ಬಾರತಕ್ಕೂ ಅರ‍್ಮಾಡಿಲ್ಲೊ-ಟಿ ಕಾಲಿಟ್ಟರೆ ಇಲ್ಲಿರುವ ಮಿಂಚಿನ ರೇವಾ ಕಾರಿಗೆ ಗಟ್ಟಿ ಪಯ್ಪೋಟಿ ಎದುರಾಗಲಿದೆ.ಅರ‍್ಮಾಡಿಲ್ಲೊ-ಟಿ ಕಾರುಗಳು ಬೀದಿಗಿಳಿಯುವುದನ್ನು ನೋಡಲು ಎಲ್ಲರೂ ಕಾದುನೊಡುತ್ತಿದ್ದಾರೆ.

(ಮಾಹಿತಿ ಸೆಲೆ : sciencedailyತಿಟ್ಟಸೆಲೆ: ohgizmo.com, visualnews, asianewsnet)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 14/01/2014

    […] ಮೋಟರ‍್ಸ್ ನ ಕೊಳವೆ ಸಾರಿಗೆ, ಕೊರಿಯಾದ ಮಡಚಿಡುವ ಕಾರುಗಳು, ಏರ‍್ಬಸ್‍ನ ವೇಗದ ದೊಡ್ಡ ಬಾನೋಡಗಳು ಈ ರೀತಿ […]

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *