ಈ ಅರಿಮೆಗೆ ಅಣಕವೇ ಅಡಿಪಾಯ

ಪ್ರಶಾಂತ ಸೊರಟೂರ.

honey_tire_1

ಹಕ್ಕಿ ಹಾಯಾಗಿ ಹಾರುವುದರ, ಮೀನು ಸುಳುವಾಗಿ ಈಜುವುದರ, ಮಳೆ ಗಾಳಿಗೆ ಜಗ್ಗದೇ ನೂರಾರು ವರುಶ ಬಾಳುವ ಮರಗಳ ಹಿಂದಿನ ಗುಟ್ಟೇನು? ಒಂಟಿಯು ನೀರು ಕುಡಿಯದೇ ಹಲವು ತಿಂಗಳು ಹೇಗೆ ಬದುಕಬಲ್ಲದು? ಕಡಲ ಒಡಲಾಳದಲ್ಲಿರುವ ಜೀವಿಗಳಿಂದ ನಾವೇನು ಕಲಿಯಬಹುದು? ಹೀಗೆ ನಮ್ಮ ಸುತ್ತಣ ಜಗತ್ತು ಅಡಗಿಸಿಕೊಂಡಿರುವ ಬೆರಗುಗೊಳಿಸುವ ಒಗಟುಗಳನ್ನು ಬಿಡಿಸಿ, ಅವುಗಳನ್ನು ಚಳಕವಾಗಿ (technology) ಬಳಸುವ ಅರಿಮೆಯ ಕವಲು ಇತ್ತೀಚಿನ ವರುಶಗಳಲ್ಲಿ ತುಂಬಾ ಮಹತ್ವ ಪಡೆಯುತ್ತಿದೆ. ಇಂಗ್ಲಿಶನಲ್ಲಿ ಈ ಅರಿಮೆಯ ಕವಲನ್ನು ಬಯೋಮಿಮಿಟಿಕ್ಸ್ (biomimetics) ಎಂದು ಕರೆಯುತ್ತಾರೆ.

ನಮ್ಮ ಸುತ್ತಣದ (environment) ವಿಶಯಗಳಿಂದ ಹೊಮ್ಮುವ ಈ ಅರಿಮೆಯನ್ನು ಕನ್ನಡದಲ್ಲಿ ಉಸಿರಿಯಣಕ, ಅಣಕರಿಮೆ, ಸುತ್ತಣಸೆಲೆ ಎಂದು ಕರೆಯಬಹುದು. ಈ ಅರಿಮೆ ಹೊಮ್ಮಿಸಿದ ಇತ್ತೀಚಿನ ಕೆಲವು ಚಳಕಗಳನ್ನು ಈ ಬರಹದಲ್ಲಿ ನೋಡೋಣ.

ಜೇನುಗೂಡು ಹೊಸ ಗಾಲಿಗೆ ಮಾದರಿ

ಗಾಳಿ ತುಂಬದೇ ಓಡಿಸಬಹುದಾದ ಗಾಲಿಯನ್ನು ಕಂಡುಹಿಡಿಯುವಲ್ಲಿ ಜೇನುಗೂಡಿನ ಕಟ್ಟಣೆ ನೆರವಾಗಿದೆ. ಜೇನುಗೂಡಿನ ಆರ‍್ಬದಿ ತುಣುಕುಗಳ ಆಕಾರದಲ್ಲಿ ಗಾಲಿ ಮಾಡಿದರೆ ಅದಕ್ಕೆ ಹೆಚ್ಚಿನ ತೂಕವನ್ನು ತಾಳಿಕೊಳ್ಳುವ ಮತ್ತು ತೂಕವನ್ನು ಸಮಾನಾಗಿ ಹಂಚುವ ಗುಣ ಪಡೆಯುವುದೆಂದು ಅರಕೆಯಿಂದ ತಿಳಿದು ಬಂದಿದೆ. ರೆಸಿಲಿಯಂಟ್ ಟೆಕ್ನಾಲಜಿ ಎಂಬ ಕೂಟ ಇದನ್ನು ಗುರುತಿಸಿದ್ದು, ಕಾವಲು ಪಡೆಯ ಗಾಡಿಗಳಲ್ಲಿ ಈಗ ಈ ಚಳಕವನ್ನು ಅಳವಡಿಸಲಾಗಿದೆ.

ಚಿಟ್ಟೆಯ ರೆಕ್ಕೆ ಹೊಸ ನೇಸರಪಟ್ಟಿಗಳಿಗೆ ಅಡಿಪಾಯ

ಚಿಟ್ಟಿಯ ರೆಕ್ಕೆಗಳಲ್ಲಿ ಹುದುಗಿರುವ ಅರಿಮೆ ಬಳಸಿಕೊಂಡು ನೇಸರಪಟ್ಟಿಗಳನ್ನು (solar panel) ಇನ್ನಶ್ಟು ಹದಗೊಳಿಸಲಾಗಿದೆ. ನೇಸರನ ಬೆಳಕನ್ನು ಕಸುವಾಗಿಸುವ ನೇಸರಪಟ್ಟಿಗಳನ್ನು, ಚಿಟ್ಟೆಯ ರೆಕ್ಕೆಯಲ್ಲಿರುವ ಪಟ್ಟಿಗಳಂತೆ ಮಾಡಿದರೆ ಹೆಚ್ಚಿನ ಕಸುವನ್ನು ಪಡೆಯಬಹುದು ಜೊತೆಗೆ ಈ ಬಗೆಯ ಪಟ್ಟಿಗಳನ್ನು ಮಾಡಲು ದುಡ್ಡು ಕೂಡಾ ಕಡಿಮೆ ಬೇಕಾಗುವುದೆಂದು ಕಂಡುಕೊಳ್ಳಲಾಗಿದೆ.

suttana_chitte_2

ಹಲಸು ಕಲಿಸಿತು ಗೋಡೆ ಕಟ್ಟುವ ಪಾಟ

ಸಿಂಗಾಪೂರದಲ್ಲಿ ಹೀಗೊಂದು ಒಳಾಂಗಣ ನೆಲೆ ಕಟ್ಟಲು ಹಲಸಿನಂತಿರುವ ಡ್ಯೂರೆನ್ (durian) ಹಣ್ಣಿನ ಹೊರಮಯ್ ಮಾದರಿಯಾಗಿದೆ. ಈ ಹಣ್ಣಿನ ಹೊರಮಯ್ ಆಕಾರದಲ್ಲಿ ಕಟ್ಟಡವನ್ನು ಮಾಡಿದ್ದರಿಂದ, ಸೂರ‍್ಯನ ಬೆಳಕು ಬೀಳುವ ಕೋನಕ್ಕೆ ತಕ್ಕಂತೆ  ಅದು ದಿನವಿಡೀ ಹೊಂದಿಕೊಳ್ಳುತ್ತಾ ಹೋಗುತ್ತದೆ. ಇದರಿಂದಾಗಿ ಹಾಯನಿಸುವ ಬೆಳಕಿನ ಮತ್ತು ನೆರಳಿನ ಬೆರೆತ ಈ ಕಟ್ಟಡದಲ್ಲಿ ಉಂಟಾಗಿದೆ.

durian-singapore_3

—————

ಶಾರ‍್ಕ್ ಪೊರೆ ಹೋಲುವ ಈಜುಡುಗೆ

ಈಜುವಾಗ ಎದುರಾಗುವ ನೀರಿನ ಇದಿರು ಸೆಳೆತವನ್ನು ಕಡಿಮೆ ಮಾಡುವಲ್ಲಿ ಶಾರ‍್ಕಗಳಿಗೆ ಅವುಗಳ ಪೊರೆ ನೆರವಾಗುತ್ತದೆ. ಇದನ್ನು ಬಳಸಿಕೊಂಡು ಸ್ಪೀಡೋ ಎಂಬ ಕಂಪನಿ ಚುರುಕು-ಈಜುಡುಗೆಗಳನ್ನು ಹೊರತಂದಿದೆ. ಈ ಈಜುಡುಗೆಗಳಲ್ಲಿ ಬರೀ ಪೊರೆಯ ಆಕಾರವನ್ನು ಬಳಸದೇ ಅದರ ಹೊಂದಿಕೊಳ್ಳುವ, ಹೊರಳುವ ಗುಣಗಳನ್ನು ಅಳವಡಿಸಿಕೊಳ್ಳಲಾಗಿದೆ. ಓಲಂಪಿಕ್ ಈಜು ಪಯ್ಪೋಟಿಯಲ್ಲಿ ಈ ಈಜುಡುಗೆಗಳು ಬಳಕೆಯಾಗಲಿವೆ.

swimm_suit_4

ಕಟ್ಟಡಕ್ಕೆ ಕಳ್ಳಿಗಿಡದ ಹೊಳಹು

ಮರಳುಗಾಡು, ಉರಿ ಬಿಸಿಲಿನ ನಾಡಾದ ಕತಾರನಲ್ಲಿ ಕಳ್ಳಿಗಿಡ (cactus) ಹೋಲುವ ಕಟ್ಟಡವೊಂದು ತಲೆ ಎತ್ತಿದೆ. ಈ ಕಟ್ಟಡದ ತುಂಬಾ ಕಿಟಕಿಗಳನ್ನು ಮಾಡಲಾಗಿದ್ದು, ಗಾಳಿ ಒಳಬಂದು ಕಾವು ಆಚೆ ಹೋಗುವಂತೆ ಅಣಿಗೊಳಿಸಲಾಗಿದೆ. ಈ ಬಗೆಯ ಹೊಳಹು (idea) ಹೊಳೆದದ್ದು ಕಳ್ಳಿಗಿಡ ಮರುಳುಗಾಡಿನಲ್ಲಿಯೂ ನೀರನ್ನು ಕೂಡಿಟ್ಟುಕೊಳ್ಳುವ ತಿಳುವಳಿಕೆಯಿಂದ.

cactus_office_buliding

ಮಿದುಳಿನಿಂದ ಹೊಮ್ಮಿದ ’ಮಾಡಿದ ಜಾಣ್ಮೆ’

 

ತಮ್ಮದೇ ತಿಳುವಳಿಕೆ ಹೊಂದಿರುವ, ಯೋಚನೆಗಳನ್ನು ಮಾಡಬಲ್ಲ ಸಲಕರಣೆಗಳನ್ನು ಹೊಮ್ಮಿಸುವಲ್ಲಿ ಮಾಡಿದ ಜಾಣ್ಮೆ (artificial intelligence) ಇತ್ತೀಚಿನ ವರುಶಗಳಲ್ಲಿ ಹೊಸ ಹೊಸ ಮಯ್ಲಿಗಲ್ಲುಗಳನ್ನು ದಾಟುತ್ತಿದೆ. ಮನುಶ್ಯರ ಮತ್ತು ಇತರ ಪ್ರಾಣಿಗಳ ಮಿದುಳಿನ ರಚನೆಯನ್ನು ಅದು ಅಳವಡಿಸಿಕೊಳ್ಳುತ್ತಿದೆ.

AI_6

ಚಿಮ್ಮುಂಡಿ ಹುಳು ಕಾವಲು ಪಡೆಗೆ ತಿಳಿವು

ಅಮೇರಿಕದ ಹಡಗುಪಡೆ (navy) ಎದುರಾಳಿಗಳ ಹಡಗುಗಳನ್ನು ಕಂಡುಹಿಡಿಯಲು ಬಳಸುವ ಉಲಿಕಾವಲು  (Sound Navigation and Ranging-SONAR) ಸಲಕರಣೆಯನ್ನು ಇನ್ನಶ್ಟು ಹದಗೊಳಿಸಲು ಚಿಮ್ಮುಂಡಿ ಹುಳುವಿನ ಮೊರೆಹೋಗಿದೆ. ಚಿಮ್ಮುಂಡಿ ಹುಳು (cricket) ಮಾಡುವ ಸದ್ದು ಹಲವಾರು ಮಯ್ಲಿವರೆಗೆ ಕೇಳಿಸಬಲ್ಲದು. ಚಿಮ್ಮುಂಡಿ ಹುಳುವಿನಂತೆ ಉಲಿಕಾವಲು ಸಲಕರಣೆ ಸದ್ದು ಹೊಮ್ಮಿಸುವಂತಾದರೆ ನೀರಿನೊಳಗೆ ಎದುರಾಳಿಗಳ ಹಡಗುಗಳಿಗೆ ಸದ್ದಿನ ಅಲೆ ತಾಕಿಸಿ, ಅವುಗಳಿಂದ ಮರಳಿ ಬರುವ ಸಂದೇಶಗಳನ್ನು ಒರೆಗೆಹಚ್ಚಿ ಹಡಗುಗಳನ್ನು ಕಂಡುಹಿಡಿಯಬಹುದು. ಅಮೇರಿಕಾದ ಪಡೆ ಈ ನಿಟ್ಟಿನಲ್ಲಿ ಚಿಮ್ಮುಂಡಿ ಹುಳುವಿನ ಗಂಟಲಿನ ಒಳರಚನೆ ಕುರಿತು ಅರಕೆ ನಡೆಸಿದೆ.

USA-CICADAS_7

ಮರಕುಟಿಗ ಹಕ್ಕಿಯ ಹೊಡೆತ ಹೀರುವ ಕಲೆ

ಮರಕುಟಿಗ ಹಕ್ಕಿಯ ಕೊಕ್ಕು ಹೊರಗಡೆ ಗಟ್ಟಿಯಾಗಿದ್ದು, ಒಳಗೆ ಮೆದುವಾಗಿರುವ ಹೊಡೆತ ಹೀರುವ ಎಲುಬುಗಳಿಂದ ಕೂಡಿದೆ. ಹೀಗಾಗಿ ಪ್ರತಿ ಸೆಕೆಂಡಿಗೆ 18-20 ಬಾರಿ ಕೊಕ್ಕುಗಳಿಂದ ಮರವನ್ನು ಕುಟುಕಿದರೂ ಅವುಗಳಿಗೆ ತೊಂದರೆಯಾಗದು. ಇದನ್ನು ಬಳಸಿ ಹೊಸದಾದ ಹೊಡೆತ ಹೀರಿಕೊಳ್ಳುವ ಸಲಕರಣೆಗಳನ್ನು ಹೊರತರಲಾಗುತ್ತಿದೆ. ಮರಕುಟಿಗ ಹಕ್ಕಿಯಿಂದ ಕಲಿತ ಕಲಿಕೆ ಪುಟಬಾಲ್ ಆಟಗಾರರನ್ನು ಹೊಡೆತದಿಂದ ಕಾಪಾಡಲು, ವಿಮಾನವು ತೊಂದರೆಗೆ ಈಡಾದಾಗಿನ ವಿಶಯಗಳನ್ನು ಕೂಡಿಡುವ ಕಪ್ಪುಪೆಟ್ಟಿಗೆಯನ್ನು (black box) ಮಾಡಲು ಕೂಡ ಬಳಕೆಯಾಗುತ್ತಿದೆ.

marakutiga_8

ಹೀಗೆ ನಮ್ಮ ಸುತ್ತಮುತ್ತಲಿನ ಜೀವಿಗಳು ವಾತಾವರಣಕ್ಕೆ ಹೊಂದಿಕೊಳ್ಳಲು ಮಾಡಿಕೊಂಡ ಮಾರ‍್ಪಾಡುಗಳನ್ನೇ ಅರಿತುಕೊಂಡು, ಸುತ್ತಣಕ್ಕೆ ಯಾವುದೇ ತೊಂದರೆಯನ್ನು ನೀಡದೇ, ನಮ್ಮ ಬದುಕಿನ ಹಲವಾರು ಅಡೆತಡೆಗಳನ್ನು ಮೀರುವ ಚಳಕಗಳನ್ನು ಅಣಕರಿಮೆ ನಮಗೆ ಒದಗಿಸುತ್ತಿದೆ.

ಮಾಹಿತಿ ಸೆಲೆ: http://webecoist.momtastic.comwww.popsci.comwww.wikipedia.com

-ಪ್ರಶಾಂತ ಸೊರಟೂರCategories: ಅರಿಮೆ

ಟ್ಯಾಗ್ ಗಳು:, , , , , , , , , , , , , , , , , , , , , , , , , , , , , , , , ,

2 replies

Trackbacks

  1. ಎಲೆ ಅಲ್ಲ, ಹಲ್ಲಿ! | ಹೊನಲು
  2. ಈ ಕಾರನ್ನು ಮಡಚಿಡಬಹುದು! | ಹೊನಲು

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s