ರಸ್ತೆಗಿಳಿದ ರೋಲ್ಸ್ ರಾಯ್ಸ್ ’ರೇಯ್ತ್’

ಜಯತೀರ‍್ತ ನಾಡಗವ್ಡ.

RR-wraith

ರೋಲ್ಸ್ ರಾಯ್ಸ್ (Rolls Royce) ಎಂದೊಡನೆ ಕಾರೊಲವಿಗರಿಗೆ ಅಶ್ಟೇ ಅಲ್ಲದೇ ಉಳಿದವರ ಎದೆ ಬಡಿತವೂ ಜೋರಾಗುವುದು. ಆ ಹೆಸರಲ್ಲೇ ಅಶ್ಟೊಂದು ಹಿರಿಮೆ, ಬೆರಗು ಅಡಗಿದೆ. ದುಬಾರಿಯಾದ, ಎಲ್ಲ ಸವ್ಕರ‍್ಯಗಳನ್ನು ಹೊಂದಿದ ’ಮೇರು’ ಕಾರುಗಳನ್ನೇ ಮಾಡುತ್ತ ಬಂದಿರುವ ರೋಲ್ಸ್ ರಾಯ್ಸ್ ಕೂಟ ಇದೀಗ ಮತ್ತೆ ಸುದ್ದಿಯಲ್ಲಿದೆ.

ಪ್ಯಾಂಟಮ್ (Phantom), ಗೋಸ್ಟ್ (Ghost) ಎಂಬ ಎರಡು ಪ್ರಮುಕ ಮಾದರಿಗಳನ್ನು ಕಳೆದ ಹಲವು ವರುಶಗಳಿಂದ ಮಾರಿಕೊಂಡು ಬಂದಿರುವ ರೋಲ್ಸ್ ರಾಯ್ಸ್ ಈ ವರುಶದ ಮೊದಲಲ್ಲಿ ರೇಯ್ತ್ (Wraith) ಎಂಬ ಹೊಸ ಮಾದರಿ ಹೊರತರುವುದಾಗಿ ತಿಳಿಸಿತ್ತು. ಈ ವರುಶದ ಜಿನಿವಾದ ಬಂಡಿ ತೋರ‍್ಪಿನಲ್ಲಿ (auto show) ’ರೇಯ್ತ್’ ಮೊಟ್ಟ ಮೊದಲು ಕಾಣಿಸಿಕೊಂಡು, ಆಮೇಲೆ ಬೀಜಿಂಗ್, ಬೆಲ್ಜಿಯಂನ ನೆಲೆವೀಡು ಬ್ರುಸ್ಸೆಲ್ಸ್, ಮಾಸ್ಕೋ ಹೀಗೆ ಜಗತ್ತಿನ ಹಲವೆಡೆ ಕಾಣಿಸಿಕೊಂಡು ಸುದ್ದಿಯಲ್ಲಿತ್ತು. ಇದೀಗ ’ರೇಯ್ತ್’ ಮಾರಾಟಕ್ಕೆ ಅಣಿಯಾಗಿದೆ.

RR2

(ರೇಯ್ತ್ ಕಾರಿನ ಒಳನೋಟ)

ರೇಯ್ತ್ ಎಂದರೆ ಕೇವಲ ಅದ್ದೂರಿ ಕಾರು ಮಾತ್ರವಾಗಿರದೇ ಈ ಮೊದಲಿನ ಪ್ಯಾಂಟಮ್ ಮತ್ತು ಗೋಸ್ಟ್ ಮಾದರಿಗಳಿಗಿಂತ ಬಿನ್ನವಾಗಿರಲಿದೆ. ಮೊದಲೆರಡು ಮಾದರಿಗಳಿಂತ ಹೆಚ್ಚು ಕಸುವು ಹೊಂದಿರುವ ಬಿಣಿಗೆಯನ್ನು (engine) ಇದರಲ್ಲಿ ಅಳವಡಿಸಲಾಗಿದೆ. ಈ ಹಿಂದೆ ಬಂದ ಎಲ್ಲ ರೋಲ್ಸ್ ರಾಯ್ಸ್ ಕಾರುಗಳಿಗಿಂತ ಹೆಚ್ಚಿನ ಅದ್ದೂರಿ ಮತ್ತು ವೇಗದ ಕಾರು ಎಂಬುದು ರೇಯ್ತ್ ದ ಹೆಗ್ಗಳಿಕೆ.

ರೇಯ್ತ್ ಮಾದರಿ ರೋಲ್ಸ್ ರಾಯ್ಸ್ ಕೂಟಕ್ಕೆ ಹೊಸದೇನಲ್ಲ, 1938-39 ರಲ್ಲಿ ಇದೇ ಹೆಸರಿನ ಕಾರು ಮಾರುಕಟ್ಟೆಗೆ ತಂದಿತ್ತು. ಇದರಲ್ಲಿ 6 ಉರುಳೆಗಳಿದ್ದು (cyl) ಬರಿ 30 hp ಕಸುವು ನೀಡುವ ಬಿಣಿಗೆ ಹೊಂದಿತ್ತು. 1939 ಮೊದಲು ಬಂದಾಗ ಅಡಿಗಟ್ಟು (chassis) ಮಾತ್ರವೇ ತಯಾರಿಸಿದ್ದ ಕೂಟ, 1947 ರಲ್ಲಿ ಬಂಡಿ ಪೂರ‍್ತಿಗೊಳಿಸಿ ಮಾರುಕಟ್ಟೆಗೆ ಇಳಿಸಿದ್ದು ಇತಿಹಾಸ.

rolls-royce-wraith-1938–39-640x480

(1938-39 ರ ರೇಯ್ತ್)

ಈಗಿನ ರೇಯ್ತ್ 623 hp ಹೊರಹಾಕುವ ಬಲುದೊಡ್ಡ ಬಿಣಿಗೆ ಪಡೆದುಕೊಂಡು ಮರುಹುಟ್ಟು ಪಡೆದಿದೆ. 6.6 ಲೀಟರ್‍ ಅಳತೆಯ ಇಂಗ್ಲಿಶ್ ನ ‘ವಿ’ (V) ಆಕಾರದಲ್ಲಿ ಜೋಡಿಸಲ್ಪಟ್ಟ, 12 ಉರುಳೆಗಳನ್ನು ಜೋಡಿ-ಗಾಳಿದೂಡುಕಗಳನ್ನು (twin-turbocharger) ಹೊಂದಿದೆ. ಇದರ ಸೆಳೆಬಲ (torque) 800 Nm (ನ್ಯೂಟನ್ ಮೀಟರ್‍).

ಇದರ ಅಡಿಗಟ್ಟಿನ ಈಡುಗಾರಿಕೆಯನ್ನು (design) ರೋಲ್ಸ್ ರಾಯ್ಸ್ ನ ಹೆಸರುವಾಸಿಯಾದ ಪವ್ಲ್ ಟ್ರ್ಪಿನ್ಯಾಕ್ (Pavle Trpnac) ಮಾಡಿದ್ದು, ಜರ‍್ಮನಿಯ ಪ್ರಕ್ಯಾತ ‘ಜೆಡ್ ಎಪ್ ಸ್ಟೀಯರಿಂಗ್’ ಕೂಟ, ರೇಯ್ತ್ ಕಾರಿನ ತನ್ನಿಡಿತದ 8 ವೇಗದ ಹಲ್ಲುಗಾಲಿ (8-speed automatic transmission) ತಯಾರಿಸಿಕೊಟ್ಟಿದೆ.

rolls-wriath

ಪ್ಯಾಂಟಮ್, ಗೋಸ್ಟ್ ಮಾದರಿಗಳ ಹೋಲಿಕೆಗೆ ಬಂದರೆ ಹೆಚ್ಚು ಕಡಿಮೆ ಒಂದೇ ಅಳತೆಯ ವಿ-12 ಬಿಣಿಗೆ ಹೊಂದಿರುವ ರೇಯ್ತ್, ಕಸುವಿನ ವಿಶಯದಲ್ಲಿ ಇವುಗಳಿಗಿಂತ ದೊಡ್ಡದಾಗಿ ನಿಲ್ಲುತ್ತದೆ. 6.7 ಲೀ ಪ್ಯಾಂಟಮ್ ಬಿಣಿಗೆ 453 hp ಕಸುವು ನೀಡಿದರೆ, 6.6 ಲೀ ಗೋಸ್ಟ್ ನ ಬಿಣಿಗೆ 563 hp ಕಸುವನ್ನು ಉಂಟುಮಾಡುತ್ತದೆ.

ಕಾರು ಬಿಡುಗಡೆಗೂ ಮುನ್ನ ಹೆಚ್ಚಿನ ಮಾಹಿತಿ ಸಿಗದೇ ಪ್ರಮುಕ ತಾನೋಡ ಸುದ್ದಿ ಕೂಟವೊಂದು ಕೇವಲ ದೂಳಿನ ತಿಟ್ಟವೊಂದನ್ನೇ ಅಚ್ಚುಹಾಕಿ, ಈ ಬಂಡಿ ಹೊರಬಂದ ಮೇಲೆ ಮಾರುಕಟ್ಟೆಯಲ್ಲಿ ತನ್ನ ಮೇಲ್ಮೆಯಿಂದಲೇ ಉಳಿದ ಕೂಟಗಳ ’ದೂಳೆಬ್ಬಿಸಲಿದೆ’ ಎನ್ನುವ ಕುರುಹು ಇದು ಎಂದಿತ್ತು.

ಬಾರತದ ಮುಂಬಯಿ, ನವದೆಹಲಿ, ಹಯ್ದರಾಬಾದ್ ಮತ್ತು ಚಂದೀಗಡಗಳಲ್ಲಿ ಮಾರಾಳಿಗರ (dealers) ಮಳಿಗೆಗಳಲ್ಲಿ ರೇಯ್ತ್ ಕಾರು ಮಾರಾಟಕ್ಕೆ ಸಿದ್ದವಾಗಿದೆ. ಹಣವಂತರು ಮಳಿಗೆಗೆ ಬೇಟಿ ಕೊಡಬಹುದು ಬೆಲೆ ಸುಮಾರು 4.6 ಕೋಟಿ ರೂಪಾಯಿಗಳು.

(ಮಾಹಿತಿ ಮತ್ತು ತಿಟ್ಟಗಳ ಸೆಲೆ: topgearwww.gtspirit.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: