ಆಲೂಗಡ್ಡೆಯ ಬೆಳಕು

– ಜಯತೀರ‍್ತ ನಾಡಗವ್ಡ.

ಮಕ್ಕಳಿಗೆ ಅರಿಮೆ ಹೆಚ್ಚಿಸಲು ಚಿಕ್ಕ ಪುಟ್ಟ ಆರಯ್ಕೆ (experiment) ಮಾಡಿ ತೋರಿಸಿ ಅವರ ತಿಳುವಳಿಕೆ ಹೆಚ್ಚಿಸಬಹುದು. ದಿನ ನಿತ್ಯ ಊಟ-ತಿಂಡಿಗಳಲ್ಲಿ ಬಳಸುವ ಆಲೂಗಡ್ಡೆ ಮೂಲಕ ಬಲ್ಬ್ ಉರಿಸಿ ಪುಟಾಣಿಗಳಿಗೆ ಮುದನೀಡಿ ಕಲಿಕೆಯನ್ನು ಹಗುರವಾಗಿಸಲು ಆಲೂಗಡ್ಡೆ ಬಳಸಿ ಬೆಳಕು ಉಂಟುಮಾಡುವ ಆರಯ್ಕೆ ಬಗ್ಗೆ ತಿಳಿಯೋಣ ಬನ್ನಿ.

ಎರಡು ಬೇರೆ ತರಹದ ಜಲ್ಲಿಗಳು (dissimilar metals) ಮತ್ತು ಆಲೂಗಡ್ಡೆಯ ತಿಳಿರಸದ ನಡುವಿನ ಎಸಕದ ಮೂಲಕ ಚಿಕ್ಕುದಾದ ಮಿಂಚಿನ ಒತ್ತಾಟ (voltage) ಉಂಟು ಮಾಡಬಹುದು. ಇದಕ್ಕೆ ಬೇಕಾಗುವ ವಸ್ತುಗಳು ಇಂತಿವೆ,
1. ಒಂದು ದೊಡ್ಡ ಆಲೂಗಡ್ಡೆ
2. ಎರಡು ನಾಣ್ಯಗಳು
3. ಸತುವು ಬಳಿದ ಎರಡು ಮೊಳೆಗಳು (zinc-plated nails)
4. ಮೂರು ತಾಮ್ರದ ತಂತಿಗಳು
5. ಒಂದು ಚಿಕ್ಕ ಪುಟಾಣಿ ಬಲ್ಬ್

ಬೆಳಕು ಮೂಡಿಸುವ ಬಗೆ:
ಆಲೂಗಡ್ಡೆಯನ್ನು ಎರಡು ಹೋಳಾಗಿಸಿಕೊಳ್ಳಬೇಕು. ಈ ಎರಡು ಹೋಳುಗಳಲ್ಲಿ ನಾಣ್ಯಗಳು ತೋರಿಕೊಂಡು ಹೋಗುವಂತಿರಬೇಕು. ತಾಮ್ರದ ಎರಡು ತಂತಿಗಳನ್ನು ತೆಗೆದುಕೊಂಡು ಈ ನಾಣ್ಯಗಳತ್ತ ಚನ್ನಾಗಿ ಸುತ್ತಬೇಕು. ಈ ನಾಣ್ಯಗಳನ್ನು ಈಗ ಆಲೂಗಡ್ಡೆಯ ಎರಡು ಹೋಳುಗಳಲ್ಲಿ ಬೇರೆ ಬೇರೆಯಾಗಿ ಸಿಕ್ಕಿಸಿ. ಮೂರನೇಯ ತಾಮ್ರದ ತಂತಿಯನ್ನು ಸತುವು ಬಳಿದ ಮೊಳೆಯೊಂದರ ಸುತ್ತಲೂ ಸುತ್ತಿ. ಈ ತೆರನಾಗಿ ಸುತ್ತಿದ ಮೊಳೆಯನ್ನು ಯಾವುದಾದರೂ ಆಲೂಗಡ್ಡೆಯ ಹೋಳುಗಳಲ್ಲಿ ಸಿಕ್ಕಿಸಿ.

potato4

ಮೊದಲನೇಯ ಆಲೂಗಡ್ಡೆ ಹೋಳಿನಲ್ಲಿರುವ ನಾಣ್ಯಕ್ಕೆ ಸುತ್ತಿರುವ ತಂತಿಯನ್ನು ಸ್ವಲ್ಪ ಎಳೆದು ಇನ್ನೊಂದು ಮೊಳೆಗೂ ಸುತ್ತಿ, ಅದನ್ನು ಅಲ್ಲಿಯೇ ಉಳಿದ ಅರ‍್ದ ಆಲೂಗಡ್ಡೆ ಹೋಳಿಗೆ ಸಿಕ್ಕಿಸಬೇಕು. ಈ ರೀತಿ ಎರಡು ಮೊಳೆಗಳ ಸುತ್ತಿ ಉಳಿದಿರುವ ತಂತಿಯ ಬದಿಯ ನಡುವೆ ಚಿಕ್ಕ ಬಲ್ಬೊಂದನ್ನು ಜೋಡಿಸಿದರೆ ಬಲ್ಬ್ ಹೊತ್ತಿಕೊಂಡು ಉರಿಯುತ್ತದೆ. ಇದರಿಂದ ಉಂಟಾಗುವ ಮಿಂಚು (current) ಚಿಕ್ಕ ಪ್ರಮಾಣದ್ದು ಮಾತ್ರ.

Potato3

ಈ ಆರಯ್ಕೆ ಹಿಂದಿರುವ ಅರಿಮೆ:
ಮುಂಚಿನ ಬರಹದಲ್ಲಿ ತಿಳಿಸಿದಂತೆ ಇಲ್ಲಿಯೂ ಮಿನ್ನೊಡೆಯುವಿಕೆ (electrolysis) ಮೂಲಕವೇ ಮಿಂಚು ಹರಿದು ಬಲ್ಬ್ ಉರಿಯುವಂತೆ ಮಾಡುತ್ತದೆ. ಸತುವಿನ ಮೊಳೆಗಳು ಏರುಗಣೆಯಂತೆ (anode) ಕೆಲಸಮಾಡಿ ಕಳೆವಣಿಗಳಾಗಿ (electrons) ಬೇರ‍್ಪಟ್ಟರೆ, ನಾಣ್ಯಕ್ಕೆ ಸುತ್ತಿದ ತಾಮ್ರದ ತಂತಿಗಳು ಇಳೆಗಣೆಯಂತೆ (cathode) ಕೆಲಸಮಾಡಿ ಮಿಂಚು ಹರಿಯಲು ನೆರವಾಗುತ್ತವೆ. ಆಲೂಗಡ್ಡೆಯಲ್ಲಿರುವ ಪಾಸ್ಪರಿಕ್ ಹುಳಿ (phosphoric acid) ಇಲ್ಲಿ ಮಿಂಚೋಡುಕನಾಗಿ (electrolyte) ಎಸಕವನ್ನು (chemical reaction) ಪೂರ‍್ತಿಗೊಳಿಸುತ್ತದೆ.

ನೆನಪಿರಲಿ: ತಾಮ್ರದ ತಂತಿಗಳನ್ನು ಮಕ್ಕಳು ಮುಟ್ಟದಂತೆ ಎಚ್ಚರವಹಿಸಿ,ಇದರಲ್ಲಿ ಕಡಿಮೆ ಪ್ರಮಾಣದ ಮಿಂಚು ಹರಿದರೂ ಚಿಕ್ಕದಾದ ಶಾಕ್ ನೀಡಬಲ್ಲುದು. ಈ ಆರಯ್ಕೆಯ ಮೂಲಕ ಹಯ್ಡ್ರೋಜನ್ ಗಾಳಿಯು ಬಿಡುಗಡೆಗೊಳ್ಳುತ್ತದೆ, ಅದಕ್ಕೋಸ್ಕರ ತುಂಬಾ ಬಿಸಿಯಾದ ಹಾಗೂ ಬೆಂಕಿಯಿಂದ ಸುಲಬವಾಗಿ ಹೊತ್ತಿ ಉರಿಯುವ ವಸ್ತುಗಳನ್ನು ಸುತ್ತ-ಮುತ್ತಲೂ ಬಳಸದೇ ಇದ್ದರೆ ಲೇಸು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: