ಎಲ್ಲರಕನ್ನಡ: ಕನ್ನಡಕ್ಕೆ ಇದೇ ಸರಿಯಾದ ದಾರಿ

ಪ್ರಶಾಂತ ಸೊರಟೂರ.

IMG_0152

ಎಲ್ಲರಕನ್ನಡದ ಬಗ್ಗೆ ನನ್ನ ಅನಿಸಿಕೆ, ಅನುಬವಗಳನ್ನು ನಿಮ್ಮ ಮುಂದಿಡುವ ಮುನ್ನ ನನ್ನ ಕುರಿತು ಒಂದೆರಡು ವಿಶಯಗಳು, ಕನ್ನಡ ಮಾದ್ಯಮದಲ್ಲಿ ಹತ್ತನೇ ತರಗತಿ ವರೆಗಿನ ಕಲಿಕೆಯಿಂದ ಹಿಡಿದು ಮೆಕ್ಯಾನಿಕಲ್ ಇಂಜನೀಯರಿಂಗ್‍ ವರೆಗಿನ ನನ್ನ ಕಲಿಕೆಯನ್ನು ನಮ್ಮೂರು ಗದಗಿನಲ್ಲಿ ಮುಗಿಸಿದ್ದು, ಕಳೆದ ಸುಮಾರು ಒಂಬತ್ತು ವರುಶಗಳಿಂದ ಬೆಂಗಳೂರಿನಲ್ಲಿರುವ ಹಲನಾಡಿನ ಕೂಟವೊಂದರಲ್ಲಿ ಬಿಣಿಗೆಯರಿಗನಾಗಿ (engineer) ಕೆಲಸ ಮಾಡುತ್ತಿರುವೆ. ಈ ಹೊತ್ತಿಗೆ ಆ ಕಂಪನಿಯ ಅರಕೆ ಮತ್ತು ಬೆಳವಣಿಗೆಯ (research and development ) ಕವಲಿನಲ್ಲಿ ತಂಡವೊಂದನ್ನು ಮುನ್ನಡೆಸುತ್ತಿರುವೆ.

ಡಾ. ಡಿ.ಎನ್.ಶಂಕರ ಬಟ್ ಅವರ ಬಗ್ಗೆ ನನಗೆ ಮೊದಲು ತಿಳಿದದ್ದು 2010 ರಲ್ಲಿ ’ಮಯೂರ’ದಲ್ಲಿ ಅಚ್ಚಾಗಿದ್ದ ಬರಹದಿಂದ. ಆ ಬರಹದಲ್ಲಿ ಅವರ ಕುರಿತು ತಿಳಿಸಿಕೊಡುವುದರ ಜೊತೆಗೆ ಅವರೊಡನೆ ಸುದ್ದಿಗಾರರಾದ ಮಲ್ಲಿಕಾರ್‍ಜುನ ಮೇಟಿ ಮತ್ತು ಸಿರಾಜ್ ಅಹಮದ್ ಅವರು ನಡೆಸಿದ ಮಾತುಕತೆ ಇತ್ತು. ಆ ಬರಹದಲ್ಲಿನ ಸುದ್ದಿಗಾರರ ಹಲವು ಕೇಳ್ವಿಗಳಿಗೆ ಶಂಕರ ಬಟ್ಟರು ನೀಡಿದ ನೇರವಾದ, ದಿಟವೆನಿಸುವ ಮಾರ‍್ನುಡಿಗಳನ್ನು ಓದಿದ ಮೇಲೆ ಎಲ್ಲೋ ಆಳದಲ್ಲಿ ಹುದುಗಿದ್ದ ಕನ್ನಡದ್ದೇ ಒಲವು ಅಂದು ಉಕ್ಕಿದಂತಾಗಿತ್ತು. ಕನ್ನಡವೆಂದು ಹೇಳಲಾಗುತ್ತಿದ್ದ ನುಡಿಯ ಬಳಕೆ ಅದರದ್ದಲ್ಲ, ಅದಕ್ಕೆ ತನ್ನದೇ ಆದ ಬೇರೆಯದೇ ಸೊಗಡಿದೆ ಅನ್ನುವಂತಹ ವಿಶಯ ನನಗೆ ಅಂದು ಚೂರುಪಾರು ಗೊತ್ತಿದ್ದರೂ, ಬಟ್ಟರೊಡನೆಯ ಆ ಮಾತುಕತೆಯನ್ನು ಓದಿದ ಮೇಲೆಯೇ ಆ ವಿಶಯದಲ್ಲಿ ನನಗೆ ಹೆಚ್ಚು ಸ್ಪಶ್ಟತೆ ತಂದುಕೊಟ್ಟಿತ್ತು.

ಮುಂದೆ ಶಂಕರ ಬಟ್ಟರ ಕುರಿತು ನನಗೆ ಹೆಚ್ಚಿಗೆ ಗೊತ್ತಾಗಿದ್ದು ಬನವಾಸಿ ಬಳಗದ ಗೆಳೆಯರಿಂದ. ಬಳಗವು ’ಎಲ್ಲರ ಕನ್ನಡ’ ಮಿಂಬಲೆಯಲ್ಲಿ ಏರಿಸಿದ್ದ ಶಂಕರ ಬಟ್ಟರ ಹೊತ್ತಗೆಗಳನ್ನು ಇಳಿಸಿಕೊಂಡು ಬಿಡಿ-ಬಿಡಿಯಾಗಿ ಓದಿದೆ.ನಾನು ಚಳಕರಿಮೆ (technology/technical) ಹೊತ್ತಗೆಗಳಾಚೆಗೆ ಹೆಚ್ಚಿಗೆ ಓದಿದವನಲ್ಲ. ಆದರೆ ಶಂಕರ ಬಟ್ ಅವರ ಅರಿವುಗಳನ್ನು ಹಿಡಿದಿಟ್ಟ ಆ ಹೊತ್ತಗೆಗಳು ನನ್ನನ್ನು ಅಂದು ತನ್ನೆಡೆಗೆ ಸೆಳೆದಿದ್ದವು, ಇಂದೂ ಸೆಳೆಯುತ್ತಿವೆ. ಬಟ್ಟರ ಹೊತ್ತಗಳನ್ನು ತಕ್ಕಮಟ್ಟಿಗೆ ಓದಿದ ಮೇಲೆ ನನ್ನ ಅರಿವಿಗೆ ಮೊದಲು ಎಟುಕಿದ್ದು ಮೂರು ವಿಶಯಗಳು. ಅವುಗಳನ್ನು ನನ್ನ ಮಾತಿನಲ್ಲಿ ಮುಂದೆ ಬರೆದಿರುವೆ,

 1) ಕನ್ನಡದ್ದೇ ಆದ ಪದಗಳು: 

ಬರಹ ಕನ್ನಡದಲ್ಲಿ ಹಿಂದಿನಿಂದಲೂ ಎರವಲು ಪದಗಳನ್ನು ಎಲ್ಲೆ ಮೀರಿ ತುಂಬಿಸಲಾಗಿದೆ, ಇನ್ನೂ ತುಂಬಲಾಗುತ್ತಿದೆ. ಇದರಿಂದ ಬರಹ ಕನ್ನಡ, ಆ ನುಡಿಯಾಡುಗರಿಂದ ದೂರವಾಗಿದೆ. ಹೀಗೆ ಆಗಿದ್ದರಿಂದ ಕನ್ನಡ ತನ್ನದೇ ಆದ ಪದಕಟ್ಟುವ ಕಸುವು ಹೊಂದಿದೆ ಅನ್ನುವುದನ್ನೂ ಮಂದಿ ಮರೆತಿದ್ದಾರೆ. ಎಲ್ಲದಕ್ಕೂ ಸಂಸ್ಕ್ರುತ ಇಲ್ಲವೇ ಬೇರೆ ನುಡಿಗಳ ಮೊರೆ ಹೋಗುವುದನ್ನು ಕನ್ನಡಿಗರು ಗೀಳಾಗಿಸಿಕೊಂಡಿದ್ದಾರೆ. ತಮ್ಮ ನುಡಿಯ ಪದಗಳ ಬಗ್ಗೆನೇ ಹಲವು ಕನ್ನಡಿಗರಿಗೆ ಕೀಳರಿಮೆ ಇದೆ. ಇದನ್ನು ಸರಿಪಡಿಸಿ ಕನ್ನಡದ್ದೇ ಪದಗಳ ಕಸುವು ಮಯ್ಗೂಡಿಸಿಕೊಂಡರೆ ಕನ್ನಡಿಗರಿಗೆ ಆಗುವ ಒಳಿತು ಎಣಿಸಲಾಗಂತದ್ದು.

ಪದಗಳನ್ನು ಕಟ್ಟುವಾಗ, ಬಳಸುವಾಗ ಎರವಲು ಪದಗಳು ಹೆಚ್ಚೆಂದರೆ 10-15% ಕ್ಕಿಂತ ಕಡಿಮೆ ಇದ್ದರೆ ಒಳಿತು ಎನ್ನುವಂತ ಎಲ್ಲೆ ಹಾಕಿದ್ದು, ಶಂಕರ ಬಟ್ಟರ ಗಟ್ಟಿ ನಿಲುವುಗಳಲ್ಲೊಂದು. (ಇದನ್ನು ಶಂಕರ ಬಟ್ಟರು ತಮ್ಮ ಹಲವು ಹೊತ್ತಗೆಗಳ ಜತೆಗೆ ’ಇಂಗ್ಲಿಶ ಪದಗಳಿಗೆ ಕನ್ನಡದ್ದೇ ಪದಗಳು’ ಎಂಬ ಪದನೆರಕೆಯಲ್ಲೂ ಮಾಡಿ ತೋರಿಸಿದ್ದಾರೆ. 2010 ರಿಂದ ಅದನ್ನು ಬಳಸುತ್ತಿರುವ ನನಗೆ ಅದರ ಆಳ, ಹರವು, ಬಳಕೆ ಮನದಟ್ಟಾಗಿದೆ)

2) ಕನ್ನಡ ಬರಹ ಸರಿಪಡಿಸುವಿಕೆ:

ಕನ್ನಡದ್ದೇ ಪದಗಳನ್ನು ಅಳವಡಿಸುವುದರ ಜೊತೆಗೆ ಎರವಲು ಪದಗಳನ್ನು ಪಡೆಯಲೇಬೇಕಾದಾಗ ಹಲವು ಕನ್ನಡಿಗರು ಉಲಿಯುವಂತೆ / ಅನ್ನುವಂತೆ ಬರೆಯುವುದು. ಇಲ್ಲಿ ಮುಂಚೂಣಿಯಲ್ಲಿ ಕಾಣುವುದು, ಸಂಸ್ಕ್ರುತದಿಂದ ಪದಗಳನ್ನು ’ಎರವಲು’ ಪಡೆಯಬೇಕಾದಾಗ ಅವುಗಳಲ್ಲಿರುವ ’ಮಹಾಪ್ರಾಣ’ಗಳನ್ನು, ’ಅಲ್ಪಪ್ರಾಣ’ಗಳನ್ನಾಗಿ ಬರೆಯುವುದು. ಅಂದರೆ ಖ, ಘ, ಛ, ಝ ಮುಂತಾದವುಗಳನ್ನು ಕ, ಗ, ಚ, ಜ ಅಂತಾ ಬರೆಯುವುದು. ಇದರಿಂದಾಗಿ ಹಲವು ಕನ್ನಡಿಗರಲ್ಲಿ ಮಹಾಪ್ರಾಣಗಳಿಂದಾಗಿ ಉಂಟಾಗುತ್ತಿರುವ ತೊಡಕುಗಳನ್ನು ಬಗೆಹರಿಸಬಹುದು. ಇಲ್ಲಿ ಇನ್ನೊಂದು ಕಂಡುಕೊಳ್ಳಬೇಕಾದ ವಿಶಯವೆಂದರೆ ಅಪ್ಪಟ ಕನ್ನಡ ಪದಗಳಲ್ಲಿ ’ಮಹಾಪ್ರಾಣ’ಗಳು ಇಲ್ಲ, ಅವುಗಳು    ಬರುವುದೇನಿದ್ದರೂ ಸಂಸ್ಕ್ರುತ ಮತ್ತು ಇತರ ಎರವಲು ಪದಗಳಲ್ಲಿಯೇ. ’ಮಹಾಪ್ರಾಣ’ಗಳ ಜೊತೆಗೆ ಕನ್ನಡದ ಪದಗಳಲ್ಲಿರುವ ’ಐ’ ಅನ್ನು ’ಅಯ್’ ಆಗಿ ಮತ್ತು ’ಔ’ ಅನ್ನು ’ಅವ್’ ಆಗಿ ಕೂಡಾ ಅಳವಡಿಸಿಕೊಳ್ಳಬಹುದು.

ಮೇಲಿನ ಎರಡು ತಿಳಿವುಗಳಲ್ಲಿ ನನಗೆ ಮೊದಲನೇಯದು ತುಂಬಾ ಹಿಡಿಸ್ತು ಯಾಕಂದ್ರೆ ಕನ್ನಡದಲ್ಲಿ ಮಿತಿ ಮೀರಿದ ಸಂಸ್ಕ್ರುತ ಪದಗಳನ್ನು ತುಂಬಿ, ತೊಡಕಾಗಿಸಿದ್ದಾರೆ ಅಂತಾ ನನಗೆ ಮೊದಲಿನಿಂದ ತಲೆಯಲ್ಲಿತ್ತು. ಈಗ ಬಟ್ಟರ ಬರಹಗಳನ್ನು ಓದಿದ ಮೇಲೆ ಅದು ಗಟ್ಟಿಯಾಯಿತು. ಇದರ ಜೊತೆಗೆ ಇದನ್ನು ಮೀರುವ ಬಗೆಯನ್ನು ಕೂಡಾ ಅವರು ತಿಳಿಸಿದ್ದರು. ಆದರೆ ಎರಡನೇಯದು ತೊಡಕಿನದು ಎನಿಸಿತು ಅದಕ್ಕೆ ಕಾರಣಗಳು ಹೀಗಿದ್ದವು,

ಅ)  ನನಗನಿಸಿದ್ದು ಹಲವು ಕನ್ನಡಿಗರು ಶಂಕರ ಬಟ್ಟರ ನಿಲುವುಗಳಲ್ಲಿ ಮೊದಲನೆಯದನ್ನು ಬಿಟ್ಟು ಒಮ್ಮೆಲೇ ಎರಡನೇಯದಕ್ಕೇ ಹಾರಬಹುದು, ಹಾಗಾದಾಗ ಅಲ್ಲಿ ಗೊಂದಲಗಳು ಹೆಚ್ಚಬಹುದು. ಅಂದರೆ ಎರವಲು ಹಾಗೇ ಉಳಿಯುತ್ತೆ ಆದರೆ ಮಹಾಪ್ರಾಣಗಳಶ್ಟೇ ಬಿಟ್ಟು ಹೋಗುತ್ತೆ. ಕನ್ನಡದಲ್ಲಿ ಎರವಲು ಪದಗಳ ತತ್ಸಮಗಳು ತದ್ಬವಗಳಾಗಿ ಮತ್ತಶ್ಟು ತತ್-ಉದ್ಬವಗಳು ಉಂಟಾಗಬಹುದು. ಇದರಿಂದಾಗಿ ಕನ್ನಡವು ಮತ್ತೇ ಎರವಲು ಪದಗಳ ಅಡಿಯಾಳಾಗೇ ಉಳಿಯುವುದು. (ಎರವಲು ಪದಗಳನ್ನು ಕನ್ನಡ ಅರಗಿಸಿಕೊಳ್ಳುತ್ತೆ ಅನ್ನುವಂತ ಮಾತುಗಳು ನನಗೆ ಹಳಸಿದ, ತನ್ನತನವನ್ನು ಮರೆತ, ಹುರುಳಿಲ್ಲದ ಮಾತುಗಳು ಅಂತಾ ಮನವರಿಕೆಯಾಗಿತ್ತು)

ಬ)  ನನ್ನ ಮನೆಯ ಸುತ್ತಮುತ್ತಲಿನ ವಾತಾವರಣದಿಂದಾಗಿ ಇಲ್ಲವೇ ನನ್ನ ಜಾತಿಯ (ಬ್ರಾಹ್ಮಣ) ಹಿನ್ನಡವಳಿಯಿಂದಾಗಿ ಮಹಾಪ್ರಾಣಗಳು ನನಗೆ ಹೆಚ್ಚು ತೊಂದರೆ ಅನಿಸದಿರುವುದು. ಹಾಗೆನೇ ಬೇರೆಯವರಿಗೆ ಯಾಕೇ ಅದು ತೊಂದರೆಯಾಗಬೇಕು?, ಮಹಾಪ್ರಾಣಗಳನ್ನು ಶಾಲೆಯಲ್ಲಿ ’ಒತ್ತಿ’ ಹೇಳಿಕೊಟ್ಟರೆ ಎಲ್ಲರೂ ಕಲಿಯುತ್ತಾರೆ ಅನ್ನುವಂತ ಅನಿಸಿಕೆಗಳು ಹಲವರಂತೆ ನನ್ನವೂ ಆಗಿದ್ದವು.

ಆದರೆ ಬರತಾ-ಬರತಾ ನನಗೆ ಮೇಲೆ ) ದಲ್ಲಿರುವ ನನ್ನ ಅನಿಸಿಕೆಯಲ್ಲಿ ಹುರುಳಿಲ್ಲ ಅಂತ ಮನದಟ್ಟಾಯಿತು. ಕನ್ನಡ ’ಎಲ್ಲರ’ ಕನ್ನಡವಾಗಬೇಕಾದರೆ ಜಾತಿಯಿಂದ, ಪ್ರದೇಶದಿಂದ ಹೊಕ್ಕಿರಬಹುದಾದ ಕೆಲವು ಅನಿಸಿಕೆಗಳನ್ನು ಕಯ್ಬಿಟ್ಟರೇ ಒಳಿತಾಗುವುದು. ಮಹಾಪ್ರಾಣಗಳನ್ನು ಒತ್ತಿ ಹೇಳಿಕೊಡುತ್ತಾ ಸೋಲುವುದರ ಬದಲು ಕನ್ನಡಿಗರಿಗೆ ಒಗ್ಗುವಂತೆ ಅವುಗಳನ್ನು ಕಯ್ಬಿಡುವುದೇ ಸರಿಯಾದ ದಾರಿ. ಆಗಲೇ ಬರಹ ಕನ್ನಡ ಹಲವು ಮಂದಿಗೆ ಹತ್ತಿರವಾದ ಎಲ್ಲರ ಕನ್ನಡವಾಗಬಲ್ಲದು ಎಂದೆನಿಸಿತು. ಇದರ ಜತೆಗೆ ಇನ್ನೊಂದು ಅರಿತ ವಿಶಯವೆಂದರೆ ಬಡಗಣ ಕರ‍್ನಾಟಕದಲ್ಲಿ ಕೆಲವರ ಆಡುನುಡಿಯ ಪದಗಳಲ್ಲಿ ಮಹಾಪ್ರಾಣಗಳು (ಎತ್ತುಗೆಗೆ: ಬಹಳ >> ಭಾಳ, ಚನ್ನ? >> ಛೊಲೋ)  ಕಾಣಿಸಿಕೊಂಡರೂ ಹೆಚ್ಚಿನವರು ಅವುಗಳನ್ನು ಉಲಿಯುವುದಿಲ್ಲ. ಹಾಗಾಗಿ ಈ ಬಿಡುವಿಕೆ, ಪಡೆಯುವಿಕೆ ಎಲ್ಲ ಜಾತಿ, ಪ್ರದೇಶಗಳಿಗೂ ಹೊಂದುವಂತದು.

ಇನ್ನು, ಮೇಲಿನ ) ಅನಿಸಿಕೆಯಲ್ಲಿ ಹೆಚ್ಚಿನ ಬದಲಾವಣೆಗಳಾಗಿಲ್ಲ ಅಂದರೆ ಕನ್ನಡ ಪದಗಳತ್ತ ಹೊರಳುತ್ತಿರುವವರ ಎಣಿಕೆಯೂ ಹೆಚ್ಚಬೇಕಾಗಿದೆ, ಬರೀ ಮಹಾಪ್ರಾಣಗಳನ್ನು ಬಿಡುವುದರಿಂದ ಕನ್ನಡಕ್ಕೆ ಒಳಿತಲ್ಲ. ಬರಹವನ್ನು ಸರಿಪಡಿಸಿಕೊಳ್ಳುತ್ತಾ ಕನ್ನಡದ್ದೇ ಪದಗಳನ್ನು ಮಯ್ಗೂಡಿಸಿಕೊಳ್ಳುವತ್ತ ಹೆಜ್ಜೆಹಾಕಬೇಕೆನ್ನುವ ಶಂಕರ ಬಟ್ಟರ ಮೇಲಿನ ಎರಡೂ ನಿಲುವುಗಳೂ ಒಟ್ಟೊಟ್ಟಿಗೆ ಹೋಗಬೇಕು.

3) ಕನ್ನಡದ್ದೇ ಸೊಲ್ಲರಿಮೆ:

ಇಂದು ಕನ್ನಡದ್ದೆಂದು ಹೇಳಿಕೊಡಲಾಗುತ್ತಿರುವ ವ್ಯಾಕರಣ, ಕನ್ನಡಕ್ಕಿಂತ ಹೆಚ್ಚಿಗೆ ಸಂಸ್ಕ್ರುತಕ್ಕೆ ಒಪ್ಪುವಂತದು. ಕನ್ನಡದ ಮಾತು, ಎಂದಿನ ಬರಹಗಳಲ್ಲಿರದ ವ್ಯಾಕರಣವನ್ನು ನಮಗೆ ಕಲಿಸಲಾಗುತ್ತಿದೆ. ಹೀಗಾಗಿ ವ್ಯಾಕರಣವು ಕನ್ನಡಿಗರಿಗೆ ಕಬ್ಬಿಣದ ಕಡಲೆಯಾಗಿರುವುದರ ಜೊತೆಗೆ ವ್ಯಾಕರಣ ಕಲಿಕೆಯಿಂದ ದಕ್ಕಬೇಕಾಗಿದ್ದ ಕನ್ನಡ ನುಡಿ ಕಟ್ಟಲೆಗಳ ಅರಿವು ನಮಗೆ ಎಟುಕದಂತಾಗಿದೆ. ಇಂದು ಕನ್ನಡಿಗರಿಗೆ ಕನ್ನಡದ ಸೊಲ್ಲರಿಮೆ (ವ್ಯಾಕರಣ) ಬೇಕಾಗಿದೆ.

ಈ ನಿಟ್ಟಿನಲ್ಲಿ ಶಂಕರ ಬಟ್ಟರು ಮಾಡಿದ, ಮಾಡುತ್ತಿರುವ ಕೆಲಸ ಸಾಟಿಯಿಲ್ಲದಂತದು. ವ್ಯಾಕರಣದ ತೊಡಕಿನ ಪದಗಳಿಗೆ ಕನ್ನಡದ್ದೇ ಆದ ಪದಗಳನ್ನು ಕಟ್ಟುವುದು, ಕನ್ನಡ ನುಡಿಯ ಸೊಲ್ಲಿನಲ್ಲಿ ಅಡಗಿದ ಅರಿಮೆಯನ್ನು ಎತ್ತಿ ತೋರಿಸುತ್ತಿರುವುದು ಎಂತವರನ್ನೂ ತನ್ನೆಡೆಗೆ ಸೆಳೆಯುವಂತದು.

ಕಳೆದ ಒಂದೆರಡು ವರುಶಗಳಲ್ಲಿ ಎಲ್ಲರ ಕನ್ನಡವನ್ನು ಹೆಚ್ಚೆಚ್ಚು ಅರಿಯುವತ್ತ, ಅದನ್ನು ಬಳಕೆಗೆ ತರುವತ್ತ ತೊಡಗಿಕೊಂಡಿರುವ ನನಗೆ ಕನ್ನಡಕ್ಕೆ ಇದೇ ಸರಿಯಾದ ದಾರಿ ಅಂತಾ ಮನದಟ್ಟಾಗಿದೆ. ಶಂಕರ ಬಟ್ಟರ ಹೊತ್ತಗೆಗಳನ್ನು ಎಲ್ಲ ಕನ್ನಡಿಗರು ಓದುವಂತಾಗಲಿ, ಇಲ್ಲಿಯವರಿಗೆ ಕಣ್ಣು-ಮುಚ್ಚಿ ಒಪ್ಪಿಕೊಂಡು ಬಂದಿರುವ ಹಲವು ತಪ್ಪು ಅರಿವುಗಳು ಅಳಿಯುವಂತಾಗಲಿ. ಕನ್ನಡಿಗರ ಮುಂದಿನ ನಾಳೆಗಳನ್ನು ಬೆಳಗಿಸಲು ಜಗತ್ತಿನ ಹಲವಾರು ವಿಶಯಗಳು ಅದರಲ್ಲೂ ಮುಕ್ಯವಾಗಿ ಅರಿಮೆ ಮತ್ತು ಚಳಕದ (science and technology) ತಿಳಿವು ಕನ್ನಡಕ್ಕೆ ಹರಿದುಬರಬೇಕಾಗಿದೆ. ಈ ನಿಟ್ಟಿನಲ್ಲಿ ಈಗಿನ ಬರಹ ಕನ್ನಡ ’ಎಲ್ಲರ ಕನ್ನಡ’ದತ್ತ ಆದಶ್ಟು ಬೇಗ ಹೊರಳುವಂತಾಗಲಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: