ಇಂದಿನಿಂದ ಮಡಿಕೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ

– ರತೀಶ ರತ್ನಾಕರ.

ಇಂದಿನಿಂದ ಮುಂದೆ ಮೂರು ದಿನಗಳು, ಅಂದರೆ ಜನವರಿ 7, 8 ಮತ್ತು 9ರಂದು ಮಡಿಕೇರಿಯಲ್ಲಿ ಹಬ್ಬದ ವಾತಾವರಣ, ಜಗತ್ತಿನ ಎಲ್ಲಾಕಡೆಯಿಂದ ಕನ್ನಡಿಗರು ಮಡಿಕೇರಿಯ ಕಡೆ ನೋಟ ಹರಿಸುವ ಇಲ್ಲವೇ ದಾಪುಗಾಲು ಇಡುವ ದಿನಗಳು. ಕನ್ನಡ ಸಾಹಿತ್ಯ ಪರಿಶತ್ತು ನಡೆಸುವ “ಕನ್ನಡ ಸಾಹಿತ್ಯ ಸಮ್ಮೇಳನ”ದ ದಿನಗಳಿವು. ಇದು 80ನೇ ಸಾಹಿತ್ಯ ಸಮ್ಮೇಳನವಾಗಿದ್ದು ಈ ಬಾರಿ ನಾಡಿನ ಮಂದಿಮೆಚ್ಚಿದ ನಲ್ಬರಹಗಾರ ನಾ. ಡಿಸೋಜರವರ ಮೇಲಾಳುತನದಲ್ಲಿ ನಡೆಯಲಿದೆ.

ಸಾಹಿತ್ಯ ಸಮ್ಮೇಳನವೆಂದರೆ ಒಂದು ಬಗೆಯ ಕನ್ನಡಿಗರ ಹಬ್ಬ. ಕನ್ನಡ ಸಾಹಿತ್ಯ ಪರಿಶತ್ತಿನಿಂದ ನಡೆಸಲ್ಪಡುವ ದೊಡ್ಡ ಕನ್ನಡ ಸಮ್ಮೇಳನ. ಕರ್‍ನಾಟಕದ ಏಕೀಕರಣವನ್ನು ಸಾದಿಸುವುದು ಮತ್ತು ಕನ್ನಡನಾಡಿನ ಬದುಕಿನಲ್ಲಿ ಕನ್ನಡವು ಮೇಲುಗಯ್ ಆಗಿರಲು ಬೇಕಾದ ಮಂದಿಯರಿಕೆಯನ್ನೂ ಸಂಕಲ್ಪವನ್ನೂ ಹುಟ್ಟಿಸುವುದು ಈ ಸಮ್ಮೇಳನಗಳ ಉದ್ದೇಶ. ಕನ್ನಡ ಸಾಹಿತ್ಯಕ್ಕೆ ಎಡೆಬಿಡದೆ ದುಡಿದ ಸಾಹಿತಿಗಳನ್ನು ಇದರ ಅದ್ಯಕ್ಶತೆ ವಹಿಸಲು ಕೋರಿ ಗವ್ರವಿಸಲಾಗುತ್ತದೆ. ಈ ಹಿಂದೆ ಕನ್ನಡ ಸಾಹಿತ್ಯದ ಅನೇಕ ಗಣ್ಯರು, ಹಿರಿಯರು ಕನ್ನಡ ಸಾಹಿತ್ಯ ಸಮ್ಮೇಳನದ ಅದ್ಯಕ್ಶತೆ ವಹಿಸಿದ್ದಾರೆ. 1915ರಿಂದ ಈ ಸಮ್ಮೇಳನಗಳನ್ನು ಸಾಹಿತ್ಯ ಪರಿಶತ್ತು ನಡೆಸಿಕೊಂಡು ಬಂದಿದೆ.

ಕರ್‍ನಾಟಕ ಒಂದೇ ಅಲ್ಲದೇ ಹೆರನಾಡುಗಳಿಂದಲೂ ಕನ್ನಡಿಗರು ಬಂದು ಪಾಲ್ಗೊಂಡು ಈ ಕಾರ್‍ಯಕ್ರಮದ ಸವಿಯನ್ನು ಸವಿಯುತ್ತಾರೆ. ಕೇವಲ ಸಾಹಿತ್ಯ ಮನರಂಜನೆಗೆ ಮಾತ್ರ ಮೀಸಲಿರದೆ ಈ ಸಮ್ಮೇಳನವು ನಾಡು-ನುಡಿಯ ಬಗೆಗಿನ ಚಿಂತನೆಗೂ ಜಾಗ ಮಾಡಿಕೊಟ್ಟಿದೆ. ನಾಡು ಮತ್ತು ನುಡಿಗೆ ತೊಂದರೆ ಆದಾಗ ಅದರ ಎದುರು ರಣಕಹಳೆಯನ್ನು ಊದಿ ಸರಕಾರಕ್ಕೆ ಎಚ್ಚರವನ್ನು ನೀಡಿ, ಕನ್ನಡಿಗರನ್ನು ಎಚ್ಚರಿಸುವ ಕೆಲಸವನ್ನೂ ಮಾಡಿಕೊಂಡು ಬಂದಿದೆ. ಹಲವಾರು ಕನ್ನಡಪರ ಹಾಗೂ ಕನ್ನಡಿಗರ ಪರ ನಿಲುವುಗಳನ್ನು ಈ ಸಮ್ಮೇಳನಗಳಲ್ಲಿ ಮಾಡಲಾಗುವುದು ಮತ್ತು ಅಗತ್ಯ ಬಿದ್ದಾಗ ಕನ್ನಡಿಗರ ಹಕ್ಕಿಗಾಗಿ ಹೋರಾಟಗಳನ್ನು ಕಯ್ಗೊಳ್ಳಲಾಗಿದೆ.

ಇಶ್ಟೆಲ್ಲಾ ಮಾಡುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನವು ಕರ್‍ನಾಟಕಕ್ಕೆ ಮಾತ್ರ ಸೀಮಿತವಾಗಿರದೆ ಜಗತ್ತಿನ ಎಲ್ಲಾ ಕನ್ನಡಿಗರ ಸಲುವಾಗಿ ಇರುವುದು ನಲಿವಿನ ಸಂಗೀತ. ಇದರಿಂದ ಕನ್ನಡಿಗರನ್ನು ಬೆಸೆಯುವ ಮತ್ತು ಒಗ್ಗೂಡಿಸುವ ಕೆಲಸ ನಡೆಯುತ್ತದೆ. ಎತ್ತುಗೆಗೆ, ಕಳೆದ ಬಾರಿ ಬಿಜಾಪುರದಲ್ಲಿ ಸಮ್ಮೇಳನ ನಡೆದಾಗ ಪಕ್ಕದ ಮಹಾರಾಶ್ಟ್ರದಿಂದ ಹಾಗು ಆಂದ್ರ ಪ್ರದೇಶದಿಂದ ಕನ್ನಡಿಗರು ಬಂದು ಪಾಲ್ಗೊಂಡಿದ್ದರು. ಈ ಬಾರಿ ಮಡಿಕೇರಿಯಲ್ಲಿ ನಡೆಯುವುದರಿಂದ ಪಕ್ಕದ ಕೇರಳ ನಾಡಿನ ಕನ್ನಡಿಗರು ಬಂದು ನೋಡುವ ಅವಕಾಶವಿದೆ. ಹೀಗಾದಾಗ ಕರುನಾಡ ಗಡಿಯನ್ನು ಮೀರಿ ಕನ್ನಡಿಗರು ಬೆರೆಯುತ್ತಾರೆ. ಹೆರನಾಡಿನ ಕನ್ನಡಿಗರಿಗೂ ಕನ್ನಡದ ಹೆಚ್ಚುಗಾರಿಕೆ ಅರಿವಿಗೆ ಬರುತ್ತದೆ.

ಒಟ್ಟಾರೆಯಾಗಿ, ಕನ್ನಡ ಹಾಗೂ ಕನ್ನಡಿಗರ ಪರವಾಗಿ ಕನ್ನಡಿಗರನ್ನು ಬೆಸೆಯುತ್ತಾ, ಎಚ್ಚರಿಸುತ್ತಾ ಹಾಗೂ ಹುರಿದುಂಬಿಸುತ್ತಾ ಬೆಳೆದುಕೊಂಡು ಬಂದಿರುವ ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡ ಸಾಹಿತ್ಯ ಪರಿಶತ್ತಿನ ಒಳ್ಳೆಯ ಕೆಲಸವಾಗಿದೆ. ಇದು ಹೀಗೆ ಮುಂದುವರಿಯಲಿ, ಹೆಚ್ಚು ಹೆಚ್ಚು ಕನ್ನಡಿಗರು ಇದರಲ್ಲಿ ಪಾಲ್ಗೊಂಡು ಈ ಕಾರ್‍ಯಕ್ರಮವು ದೊಡ್ಡ ಗೆಲುವನ್ನು ಕಾಣಲಿ.

(ಚಿತ್ರ ಸೆಲೆ: bagndpack.blogspot.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: