ಈ ಗಾಲಿ ಅಂತಿಂತದಲ್ಲ!

ಜಯತೀರ‍್ತ ನಾಡಗವ್ಡ.

CHW1

ಗಾಲಿಯ ಅರಕೆ ಮನುಶ್ಯರ ಪ್ರಮುಕ ಅರಕೆಗಳಲ್ಲೊಂದು. ಇದರಿಂದ ನಾಗರೀಕತೆ ಬೆಳೆವಣಿಗೆ ಕಂಡು ಇಂದು ಈ ಚೂಟಿಯುಲಿಯುಗದ ಹಂತಕ್ಕೆ ಬಂದು ತಲುಪಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಗಾಲಿಯಿಂದ ನಿದಾನವಾಗಿ ಎತ್ತಿನಬಂಡಿ, ಕುದುರೆ ಜಟಕಾಬಂಡಿ ಕೊನೆಗೆ ರಯ್ಲು, ಕಾರು, ಬಸ್ಸಿನ ಸಾರಿಗೆಗಳು ಕಂಡುಹಿಡಿಯಲ್ಪಟ್ಟು ನಮ್ಮ ಬದುಕಿನಲ್ಲಿ ಪಯಣವನ್ನು ಸುಲಬಗೊಳಿಸಿವೆ. 

ಟೆಸ್ಲಾ ಮೋಟರ‍್ಸ್ ನ ಕೊಳವೆ ಸಾರಿಗೆ, ಕೊರಿಯಾದ ಮಡಚಿಡುವ ಕಾರುಗಳು, ಏರ‍್ಬಸ್‍ನ ವೇಗದ ದೊಡ್ಡ ಬಾನೋಡಗಳು ಈ ರೀತಿ ದಿನೇ ದಿನೇ ಹೊಸ ಹೊಸ ಚಳಕಗಳು (technologies) ಮೂಡಿಬರುತ್ತಿದ್ದರೂ ಹೊಗೆಯಿಲ್ಲದ ಸಾರಿಗೆಯ ಸೆಲೆ ಇಗ್ಗಾಲಿಯ ಸಾಯ್ಕಲ್‍ಗೆ ಬೇಡಿಕೆ ಮಾತ್ರ ಎಂದು ಕುಂದಿಲ್ಲ.

ಇಂದು ಜಗತ್ತಿನ ಹಲವಾರು ನಾಡುಗಳಲ್ಲಿ ಸಾಯ್ಕಲ್ ಬಳಕೆ ಹೆಚ್ಚುತ್ತಿದೆ. ಬಂಡಿ ದಟ್ಟಣೆ ಒಯ್ಯಾಟ ಮತ್ತು ಹೊಗೆ ಉಗುಳದ ಹಸಿರು ಸಾರಿಗೆ ಸೆಲೆ ಸಾಯ್ಕಲ್ ಮಂದಿಯ ದೇಹಕ್ಕೂ ವ್ಯಾಯಾಮ ತಂದು ಕೊಟ್ಟು ಅನುಕೂಲಕರವಾಗಿದೆ. ಇದೇ ಸಾಯ್ಕಲ್‍ಗಳಿಗೆ ಜಗತ್ತಿನ ಪ್ರಮುಕ ಕಲಿಕೆವೀಡು ಎಮ್.ಆಯ್.ಟಿ. (ಮಸಾಚುಸೇಟ್ಸ್ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ)ಯ ಬಿಣಿಗೆಯರಿಗರ ತಂಡವೊಂದು ಕೊಪನ್‍ಹೆಗನ್ ಗಾಲಿ ಅಳವಡಿಸಿ ಸಾಕಶ್ಟು ಸುದ್ದಿ ಮಾಡಿದೆ. ಕೊಪನ್‍ಹೆಗನ್ ಗಾಲಿಗಳ ಬಗ್ಗೆ ತಿಳಿಯುವ ಬನ್ನಿ.

ಕೊಪನ್‍ಹೆಗನ್ ಗಾಲಿಯು ವಿಶೇಶ ಗಾಲಿಯಾಗಿದ್ದು ಸಾಯ್ಕಲ್ ಬಂಡಿ ಓಡಿಸುಗನ ಪೆಡಲ್ ತುಳಿಯುವ ಮತ್ತು ಬ್ರೇಕ್ ಹಾಕಿದ ಬಲವನ್ನು ಕೂಡಿಟ್ಟುಕೊಳ್ಳುತ್ತದೆ. ಅಗತ್ಯವಿದ್ದಾಗ ಈ ಬಲವನ್ನು ಮರಳಿಸಿ ಓಡಿಸುಗನ ಕೆಲಸವನ್ನು ಹಗುರಗೊಳಿಸುತ್ತದೆ. ತಾನೋಡಗಳ ಬಿಣಿಗೆಯಲ್ಲಿ ಗಾಲಿತೂಕದಂತೆ (flywheel) ಇದು ಬಲ ಕೂಡಿಟ್ಟುಕೊಳ್ಳುತ್ತದೆ. ಇಶ್ಟೇ ಅಲ್ಲದೇ ಸಾಯ್ಕಲ್ ಸಾಗುವ ದಾರಿಯ ಒಯ್ಯಾಟದ ದಟ್ಟಣೆ (traffic congestion), ಕೆಡುಗಾಳಿಗಳು ಯಾವ ಹಂತದಲ್ಲಿವೆ ಹಾಗೂ ರಸ್ತೆಯ ಸ್ತಿತಿಗತಿಗಳ ಬಗ್ಗೆಯೂ ತಿಳಿಯಬಹುದು.

CHW3

(ಕೊಪನ್‍ಹೆಗನ್ ಗಾಲಿ ಅಳವಡಿಸಿರುವ ಸಾಯ್ಕಲ್) 

ನಿಮ್ಮ ಸಾಯ್ಕಲ್ ಓಡಿಸುವ ರೂಡಿ ಮತ್ತು ಅನುಕೂಲಗಳಿಗೆ ತಕ್ಕುದಾಗಿ ಈ ಗಾಲಿ ಹೊಂದಿಕೊಂಡು ಕೆಲಸಮಾಡುತ್ತದೆ. ಓಡಿಸುಗ ಎಶ್ಟು ಬಲದಿಂದ ಪೆಡಲ್ ತುಳಿಯುವರು ಅದರ ಮೇಲೆ ಓಡಿಸುಗನಿಗೆ ಎಶ್ಟು ಓಡುಗೆಯ ಕಸುವು ಬೇಕು ಎಂಬುದನ್ನ ನಿರ‍್ದರಿಸಿ ಈ ಸಾಯ್ಕಲ್ ಓಡಿಸಬಹುದು. ಇಳಿಜಾರಿನಲ್ಲಿ ಹೋಗುವಾಗ ಮೇಲೆರುವಾಗ ಇದರ ಹೆಚ್ಚಿನ ಲಾಬ ಪಡೆಯಬಹುದು.

CHW2

(ಕೊಪನ್‍ಹೆಗನ್ ಗಾಲಿಯ ಬಾಗಗಳು) 

ಓಡಿಸುಗ ತನ್ನ ಸಾಯ್ಕಲ್ ಬಂಡಿ ಹಿಂದಿನ ಗಾಲಿಗೆ ಕೊಪನ್ ಹೆಗನ್ ಗಾಲಿಯನ್ನು ಜೋಡಿಸಿ ತನ್ನ ಚೂಟಿಯುಲಿಯೊಂದಿಗೆ ಹೊಂದಾಣಿಕೆ ಮಾಡಿದರಾಯಿತು. ಓಡಿಸುಗ ಸಾಗುತ್ತಿರುವ ದಾರಿಯ ವಾತಾವರಣ ಎಂತದ್ದು ಅದರಲ್ಲಿ ಕಾರ‍್ಬನ್ ಆಕ್ಸಾಯಿಡ್ (CO), ನಯ್ಟ್ರೋಜನ್ ಆಕ್ಸಾಯಿಡ್(NOX)ನಂತಹ ವಿಶದಗಾಳಿಗಳ ಮಟ್ಟವನ್ನು ಕೊಪನ್‍ಹೆಗನ್ ಗಾಲಿಯ ಮೂಲಕ ತಿಳಿಯಬಹುದಾಗಿದ್ದು ಇತರರೊಂದಿಗೆ ಹಂಚಿಕೊಳ್ಳಲೂಬಹುದು.

ಕೊಪನ್‍ಹೆಗನ್ ಗಾಲಿಯನ್ನು ಈ ಎಲ್ಲವನ್ನೂ ಗಮನದಲ್ಲಿರಿಸಿ ಮಾಡಲಾಗಿದ್ದು ನಿಮಗೆ ಯಾವುದೇ ತಂತಿ, ವಾಯರಗಳನ್ನು ಹೊರಗಡೆಯಿಂದ ಜೋಡಿಸುವ ಕಿರಿ ಕಿರಿ ಇಲ್ಲ. ಮಿಂಚಿನ ಕಸುವಿನ ಸಾಯ್ಕಲ್‍ಗಳಿಗಿಂತ (E-Bikes) ಈ ಗಾಲಿಯ ಕಟ್ಟಳೆ ಬೇರೆ ಮತ್ತು ತುಂಬಾ ಸರಳವಾಗಿದೆ. ಒಂದು ಪುಟಾಣಿ ಮಿಂಚುಕದ ಓಡುಗೆ, ಚಿಕ್ಕ ಬ್ಯಾಟರಿ, 3-ವೇಗದ ಹಲ್ಲುಗಾಲಿ,ತಿರುಗುಬಲ (torque), ವಾತಾವರಣದ ತೇವ (humidity), ಬಿಸಿಲು, ಸದ್ದು ಮತ್ತು ಕೆಡುಗಾಳಿಗಳ ಮಟ್ಟ ಅಳಿಯುವ ವಿವಿದ ಅರಿವಿಕಗಳು (sensors) ಸೇರಿ ಕೊಪನ್‍ಹೆಗನ್ ಗಾಲಿಯು ತಯಾರುಗೊಂಡಿದೆ.

tech spec1

ಕೊಪನ್‍ಹೆಗನ್ ಗಾಲಿಯ ಮೂಲಕ ನೀವು ನಿಮ್ಮ ಸಾಯ್ಕಲ್‍ಗಳಿಗೆ ಕೀಲಿಹಾಕಿ ಮತ್ತು ಕೀಲಿ ತೆಗೆಯಲು ಸಾದ್ಯ. ಕೊಪನ್‍ಹೆಗನ್ ಗಾಲಿಯಲ್ಲಿ ಬ್ಲೂಟೂತ್ ನ ಚಳಕವಿದ್ದು, ಬ್ಲೂಟೂತ್ ಮೂಲಕವೇ ನಿಮ್ಮ ಚೂಟಿಯುಲಿಯೊಂದಿಗೆ ಇದು ಮಾಹಿತಿಯನ್ನು ನೀಡುತ್ತಿರುತ್ತದೆ. ಇದನ್ನು ನೀವು ನಿಮ್ಮ ಗೆಳೆಯ, ಬಂದುಗಳೊಂದಿಗೆ ಇಲ್ಲವೇ ಒಯ್ಯಾಟವನ್ನು ಹಿಡಿತದಲ್ಲಿಡಲು ಕೆಲಸಮಾಡುವ ಪೋಲಿಸ್‍ರಿಗೂ ಕಳಿಸಿ ಎಲ್ಲರಿಗೂ ನೆರವಾಗಬಹುದು.

ಕೊಪನ್‍ಹೆಗನ್ ಗಾಲಿಯ ಸಾಯ್ಕಲ್‍ಗಾಗಿ ನೀವು ಹೊಸ ಸಾಯ್ಕಲ್ ಕೊಳ್ಳುವ ಅಗತ್ಯವಿಲ್ಲ. ನಿಮ್ಮ ಬಳಿಯಿರುವ ಸಾಯ್ಕಲ್ಲಿಗೆ ಕೊಪನ್‍ಹೆಗನ್ ಗಾಲಿ ಜೋಡಿಸಿ ಹ್ಯಾಂಡಲ್ ಸರಳಿಗೆ ಚೂಟಿಯುಲಿ ಸಿಕ್ಕಿಸಿ ಜುಮ್ಮನೆ ಸಾಗಬಹುದು. ಕೊಪನ್‍ಹೆಗನ್ ಊರಿನ ಊರಾಳ್ವಿಗ (ಮೇಯರ್) ಒಬ್ಬರು ಈ ಹಮ್ಮುಗೆಗೆ ಬೆಂಬಲ ನೀಡಿದ್ದರ ಸಲುವಾಗಿ ಇದಕ್ಕೆ ಕೊಪನ್‍ಹೆಗನ್ ಗಾಲಿ ಎಂಬ ಹೆಸರು ಬಂದಿರಬಹುದು.

ಇಶ್ಟೆಲ್ಲ ಅನುಕೂಲವಾಗಿರುವ ಕೊಪನ್‍ಹೆಗನ್ ಗಾಲಿಯ ಸಾಯ್ಕಲ್ಗಳು ರಸ್ತೆಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತಿಲ್ಲವೆಂಬುದು ಅಚ್ಚರಿ ಮೂಡಿಸಿದ ಸಂಗತಿ. ಇವುಗಳು ನಮ್ಮ ನಾಡುಗಳಲ್ಲಿ ಮಾರಾಟಕ್ಕೆ ಬಿಡುಗಡೆಗೊಂಡು ಈಗಿರುವ ಒಯ್ಯಾಟ ಕಡಿಮೆಗೊಂಡರೆ ಅಶ್ಟೇ ಸಾಕಲ್ಲವೇ?

(ಮಾಹಿತಿ ಮತ್ತು ತಿಟ್ಟ ಸೆಲೆ: superpedestrian, senseable)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: