ಕಿವುಡರ ಸನ್ನೆನುಡಿಯೂ ಒಂದು ನುಡಿಯೇ
ನುಡಿಯರಿಮೆಯ ಇಣುಕುನೋಟ – 24
ನಾವು ಮಾತನಾಡುವಾಗ ಉಲಿಗಳನ್ನು ಬಳಸುತ್ತೇವೆ. ಈ ಉಲಿಗಳು ಕಿವುಡರಿಗೆ ಕೇಳಿಸುವುದಿಲ್ಲವಾದ ಕಾರಣ, ಕಿವುಡರಾಗಿರುವ ಚಿಕ್ಕ ಮಕ್ಕಳು ಉಲಿಗಳಿರುವ ಮಾತುಗಳನ್ನು ಕಲಿಯಲಾರರು. ಹಾಗಾಗಿ, ದೊಡ್ಡವರಾಗುತ್ತಿರುವಂತೆ ಅಂತಹ ಮಾತುಗಳನ್ನು ಬಳಸಲೂ ಅವರಿಗೆ ಸಾದ್ಯವಾಗುವುದಿಲ್ಲ. ಹೆಚ್ಚು ಕಿವುಡಿಲ್ಲದ ಮಕ್ಕಳಿಗೆ ಚಿಕ್ಕಂದಿನಲ್ಲೇನೇ ಕೇಳಿಸುವ ಉಪಕರಣವನ್ನು ತೊಡಿಸಿದಲ್ಲಿ ಅವರೂ ಇತರ ಮಕ್ಕಳ ಹಾಗೆ ಮಾತನಾಡಲು ಕಲಿಯಬಲ್ಲರು. ಆದರೆ ಏನೂ ಕೇಳಿಸದ ಮಕ್ಕಳಿಗೆ ಹೀಗೆ ಮಾಡಲು ಸಾದ್ಯವಾಗುವುದಿಲ್ಲ. ಹೀಗಿದ್ದರೂ, ಅಂತಹ ಮಕ್ಕಳಿಗೆ ಉಲಿಗಳ ಬದಲು ಸನ್ನೆಗಳನ್ನು ಬಳಸುವ ಮಾತನ್ನು ಕಲಿಸಿದಲ್ಲಿ ಅವರು ಅದನ್ನು ಕಲಿಯಬಲ್ಲರು. ಈ ರೀತಿ ಉಲಿಗಳ ಬದಲು ಸನ್ನೆಗಳನ್ನು ಬಳಸುವ ಕಿವುಡರ ನುಡಿಯನ್ನು ಸನ್ನೆನುಡಿಯೆಂದು ಕರೆಯಬಹುದು.
ಕಿವುಡರ ಈ ಸನ್ನೆನುಡಿ ನಾವಾಡುವ ಉಲಿನುಡಿಗಿಂತ ಒಂದು ಮುಕ್ಯವಾದ ವಿಶಯದಲ್ಲಿ ಬೇರಾಗಿದೆ. ಅದು ಕಣ್ಣಿಗೆ ಕಾಣಿಸುವ ಸನ್ನೆಗಳ ನುಡಿಯಾದ ಕಾರಣ, ಅದರಲ್ಲಿ ಒಂದೇ ಬಾರಿಗೆ ಕಯ್ಸನ್ನೆ, ಕಣ್ಣುಸನ್ನೆ, ಹುಬ್ಬುಗಳ ಕುಣಿತ, ತುಟಿಗಳ ಚಲನೆ, ನಿಲ್ಲುವ ಕ್ರಮ ಮೊದಲಾದ ಹಲವು ಬಗೆಯ ಸನ್ನೆಗಳನ್ನು ಒಟ್ಟಾಗಿ ಬಳಸಿಕೊಳ್ಳಲಾಗುತ್ತದೆ. ನಮ್ಮ ಮಾತುಗಳಲ್ಲಿ ಬಳಕೆಯಾಗುವ ಉಲಿಗಳು ಒಂದರ ಅನಂತರ ಒಂದರಂತೆ ಬರಬಲ್ಲುವಲ್ಲದೆ ಹಾಗೆ ಒಟ್ಟಾಗಿ ಬರಲಾರವು. ಈ ವಿಶಯದಲ್ಲಿ ಸನ್ನೆನುಡಿಗೆ ಉಲಿನುಡಿಗಿಂತ ಹೆಚ್ಚಿನ ಕಸುವಿದೆ. ಆದರೆ, ಇನ್ನೊಂದು ವಿಶಯದಲ್ಲಿ ಉಲಿನುಡಿಗೇನೇ ಹೆಚ್ಚಿನ ಕಸುವಿದೆ; ಸನ್ನೆನುಡಿಯಲ್ಲಿ ಒಬ್ಬರು ನುಡಿದ ಮಾತನ್ನು ಇನ್ನೊಬ್ಬರು ತಿಳಿಯಬೇಕಿದ್ದಲ್ಲಿ ಅವರಿಬ್ಬರೂ ಎದುರೆದುರಿಗೇನೇ ಇರಬೇಕಾಗುತ್ತದೆ; ಆದರೆ, ಉಲಿನುಡಿಯಲ್ಲಿ ಆ ರೀತಿ ಎದುರೆದುರಿಗಿರಬೇಕಾಗಿಲ್ಲ.
ಈ ಎರಡು ವಿಶಯಗಳನ್ನು ಹೊರತುಪಡಿಸಿ, ಬೇರೆಲ್ಲಾ ವಿಶಯಗಳಲ್ಲೂ ಕಿವುಡರ ಸನ್ನೆನುಡಿಗೆ ಕಿವಿ ಕೇಳುವವರ ಉಲಿನುಡಿಯಂತಹದೇ ಕಸುವಿದೆ. ಅದರಲ್ಲಿ ಬಳಕೆಯಾಗುವ ಸನ್ನೆಗಳಿಗೆ ಉಲಿನುಡಿಯ ಉಲಿಗಳ ಹಾಗೆ ನೇರವಾದ ಅರ್ತವಿರುವುದಿಲ್ಲ, ಮತ್ತು ಅಂತಹ ಅರ್ತವಿಲ್ಲದ ಸನ್ನೆಗಳ ಮೂಲಕ ಉಲಿನುಡಿಯ ಹಾಗೆ ಸನ್ನೆನುಡಿಯಲ್ಲೂ ಸಾವಿರಾರು ಅರ್ತವಿರುವ ಪದಗಳನ್ನು ರಚಿಸಿಕೊಳ್ಳಲಾಗುತ್ತದೆ. ಇದಲ್ಲದೆ, ಉಲಿನುಡಿಯ ಹಾಗೆ ಸನ್ನೆನುಡಿಯಲ್ಲೂ ಬಹಳ ಸಿಕ್ಕಲು ಸಿಕ್ಕಲಾದ ನೂರಾರು ಸೊಲ್ಲರಿಮೆಯ ಕಟ್ಟಲೆಗಳನ್ನು ಬಳಸಲಾಗುತ್ತದೆ. ಅವುಗಳ ಮೂಲಕ ಎಂತಹ ವಿಶಯವನ್ನು ಬೇಕಿದ್ದರೂ ಸನ್ನೆನುಡಿಯಲ್ಲಿ ತಿಳಿಸಿ ಹೇಳಲು ಬರುತ್ತದೆ.
ಆದರೆ ಒಂದೇ ಸಮಾಜದಲ್ಲಿ ಬಳಕೆಯಾಗುವ ಉಲಿನುಡಿಯ ಕಟ್ಟಲೆಗಳಿಗೂ ಸನ್ನೆನುಡಿಯ ಕಟ್ಟಲೆಗಳಿಗೂ ನಡುವೆ ಯಾವ ಸಂಬಂದವೂ ಇರುವುದಿಲ್ಲ. ಅವೆರಡು ಒಂದಕ್ಕಿಂತ ಒಂದು ತೀರಾ ಬೇರಾಗಿರುತ್ತವೆ. ಎತ್ತುಗೆಗಾಗಿ, ಅಮೆರಿಕಾದ ಕಿವುಡರು ಬಳಸುವ ಸನ್ನೆನುಡಿಗಿರುವ ಸೊಲ್ಲರಿಮೆಯ ಕಟ್ಟಲೆಗಳು ಅಲ್ಲಿ ಇತರರು ಬಳಸುವ ಇಂಗ್ಲಿಶ್ ನುಡಿಯ ಕಟ್ಟಲೆಗಳಿಗಿಂತ ತೀರ ಬೇರಾಗಿವೆ. ಇಂಗ್ಲಿಶ್ ನುಡಿಯಲ್ಲಿ ಬಳಕೆಯಾಗುವ ಪದಗಳಿಗೆ ಹೆಚ್ಚು ಸಿಕ್ಕಲಾದ ರೂಪಾವಳಿಗಳಿಲ್ಲ. ಆದರೆ, ಅಮೆರಿಕಾದ ಸನ್ನೆನುಡಿಯಲ್ಲಿ ಬಳಕೆಯಾಗುವ ಪದಗಳಿಗೆ ಬಹಳ ಸಿಕ್ಕಲಾದ ರೂಪಾವಳಿಗಳಿವೆ. ಅವುಗಳಲ್ಲಿ ಬರುವ ಎಸಕ(ಕ್ರಿಯಾ)ಪದಗಳ ರೂಪಗಳಿಂದ ಒಂದು ಇಡೀ ಸೊಲ್ಲಿನಲ್ಲಿ ಬರುವ ವಿಶಯಗಳೆಲ್ಲವನ್ನೂ ಸೂಚಿಸಲು ಬರುತ್ತದೆ: ಒಂದು ಕೆಲಸವನ್ನು ಮಾಡಿದವನು, ಅದರಿಂದ ತೊಂದರೆಗೊಳಗಾದವನು, ಆ ಕೆಲಸಕ್ಕೆ ಬಳಸಿದ ವಸ್ತು, ಸಮಯ, ಜಾಗ ಮೊದಲಾದ ಹಲವು ವಿಶಯಗಳನ್ನು ಅಂತಹ ಒಂದೇ ಒಂದು ಎಸಕರೂಪದೊಳಗೆ ಹಿಡಿಸಲು ಬರುತ್ತದೆ.
ಇದಲ್ಲದೆ, ಅಮೆರಿಕಾದ ಈ ಸನ್ನೆನುಡಿಯಲ್ಲಿ ಪದಗಳನ್ನು ಜೋಡಿಸಿ ಸೊಲ್ಲುಗಳನ್ನಾಗಿ ಮಾಡುವ ಬಗೆ ಇಂಗ್ಲಿಶ್ ನುಡಿ ಬಳಸುವ ಹೊಲಬಿಗಿಂತ ತೀರ ಬೇರಾಗಿದೆ: ಅದರಲ್ಲಿ ಒಂದು ವಿಶಯವನ್ನು ಮೊದಲು ತಿಳಿಸಿ, ಅದರ ಕುರಿತಾಗಿ ಹೇಳಬೇಕಾಗಿರುವುದನ್ನು ಆಮೇಲೆ ಹೇಳಲಾಗುತ್ತದೆ; ಎತ್ತುಗೆಗಾಗಿ, ಆ ನುಡಿಯ ಒಂದು ಸೊಲ್ಲು ‘ಮನೆ, ನಾನು ಹೋಗುತ್ತೇನೆ’ ಎಂದಿರಬಲ್ಲುದು, ಮತ್ತು ಇನ್ನೊಂದು ‘ಹಣ್ಣು, ನಾನು ತಿಂದಿದ್ದೇನೆ’ ಎಂದಿರಬಲ್ಲುದು. ಇವುಗಳಲ್ಲಿ ಯಾವುದರ ಕುರಿತಾಗಿ ಮಾತನಾಡಬೇಕಾಗಿದೆ ಎಂಬುದನ್ನು (‘ಮನೆ’ ಇಲ್ಲವೇ ‘ಹಣ್ಣು’ ಎಂಬುದನ್ನು) ಮೊದಲು ತಿಳಿಸಲಾಗಿದೆ, ಮತ್ತು ಆಮೇಲೆ ಅದರ ಕುರಿತಾಗಿ ಏನು ಹೇಳಬೇಕಾಗಿದೆಯೋ ಅದನ್ನು ಹೇಳಲಾಗಿದೆ.
ಅಮೆರಿಕಾದ ಈ ಸನ್ನೆನುಡಿಯಲ್ಲಿ ಪದಗಳು ಸನ್ನೆರೂಪದಲ್ಲಿದ್ದು, ಅವುಗಳಿಗೆ ಸೇರಿಸಬೇಕಾಗಿರುವ ಒಟ್ಟು(ಪ್ರತ್ಯಯ)ಗಳು ಚಲನೆಗಳ ರೂಪದಲ್ಲಿರುತ್ತವೆ. ಅದರಲ್ಲಿ ಬಳಕೆಯಾಗುವ ಕಟ್ಟಲೆಗಳು ಆ ದೇಶದ ಬುಡಕಟ್ಟಿನ ಜನಾಂಗಗಳಲ್ಲಿ ಬಳಕೆಯಲ್ಲಿರುವ ಹೋಪಿ, ನವಹೋ ಮೊದಲಾದ ಕೆಲವು ಉಲಿನುಡಿಗಳ ಕಟ್ಟಲೆಗಳನ್ನು ಹೋಲುತ್ತವೆ. ಈ ಸನ್ನೆನುಡಿಯಲ್ಲಿ ಈಗಾಗಲೇ ಕತೆ, ಕವಿತೆ, ನಾಟಕ, ಪ್ರಬಂದ ಮೊದಲಾದುವನ್ನು ರಚಿಸಲಾಗಿದೆ. ಕಣ್ಣಿಗೆ ಕಾಣಿಸುವಂತಹ ಕಯ್ಸನ್ನೆ, ಕಯ್ಯ ಚಲನೆ, ಹುಬ್ಬಿನ ಕುಣಿತ, ಮೋರೆಯಲ್ಲಿ ಕಾಣಿಸುವ ಅನಿಸಿಕೆಗಳು ಮೊದಲಾದ ಉಲಿನುಡಿಗಳಿಗಿಂತ ತೀರ ಬೇರಾಗಿರುವ ಅಂಶಗಳನ್ನು ಈ ನುಡಿಗಳು ಬಳಸುವುವಾದ ಕಾರಣ, ಸಾಹಿತ್ಯ ರಚನೆಯಲ್ಲಿ ಅವುಗಳಿಗಿರುವ ಕಸುವು ಉಲಿನುಡಿಗಳ ಕಸುವಿಗಿಂತ ತೀರ ಬೇರಾದುದಾಗಿದೆ.
ಎಲ್ಲಾ ಸಮಾಜಗಳಲ್ಲಿರುವ ಕಿವುಡರೂ ಸನ್ನೆನುಡಿಯನ್ನು ಬಳಸಲು ಕಲಿತಿರುವುದಿಲ್ಲ. ಇದಕ್ಕೆ ಕಾರಣವೇನೆಂದರೆ, ಆ ರೀತಿ ಕಲಿಯಲು ಹಲವು ಮಂದಿ ಕಿವುಡು ಮಕ್ಕಳು ಚಿಕ್ಕಂದಿನಲ್ಲಿ ಒಟ್ಟಿಗೆ ವಾಸಿಸುತ್ತಿರುವುದು ಅವಶ್ಯ. ಬೇರೆ ಬೇರಾಗಿ ಉಲಿನುಡಿಯನ್ನು ಬಳಸುವ ತಾಯಿತಂದೆಯರೊಂದಿಗೆ ಮತ್ತು ಒಡಹುಟ್ಟಿದವರೊಂದಿಗೆ ಬೆಳೆಯುವ ಕಿವುಡು ಮಗುವಿಗೆ ಸನ್ನೆನುಡಿಯನ್ನು ಕಲಿಯಲು ಸಂದರ್ಬವೇ ಸಿಗುವುದಿಲ್ಲ. ಕಿವುಡರಿಗೇನೇ ಬೇರೆ ಶಾಲೆಗಳನ್ನು ತೆರೆದು ಕಿವುಡು ಮಕ್ಕಳು ಚಿಕ್ಕಂದಿನಲ್ಲೇನೇ ಒಟ್ಟಿಗೆ ಬೆಳೆಯುವಂತೆ ಮಾಡಿದಲ್ಲಿ ಅವರು ತಮ್ಮೊಳಗೆ ಸನ್ನೆನುಡಿಯನ್ನು ಬಳಸಲು ಕಲಿತುಕೊಳ್ಳಬಲ್ಲರು ಮತ್ತು ಅದರ ಮೂಲಕ ಅವರ ಜೀವನ ಹೆಚ್ಚು ಅರ್ತವತ್ತಾಗಬಲ್ಲುದು.
ಚಿಕ್ಕಂದಿನಲ್ಲೇನೇ ಈ ರೀತಿ ಕಿವುಡು ಮಕ್ಕಳು ಒಟ್ಟಿಗೆ ಬೆಳೆಯುವಂತೆ ಮಾಡಿದಲ್ಲಿ ಅವರು ತಾವಾಗಿಯೇ ತಮಗೊಂದು ಸನ್ನೆನುಡಿಯನ್ನು ಉಂಟುಮಾಡಿಕೊಳ್ಳಬಲ್ಲರು ಎಂಬುದನ್ನು ನಿಕಾರಗುವಾದ ಕಿವುಡು ಮಕ್ಕಳು ತೋರಿಸಿಕೊಟ್ಟಿದ್ದಾರೆ. ಆ ನಾಡಿನಲ್ಲಿ ಒಂದು ಕಿವುಡು ಮಕ್ಕಳ ಶಾಲೆಯನ್ನು ೧೯೮೧ರಲ್ಲಿ ಹೊಸದಾಗಿ ತೆರೆಯಲಾಗಿತ್ತು; ಅಲ್ಲಿದ್ದ ದೊಡ್ಡ ಮಕ್ಕಳು ತಮ್ಮ ನಡುವೆ ಕೆಲವು ಸನ್ನೆಗಳನ್ನು ಬಳಸುತ್ತಿದ್ದರಾದರೂ ಅವುಗಳ ಹಿಂದೆ ನಿಶ್ಚಿತವಾದ ಕಟ್ಟಲೆಗಳಿರಲಿಲ್ಲ. ಹಾಗಾಗಿ, ಅದನ್ನೊಂದು ಸನ್ನೆನುಡಿ ಎನ್ನಲು ಬರುವಂತಿರಲಿಲ್ಲ.
ಅದರೆ, ಅವರೊಂದಿಗೆ ಬೆಳೆಯುತ್ತಿದ್ದ ಚಿಕ್ಕ ಮಕ್ಕಳು ದೊಡ್ಡವರು ಬಳಸುತ್ತಿದ್ದ ಸನ್ನೆಗಳನ್ನೇ ಬಳಸಿ ಹೊಸದಾದ ಮತ್ತು ಸಂಪೂರ್ಣವಾದ ಒಂದು ಸನ್ನೆನುಡಿಯನ್ನೇ ಉಂಟುಮಾಡಿಕೊಂಡಿದ್ದರು. ಈ ಚಿಕ್ಕ ಮಕ್ಕಳ ಸನ್ನೆನುಡಿಯನ್ನು ಪರಿಶೀಲಿಸಿದ ಅರಿವಿಗರು ನಿಜಕ್ಕೂ ದಂಗಾಗಿದ್ದಾರೆ. ದೊಡ್ಡ ಮಕ್ಕಳು ಬಳಸುತ್ತಿದ್ದ ಸನ್ನೆಗಳಲ್ಲಿಲ್ಲದಿದ್ದ ನೂರಾರು ಸಿಕ್ಕಲು ಸಿಕ್ಕಲಾದ ಸೊಲ್ಲರಿಮೆಯ ಕಟ್ಟಲೆಗಳನ್ನು ಈ ಚಿಕ್ಕ ಮಕ್ಕಳು ಎಲ್ಲಿಂದ ಪಡೆದರು? ಹುಟ್ಟಿನಿಂದಲೇ ಮಕ್ಕಳು ಪಡೆದುಕೊಂಡು ಬರುವಂತಹ ‘ಮಾತು ಪಡೆಯುವ ಅಳವೇ’ ಅವರಿಗೆ ಈ ಸನ್ನೆನುಡಿಯನ್ನು ಹುಟ್ಟಿಸುವಲ್ಲಿ ನೆರವಾಗಿರಬೇಕು ಎಂಬ ತೀರ್ಮಾನಕ್ಕೆ ಅರಿವಿಗರು ಬರಬೇಕಾಗಿದೆ.
(ಈ ಬರಹ ವಿಜಯ ಕರ್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
1 Response
[…] <<ನುಡಿಯರಿಮೆಯ ಇಣುಕುನೋಟ – 24 […]