ವಿಜಾಪುರದಲ್ಲಿ ಸುಗ್ಗಿ ಹಬ್ಬಕ್ಕೆ ಸಿದ್ದೇಶ್ವರ ಜಾತ್ರೆ ಸಂಬ್ರಮ

 ಜಯತೀರ‍್ತ ನಾಡಗವ್ಡ.

siddeshwara

ಇದೇ 15ರಿಂದ ಬಡಗಣದ ಪ್ರಮುಕ ಜಿಲ್ಲೆ ವಿಜಾಪುರ ಊರಿನಲ್ಲಿ ಸಂಬ್ರಮ ಕಳೆಕಟ್ಟಿದೆ. ಸುಗ್ಗಿ ಹಬ್ಬ ಸಂಕ್ರಾಂತಿ ಹೊತ್ತಿನಲ್ಲಿ ವರುಶಕ್ಕೊಮ್ಮೆ ಸಿದ್ದೇಶ್ವರನ ಗುಡಿ ಜಾತ್ರೆ ವಿಜಾಪುರ ಊರಿನಲ್ಲಿ ನಡೆಯುತ್ತದೆ. ವಿಜಾಪುರ ಊರಿನ ನಡುಬಾಗದಲ್ಲಿ ಸಿದ್ದೇಶ್ವರ ದೇವಸ್ತಾನವಿದೆ. ಕನ್ನಡಿಗರು ಅಶ್ಟೇ ಅಲ್ಲದೇ ನೆರೆಯ ಮಹಾರಾಶ್ಟ್ರದ ಹಲವರು ಇಲ್ಲಿ ಪಾಲ್ಗೊಳ್ಳುತ್ತಾರೆ.

ಸಿದ್ದರಾಮ, ಸಿದ್ದರಾಮೇಶ್ವರ ಎಂಬ ಹೆಸರುಗಳಿಂದಲೂ ಸಿದ್ದೇಶ್ವರ ಹೆಸರುವಾಸಿ. ಸಿದ್ದರಾಮ ಬಸವಣ್ಣನವರ ನಡೆನುಡಿಗಳಲ್ಲಿ ಹೆಚ್ಚು ನಂಬಿಕೆಯುಳ್ಳ ಬಕ್ತನಾಗಿದ್ದ. ಸೊನ್ನಲಗಿ ಅಂದರೆ ಇಂದಿನ ಸೋಲಾಪುರದ ದೊರೆಯಾಗಿದ್ದವ ಸಿದ್ದರಾಮ, ಮುದ್ದಣ್ಣ ಮತ್ತು ಸುಗ್ಗಲಾದೇವಿಯವರ ಮಗನೆಂದು ತಿಳಿದುಬರುತ್ತದೆ. ಬಸವಣ್ಣವರ ನುಡಿಯಲ್ಲಿ ಬಲವಾದ ನಂಬಿಕೆ ಇಟ್ಟಿದ್ದ ಸಿದ್ದರಾಮ ಆವೊತ್ತಿನ ವಚನಕಾರರಲ್ಲೊಬ್ಬ. ಅಲ್ಲಮಪ್ರಬು, ದೇವರ ದಾಸಿಮಯ್ಯ, ಚನ್ನಬಸವರಂತೆ ವಚನ ಬರೆಯುತ್ತಿದ್ದ ಸಿದ್ದರಾಮ ಕನ್ನಡದ ಸಾಹಿತ್ಯಕ್ಕೆ 68000 ವಚನಗಳ ಕೊಡುಗೆ ನೀಡಿದ ಕವಿ. ವಚನಗಳಶ್ಟೇ ಅಲ್ಲದೇ ಸಿದ್ದರಾಮ ಮೂರು ಸಾಲಿನ ಬಕ್ತಿಯ ಪದ್ಯಗಳನ್ನು ಬರೆಯುತ್ತಿದ್ದ.

ಬಸವಣ್ಣನವರಂತೆ ಬೇರೆ ಜಾತಿ ಮದುವೆಗಳಿಗೆ ಹುರುಪು ನೀಡಿ, ಸಮಾಜದ ಕುಂದು ಕೊರತೆಗಳನ್ನು ಹೋಗಲಾಡಿಸಲು ಹೋರಾಡಿದ ಶರಣರ ಹೊತ್ತಿನ ಸಂತ ಸಿದ್ದೇಶ್ವರ. ಬಹಳಶ್ಟು ನೀರಾವರಿ ಹಮ್ಮುಗೆಗಳನ್ನು ಕಯ್ಗೆತ್ತಿಕೊಂಡು ಮಂದಿಯ ನೀರಿನ ಬವಣೆ ನೀಗಿಸಿದ ಸಂತ ಸಿದ್ದರಾಮ. ಸಿದ್ದರಾಮೇಶ್ವರ ವೀರಶಯ್ವ / ಲಿಂಗಾಯತ ದರ‍್ಮದ ವಿಚಾರಗಳ ಪರವಾಗಿ ಮಂದಿಯಲ್ಲಿ ಪ್ರಚಾರ ಮಾಡುತ್ತಿದ್ದ. ಹೀಗೆ ಒಮ್ಮೆ ಪ್ರವಚನ ಮಾಡಲು ಹೋಗಿದ್ದಾಗ ಇವನ ಒಳ್ಳೆಯ ವಿಚಾರಗಳಿಗೆ ಮರುಳಾಗಿ ಹುಡುಗಿಯೊಬ್ಬಳು ಮದುವೆಯಾಗ ಬಯಸಿದಳು. ಸಂತನಾದ ಸಿದ್ದರಾಮ ಮದುವೆಗೆ ಒಪ್ಪಲಿಲ್ಲ, ಬಕ್ತೆಯ ಮನಸು ಸಮಾದಾನಗೊಳಿಸಲು ತನ್ನ ಬಳಿಯಿದ್ದ ಯೋಗದಂಡ (ಕೋಲು) ದ ಜೊತೆಗೆ ಮದುವೆಯಾಗಲು ತಿಳಿಸಿದ. ಈ ಮದುವೆಯ ಹಬ್ಬವೇ ವರುಶಕ್ಕೊಮ್ಮೆ ಜಾತ್ರೆಯಂತೆ ಆಚರಣೆಗೊಳ್ಳುತ್ತದೆ.

ನಂದಿಕೋಲುಗಳನ್ನೇ ಮದುಮಗ, ಮದುಮಗಳಂತೆ ಸಿಂಗರಿಸಿ ಊರ ತುಂಬೆಲ್ಲ ದಿಬ್ಬಣದ ಮೆರವಣಿಗೆ ಮಾಡಿ ಮದುವೆಯನ್ನು ಅದ್ದೂರಿಯಾಗಿ ನಡೆಸಲಾಗುತ್ತದೆ. ವಿಜಾಪುರದ ಸುತ್ತಮುತ್ತಲಿನ ಎಲ್ಲ ಜನತೆ ಒಗ್ಗೂಡಿ ಇದರಲ್ಲಿ ಬಾಗಿಯಾಗಿ ಜನವರಿ 14 ರಿಂದ 20 ರವರೆಗೆ ಒಂದು ವಾರದ ಹೊತ್ತು ನಡೆಯುವ ಜಾತ್ರೆಗೆ ಮೆರುಗು ನೀಡುತ್ತಾರೆ.

ಜಾತ್ರೆಯಲ್ಲಿ ವಿವಿದ ಕುಸ್ತಿ, ಕಬಡ್ಡಿಯಂತಹ ಆಟೋಟ, ಪಯ್ಪೋಟಿಗಳನ್ನು ನಡೆಸಲಾಗುತ್ತದೆ. ಎತ್ತು-ದನಗಳ ಜಾತ್ರೆಯೂ ಇವುಗಳಲ್ಲಿ ವಿಶೇಶವಾದದ್ದು. ಬೇರೆ ಬೇರೆ ಊರುಗಳಿಂದ ಬರುವ ರಯ್ತರು ತಮ್ಮ ದನ ಎತ್ತುಗಳನ್ನು ಇಲ್ಲಿ ತೋರ‍್ಪಡಿಸುತ್ತಾರೆ. ದನ ಎತ್ತುಗಳನ್ನು ಕೊಳ್ಳಲು, ಮಾರಲು ಇದು ತಕ್ಕ ಮಾರುಕಟ್ಟೆ. ಇದನ್ನು ನೋಡಲೆರಡು ಕಣ್ಣು ಸಾಲದು. ಆಟೋಟಗಳಲ್ಲಿ ಗೆಲ್ಲುವರಿಗೆ ಆತಿತ್ಯ ವಹಿಸುವ ಶ್ರೀ ಸಿದ್ದೇಶ್ವರ ಸಂಸ್ತೆಯು ಬಹುಮಾನ ನೀಡಿ ಗವ್ರವಿಸುತ್ತದೆ. ನೋಡಲು ಚೆಂದದ ಹಾಗೂ ಕಸುವಿನ ದನಗಳನ್ನು ಹೊಂದಿರುವ ರಯ್ತರಿಗೂ ಕೂಡ ಸಂಸ್ತೆ ಪರವಾಗಿ ಬಹುಮಾನವಿರುತ್ತದೆ. ಈ ಮುಂಚೆ ಆಶ್ರಮ ರಸ್ತೆಯ ಬಯಲು ತಾಣದಲ್ಲಿ ನಡೆಯುತ್ತಿದ್ದ ದನಕರು ಜಾತ್ರೆ ಇದೀಗ ವಿಜಾಪುರ ಹೊರಬಾಗದ ತೊರವಿಯಲ್ಲಿ ನಡೆಯುತ್ತದೆ.

ಜಾತ್ರೆಯ ಮುಕ್ಯ ಸೆಳೆತ ಮದ್ದು ಸಿಡಿಸುವ ಕಾರ‍್ಯಕ್ರಮ. ವಿಜಾಪುರ ಜಿಲ್ಲೆಯ ಡಾ.ಬಿ.ಆರ್.ಅಂಬೇಡ್ಕರ್ ಆಟದ ಬಯಲಿನಲ್ಲಿ ಮದ್ದು ಸಿಡಿಸುವ ಕಾರ‍್ಯಕ್ರಮವಿರುತ್ತದೆ. ಆಗಸದಲ್ಲಿ ಬಗೆ ಬಗೆಯ ಚಿತ್ತಾರ ಮೂಡಿಸುವ ಮದ್ದುಗಳ ಬರಾಟೆ ಮಂದಿಯ ಮನವನ್ನು ಮುದಗೊಳಿಸಿ ಹಬ್ಬದ ಸಂತಸ ಇಮ್ಮಡಿಗೊಳಿಸುತ್ತ ಬಂದಿದೆ. ಕನ್ನಡಿಗರಲ್ಲಿದ್ದ ಸಾಮಾಜಿಕ ಪಿಡುಗು ತೊಲಗಿಸಲು ಹೋರಾಡಿದ ಸಿದ್ದರಾಮೇಶ್ವರನ ಗುಣಗಳನ್ನು ನಾವುಗಳು ಅಳವಡಿಸಿಕೊಂಡು ಮುನ್ನುಗ್ಗಬೇಕಿದೆ.

(ಚಿತ್ರ ಸೆಲೆ: thehindu.com)Categories: ನಡೆ-ನುಡಿ

ಟ್ಯಾಗ್ ಗಳು:, , , , , , , , , , , , , , , , , , , , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s