ಬೆಳಗಾವಿಯಲ್ಲಿ ಮೊಳಗಿದ್ದ ಕನ್ನಡದ ಕಹಳೆ

ಸಂದೀಪ್ ಕಂಬಿ.

belgaum

ಕಳೆದ ಡಿಸೆಂಬರ್ 26ಕ್ಕೆ ಬೆಳಗಾವಿಯ ಕಾಂಗ್ರೆಸ್ ಕೂಟ ನಡೆದು 89 ವರುಶಗಳಾದವು. ಅಂದರೆ ಈ ಕೂಟವು 1924ರಲ್ಲಿ ಡಿಸೆಂಬರ್ 26ರಿಂದ 28ರ ವರೆಗೆ ನಡೆಯಿತು. ಬಿಡುಗಡೆಗೂ ಮುಂಚೆ ಕರ್‍ನಾಟಕದಲ್ಲಿ ನಡೆದ ಒಂದೇ ಕಾಂಗ್ರೆಸ್ ಕೂಟ ಇದಾಗಿತ್ತು. ಮಹಾತ್ಮ ಗಾಂದಿಯವರದೇ ಮೇಲಾಳುತನದಲ್ಲಿ ನಡೆದ ಈ ಕೂಡುಹದಲ್ಲಿ ಬಿಡುಗಡೆಯ ಹೋರಾಟದ ಹಿನ್ನೆಲೆಯಲ್ಲೇ ಕನ್ನಡದ ಕಹಳೆ ಮೊಳಗಿದ್ದೂ ವಿಶೇಶ. ಬಾರತದ ಬಿಡುಗಡೆಯ ಹೋರಾಟವನ್ನಲ್ಲದೆ, ಕರ್‍ನಾಟಕದ ಏಕೀಕರಣದ ಹೋರಾಟವನ್ನೂ ಹುರಿದುಂಬಿಸುವಂತಹ ವಾತಾವರಣವನ್ನು ಅದು ಮಯ್ದಳೆದಿತ್ತು ಎನ್ನಲಾಗುತ್ತದೆ. ಈ ಕೂಡುಹವು ಕರ್‍ನಾಟಕದಲ್ಲಿ ನಡೆಯುತ್ತಿದ್ದ ಕಾರಣ, ಇದನ್ನು ಹಮ್ಮಿಕೊಂಡು ನಡೆಸುವ ಹೊಣೆಗಾರಿಕೆ ಕೆ.ಪಿ.ಸಿ.ಸಿ.ಯ ಮೇಲಿತ್ತು. ಹಾಗಾಗಿ, ಕೆ.ಪಿ.ಸಿ.ಸಿ.ಯ ಗಂಗಾದರ ರಾವ್ ಅವರ ಮೇಲುಸ್ತುವಾರಿಯಲ್ಲಿ ಇದು ನಡೆದಿದ್ದು, ಕರ್‍ನಾಟಕದ ಎಲ್ಲ ಬಾಗಗಳಿಂದಲೂ, ಅರಸಾಳ್ವಿಕೆಯ ಪ್ರದೇಶಗಳನ್ನೂ ಸೇರಿ, ಮಂದಿ ಸೇರಿದ್ದರು. ಮತ್ತು ಈ ಎಲ್ಲ ಬಾಗಗಳಿಂದಲೂ, ಹಣ ಮತ್ತು ಮಂದಿಯ ರೂಪದಲ್ಲಿ ಬಂದ ಕೊಡುಗೆಗಳ ನೆರವಿನಿಂದಲೇ ಹಮ್ಮಿಕೊಳ್ಳಲಾಗಿತ್ತು. ಮಯ್ಸೂರಿನ ಅರಸೊತ್ತಿಗೆಯಿಂದಲೂ ನೆರವು ಬಂದಿತ್ತೆನ್ನಲಾಗುತ್ತದೆ.

ಈ ಕೂಡುಹವು ನಡೆದ 85 ಎಕರೆಯ ಹರಹಿನ ನೆಲೆಗೆ ವಿಜಯನಗರ ಎಂಬ ಹೆಸರನ್ನು ಕೊಡಲಾಗಿತ್ತು. ಇದು, ಹಿಂದೆ ಆಳಿದ ಬವ್ಯವಾದ ಕರ್‍ಣಾಟ ಸಾಮ್ರಾಜ್ಯದ ನೆಲೆವೀಡು ವಿಜಯನಗರವನ್ನು ನೆನಪಿನಲ್ಲಿ ಇಟ್ಟ ಹೆಸರಾಗಿತ್ತು. ದೇಶದ ಹಲಾವಾರು ಕಡೆಗಳಿಂದ ಬಂದ ಸಾವಿರಾರು ಮಂದಿ ಈ ಕೂಡುಹದಲ್ಲಿ ಪಾಲ್ಗೊಂಡಿದ್ದರಿಂದ ಇವರೆಲ್ಲರಿಗೂ ನೀರಿನ ಅಗತ್ಯಗಳನ್ನು ಪೂರಯ್ಸಲು ಅದೇ ನೆಲೆಯಲ್ಲೇ ಒಂದು ಕೊಳವನ್ನು ಕಟ್ಟಿಲಾಗಿತ್ತು. ಇದಕ್ಕೆ ಪಂಪ ಸರೋವರ ಎಂಬ ಹೆಸರನ್ನು ಇಡಲಾಗಿತ್ತು. ಈ ನೆಲೆಯನ್ನು ಹೊಗುವ ಕಡೆಯಲ್ಲಿ ಒಂದು ದೊಡ್ಡ ಬಾಗಿಲನ್ನು ಕಟ್ಟಿದ್ದು, ಆ ಹೆಬ್ಬಾಗಿಲಿಗೆ ಹಂಪೆಯ ವಿರೂಪಾಕ್ಶ ಗೋಪುರವನ್ನು ಹೋಲುವಂತಹ ಅಲಂಕಾರವನ್ನು ಮಾಡಲಾಗಿತ್ತು. ಮತ್ತು ಅಲಂಕಾರಕ್ಕಾಗಿ ಮಿಂಚಿನ ದೀಪಗಳನ್ನೂ ಬಳಸಲಾಗಿತ್ತು.

ಮತ್ತೊಂದು ಕುತೂಹಲದ ವಿಶಯವೆಂದರೆ ಈ ಕೂಡುಹವು ಶುರುವಾಗಿದ್ದು ಎರಡು ಕನ್ನಡ ಹಾಡುಗಳಿಂದ. ವಿಶೇಶವಾಗಿ ಹುಯಿಲಗೋಳ ನಾರಾಯಣ ರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂಬ ಹಾಡನ್ನು ಹಾಡಲಾಯಿತು. ಈ ಹಾಡನ್ನು ಹಾಡಿದವರು ಗಂಗೂ ಬಾಯಿ ಹಾನಗಲ್ ಎಂಬ ಪುಟ್ಟ ಹುಡುಗಿ. ಈ ಹುಡಿಗಿ ತನ್ನ ಇನಿದಾದ ಕೊರಲಿನಿಂದ ಗಾಂದಿಯವರ ಮನಗೆದ್ದಳಂತೆ. ಮುಂದೆ ಇದೇ ಹುಡುಗಿ ದೇಶದ ಮೇಲು ಹಿಂದೂಸ್ತಾನಿ ಹಾಡುಗಾರ್‍ತಿಯಾಗಿ ಬೆಳೆದುದು ಈಗ ಇತಿಹಾಸ.

ಇದೇ ಕೂಡುಹದಲ್ಲಿ ಚರಕವನ್ನು ಬಿಡುಗಡೆಯ ಹೋರಾಟದ ಹೆಗ್ಗುರುತಾಗಿ ಮಾಡಿಕೊಳ್ಳಲಾಯಿತಂತೆ. ಇದೇ ಕಾರಣಕ್ಕಾಗಿ, ಈ ಬಾಗದಲ್ಲಿ ಹಲವು ಸಾಮಾನ್ಯ ಮಂದಿ, ಹೆಂಗಸರನ್ನೂ ಒಳಗೊಂಡು, ಚರಕವನ್ನು ಬಳಸಿ ನೂಲು ತೆಗೆಯುವ ಕಾಯಕವನ್ನು ಕಯ್ಗೊಂಡರು. ಬೆಳಗಾವಿಯ ಜೊತೆಗೆ ಇಡೀ ಕರ್‍ನಾಟಕದಲ್ಲಿ ಬಿಡುಗಡೆಯ ಹೋರಾಟದ ಕಿಚ್ಚನ್ನು ಹಚ್ಚಿತು ಈ ಕೂಟ. ‘ಅಹಿಂಸೆ ಮತ್ತು ಅಸಹಕಾರ’ಗಳನ್ನು ಮಂತ್ರವನ್ನಾಗಿಟ್ಟುಕೊಂಡು ಬಿಡುಗಡೆಯ ಹೋರಾಟವನ್ನು ಮುಂದುವರಿಸುವುದಾಗಿ ಗಾಂದಿಯವರು ಅಂದು ಕರ್‍ನಾಟಕದ ಮಂದಿಗೆ ಕರೆ ಕೊಟ್ಟಿದ್ದರು.

ಈ ಕೂಡುಹ ನಡೆದ ನೆಲೆಯಲ್ಲಿ, ಇಂದು ಕರ್‍ನಾಟಕ ರಾಜ್ಯ ಸರಕಾರವು ಒಂದು ತೋಟವನ್ನು ಕಟ್ಟಿದ್ದು ಅದಕ್ಕೆ ‘ವಿಜಯನಗರ ವೀರಸವ್ದ ಉದ್ಯಾನ’ ಎಂಬ ಹೆಸರನ್ನು ಇಡಲಾಗಿದೆ. 1924ರ ಕೂಡುಹದ ನೆನೆಪುಗೆಗಳನ್ನು ಕಟ್ಟಿದ್ದು, ಹಲವು ನೆರಳುತಿಟ್ಟಗಳನ್ನೂ ಪ್ರದರ್‍ಶನಕ್ಕೆ ಇಡಲಾಗಿದೆ. ಅಂದು ಸಾವಿರಾರು ಮಂದಿಗೆ ನೀರು ಒದಗಸಿದ ಪಂಪ ಸರೋವರವು ಮುಂದೆ ಹಲವು ವರುಶಗಳ ಕಾಲ ಬೆಳಗಾವಿಯ ಹಲವು ಬಾಗಗಳಿಗೆ ನೀರನ್ನು ಒದಗಿಸುತ್ತಿತ್ತು. ಈಗಲೂ ಅಲ್ಲಿನ ತೋಟಕ್ಕೆ ಇದು ನೀರು ಒದಗಿಸುತ್ತಿದೆ.

ಹೀಗೆ, ಒಂದು ರಾಶ್ಟ್ರ ಮಟ್ಟದ ಕೂಡುಹದಲ್ಲಿ ಬೆಳಗಾವಿಯನ್ನು ಕನ್ನಡ ನಾಡಿನ ಬಾಗವೆಂದು 1924ರಲ್ಲೇ ಯಾವುದೇ ವಿವಾದಗಳಿಲ್ಲದೆ ಒಪ್ಪಿಕೊಳ್ಳಲಾಗಿತ್ತು. ಇಂದು ಹುಟ್ಟಿಕೊಂಡಿರುವ ನುಡಿ ಮತ್ತು ಗಡಿ ವಿವಾದಗಳು ಇದರ ಬಳಿಕ ಹುಟ್ಟು ಹಾಕಲಾಗಿರುವಂತಹವು ಎಂಬುದು ತಿಳಿಯಾಗುತ್ತದೆ. ಕೆ.ಪಿ.ಸಿ.ಸಿ. ಈ ಕೂಡುಹದ ಹೊಣೆಗಾರಿಕೆ ವಹಿಸಿಕೊಂಡಿದ್ದು, ಕರ್‍ನಾಟಕದ ಬೇರೆ ಬೇರೆ ಪ್ರದೇಶಗಳ ಮಂದಿ ನೆರವಿಗಾಗಿ ಕಯ್ ಜೋಡಿಸಿದ್ದು, ಪಂಪ ಸರೋವರ, ವಿಜಯನಗರ ಎಂಬ ಹೆಸರುಗಳು, ಕೂಡುಹದಲ್ಲಿ ಕನ್ನಡ ಹಾಡುಗಳನ್ನು ಹಾಡಿದ್ದು, ಅದರಲ್ಲೂ ಕನ್ನಡ ನಾಡೊಲುಮೆಯ ಹಾಡಾದ ‘ಉದಯವಾಗಲಿ …’ ಹಾಡಿದ್ದು – ಈ ಎಲ್ಲ ವಿಶಯಗಳು ಇದಕ್ಕೆ ಬಲವಾದ ಸಾಕ್ಶಿಗಳಾಗಿವೆ.

(ಮಾಹಿತಿ ಸೆಲೆ: Gazetter of India, Karnataka State, Belgaum District)
(ಚಿತ್ರ ಸೆಲೆ: allaboutbelgaum.com)Categories: ನಾಡು

ಟ್ಯಾಗ್ ಗಳು:, , , , , , , , , , , , , , , , , , , , , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s