ಕನ್ನಡನಾಡು

 ಹರ‍್ಶಿತ್ ಮಂಜುನಾತ್.

IMG_0131

ತಾಯಿ ಚಾಮುಂಡಿಯ ರಕ್ಶಣೆಯಲಿ
ಕಿತ್ತೂರು ಚೆನ್ನಮ್ಮನ ಕಾವಲಲಿ,

ಕವಿ ವರೇಣ್ಯರು ಹೆಮ್ಮೆಯ ಗುರುತಾಗಿರುವ
ವಿಶ್ವೇಶ್ವರಯ್ಯರು ವಿಶ್ವಾಸದ ಚಿಲುಮೆಯಾಗಿರುವ,

ನಾಡೆಂದರೆ ಚೆಲುವ ಕನ್ನಡ ನಾಡಿದು,
ಬಾವಯ್ಕ್ಯತೆಯ ಕನ್ನಡಿಗರ ಬೀಡಿದು.

ಮಣ್ಣೆಂದರೆ ಕರುನಾಡ ಹೆಮ್ಮೆಯ ಮಣ್ಣಿದು,
ಕಣಕಣದಲ್ಲೂ ಕನ್ನಡ ಕಸ್ತೂರಿಯ ಕಂಪಿದು.

ಸುಸಂಸ್ಕ್ರುತ ಚರಿತ್ರೆಯ ಹಿರಿಯೂರಿದು,
ಶಿಲ್ಪಕಲೆ ಸಂಗೀತದ ಹಿರಿಮೆಯಿದು.

ಶ್ರುಂಗೇರಿಯು ಗ್ನ್ಯಾನವ ಬೆಳಗೋ ದೀಪವಾಗಿದೆ,
ದರ್‍ಮಸ್ತಳ ಬಕ್ತಿಯ ಸುರಿಸೋ ಬೆಳಕಾಗಿದೆ.

ಮುನಿ ಶರಣ ದಾಸರ ವಚನಗಳ ವರವಾಗಿದೆ,
ಪಂಪ ರನ್ನರ ಪದಪುಂಜಗಳ ಗಾನ ಸುದೆಯಾಗಿದೆ.

ಪ್ರತಿ ಪಯ್ರ ಪಲವೂ ಮಂದಿಯ ಬದುಕಾಗಿದೆ,
ತಾಯಿ ಕಾವೇರಿ ಉಳುವ ರಯ್ತನ ಉಸಿರಾಗಿದೆ.

ಹಸಿರ ಮಲೆನಾಡು ಬುವನೇಶ್ವರಿಯ ಕಿರೀಟವಾಗಿದೆ,
ಶ್ರೀಗಂದದ ಗಮವು ನಾಡೆಲ್ಲ ಗಮಗಮಿಸಿದೆ.

ಜನುಮ ಜನುಮಕೂ ನನ್ನ ಜನನವಿಲ್ಲೇ ಆಗಲಿ,
ಪ್ರತಿಕ್ಶಣಕೂ ಕನ್ನಡ ಒಂದೇ ನನ್ನ ಉಸಿರಾಗಲಿ.

ರಕ್ತದ ಹನಿಹನಿಯೂ ಕನ್ನಡಕ್ಕಾಗಿಯೇ ದುಡಿಯಲಿ,
ಕನ್ನಡ ತಾಯಿಯ ಸೇವೆಯಲ್ಲೇ ಜೀವನ ಸವೆಯಲಿ.

ಯುಗಯುಗ ಕಳೆದರೂ ಕನ್ನಡ ಚಿರವಾಗಿರಲಿ,
ನನ್ನ ಎಲ್ಲಾ ಅರಿಕೆಯನು ಆ ದೇವ ಹರಸಲಿ.

(ಚಿತ್ರ : ಕನ್ನಡಕವಿ)

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: