ರೆಪೋ ರೇಟ್ – ಏನಿದರ ಗುಟ್ಟು?

ಚೇತನ್ ಜೀರಾಳ್.

repo

ಪ್ರತಿದಿನ ಸುದ್ದಿ ಹಾಳೆಗಳಲ್ಲಿ ಹಣದರಿಮೆಯ ಪುಟಗಳಲ್ಲಿ ಆರ್.ಬಿ.ಅಯ್. ನವರು ರೆಪೋ ರೇಟ್ ಹೆಚ್ಚಿಸಿರುವ ಅತವಾ ಕಡಿಮೆಗೊಳಿಸಿರುವ ಸುದ್ದಿಯನ್ನು ನಾವು ನೋಡುತ್ತಲೇ ಇರುತ್ತೇವೆ. ಇದು ನಮಗೆ ನೇರವಾಗಿ ಸಂಬಂದಿಸದ ವಿಶಯವಾದರೂ ನಮ್ಮ ದಿನನಿತ್ಯದ ಜೀವನದ ಮೇಲೆ, ನಾವು ಕೊಳ್ಳುವ ಸಾಲಗಳ ಮೇಲೆ ಇದರ ಪರಿಣಾಮ ಇರುತ್ತದೆ. ಹಾಗಾಗಿ ರೆಪೋ ರೇಟ್ ಹೆಚ್ಚು ಕಡಿಮೆಯಾದಂತೆ ನಾವು ತಗೆದುಕೊಂಡಿರುವ ಸಾಲಕ್ಕೆ ಕಟ್ಟಬೇಕಾದ ಬಡ್ಡಿ ಸಹ ಹೆಚ್ಚು ಕಡಿಮೆಯಾಗುವ ಸಾದ್ಯತೆ ಇರುತ್ತದೆ.

ರೆಪೋ ರೇಟ್ ಎಂದರೇನು?

ರೆಪೋ ಎಂದರೆ ರೀಪರ್‍ಚೆಸ್ ರೇಟ್ (ಮರುಕೊಳ್ಳುವ ದರ). ಆರ್.ಬಿ.ಅಯ್‍.ನವರು ಬ್ಯಾಂಕುಗಳಿಗೆ ನೀಡುವ ಸಾಲದ ಬಡ್ಡಿ ದರಕ್ಕೆ ರೆಪೋ ಎಂದು ಕರೆಯುತ್ತಾರೆ. ಇದು ಹಣಕಾಸಿನ ವಹಿವಾಟಿನಲ್ಲಿ ಒಂದು ಮುಕ್ಯವಾದ ಅಂಶ. ಬ್ಯಾಂಕ್ ಗಳಿಗೆ ತಮಗೆ ದುಡ್ಡು ಬೇಕು ಎಂದನಿಸಿದಲ್ಲಿ ಆರ್.ಬಿ.ಅಯ್. ನಿಂದ ಸಾಲ ಪಡೆಯುತ್ತವೆ.

ಆರ್.ಬಿ.ಅಯ್. ಹತ್ತಿರ ಸಾಲ ಪಡೆಯುವಾಗ ಬ್ಯಾಂಕ್ ಗಳು ತಮ್ಮಲ್ಲಿರುವ ಒಪ್ಪಿಗೆ ಪಡೆದ ಸರಕಾರಿ ಬದ್ರತೆಗಳನ್ನು ಅಡವಿಟ್ಟಿರುತ್ತಾರೆ. ಪಡೆದ ಸಾಲವನ್ನು ಇಂತಿಶ್ಟು ದಿನಗಳೊಳಗೆ ಬ್ಯಾಂಕ್ ಗಳು ತೀರಿಸಬೇಕು ಎಂದು ಆರ್.ಬಿ.ಅಯ್. ಕಟ್ಟಲೆ ವಿದಿಸಿರುತ್ತದೆ. ಇಂತಿಶ್ಟು ದಿನದಲ್ಲಿ ಬ್ಯಾಂಕ್ ತಾನು ಪಡೆದಿರುವ ಸಾಲವನ್ನು ತೀರಿಸಬೇಕು. ಹಣವನ್ನು ಬ್ಯಾಂಕುಗಳಿಗೆ ಸಾಲವಾಗಿ ನೀಡಲು ಆರ್.ಬಿ.ಅಯ್. ಹಾಕುವ ಬಡ್ಡಿಗೆ ರೆಪೋ ಎಂದು ಕರೆಯಲಾಗುತ್ತದೆ.

ಸಾಲ ಕೊಡುವ ಬ್ಯಾಂಕ್ ಸಾಲ ಮಾಡುತ್ತದಾ?

ನಮಗೆ ಹಣಕಾಸಿನ ತೊಂದರೆಯಾದಲ್ಲಿ (ತೊಂದರೆಯಾದಲ್ಲಿ ಎನ್ನುವುದಕ್ಕಿಂತ, ಅವಶ್ಯಕತೆ ಬಿದ್ದಲ್ಲಿ ಎಂದು ಹೇಳುವುದು ಒಳಿತು) ನಾವು ಬ್ಯಾಂಕ್ ನಿಂದ ಸಾಲ ತಗೆದುಕೊಳ್ಳುವ ಯೋಚನೆ ಮಾಡುತ್ತೇವೆ. ಇದಕ್ಕೆ ಬ್ಯಾಂಕ್ ಗಳು ಸಹ ತಾವು ನೀಡುವ ಸಾಲಕ್ಕೆ ಇಂತಿಶ್ಟು ಬಡ್ಡಿ ಹಾಕಿ ಹಿಂದಿರುಗಿಸಬೇಕು ಎಂದು ಕಟ್ಟಲೆ ಹಾಕುತ್ತವೆ.

ಈ ಬ್ಯಾಂಕ್ ಗಳು ಸಹ ಮನೆ ಸಾಲ, ಬಂಡಿ ಸಾಲ, ಸ್ವಂತ ಸಾಲ, ಉದ್ದಿಮೆ ತೆರೆಯಲು ಸಾಲ, ಕ್ರುಶಿ ಸಾಲ, ಹೀಗೆ ಹಲವಾರು ಸಾಲಗಳನ್ನು ಜನರಿಗೆ ನೀಡುತ್ತವೆ. ಒಂದು ವೇಳೆ ಆ ಬ್ಯಾಂಕ್ ಗೆ ಗ್ರಾಹಕರು ಹೆಚ್ಚಾಗಿ ಬ್ಯಾಂಕ್ ಗೆ ತನ್ನ ಗ್ರಾಹಕರಿಗೆ ನೀಡಲು ಬೇಕಿರುವ ದುಡ್ಡಿ (ದುಡ್ಡು) ಕಡಿಮೆ ಬಿದ್ದಲ್ಲಿ ಆರ್.ಬಿ.ಅಯ್. ನಿಂದ ತಮಗೆ ಬೇಕಾದ (ಬೇಕಾದಶ್ಟು) ಸಾಲ ಪಡೆಯುತ್ತವೆ. ಆಗ ಸಾಲ ಕೊಡುವ ಅರ್.ಬಿ.ಅಯ್. ತಾವು ಕೊಡುವ ದುಡ್ಡಿಗೆ ಬಡ್ಡಿ ಹಾಕುತ್ತವೆ.

ನಮ್ಮ ಮೇಲೆ ಇದರ ಪರಿಣಾಮವೇನು?
ಒಂದು ವೇಳೆ ರೆಪೋ ದರ ಕಡಿಮೆ ಇದ್ದಲ್ಲಿ ಬ್ಯಾಂಕ್ ಗಳು ಹೆಚ್ಚಿನ ದುಡ್ಡನ್ನು ಆರ್.ಬಿ.ಅಯ್.ನಿಂದ ಪಡೆದು ಜನರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತವೆ. ಎತ್ತುಗೆಗೆ ಸದ್ಯದ ರೆಪೋ ದರ 8.50 % ಇದೆ ಎಂದುಕೊಳ್ಳಿ, ಆಗ ಬ್ಯಾಂಕ್ ನ ಬಡ್ಡಿ ದರ 10-11% ಇರುತ್ತದೆ. ಕೆಲವು ವರ್ಶಗಳ ಹಿಂದೆ 2005 ರಲ್ಲಿ ರೆಪೋ ದರ 4.75% ಇತ್ತು ಆಗ ಬ್ಯಾಂಕ್ ಗಳು ಸುಮಾರು 7-8%ದರದಲ್ಲಿ ಸಾಲ ನೀಡುತ್ತಿದ್ದವು. ಅಂದರೆ ರೆಪೋ ದರ ಕಡಿಮೆ ಇದ್ದರೆ ನಮಗೆ ಮನೆ/ಬಂಡಿ/ಸ್ವಂತ ಸಾಲಗಳು ಕಡಿಮೆ ಬಡ್ಡಿಗೆ ಸಿಗುತ್ತವೆ.

ರೆಪೋ ದರ ಹೆಚ್ಚಾದಲ್ಲಿ ನಾವು ಬ್ಯಾಂಕ್ ನಲ್ಲಿ ಇಡುವ ಹಣಕ್ಕೆ ಕೊಡುವ ಬಡ್ಡಿಯ ದರವೂ ಹೆಚ್ಚುತ್ತದೆ. ಆದರೆ ರೆಪೋ ದರ ಕಡಿಮೆ ಸಮಯದ ಅಂತರದಲ್ಲಿ ಹೆಚ್ಚು ಕಡಿಮೆಯಾಗುವುದರಿಂದ ಬ್ಯಾಂಕ್ ಗಳು ಇಂತಹ ನಿರ್ದಾರಗಳನ್ನು ಸಾಲದ ಮೇಲಿನ ಬಡ್ಡಿ ಏರಿಸುವಶ್ಟು ಬೇಗ ತೆಗೆದುಕೊಳುವುದಿಲ್ಲ.

ರೆಪೋ ದರವನ್ನು ಹಣಕಾಸಿನರಿಮೆಯಲ್ಲಿ ಒಂದು ಮಟ್ಟ ಗುರುತು ಎಂದು ಹೇಳಲಾಗುತ್ತದೆ. ಕಡಿಮೆ ಬಡ್ಡಿ ದರವಿದ್ದಲ್ಲಿ ಒಂದು ನಾಡಿನ ಆರ್ತಿಕತೆಗೆ ಹೆಚ್ಚಿನ ಸಹಾಯ ಒದಗಿಸಿದಂತಾಗುತ್ತದೆ. ಕಡಿಮೆ ಬಡ್ಡಿಗೆ ಸಾಲ ಸಿಗುವಾಗ ಜನರು ತಮ್ಮ ಕೆಲಸಗಳಲ್ಲಿ ಮತ್ತು ಸಾಮಾನುಗಳನ್ನು ಕೊಳ್ಳುವುದಕ್ಕೆ ಬಳಸುತ್ತಾರೆ. ಕಡಿಮೆ ಬಡ್ಡಿ ದರದ ನಡೆ ಮಾರುಕಟ್ಟೆಗೆ ಒಳ್ಳೆಯ ಬೆಳವಣಿಗೆ ಎಂದೇ ಪರಿಗಣಿಸಲಾಗುತ್ತದೆ. ಹಣಕಾಸಿನ, ತಾನೋಡದ (ಆಟೋಮೊಬಯ್ಲ್) ಮತ್ತು ಮನೆಕಟ್ಟುವಿಕೆ (ರಿಯಲ್ ಎಸ್ಟೇಟ್) ಉದ್ದಿಮೆಯಲ್ಲಿ ಹೆಚ್ಚಿನ ಚುರುಕು ಕಾಣಿಸುತ್ತದೆ.

(ಚಿತ್ರಸೆಲೆ: www.moneyguideindia.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications