ಮಂದಿಯಾಳ್ವಿಕೆಯ ಕಡೆಗೆ ಮುನ್ನಡೆಯಬೇಕು
– ಚೇತನ್ ಜೀರಾಳ್.
ಇತ್ತೀಚಿನ ವರ‍್ಶಗಳಲ್ಲಿ ಅತಿ ಹೆಚ್ಚು ಚರ‍್ಚೆಗೆ ಬಂದಿರುವ ವಿಶಯಗಳಲ್ಲಿ ಆಂದ್ರಪ್ರದೇಶದ ಬಾಗವಾಗಿರುವ ತೆಲಂಗಾಣ ಪ್ರದೇಶವನ್ನು ಹೊಸ ರಾಜ್ಯವನ್ನಾಗಿ ಮಾಡುವುದು ಸಹ ಒಂದಾಗಿದೆ. ತೆಲಂಗಾಣ ಪ್ರದೇಶದ ನಾಯಕರು ತೆಲಂಗಾಣ ಬೇರೆ ರಾಜ್ಯವಾಗಬೇಕು ಎಂದು ಸುಮಾರು 2000 ನೇ ಇಸವಿಯಿಂದ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದಾರೆ. ಆದರೆ ತೆಲಂಗಾಣ ಬೇರೆ ರಾಜ್ಯವಾಗಿರಬೇಕು ಎಂದು 1947 ರಿಂದಲೇ ಕೂಗಿತ್ತು ಎಂದು ಹೇಳಲಾಗುತ್ತದೆ. ಇತ್ತೀಚೆಗೆ ಕಾಂಗ್ರೆಸ್ ಮುಂದಾಳ್ತನದ ಯು.ಪಿ.ಎ ಸರಕಾರ ತೆಲಂಗಾಣವನ್ನು ರಾಜ್ಯವನ್ನು ಮಾಡುವುದರ ಬಗ್ಗೆ ಒಳಿತು-ಕೆಡಕುಗಳನ್ನು ತಿಳಿಯಲು ಶ್ರೀಕ್ರಿಶ್ಣ ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯು 2010 ರಲ್ಲಿ ತನ್ನ ವರದಿಯನ್ನು ಗ್ರುಹ ಸಚಿವಾಲಯಕ್ಕೆ ಸಲ್ಲಿಸಿತು. ತನ್ನ ವರದಿಯಲ್ಲಿ ಮುಕ್ಯವಾಗಿ 7 ಶಿಪಾರಸ್ಸುಗಳನ್ನು ಮಾಡಿತ್ತು.
ವರದಿಯನ್ನು ನೋಡಿದ ಕೇಂದ್ರ ಸರಕಾರ ಮೊದಲಿಗೆ ಯಾವುದೇ ನಿರ‍್ದಾರ ಕಯ್ಗೊಳ್ಳದೇ ತನ್ನ ನಿಲುವನ್ನು ಮುಂದೆ ಹಾಕುತ್ತಲೇ ಬಂದಿತ್ತು. ಆದರೆ ಇತ್ತೀಚಿನ ಕೆಲ ವರ‍್ಶಗಳಲ್ಲಿ ತೆಲಂಗಾಣ ಬಾಗದಲ್ಲಿ ನಡೆದ ಗಲಬೆ, ಹಿಂಸಾಚಾರದಿಂದಾಗಿ ಕೇಂದ್ರ ಸರಕಾರ ತನ್ನ ನಿಲುವನ್ನು ತಿಳಿಸುವ ಹಂತಕ್ಕೆ ಬಂದಿತು. ಅದರ ಪ್ರಕಾರವೇ ಶ್ರೀಕ್ರಿಶ್ಣ ಸಮಿತಿಯ ಶಿಪಾರಸ್ಸುಗಳಲ್ಲಿ ಒಂದಾದ “ಆಂದ್ರ ಪ್ರದೇಶವನ್ನು ಸೀಮಾಂದ್ರ ಮತ್ತು ತೆಲಂಗಾಣ ಎಂಬ ಎರಡು ರಾಜ್ಯಗಳನ್ನಾಗಿ ಮಾಡುವುದು ಮತ್ತು ಇವತ್ತಿನ ಗಡಿಯ ಪ್ರಕಾರ ಹಯ್ದರಾಬಾದ ತೆಲಂಗಾಣದ ಪಾಲಿಗೆ ಸೇರುತ್ತದೆ, ಮುಂದಿನ ಹತ್ತು ವರ‍್ಶಗಳ ತನಕ ಹಯ್ದರಾಬಾದ್ ಎರಡೂ ರಾಜ್ಯಗಳ ಜಂಟಿ ರಾಜದಾನಿಯಾಗಿರುತ್ತದೆ ಮತ್ತೆ ಹತ್ತು ವರ‍್ಶಗಳಲ್ಲಿ ಸೀಮಾಂದ್ರ ಹೊಸ ರಾಜದಾನಿಯನ್ನು ಕಟ್ಟಿಕೊಳ್ಳಬೇಕು” ಎಂದು ಹೇಳಿತು. ಇಲ್ಲಿಯವರೆಗೂ ಕೆಳದನಿಯಲ್ಲಿ ಪ್ರತಿಬಟಿಸುತ್ತಾ ಬಂದಿದ್ದ ಸೀಮಾಂದ್ರದ ಜನತೆ ಈ ನಿರ‍್ದಾರ ಹೊರಬಿದ್ದ ನಂತರ ಆಂದ್ರಪ್ರದೇಶವನ್ನು ಹಲವು ದಿನಗಳ ಕಾಲ ಬಂದ್ ಮಾಡಿ ತಮ್ಮ ವಿರೋದವನ್ನು ಸೂಚಿಸಿದರು.
ಈ ಬರಹದಲ್ಲಿ ನಾನು ತೆಲಂಗಾಣ ಬೇರೆ ರಾಜ್ಯವಾಗುವುದು ಸರಿಯೇ? ಅತವಾ ಸೀಮಾಂದ್ರದ ಜನತೆ ಒಂದೇ ಬಾಶೆಯನ್ನಾಡುವ ಒಂದು ರಾಜ್ಯವನ್ನು ಬಯಸುವುದು ತಪ್ಪೇ ಅನ್ನುವುದರ ಬಗ್ಗೆ ಮಾತನಾಡಲು ಹೋಗಿಲ್ಲ. ಆದರೆ ಇದೆಲ್ಲದಕ್ಕಿಂತ ಮುಕ್ಯವಾಗಿ ಒಂದು ವಿಚಾರವನ್ನು ಗಮನಿಸಲೇಬೇಕು. ಅದೇನೆಂದರೆ ಈ ಇಡೀ ಪ್ರಕ್ರಿಯೆಯಲ್ಲಿ ಆಂದ್ರಪ್ರದೇಶದ ಸರಕಾರವನ್ನು ಮತ್ತು ಅಲ್ಲಿನ ಜನಪ್ರತಿನಿದಿಗಳನ್ನು ಕೇಂದ್ರ ಸರಕಾರ ಕಡೆಗಣಿಸಿದ ರೀತಿ ಮತ್ತು ಅದಕ್ಕೆ ಅವರದೇ ಪಕ್ಶದವರಿಂದ ತೋರ‍್ಪಡಿಸಲಾದ ಸಿಟ್ಟು. ಇತ್ತೀಚಿಗೆ ಆಂದ್ರಪ್ರದೇಶದ ಮುಕ್ಯಮಂತ್ರಿಯಾಗಿರುವ ಶ್ರೀ ಕಿರಣ್ ಕುಮಾರ್ ರೆಡ್ಡಿ ಅವರು ಯಾವುದೇ ಕಾರಣಕ್ಕೂ ನಾನು ಆಂದ್ರಪ್ರದೇಶವನ್ನು ಒಡೆಯಲು ಬಿಡುವುದಿಲ್ಲ ಎಂದು ತಮ್ಮದೇ ಪಕ್ಶದ ಕೇಂದ್ರ ಸರಕಾರದ ವಿರುದ್ದ ಸಿಡಿದೆದ್ದಿದ್ದು ನಮಗೆಲ್ಲ ಗೊತ್ತಿದೆ.
ಹಾಗಿದ್ದರೆ ಈ ಹೊಸ ರಾಜ್ಯವನ್ನು ಮಾಡುವ ಪ್ರಕ್ರಿಯೆಯಲ್ಲಿ ಆ ರಾಜ್ಯದ ಜನರ, ಜನಪ್ರತಿನಿದಿಗಳ, ಸರಕಾರದ ಪಾತ್ರವೇನು? ಅವರನ್ನೆಲ್ಲ ಹೊರಗಿಟ್ಟು ಕೇಂದ್ರ ಸರಕಾರ ಆ ರಾಜ್ಯವನ್ನು ಒಡೆಯಬಹುದೇ? ಒಂದು ವೇಳೆ ಆ ಸರಕಾರ ಈ ಯೋಜನೆಗೆ ಒಪ್ಪದಿದ್ದರೂ ಕೂಡ ಹೊಸ ರಾಜ್ಯ ಮಾಡಬಹುದೇ? ಹೀಗೆ ಹಲವಾರು ಪ್ರಶ್ನೆಗಳು ನಮ್ಮೆದುರಿದೆ. ಇದಕ್ಕೆ ಉತ್ತರ ಬಾರತದ ಸಂವಿದಾನದಲ್ಲಿರುವ ಆರ‍್ಟಿಕಲ್ 3!. ಹವ್ದು ಯಾವುದೇ ಹೊಸ ರಾಜ್ಯ ಮಾಡಬೇಕೆಂದಲ್ಲಿ, ಎರಡು ರಾಜ್ಯಗಳನ್ನು ಕೂಡಿಸಬೇಕಾದಲ್ಲಿ ಕೂಡ ಕೇಂದ್ರ ಸರಕಾರ ಈ ಆರ‍್ಟಿಕಲ್ 3 ರ ಮೊರೆ ಹೋಗುತ್ತದೆ. ಹಾಗಿದ್ದರೆ ಈ ಆರ‍್ಟಿಕಲ್ 3 ರಲ್ಲಿ ಏನಿದೆ ನೋಡೋಣ ಬನ್ನಿ.
ಏನಿದೆ ಆರ‍್ಟಿಕಲ್ 3 ರಲ್ಲಿ?
ಬಾರತದ ಸಂವಿದಾನದ ಆರ‍್ಟಿಕಲ್ 3 ರಲ್ಲಿ ಈ ಕೆಳಗಿನಂತೆ ಹೇಳಲಾಗಿದೆ:
3. Formation of new States and alteration of areas, boundaries or names of existing States: Parliament may by law
(a) form a new State by separation of territory from any State or by uniting two or more States or parts of States or by uniting any territory to a part of any State;
(b) increase the area of any State;
(c) diminish the area of any State;
(d) alter the boundaries of any State;
(e) alter the name of any State; Provided that no Bill for the purpose shall be introduced in either House of Parliament except on the recommendation of the President and unless, where the proposal contained in the Bill affects the area, boundaries or name of any of the States, the Bill has been referred by the President to the Legislature of that State for expressing its views thereon within such period as may be specified in the reference or within such further period as the President may allow and the period so specified or allowed has expired
Explanation I In this article, in clauses (a) to (e), State includes a Union territory, but in the proviso, State does not include a Union territory
Explanation II The power conferred on Parliament by clause (a) includes the power to form a new State or Union territory by uniting a part of any State or Union territory to any other State or Union territory.
ಅಂದರೆ ಒಂದು ಹೊಸ ರಾಜ್ಯವನ್ನು ಮಾಡುವ ಶಕ್ತಿ, ಅದರ ಗಡಿಯನ್ನು ಹಿಗ್ಗಿಸುವ/ ಕುಗ್ಗಿಸುವ, ಒಂದು ರಾಜ್ಯದ ಹೆಸರನ್ನು ಬದಲಾಯಿಸುವ ಶಕ್ತಿ ಇರುವುದು ಪಾರ‍್ಲಿಮೆಂಟ್ ಗೆ ಮಾತ್ರ. ಹೀಗೆ ಮಾಡಬೇಕಾದಲ್ಲಿ ಬಾರತದ ರಾಶ್ಟ್ರಪತಿಗಳು ಸಂಸತ್ತಿಗೆ ಕಾಯ್ದೆಯ ಕರಡನ್ನು ಕಳುಹಿಸಬೇಕು. ಇದರ ಜೊತೆಗೆ ಆ ರಾಜ್ಯದ ವಿದಾನಸಬೆಗೆ ಈ ಕಾಯ್ದೆಯ ಬಗ್ಗೆ ಕೇವಲ ತಮ್ಮ ಅನಿಸಿಕೆ ತಿಳಿಸುವ ಬಗ್ಗೆ ಇಂತಿಶ್ಟು ಸಮಯದಲ್ಲಿ ವಿದಾನಸಬೆಯಲ್ಲಿ ಮಂಡಿಸಿ ಅದರ ಬಗ್ಗೆ ಅನಿಸಿಕೆಯನ್ನು ವಿದಾನಸಬೆಯಿಂದ ಪಡೆದು ರಾಶ್ಟ್ರಪತಿಗೆ ಕಳುಹಿಸಬೇಕು. ತಾಂತ್ರಿಕವಾಗಿ ಈ ಆರ‍್ಟಿಕಲ್ ನಲ್ಲಿ ಎಲ್ಲೂ ಒಂದು ರಾಜ್ಯದಿಂದ ಹೊಸದೊಂದು ರಾಜ್ಯವನ್ನು ಮಾಡಲು ಕಡ್ಡಾಯವಾಗಿ ಆ ರಾಜ್ಯವನ್ನು ಪ್ರತಿನಿದಿಸುವ ವಿದಾನಸಬೆಯ ಒಪ್ಪಿಗೆ ಪಡೆಯಲೇಬೇಕು ಎನ್ನುವ ನಿಯಮವಿಲ್ಲ. ಹಾಗಾಗಿ ಒಂದು ವೇಳೆ ವಿದಾನಸಬೆ ತನಗೆ ರಾಜ್ಯವನ್ನು ಒಡೆಯುವ ಬಗ್ಗೆ ಒಪ್ಪಿಗೆಯಿಲ್ಲ ಎಂದು ತಿಳಿಸಿದರೂ ರಾಶ್ಟ್ರಪತಿಗಳು ಮತ್ತು ಪಾರ‍್ಲಿಮೆಂಟ್ ಇದನ್ನು ತಿರಸ್ಕರಿಸಿ ಹೊಸ ರಾಜ್ಯವನ್ನು ಮಾಡಬಹುದಾಗಿದೆ.
ಹೀಗಾಗಿಯೇ ತೆಲಂಗಾಣ ರಾಜ್ಯವನ್ನು ಮಾಡುವುದು ಬೇಡ ಎಂದು ಆಂದ್ರಪ್ರದೇಶದ ವಿದಾನಸಬೆ ನಿರ‍್ಣಯ ಮಂಡಿಸಿ, ಆಂದ್ರಪ್ರದೇಶದ ಜನಪ್ರತಿನಿದಿಗಳೆಲ್ಲರ ಒಪ್ಪಿಗೆ ಪಡೆದರೂ ಸಹ ಅದನ್ನು ರಾಶ್ಟ್ರಪತಿಗಳು ಹಾಗೂ ಪಾರ‍್ಲಿಮೆಂಟ್ ಪರಿಗಣಿಸಲೇಬೇಕು ಎನ್ನುವ ನಿಯಮವಿಲ್ಲದಿರುವುದರಿಂದಲೇ ಇಂದು ಕೇಂದ್ರ ಸರಕಾರ ತೆಲಂಗಾಣ ರಾಜ್ಯವನ್ನು ಮಾಡಿಯೇ ತೀರುತ್ತೇವೆ ಎಂದು ಹೇಳುತ್ತಿರುವುದು.
ಬದಲಾಗಬೇಕಿದೆ ಸಂವಿದಾನ!
ಈಗಿರುವ ಹೊಸ ರಾಜ್ಯ ಹುಟ್ಟು ಹಾಕುವ ವಿದಾನದಲ್ಲಿ ಹೇಗೆ ರಾಜ್ಯದ ಜನತೆಯನ್ನು ಪ್ರತಿನಿದಿಸುವ ವಿದಾನಸಬೆ, ಜನಪ್ರತಿನಿದಿಗಳನ್ನು ಕಡೆಗಣಿಸಲಾಗಿದೆ ಎನ್ನುವುದು ಮೇಲಿನ ಆರ‍್ಟಿಕಲ್ ನಲ್ಲಿ ಎದ್ದು ಕಾಣುತ್ತಿದೆ. ಅಯ್ತಿಹಾಸಿಕವಾಗಿ ಬಾರತದ ಸಂವಿದಾನವನ್ನು ಬರೆಯುವ ಕಾಲಕ್ಕೆ ಇದು ಸರಿಹೊಂದುತ್ತಿದ್ದಿರಬಹುದು. ಆದರೆ ಇಂದು ಕಾಲ ಬದಲಾಗಿದೆ. ನಾವು ಹೆಚ್ಚು ಹೆಚ್ಚು ಮಂದಿಯಾಳ್ವಿಕೆಯ ಕಡೆಗೆ ಮುನ್ನಡೆಯಬೇಕಾಗಿದೆ, ಒಂದು ರಾಜ್ಯವನ್ನು ಒಗ್ಗೂಡಿಸುವ ಇಲ್ಲವೇ ಒಡೆಯುವ ಕೆಲಸ ಮಾಡುವಾಗ ಆಯಾ ರಾಜ್ಯದ ಜನತೆಯನ್ನು ವಿಶ್ವಾಸಕ್ಕೆ ತಗೆದುಕೊಳ್ಳುವುದು ಸರಿಯಾದ ನಡೆ. ಇಲ್ಲದೇ ಹೋದಲ್ಲಿ ತನ್ನನ್ನು ಪರಿಗಣಿಸದೇ ಹೋಗುವ ವ್ಯವಸ್ತೆಯಲ್ಲಿ ಜನರಿಗೆ ನಂಬಿಕೆಯಾದರೂ ಹೇಗೆ ಹುಟ್ಟೀತು?
ಕೊನೆಯದಾಗಿ: ಒಂದು ರಾಜ್ಯದ ಏಳಿಗೆಯಲ್ಲಿ ಆಯಾ ರಾಜ್ಯದ ಜನಪ್ರತಿನಿದಿಗಳ ಪಾತ್ರ ತುಂಬಾ ದೊಡ್ಡದು. ಸ್ವಾತಂತ್ರ್ಯ ಬಂದಾಗಿಲಿಂದಲೂ ತೆಲಂಗಾಣಕ್ಕೆ ವಿಶೇಶ ಸ್ತಾನಮಾನವನ್ನು ನೀಡಲಾಗಿತ್ತು. ಆದರೂ ಅದನ್ನು ಸರಿಯಾಗಿ ಜಾರಿಗೆ ತರುವಲ್ಲಿ ಅಲ್ಲಿನ ಜನಪ್ರತಿನಿದಿಗಳು ಸೋತಿದ್ದಾರೆ ಎನ್ನುವುದು ಸ್ಪಶ್ಟ. ಹೊಸ ರಾಜ್ಯವಾದ ಕೂಡಲೇ ಎಲ್ಲವೂ ಸರಿ ಹೋಗಿ ಬಿಡುತ್ತದೆ ಎನ್ನುವುದನ್ನು ನಂಬಲು ಕಶ್ಟ. ಒಂದು ವೇಳೆ ಹೊಸ ರಾಜ್ಯವಾದ ನಂತರ ತೆಲಂಗಾಣದ ಎಲ್ಲಾ ಕೆಲಸಗಳು, ಉದ್ದಿಮೆಗಳಲ್ಲಿ ಕೇವಲ ಅವರದೇ ಜನರು ಇರುತ್ತಾರೆ ಎನ್ನುವುದು ಸುಳ್ಳು. ಯಾಕೆಂದರೆ ಸಂವಿದಾನದ ಪ್ರಕಾರ ಯಾವುದೇ ವ್ಯಕ್ತಿ ಯಾವುದೇ ರಾಜ್ಯದಲ್ಲೂ ತನಗೆ ಬೇಕಾದ ಕೆಲಸ ಮಾಡಿಕೊಂಡು ಇರಬಹುದು (ಇದಕ್ಕೆ ಜಮ್ಮು ಕಾಶ್ಮೀರ ರಾಜ್ಯ ಹೊರತಾಗಿದ್ದು ಅಲ್ಲಿ ಆರ‍್ಟಿಕಲ್ 370 ಜಾರಿಯಲ್ಲಿದೆ)
(ಚಿತ್ರ ಸೆಲೆ: the hindu)
1 Response
[…] ನಿಯಮವಿಲ್ಲ. ಇದರ ಬಗ್ಗೆ ಈ ಹಿಂದೆ ಬರೆದಿದ್ದ ಬರಹವನ್ನು […]