ಚಳಿಗಾಲದ ಒಲಂಪಿಕ್ಸ್ ಗೆ ಸಿದ್ದವಾದ ಸೋಚಿ
2014ರ ಚಳಿಗಾಲದ ಒಲಂಪಿಕ್ಸ್ ರಶ್ಯಾದ ಸೋಚಿ ಎಂಬ ಊರಿನಲ್ಲಿ ಶುರುವಾಗಲಿದೆ. 22ನೇ ಚಳಿಗಾಲದ ಒಲಂಪಿಕ್ಸ್ ಆಗಿರುವ ಇದು ಪೆಬ್ರವರಿ 7 ರಿಂದ 23 ರವರೆಗೆ ನಡೆಯಲಿದೆ. 1991 ರಲ್ಲಿ ಯು ಎಸ್ ಎಸ್ ಆರ್ ನಿಂದ ಬೇರಾದ ರಶ್ಯನ್ ಪೆಡರೇಶನ್ನಿಗೆ ಸೋಚಿ ಒಲಂಪಿಕ್ಸ್ ಮೊದಲ ಒಲಂಪಿಕ್ಸ್ ಆಗಿದೆ. ಜಗತ್ತಿನ ಬೇರೆ ಬೇರೆ ಕಡೆಯಿಂದ ಆಟಗಾರರನ್ನು ಮತ್ತು ನೋಡುಗರನ್ನು ಸ್ವಾಗತಿಸಲು ಸೋಚಿ ನಗರ ಕೂಡ ಸಜ್ಜಾಗಿ ನಿಂತಿದೆ. ಈ ಒಲಂಪಿಕ್ಸ್ ಕಾರ‍್ಯಕ್ರಮವನ್ನು ನಿಬ್ಬೆರಗಾಗುವಂತೆ ನಡೆಸಿಕೊಟ್ಟು ಜಗತ್ತಿನ ಗಮನವನ್ನು ಸೆಳೆಯಬೇಕು ಎಂಬುದು ರಶ್ಯಾದ ಬಯಕೆಯಾಗಿದೆ. ಜೊತೆಗೆ ಇದು ರಶ್ಯಾಕ್ಕೆ ಪ್ರತಿಶ್ಟೆಯ ವಿಶಯವಾಗಿಯೂ ಇದೆ, ಅದಕ್ಕಾಗಿಯೇ ಈ ಬಾರಿ 51 ಬಿಲಿಯನ್ ರಶ್ಯನ್ ರೂಬಲ್ (90.80 ಬಿಲಿಯನ್ ರೂಪಾಯಿಗಳು)ನಶ್ಟು ಹಣವನ್ನು ಕರ‍್ಚು ಮಾಡುತ್ತಿದೆ. ಇದು ಒಲಂಪಿಕ್ಸ್ ನ ಹಳಮೆಯಲ್ಲಿಯೇ ಅತಿ ಹೆಚ್ಚು ದುಬಾರಿಯಾದ ಒಲಂಪಿಕ್ಸ್ ಆಗಿದೆ.
ಜಗತ್ತಿನ 88 ನಾಡುಗಳಿಂದ ಸುಮಾರು 2861 ಆಟಗಾರರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. 15ಬಗೆಯ ಆಟಗಳಲ್ಲಿ ಒಟ್ಟು 98 ಸ್ಪರ‍್ದೆಗಳಿವೆ. ಆಟಗಾರರು ಸೆಣೆಸುವ ಸ್ಪರ‍್ದೆ ಹಾಗು ದಿನಗಳ ವಿವರ ಕೆಳಗಿನ ಪಟ್ಟಿಯಲ್ಲಿದೆ.
ದೊಡ್ಡ ಮಟ್ಟದ ಕಾರ‍್ಯಕ್ರಮಕ್ಕೆ ಸಜ್ಜಾಗುತ್ತಿರುವ ಸೋಚಿಯು ಸಾರಿಗೆ, ಕಣ್ಗಾವಲು ಮತ್ತು ಮಿಂಚಿನ ಏರ‍್ಪಾಡಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದೆ. ಸೋಚಿ ನಗರದ ಹೋಟೆಲ್‍ಗಳು, ದೊಡ್ಡ ದೊಡ್ಡ ಅಂಗಡಿಗಳು ಮತ್ತು ಸಿಂಗಾರಗೊಂಡ ಆಟದ ಬಯಲುಗಳು ಪ್ರವಾಸಿಗರನ್ನು ಎದುರು ನೋಡುತ್ತಿವೆ. ಅಲ್ಲದೆ ಹಲವಾರು ಮನರಂಜನೆ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇನ್ನು ಚಳಿಗಾಲದ ಒಲಂಪಿಕ್ಸ್ ನಲ್ಲಿ ಸ್ಪರ‍್ದೆಯ ಬಿಸಿಯನ್ನು ಎದುರು ನೋಡಬೇಕಿದೆ. ಸ್ಪರ‍್ದೆಯಲ್ಲಿ ಪಾಲ್ಗೊಳ್ಳುತ್ತಿರುವ ಆಟಗಾರರಿಂದ ಒಳ್ಳೆಯ ಪಯ್ಪೋಟಿ ಬರಲಿ ಎಂದು ಹಾರಯ್ಸೋಣ.
(ಮಾಹಿತಿ ಮತ್ತು ಚಿತ್ರ ಸೆಲೆ: Wikepedia)
ಇತ್ತೀಚಿನ ಅನಿಸಿಕೆಗಳು