ಹೆಣ್ಣಿಗಿಂತ ಗಂಡು ನೊಣಗಳೇ ಹೆಚ್ಚು ಜಗಳಗಂಟವಂತೆ
ಸಾಮಾನ್ಯವಾಗಿ ಉಸಿರಿನಾಡಿನ (animal kingdom) ಎಲ್ಲಾ ಪ್ರಾಣಿಗಳಲ್ಲಿ ಇರುವ ಹಳೆಯ ಕತೆಯೆಂದರೆ, ಗಂಡು ಉಸಿರಿಗಳ ನಡುವಿರುವ ಜಗಳಹೂಡುವಿಕೆಯ ಸ್ವಬಾವ. ಹಲವು ಪ್ರಾಣಿಗಳ ಪ್ರಬೇದಗಳಲ್ಲಿ ಹೆಣ್ಣಿಗಿಂತ, ಗಂಡು-ಗಂಡಿನ ನಡುವೆ ನಡೆಯುವ ಕಾಳಗ ಹೆಚ್ಚು ಹೆಸರಾಗಿರುವಂತದ್ದು.
ನೊಣಗಳು ಹೇಗೆ ಜಗಳ ಹೂಡುತ್ತವೆ, ಅವುಗಳಲ್ಲಿ ಹೆಣ್ಣು ಹೆಚ್ಚು ಜಗಳ ಹೂಡುವುದೋ ಇಲ್ಲವೇ ಗಂಡು ಹೆಚ್ಚು ಜಗಳಹೂಡುವುದೋ ಎಂದು ಅರಿಗರು, ಅವುಗಳ ನಡುವೆ ನಡೆಸಿದ ಕುಸ್ತಿಪಂದ್ಯದ ಪ್ರಯೋಗದಿಂದ ಈಗ ಕಂಡುಹಿಡಿದಿದ್ದಾರೆ. ಅವರ ಪ್ರಕಾರ ಹೆಣ್ಣಿಗಿಂತ ಗಂಡು ನೊಣಗಳು ಹೆಚ್ಚು ಜಗಳಹೂಡುವ ಸ್ವಬಾವ ಹೊಂದಿರುತ್ತವೆಯಂತೆ.
ಕ್ಯಾಲಿಪೋರ‍್ನಿಯಾ ತಾಂತ್ರಿಕ ವಿದ್ಯಾಲಯದ ನರದರಿಮೆ ಅರಿಗರಾದ ಡಾ.ಅಂಡರ‍್ಸನ್ ಮತ್ತು ಅವರ ತಂಡ ಕಾಲ್ ಟೆಕ್ ಎಂಬ ಅರಿಗೆಯಲ್ಲಿ (ಪ್ರಯೋಗಾಲಯದಲ್ಲಿ) ನೊಣಗಳ ನಡುವೆ ಒಂದು ಕುಸ್ತಿ ಪಂದ್ಯಾವಳಿ ಏರ‍್ಪಡಿಸಿ, ನಡವಳಿಕೆಯ ವಿಕಾಸದ ಆಳದ ಬೇರನ್ನು ತಿಳಿಯಲು ಮುಂದಾದರು. ಅವರಿಗೆ ಮೊದಲಿಗೆ ನೊಣಗಳ ಜಗಳಹೂಡುವಿಕೆ ನಡವಳಿಕೆಯಲ್ಲಿ ತಿಳಿದುಬಂದದ್ದೇನೆಂದರೆ, ಜಗಳಹೂಡುವಿಕೆ ಹೆಚ್ಚಾಗಿ ಆಹಾರ ಮತ್ತು ಮಿಲನದ ಸಂಬಂದ ಜಗಳ ಉಂಟಾಗುತ್ತದೆ. ಇದೇ ನಡವಳಿಕೆಗಳು ಕೂಡ ಹಾಲುಣಿಸುವ ಪ್ರಾಣಿಗಳಲ್ಲಿ, ಮನುಶ್ಯನಲ್ಲಿ ಇರುವುದರಿಂದ ಅವುಗಳನ್ನು ತಿಳಿಯಲು ನೊಣಗಳ ಈ ಪ್ರಯೋಗ ನೆರವಾಗಿದೆಯಂತೆ.
ಮುಂದಿನ ಆಳದ ಅದ್ಯಯನದಲ್ಲಿದ್ದ ಡಾ. ಅಂಡರ‍್ಸನ್ ಮತ್ತು ತಂಡದವರಿಗೆ ಸಿಕ್ಕಿದ್ದು ಒಂದು ತಳಿ (ಜೀನ್) ಮತ್ತು ಚಿಕ್ಕ ನರಕೊಣಿಕೆಗಳ (neurons) ಗುಂಪು. ಕೆಲವೊಮ್ಮೆ ಮೂರೇ ಮೂರು ನರಕೊಣಿಕೆಗಳು ಗಂಡು ನೊಣದ ಮಿದುಳಿನಲ್ಲಿದ್ದು ಜಗಳಹೂಡುವಿಕೆಯನ್ನು ಹತೋಟಿಯಲ್ಲಿಡುತ್ತವೆಯಂತೆ. ಇದರಂತಿರುವ ತಳಿ ಮನುಶ್ಯನ ನರಕೊಣಿಕೆಯಲ್ಲೂ ಇವೆಯಂತೆ. ಮೇಲ್ನೋಟಕ್ಕೆ ನೊಣ ಮತ್ತು ಮನುಶ್ಯ ಬಹಳ ದೂರದ ಸಂಬಂದಿಗಳಾದರೂ, ಇದುವರೆವಿಗೂ ಅರಿಮೆಯ ಹುಡುಕಾಟದಲ್ಲಿ ಅಂತಹ ದೂರವೇನು ತೋರಿಸಿಲ್ಲ. ಹಾಗಾಗಿ ಮಿದುಳಿನ ನರಕೊಣಿಕೆಗಳ ನಡವಳಿಕೆ ಹತೋಟಿ ಬಗ್ಗೆ ತಿಳಿಯಲು ಹೊಸ ಆಳದ ಹುಡುಕಾಟಗಳು, ತಿಳಿಯುವುದು ಅರಿಗರಿಗೆ ಈಗ ಅವಶ್ಯವಾಗಿದೆ.
ಡಾ.ಉಲ್ರಿಕ್ ಹೆಬರ‍್ಲಿನ್, ಹೊವರ‍್ಡ್ ಹುಗಿಸ್ ವಯ್ದ್ಯಕೀಯ ವಿದ್ಯಾಲಯ – ಇವರೂ ಕೂಡ ಅಂಡರ‍್ಸನ್ ರ ಈ ಪ್ರಯೋಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಬರ‍್ಲಿನ್ ಕೂಡ ನೊಣಗಳ ನಡವಳಿಕೆ ತಿಳಿಯಲು ಅನೇಕ ಪ್ರಯೋಗಗಳು ನಡೆಸಿ, ಇತ್ತೀಚೆಗೆ ಮನುಶ್ಯ-ನೊಣಗಳ ನಡುವಿನ ಸಂಬಂದವನ್ನು ತೋರಿಸಿದ್ದಾರೆ. ಅವರ ಪ್ರಯೋಗದಲ್ಲಿ ’ವಂಚಿತಗೊಂಡ ಗಂಡು ನೊಣಗಳು ಕುಡಿಯುತ್ತವೆ’ ಎಂದು ತೋರಿಸಿದ್ದಾರೆ.
ಹುಡುಕಾಟ ಮುಂದುವರಿದಂತೆ, ಡಾ.ಅಂಡರ‍್ಸನ್ ಒಂದು ನ್ಯೂರೋಪೆಪ್ಟಯ್ಡನ್ನು ಈ ನಡವಳಿಕೆಗೆ ಕಾರಣವೆಂದು ಹೇಳುತ್ತಾರೆ. ಇದೇ ಹೊತ್ತಿನಲ್ಲಿ ಅವರು ಹಲವು ಪ್ರಾಯೋಗಿಕವಾಗಿ ಬೇರೆ ಬೇರೆ ತರಹದ ನೊಣಗಳ ವಂಶಗಳನ್ನು ಬೆಳೆಸಿ, ತಳಿ ಹಂತದಲ್ಲಿ ಬದಲಾಯಿಸುತ್ತಾರೆ. ಎಲ್ಲಾ ನೊಣಗಳನ್ನು ಬಿಣಿಗಿಸಲಾಗಿ (engineered), ಕೆಲ ತಾಪಮಾನದಲ್ಲಿ, ಅದರಲ್ಲೂ 80 ಡಿಗ್ರಿಯಲ್ಲಿ, ಗಂಡು-ನೊಣಗಳಲ್ಲಿ ಕೆಲವು ನರಕೊಣಿಕೆಗಳ ರಾಸಾಯನಿಕ ಪದಾರ‍್ತಗಳು ಬದಲಾಗಿ, ಬೇಕಾದ ನರಕೊಣಿಕೆಗಳನ್ನು ಚುರುಕುಗೊಳಿಸುತ್ತವೆ (activate).
ಪ್ರತಿಯೊಂದು ವಂಶಾವಳಿಯಲ್ಲಿ ನರಕೊಣಿಕೆಗಳು ಬೇರೆ ಬೇರೆಯವೆಯಾಗಿದ್ದು ಈ ಪ್ರಯೋಗದಲ್ಲಿ ಕಂಡು ಬಂದಿತು. ಹುಡುಕಾಟದವರು ದ್ರುಶ್ಯಾವಳಿಗಳನ್ನು, ತಂತ್ರಾಂಶವನ್ನು ಬಳಸಿ ನೊಣಗಳು ತೋರಿಸಿದ ಹಲವು ಹಂತಗಳ ಜಗಳಹೂಡುವಿಕೆಯ ನಡವಳಿಕೆಗಳನ್ನು ತಿಳಿದರು. ಓಡುತಿಟ್ಟದಲ್ಲಿ (vedio) ನೊಣಗಳು ಹಲವು ಕುಸ್ತಿ ಪಟ್ಟುಗಳನ್ನು ತೋರಿಸಿದವು. ಅವುಗಳಲ್ಲಿ ’ತಿವಿಯುವಿಕೆ’ (lunge), ’ಕಳ್ಳತನದಿ ಮೇಲೆರಗುವಿಕೆ’ (sneak attack), ’ಗುದ್ದಾಟ’ (tussle), ’ಮಣಿಸುವಿಕೆ’ಯನ್ನು (defeating) ಕಾಣಲಾಯಿತು.
ಯಾವ ನೊಣಗಳಲ್ಲಿ ಅತಿ ಹೆಚ್ಚು ಜಗಳಹೂಡುವಿಕೆ ಉಂಟಾಗುತ್ತವೆ ಎಂದು ತಿಳಿಯಲು ಪ್ರಯೋಗಿಸಿದ 40 ನೊಣ ವಂಶಾವಳಿಯ ಸಾಲುಗಳ ನರಕೊಣಿಕೆಗಳಲ್ಲಿ ಹಂತ ಹಂತದಲ್ಲಿ ಹೆಚ್ಚು ಚುರುಕುಗೊಳ್ಳಲು, ತಾಪಮಾನ ಹೆಚ್ಚಿಸಿದರು. ಇದರ ಜೊತೆಗೆ ಮತ್ತೊಂದು ತಂತ್ರವನ್ನು ಮಾಡಿದರು. ಅಲ್ಲಿ ತೋರಿಸಬೇಕಾದ ನರಕೋಶಗಳಿಗೆ ಹೊಳೆಯುವ ಹಸಿರಿನ (flurescent green) ರಾಸಾಯನಿಕವನ್ನು ಹಚ್ಚಿದರು. ಇದರಿಂದ ಮಿದುಳಿನಲ್ಲಿ ಬೇಕಾದ ನರಗಳ ರಚನೆ ಮತ್ತು ಸ್ತಳವನ್ನು ಪತ್ತೆ ಹಚ್ಚಲು ನೆರವಾಯಿತು. ಇದರೊಂದಿಗೆ ಮತ್ತೆ ಹಲವು ಸಲಕರಣೆಗಳನ್ನು ಬಳಸಿ ನರಕೋಶಗಳಲ್ಲಿ ’ಟ್ಯಾಕಿಕಯ್ನಿನ್’ (tachykinin) ಎಂಬ ನ್ಯೂರೊಪೆಪ್ಟಯ್ಡ್ ಅನ್ನು ಕಂಡು ಹಿಡಿದರು.
ಆಮೇಲೆ ಹೆಣ್ಣು ಹಾಗೂ ಗಂಡು ನೊಣಗಳಲ್ಲಿ ಹೋಲಿಕೆಗಳನ್ನು ತಿಳಿಯಲು ಹೊರಟರು. ಆಗ ಗಂಡು ನೊಣಗಳಲ್ಲಿ ಕಡಿಮೆ ನರಕೊಣಿಕೆಗಳು ಕಂಡವು. ಯಾವಾಗ ಈ ನರಕೊಣಿಕೆಗಳನ್ನು ಸುಮ್ಮನಿರುವಂತೆ (silenced) ಮಾಡಿದರು, ಅವುಗಳಲ್ಲಿ ಟ್ಯಾಕಿಕಯ್ನಿನ್ ಇಲ್ಲದಂತಾಗಿ, ಕಡಿಮೆ ಜಗಳಹೂಡುವ ನಡವಳಿಕೆಯನ್ನು ನೊಣಗಳಲ್ಲಿ ಕಂಡರು. ಟ್ಯಾಕಿಕಯ್ನಿನ್ ನರಕೊಣಿಕೆಗಳಲ್ಲಿ ಸಿಕ್ಕಿದು ಆಸಕ್ತಿಕರವಾಗಿದೆ, ಯಾಕೆಂದರೆ ಇಲಿಗಳಲ್ಲಿ, ಮನುಶ್ಯರಲ್ಲಿ ಹಲವು ಟ್ಯಾಕಿಕಯ್ನಿನ್ ಗಳಿರುವುದು, ಜೊತೆಗೆ ಪಿ ಎಂಬ ತಿರುಳಿರುವುದು (substance) ಜಗಳಹೂಡುವ ನಡವಳಿಕೆಗೆ ಕೊಂಡಿಯಾಗಿ, ಪುರಾವೆಯಾಗಿದೆ.
(ನೊಣಗಳ ಮಿದುಳಿನ ತಿಟ್ಟ: ಮಿದುಳಿನಲ್ಲಿರುವ ಪುಟಾಣಿ ನರಕೊಣಿಕೆಗಳ ಗುಂಪು ನೊಣಗಳಲ್ಲಿ ಕಾದಾಡುವ ಗುಣವನ್ನು ಹೊಮ್ಮಿಸುತ್ತದೆ. ಎಡಬದಿಯ ತಿಟ್ಟದಲ್ಲಿ ತೋರಿಸಿರುವಂತೆ ಗಂಡು ನೊಣಗಳಲ್ಲಿ ಈ ನರಕೊಣಿಕೆಗಳು ಕಂಡುಬಂದರೆ ಬಲಬದಿಯ ತಿಟ್ಟದಲ್ಲಿ ತೋರಿಸಿರುವಂತೆ ಹೆಣ್ಣು ನೊಣಗಳಲ್ಲಿ ಇವು ಕಂಡುಬಂದಿಲ್ಲ)
ಇದೇ ರೀತಿ ಅರಿಗರು ನೊಣಗಳ ತಳಿಯನ್ನು ಬಿಣಿಗಿಸಿ (engineered) ಅಂದರೆ, ಡಿ.ಎನ್.ಎ. (genome) ಯಲ್ಲಿ ಟ್ಯಾಕಿಕಯ್ನಿನ್ ತಳಿಯ ನಕಲುಗಳನ್ನು (duplicates) ಸೇರಿಸಿ, ಇಲ್ಲವೆ ತೆಗೆದುಹಾಕಿ, ಟ್ಯಾಕಿಕಯ್ನಿನ್ ಉಂಟಾಗುವುದನ್ನು ಮತ್ತು ಅದರಿಂದ ನೊಣಗಳಲ್ಲಿ ಜಗಳ ಹೂಡುವಿಕೆಯನ್ನು ತಿಳಿದುಕೊಂಡರು. ಮುಂದೆ ಅರಿಗರು ಹಲವು ಸಣ್ಣ ದೇಹದ ನೊಣಗಳು ದೊಡ್ಡ ನೊಣಗಳಿಗೆ ದಾಳಿ ಇಡುವಂತೆಯೂ ಮಾಡಿದರು.
ಕೊರಿ ಬರ್‍ಗ್ಮನ್, ರಾಕ್ ಪೆಲ್ಲರ್ ವಿಶ್ವವಿದ್ಯಾಲಯ (ರಾಶ್ಟ್ರೀಯ ಆರೋಗ್ಯ ಸಲಹಾ ವಿದ್ಯಾಲಯಗಳ ಒಂದು ಮೇಲ್ಮಟ್ಟದಲ್ಲಿರುವ ವಿದ್ಯಾಲಯ) ಹೇಳುವುದೇನೆಂದರೆ,
ಸಾಲು ಸಾಲು ಪುರಾವೆಗಳಿಂದ ಒಂದು ನಿರ‍್ಣಾಯಕ ಹಂತದಲ್ಲಿ ತಿಳಿದುಬಂದ ವಿಶಯವೆಂದರೆ, ನೊಣವೊಂದರ ನಡವಳಿಕೆಯನ್ನು ಹತೋಟಿಯಲ್ಲಿಟ್ಟಿರುವುದು. ಇಂತಹ ಸಾಲು ಸಾಲು ಹುಡುಕಾಟದಿಂದ ಮಿದುಳಿನ ಕೆಲಸವನ್ನು ತಿಳಿಯಲು ಬಹಳ ನೆರವಾಗುತ್ತದೆ.
ಇದು ಹೇಗೆ ಮನುಶ್ಯರಿಗೆ ಹೊಂದುತ್ತದೆ ಎಂಬುದು ಇನ್ನು ಮಬ್ಬು ಮಬ್ಬಾಗಿದೆ. ಹಿಂದೆ ಒಂದು ಮದ್ದು (drug) ಮಾತ್ರ ಪಿ -ವಸ್ತುವನ್ನು ತಗ್ಗಿಸುವಲ್ಲಿ, ಅದರಲ್ಲೂ ಮಂಕುಕವಿಯುವುದನ್ನು ತಡೆಯುವಲ್ಲಿ ನಂಬಿಕೆಯನ್ನು ಹುಟ್ಟಿಸಿತ್ತು. ಆದರೆ ಬೇನಿಗರಲ್ಲಿ ಪ್ರಯೋಗ ನಡೆಸಿದಾಗ ಅದು ಸೋತಿತು. ಡಾ. ಆಂಡರ‍್ಸನ್ ಮತ್ತು ಇತರ ಅರಿಗರ ಪ್ರಕಾರ ಆ ಮದ್ದನ್ನು ಒತ್ತಡದಲ್ಲಿ ನಿಲ್ಲಿಸಲಾಗದ ಕೋಪ ತೋರುವ ಬೇನಿಗರಲ್ಲಿ (ಪೋಸ್ಟ್-ಟ್ರೊಮಾಟಿಕ್ ಸ್ಟೆಸ್ ಸಿಂಡ್ರೋಮ್ ಮೇಲೆ) ಪ್ರಯೋಗ ನಡೆಸಲು ನೆರವಾಗುತ್ತದೆ ಎಂದಿದ್ದರು.
ಇದರಿಂದ ನಾವು ಮನುಶ್ಯ ಹಾಗು ನೊಣಗಳಲ್ಲಿ ಸಾಮಾನ್ಯವಾಗಿ ಕಾಣುವ ಹಲವು ಗುಣಗಳಿವೆ, ತಳಿಗಳಿವೆ ಎಂದು ತಿಳಿಯಬಹುದಾಗಿದೆ. ನೊಣಗಳಲ್ಲಿನ ಜಗಳಹೂಡುವಿಕೆಯನ್ನು ತಿಳಿಯಹೋದಾಗ ನಮಗೆ ಹೇಗೆ ಒಂದು ’ಟ್ಯಾಕಿಕಯ್ನಿನ್’ ನಂತಹ ರಾಸಾಯನಿಕ ಜಗಳಹೂಡಿವಿಕೆಯನ್ನು ಹತೋಟಿಯಲ್ಲಿಡುತ್ತದೆ ಎಂಬುದನ್ನು ತಿಳಿಸುತ್ತದೆ.
ಹೆಣ್ಣುಮಕ್ಕಳು ಜಗಳಗಂಟಿಯರು ಅನ್ನುವ ಕೆಲವು ಗಂಡಸರ ಬಾಯಿಮುಚ್ಚಿಸಲು ಈ ಪ್ರಯೋಗ ನೆರವಾಗಬಲ್ಲದು ಅಲ್ಲವೇ 😉
(ತಿಳಿವಿನ ಮತ್ತು ತಿಟ್ಟಸೆಲೆ: www.nytimes.com)
1 Response
[…] ಅವು ಹೆಸರುವಾಸಿಯಾಗಿವೆ. 1970ರಿಂದಲೂ ಮಿದುಳಿನ ಕೊಣಿಕೆಗಳ ಮೇಲೆ, ನಡವಳಿಕೆಗಳ ಮೇಲೆ, ಪರಿಸರ ಹಾಗೂ […]