ಇಗೋ! ನಾವು ಕಟ್ಟಿದ 2,956 ಪದಗಳು!
ಕನ್ನಡದಲ್ಲಿ ಹೊಸ ಪದಗಳನ್ನು ಕಟ್ಟಲು ಆಗುವುದೇ ಇಲ್ಲವೆಂಬ ಅನಿಸಿಕೆ ಎಲ್ಲೆಲ್ಲೂ ಕೇಳಿಬರುತ್ತಿತ್ತು. ಆ ಅಳವೇ ಕನ್ನಡಕ್ಕೆ ಇಲ್ಲವೇನೋ ಎಂಬ ಅನಿಸಿಕೆಯಿತ್ತು. ಹೊಸ ಪದ ಕಟ್ಟುವವರೆಲ್ಲ ಸಂಸ್ಕ್ರುತದ ಮೊರೆ ಹೋಗುವುದು ವಾಡಿಕೆಯಾಗಿತ್ತು.
ಆದರೆ ಇತ್ತ, ಡಾ. ಡಿ. ಎನ್. ಶಂಕರಬಟ್ಟರು ಇದಾವುದನ್ನೂ ನಂಬದೆ, ಒಪ್ಪದೆ, ತಮ್ಮಶ್ಟಕ್ಕೆ ತಾವು ಕನ್ನಡದ್ದೇ ಪದಗಳನ್ನು ಕಟ್ಟುವ ಬಗೆ ಹೇಗೆಂದು ಅರಕೆ ನಡೆಸುತ್ತಿದ್ದರು. ಅತ್ತ, ಡಾ. ಕೆ. ವಿ. ನಾರಾಯಣ ಅವರು ಅವರೊಡನೆ ಕಯ್ ಜೋಡಿಸಿ ಹಲವು ಸುದ್ದಿಹಾಳೆಗಳಲ್ಲಿ ಕನ್ನಡದಲ್ಲಿ ಹೊಸ ಪದ ಕಟ್ಟುವ ಬಗೆಯನ್ನು ಜನಪ್ರಿಯಗೊಳಿಸುತ್ತಿದ್ದರು.
ಈ ಹಿರಿಯರೀರ‍್ವರ ಕೆಲಸವನ್ನು ಕಣ್ಣಾರೆ ನೋಡಿ, ಅವರ ಹೊತ್ತಗೆಗಳನ್ನು ಚೆನ್ನಾಗಿ ಓದಿಕೊಂಡು, ಅವರು ಮಾಡುತ್ತಿರುವುದನ್ನು ಮುಂದುವರೆಸುವುದು ಮತ್ತು ಜನಪ್ರಿಯವಾಗಿಸುವುದು ನಮ್ಮ ಕೆಲಸವೆಂದು ನಮ್ಮಲ್ಲಿ ಕೆಲವರು ತಿಳಿದುಕೊಂಡು ಮುಂದುವರೆದೆವು. ಶಂಕರಬಟ್ಟರ ’ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು’ ಎಂಬ ಹೊತ್ತಗೆ ನಮಗೆ ದಾರಿತೋರುಗವಾಯಿತು.
ಕರ‍್ನಾಟಕದ ಬೇರೆ ಬೇರೆ ವಿಶ್ವವಿದ್ಯಾಲಯದವರನ್ನು ಶಂಕರಬಟ್ಟರ ಕೆಲಸಕ್ಕೆ ಕಯ್ ಜೋಡಿಸಲು ಬಹಳ ಅಕ್ಕರೆ-ನಂಬಿಕೆಗಳಿಂದ ಕರೆ ನೀಡಿದೆವು. ಆದರೆ ಕೊನೆಗೆ ಅವರಿಂದ ಸಿಕ್ಕ ನೆರವು ಹೆಚ್ಚು-ಕಡಿಮೆ ಸೊನ್ನೆಯೇ ಎಂದು ಹೇಳಲು ನೋವಾಗುತ್ತದೆ. ಸಾವಿರಗಟ್ಟಲೆ ರೂಪಾಯಿ ದುಡ್ಡು ಕರ‍್ಚು ಮಾಡಿಕೊಂಡು ಅವರಿಗಾಗಿ ತರಬೇತಿ ಶಿಬಿರಗಳನ್ನು ಏರ‍್ಪಡಿಸಿ ಏನೂ ಸಿಗದೆ ಕಯ್ ಸುಟ್ಟಿಕೊಂಡಿರುವುದು ನಮಗೆ ಗೊತ್ತಶ್ಟೆ; ಕಾಲ ಕಳೆಯಲು, ಬಟ್ಟರೊಡನೆ ನಿಂತು ಪೋಟೊ ತೆಗೆಸಿಕೊಳ್ಳಲು ಬಂದವರೇ ಜಾಸ್ತಿ!
ಆದ್ದರಿಂದ ನಾವುಗಳೇ, ಎಂದರೆ ವಿಶ್ವವಿದ್ಯಾಲಯಗಳಲ್ಲಿ ಕನ್ನಡ, ನುಡಿಯರಿಮೆ ಮುಂತಾದವುಗಳನ್ನು ಓದಿರದವರೇ ಹೊಸ ಪದಗಳನ್ನು ಕಟ್ಟುವ ತುಡಿತವಿರುವವರು, ಬೇರೆ ಯಾರಿಗೂ ಇಲ್ಲವೆಂದು ಇಂತಹ ಅನುಬವಗಳಿಂದ ಕಚಿತವಾಯಿತು.
ಹಾಗಾದರೆ ಪದ ಕಟ್ಟುವ ಹಮ್ಮುಗೆಯನ್ನು ಮುಂದುವರೆಸುವುದಾದರೂ ಹೇಗೆ? ಹುಲುಜನರೇ ಕಟ್ಟಬೇಕು ಎನ್ನುವುದಾದರೆ ಅವರೆಲ್ಲರೂ ಒಂದು ಕಡೆ ಸೇರಿ ಕಟ್ಟಬಹುದೇ? ಒಂದು ಕಡೆ ಸೇರುವುದಾದರೂ ಹೇಗೆ? ಇಂತಹ ಕೇಳ್ವಿಗಳು ನಮ್ಮನ್ನು ಕಾಡಿದವು. ಕೊನೆಗೆ, ಮಿಂಬಲೆಯ ಮೂಲಕವೇ ಎಲ್ಲರೂ ಸೇರಿ, ಪದಗಳ ಬಗ್ಗೆ ಚರ‍್ಚೆ ನಡೆಸಿ, ಹೊಸ ಪದಗಳನ್ನು ಕಟ್ಟಲು ಮೊಗಸೋಣವೆಂದು ತೀರ‍್ಮಾನಕ್ಕೆ ಬಂದೆವು. ಇದರಿಂದ ಹುಟ್ಟಿದ್ದೇ ’ಪದ ಪದ ಕನ್ನಡ ಪದಾನೇ’ ಎಂಬ ಪೇಸ್‍ಬುಕ್ ಗುಂಪು.
ಈ ನಮ್ಮ ಗುಂಪು ಶುರುವಾಗಿ ಎರಡು ವರ‍್ಶವಾಯಿತು ಎಂದು ನೀವು ಓದಿರಬಹುದು. ಈಗ ಇಂಗ್ಲಿಶ್ ಪದಗಳಿಗೆ ನಾವು ಕಟ್ಟಿರುವ ಆಯ್ದ 2,956 ಕನ್ನಡದವೇ ಆದ ಪದಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ನೆನಪಿಡಿ, ಇದನ್ನು ಕಟ್ಟಿದವರು ಯಾರೂ ವಿವಿಗಳಲ್ಲಿ ಕನ್ನಡದ ಪದವಿಯನ್ನಾಗಲಿ, ನುಡಿಯರಿಮೆಯ ಪದವಿಯನ್ನಾಗಲಿ, ಪಡೆದವರಲ್ಲ. ಎಲ್ಲರೂ ಹುಲುಜನರೇ, ಕನ್ನಡವನ್ನು ತಮ್ಮ ತಮ್ಮ ಕೆಲಸಗಳಲ್ಲಿ ಹೆಚ್ಚೆಚ್ಚು ಬಳಸಬೇಕೆಂಬ ಆಸೆಯಿರುವವರಶ್ಟೇ. ಈ ತುಡಿತವೊಂದಿದ್ದರೆ ಕನ್ನಡ ಜಗತ್ತಿನ ಯಾವ ನುಡಿಗೂ ತಲೆಬಾಗಿಸಬೇಕಾಗಿ ಉಳಿಯುವುದಿಲ್ಲ!
ಪದಗಳನ್ನು ಇಲ್ಲಿ ಪಡೆಯಿರಿ. ಇದನ್ನು ನೀವು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು. ಕೆರೆಯ ನೀರನ್ನು ಕೆರೆಗೆ ಚೆಲ್ಲುತ್ತಿದ್ದೇವೆ, ಅಶ್ಟೇ. ನಮ್ಮೊಡನೆ ಸೇರಿ ಪದ ಕಟ್ಟುವ ಆಸೆಯಿದ್ದರೆ ಇಲ್ಲಿ ಒತ್ತಿ.
(ತಿಟ್ಟ: www.philhart.com)
1 Response
[…] ಕನ್ನಡದಲ್ಲೇ ಹೊಸ ಹೊಸ ಪದಗಳನ್ನು ಕಟ್ಟಿ, ಆ ಮೂಲಕ ಎಲ್ಲಾ ವಿಶಯಗಳನ್ನೂ ಕನ್ನಡದಲ್ಲೇ ಹೇಳುವ ಪ್ರಯತ್ನವೇ ಹೊನಲು ಮಿಂಬಾಗಿಲು. ಬೇರೆ ಬೇರೆ ವಲಯಗಳಿಗೆ ಸಂಬಂದಪಟ್ಟ ಪದಗಳನ್ನು ಕನ್ನಡದಲ್ಲೇ ಕಟ್ಟುವ ಸಲುವಾಗಿ, ಮತ್ತು ಹಾಗೆ ಕಟ್ಟಲಾದ ಪದಗಳನ್ನು ಚರ‍್ಚೆಗೊಳಪಡಿಸಿ ಒರೆಗೆ ಹಚ್ಚಿನೋಡುವ ಸಲುವಾಗಿ, ಪೇಸ್‍ಬುಕ್ಕಿನಲ್ಲಿ ಪದ ಪದ ಕನ್ನಡ ಪದಾನೇ ಎಂಬ ಹೆಸರಿನ ಗುಂಪೊಂದನ್ನು ನಡೆಯಿಸಿಕೊಂಡು ಬರುತ್ತಿದ್ದೇವೆ. ಈ ಗುಂಪಿನಲ್ಲಿ ಕಟ್ಟಲಾದ ಹಲವಾರು ಪದಗಳನ್ನು ಹೊನಲು ಮಿಂಬಾಗಿಲ ಬರಹಗಳಲ್ಲಿ ಬಳಸಿಕೊಳ್ಳಲಾಗಿದೆ, ಸುಮಾರು ಪದಗಳನ್ನು ಈಗಾಗಲೇ ನಿಮ್ಮ ಮುಂದೆಯೂ ಇಟ್ಟಿದ್ದೇವೆ. […]