ರಾಜ್ಯಗಳ ಕಯ್ಗೆ ಸಿಗಬೇಕು ಹೆಚ್ಚಿನ ಅದಿಕಾರ

– ಚೇತನ್ ಜೀರಾಳ್.

Democracy

ಬಾರತ ದೇಶದ ಸಂಸದೀಯ ಇತಿಹಾಸದಲ್ಲಿ ಕರಾಳ ಅದ್ಯಾಯವೊಂದು ನಡೆದು ಹೋಗಿದೆ. ಮಂದಿಯಾಳ್ವಿಕೆಯಲ್ಲಿ ನಂಬಿಕೆಯನ್ನು ಹುಟ್ಟುಹಾಕಬೇಕಾಗಿದ್ದ ಜಾಗದಲ್ಲಿ ಮಂದಿಯಾಳ್ವಿಕೆಯನ್ನು ಕೊಲ್ಲುವ ಕೆಲಸವಾಗಿದೆ. ಇತ್ತೀಚಿಗೆ ಲೋಕಸಬೆಯಲ್ಲಿ ತೆಲಂಗಾಣವನ್ನು ಹೊಸ ರಾಜ್ಯವನ್ನಾಗಿ ಮಾಡುವ ಮಸೂದೆಯನ್ನು ಮಂಡಿಸಲಾಗಿತ್ತು. ಆಂದ್ರಪ್ರದೇಶವನ್ನು ಒಡೆದು ಹೊಸ ತೆಲಂಗಾಣ ರಾಜ್ಯವನ್ನು ಮಾಡುವ ಕೆಲಸವನ್ನು ಮೊದಲಿನಿಂದಲೂ ವಿರೋದಿಸುತ್ತಾ ಬಂದಿದ್ದ ಆಂದ್ರಪ್ರದೇಶದ ಸಂಸದರ, ಶಾಸಕರ ಮತ್ತು ಆಂದ್ರಪ್ರದೇಶದ ಜನಪ್ರಿಯ ಸರಕಾರದ ಮನವಿಯನ್ನು ಕಡೆಗಣಿಸುತ್ತಲೇ ಬಂದಿದ್ದ ಕಾಂಗ್ರೆಸ್ ಪಕ್ಶ ಮತ್ತು ಬಿಜೆಪಿ ಪಕ್ಶಗಳು, ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ತಮಗೆ ಬೇಕಿರುವುದನ್ನು ಸಾದಿಸಲು, ತಮ್ಮದೇ ಪಕ್ಶದ ಸಂಸದರನ್ನು ಅಮಾನತಿನಲ್ಲಿಟ್ಟು ಹಾಗೂ ಲೋಕಸಬೆಯಲ್ಲಿ ನಡೆಯುತ್ತಿರುವುದು ಜನರಿಗೆ ಗೊತ್ತಾಗದಂತೆ ಟಿವಿಯ ನೇರ ಪ್ರಸಾರವನ್ನು ತಡೆದು ಗುಟ್ಟಾಗಿ ತೆಲಂಗಾಣ ಮಸೂದೆಗೆ ಒಪ್ಪಿಗೆಯನ್ನು ಪಡೆದಿವೆ.

ಇದಲ್ಲದೇ ಮೊನ್ನೆ ರಾಜ್ಯಸಬೆಯಲ್ಲಿ ಕೂಡ ಹಲವು ಸಂಸದರ ವಿರೋದದ ನಡುವೆ ತಮ್ಮ ಹಟ ಸಾದಿಸಿಯೇ ತೀರುತ್ತೇವೆ ಅನ್ನುವ ಚಲದೊಂದಿಗೆ ಕಾಂಗ್ರೆಸ್ ಪಕ್ಶ ಮಾಡಿದ ಮೊಂಡಾಟಕ್ಕೆ ಬಿಜೆಪಿ ಕೂಡ ಒತ್ತಾಸೆ ನೀಡಿದ್ದು ಮಂದಿಯಾಳ್ವಿಕೆಗೆ ಮಾಡಿದ ಅವಮಾನವಲ್ಲದೇ ಮತ್ತೇನು? ಮೊದಲಿನಿಂದಲೂ ಒಡೆದು ಆಳುವ ನೀತಿಯಲ್ಲೇ ನಂಬಿಕೆ ಇಟ್ಟುಕೊಂಡಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ, ಇಡೀ ಬಾರತದ ಮೇಲೆ ದೆಹಲಿ ಮಾತ್ರ ಸರ‍್ವಾದಿಕಾರ ಹೊಂದಿರಬೇಕು ಅನ್ನುವ ನಿಲುವು ಇಂದು ನಿನ್ನೆಯದಲ್ಲ. ರಾಜ್ಯಗಳು ಬಲಿಶ್ಟವಾದಲ್ಲಿ ಅಲ್ಲಿಯ ಪ್ರಾದೇಶಿಕ ಪಕ್ಶಗಳು ಬಲಿಶ್ಟವಾದಲ್ಲಿ, ಈಗಾಗಲೇ ದೆಹಲಿ ಗದ್ದುಗೆಯ ರುಚಿಕಂಡಿರುವ ಕಾಂಗ್ರೆಸ್ ಹಾಗೂ ಬಿಜೆಪಿಗೆ ಅದಿಕಾರದಲ್ಲಿ ಹೆಚ್ಚು ದಿನ ಮುಂದುವರೆಯಲಾಗುವುದಿಲ್ಲ ಎನ್ನುವ ದಿಟ ಕಣ್ಣಿಗೆ ಕಾಣಿಸತೊಡಗಿದೆ. (ಗಮನಿಸಿ 90ರ ದಶಕದ ನಂತರ ಯಾವುದೇ ಒಂದು ಪಕ್ಶಕ್ಕೆ ಕೇಂದ್ರದಲ್ಲಿ ಬಹುಮತ ಸಿಕ್ಕಿಲ್ಲ, ಇದಕ್ಕೆ ಕಾರಣ ಹೆಚ್ಚಾಗಿ ನೆಲೆ ಕಂಡುಕೊಳ್ಳುತ್ತಿರುವ ಪ್ರಾದೇಶಿಕ ಪಕ್ಶಗಳು) ಇದರಿಂದಾಗಿಯೇ ದೊಡ್ಡ ರಾಜ್ಯಗಳನ್ನು ಒಡೆದು ಚಿಕ್ಕದು ಮಾಡಿದಲ್ಲಿ ತಮ್ಮ ಪಕ್ಶಗಳಿಗಿರುವ ಮೂಲ ಮತದಾರರ ಒಲವಿನಿಂದ ಹೆಚ್ಚು ಸ್ತಾನಗಳನ್ನು ಗೆಲ್ಲುವ ಸುಲಬ ದಾರಿ ಕಂಡುಕೊಂಡಿದ್ದಾರೆ.

ಈ ರಾಜಕೀಯದ ಆಟ ಒಂದೆಡೆ ಆದಲ್ಲಿ, ಒಂದು ರಾಜ್ಯದ ಜನಪ್ರಿಯ ಸರಕಾರ ತಮಗೆ ತಮ್ಮ ರಾಜ್ಯವನ್ನು ಒಡೆಯುವುದು ಬೇಡ ಎಂದು ಕೇಂದ್ರದ ಮುಂದೆ ತಮ್ಮ ಮನವಿ ಮಾಡಿದರೂ ಇದಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ತಮಗೆ ಅನಿಸಿದ್ದನ್ನು ತಾವು ಮಾಡಿಯೇ ತೀರುತ್ತೇವೆ ಅನ್ನುವ ನಿಲುವಿನೊಂದಿಗೆ ಕೇಂದ್ರವು ಹೊಸ ರಾಜ್ಯವನ್ನು ಮಾಡಿದೆ. ಗಮನಿಸಬೇಕಾದ ವಿಶಯವೆಂದರೆ ಆಂದ್ರಪ್ರದೇಶಕ್ಕೆ ಯಾವುದೇ ರೀತಿ ಸಂಬಂದಿಸಿರದ ಲೋಕಸಬೆಯ ಹಾಗೂ ರಾಜ್ಯ ಸಬೆಯ ಸಂಸದರು ಆಂದ್ರಪ್ರದೇಶ ಒಂದಾಗಿರಬೇಕೆ ಬೇಡವೇ ಅನ್ನುವ ತೀರ್ಮಾನ ತಗೆದುಕೊಳ್ಳುವ ಹಕ್ಕು ಹೊಂದಿದ್ದಾರೆ. ಆದರೆ ಈ ಹಕ್ಕು ಆಂದ್ರಪ್ರದೇಶದ ಜನರಿಂದಲೇ ಆರಿಸಲ್ಪಟ್ಟ ಶಾಸಕರು ಹಾಗೂ ಸಂಸದರಿಗಿಲ್ಲ ಅನ್ನುವುದು ಯಾವ ರೀತಿಯ ಮಂದಿಯಾಳ್ವಿಕೆ? ಇದು ಮಂದಿಯಾಳ್ವಿಕೆಯಲ್ಲಿನ ಹುಳುಕಲ್ಲವೇ? ಈ ಹುಳುಕಿನ ಮೂಲ ಹುಡುಕುತ್ತಾ ಹೊರಟರೆ ನಮಗೆ ಕಾಣುವುದು ಬಾರತದ ಸಂವಿದಾನ. ಆ ಸಂವಿದಾನದ ಆರ‍್ಟಿಕಲ್ 3 ರ ಪ್ರಕಾರ ಕೇಂದ್ರ ಸರಕಾರ ಹಾಗೂ ಬಾರತದ ರಾಶ್ಟ್ರಪತಿಗಳು ತಮಗೆ ಸರಿ ಅನ್ನಿಸಿದ್ದಲ್ಲಿ ಬಾರತದ ಹಲವು ಬಾಗಗಳನ್ನು ಕೂಡಿಸುವ ಇಲ್ಲವೇ, ಇರುವ ರಾಜ್ಯವನ್ನು ಒಡೆದು ಹೊಸ ರಾಜ್ಯ ಮಾಡಲು ಅದಿಕಾರ ಹೊಂದಿದ್ದಾರೆ. ಆದರೆ ಇದರ ಬಗ್ಗೆ ಸಂಬಂದಿಸಿದ ರಾಜ್ಯಗಳ ಒಪ್ಪಿಗೆ ಪಡೆಯಲೇ ಬೇಕು ಎನ್ನುವ ನಿಯಮವಿಲ್ಲ. ಇದರ ಬಗ್ಗೆ ಈ ಹಿಂದೆ ಬರೆದಿದ್ದ ಬರಹವನ್ನು ನೋಡಿ.

ಹೆಸರಿಗೆ ಪ್ರಪಂಚದ ಅತಿ ದೊಡ್ಡ ಮಂದಿಯಾಳ್ವಿಕೆಯ ದೇಶ ಬಾರತ ಅಂತ ಕರೆಸಿಕೊಂಡರೂ ಅಲ್ಲಿ ಮಂದಿಯಾಳ್ವಿಕೆಯಾಗಲಿ, ಒಕ್ಕೂಟ ವ್ಯವಸ್ತೆಗಾಗಲಿ ಸಿಗಬೇಕಾಗಿದ್ದ ಒಲವು ಅತವಾ ನೆರವನ್ನು ಸಿಗದಂತೆ ನಮ್ಮ ರಾಜಕೀಯ ಪಕ್ಶಗಳು ಮಾಡಿಕುಳಿತಿವೆ. ನಮಗೆಲ್ಲ ದಾರಿ ತೋರಬೆಕಾಗಿದ್ದ ಸಂವಿದಾನದಲ್ಲೇ ತಪ್ಪಿದ್ದರೆ ಅದನ್ನು ತಿದ್ದುವ ಕೆಲಸವಾಗಬೇಕಿತ್ತು. ಆದರೆ ಅದು ಇಂದಿಗೂ ಆಗುತ್ತಿಲ್ಲ. ಇಂದಿನ ರಾಜಕೀಯ ಪಕ್ಶಗಳಿಗೆ ಮಂದಿಯಾಳ್ವಿಕೆಯೆಡೆಗಿನ ನಿಲುವು ಸಂವಿದಾನವನ್ನು ತಿದ್ದುಪಡಿ ಮಾಡಲು ಆಸಕ್ತಿ ತೋರಿಸದಂತೆ ಮಾಡಿದೆ.

ಹೊರ ನಾಡುಗಳಲ್ಲಿ ಹೇಗಿದೆ ಸಂವಿದಾನ?

ಮಂದಿಯಾಳ್ವಿಕೆಯನ್ನು ಹೊಂದಿರುವ ಬೇರೆ ಬೇರೆ ದೇಶಗಳಲ್ಲಿ ಹೊಸ ರಾಜ್ಯಗಳನ್ನು ಹುಟ್ಟು ಹಾಕಲು ಅವರ ಸಂವಿದಾನ ಏನು ಹೇಳುತ್ತದೆ, ಈ ಕ್ರಿಯೆಯಲ್ಲಿ ಯಾರು ಪಾಲ್ಗೊಳ್ಳುತ್ತಾರೆ ಅನ್ನುವುದನ್ನು ನೋಡೋಣ. ಇದಕ್ಕಾಗಿ ನಾನು ಮಂದಿಯಾಳ್ವಿಕೆಯನ್ನು ಹೊಂದಿರುವ ಎರಡು ದೇಶಗಳನ್ನು ಆಯ್ದುಕೊಂಡಿದ್ದೇನೆ.

ಅಮೇರಿಕಾ ಏನು ಹೇಳುತ್ತದೆ?
ಅಮೇರಿಕಾ ದೇಶದಲ್ಲಿ ಹೊಸದೊಂದು ರಾಜ್ಯವನ್ನು ಹುಟ್ಟು ಹಾಕಲು ಇರುವ ನಿಯಮ ಈ ಕೆಳಗಿನಂತಿದೆ:

ಅಮೇರಿಕಾದ ಸಂವಿದಾನದ ಆರ್ಟಿಕಲ್ 4 ರ ಬಾಗ 3 ರ ಕಿರುಸೊಲ್ಲು (Clause) ಈ ರೀತಿ ಹೇಳುತ್ತದೆ

New States may be admitted by the Congress into this Union; but no new States shall be formed or erected within the Jurisdiction of any other State; nor any State be formed by the Junction of two or more States, or Parts of States, without the Consent of the Legislatures of the States concerned as well as of the Congress.
ARTICLE IV, SECTION 3, CLAUSE 1

ಅಮೇರಿಕಾದ ನಿಯಮದ ಪ್ರಕಾರ ಈಗಾಗಲೇ ಅಸ್ತಿತ್ವದಲ್ಲಿರುವ ರಾಜ್ಯಗಳ ಬಾಗಗಳನ್ನು ಒಡೆದು ಅತವಾ ಒಂದು ರಾಜ್ಯವನ್ನು ಎರಡು ರಾಜ್ಯಗಳನ್ನಾಗಿ ಮಾಡಬೇಕಾದರೆ ಕಡ್ಡಾಯವಾಗಿ ಆ ಪ್ರಕ್ರಿಯೆಯಲ್ಲಿ ಬಾಗವಹಿಸುವ ಪ್ರತಿಯೊಂದು ರಾಜ್ಯದ ವಿದಾನಸಬೆಯ ಒಪ್ಪಿಗೆಯನ್ನು (Consent) ಕಡಾಯವಾಗಿ ಪಡೆಯಲೇಬೇಕು.

ಆಸ್ಟ್ರೇಲಿಯಾ ಏನು ಹೇಳುತ್ತದೆ?

ಆಸ್ಟ್ರೇಲಿಯಾ ಸಂವಿದಾನದ ಅದ್ಯಾಯ 6 ರ ಪ್ರಕಾರ ಹೊಸ ರಾಜ್ಯವನ್ನು ಮಾಡಬೇಕಾದಲ್ಲಿ ಈ ಕೆಳಗಿನ ನಿಯಮಗಳನ್ನು ಪಾಲಿಸಲೇ ಬೇಕು:

123. The Parliament of the Commonwealth may, with the consent of the Parliament of a State, and the approval of the majority of the electors of the State voting upon the question, increase, diminish, or otherwise alter the limits of the State, upon such terms and conditions as may be agreed on, and may, with the like consent, make provision respecting the effect and operation of any increase or diminution or alteration of territory in relation to any State affected.
124. A new State may be formed by separation of territory from a State, but only with the consent of the Parliament thereof, and a new State may be formed by the union of two or more States or parts of States, but only with the consent of the Parliaments of the States affected.

ಮೇಲೆ ಹೇಳಿರುವ ನಿಯಮಗಳ ಪ್ರಕಾರ ಒಂದು ರಾಜ್ಯದ ಬಾಗವನ್ನು ಹೊಸ ರಾಜ್ಯವನ್ನಾಗಿ ಮಾಡುವುದಾಗಲೀ ಅತವಾ ಒಂದು ರಾಜ್ಯದ ಪ್ರದೇಶವನ್ನು ಹಿಗ್ಗಿಸುವ, ಕುಗ್ಗಿಸುವ ಅತವಾ ಬದಲಾಯಿಸುವಾಗ ಆ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಂದು ರಾಜ್ಯದ ಪಾರ‍್ಲಿಮೆಂಟಿನ ಒಪ್ಪಿಗೆ (Consent) ಮತ್ತು ಜನರಿಂದ ಆರಿಸಲ್ಪಟ್ಟ ಜನಪ್ರತಿನಿದಿಗಳ ಬಹುಮತದ ಒಪ್ಪಿಗೆಯನ್ನು ಪಡೆದರೆ ಮಾತ್ರ ಹೊಸ ರಾಜ್ಯವನ್ನು ಹುಟ್ಟು ಹಾಕಲು ಸಾದ್ಯ.

ನಮ್ಮ ಸಂವಿದಾನ ಏನು ಹೇಳುತ್ತದೆ?
ಈ ಹಿಂದೆ ಬಾರತದ ಸಂವಿದಾನದಲ್ಲಿ ಹೊಸ ರಾಜ್ಯವೊಂದನ್ನು ಮಾಡಲು ಇರುವ ನಿಯಮವೇನು ಅನ್ನುವುದರ ಬಗ್ಗೆ ಬರೆಯಲಾಗಿತ್ತು, ಅದನ್ನು ಇಲ್ಲಿ ಓದಿ (ಮಂದಿಯಾಳ್ವಿಕೆಯ ಕಡೆಗೆ ಮುನ್ನಡೆಯಬೇಕು). ಒಂದು ಹೊಸ ರಾಜ್ಯವನ್ನು ಮಾಡುವ ಶಕ್ತಿ, ಅದರ ಗಡಿಯನ್ನು ಹಿಗ್ಗಿಸುವ/ ಕುಗ್ಗಿಸುವ, ಒಂದು ರಾಜ್ಯದ ಹೆಸರನ್ನು ಬದಲಾಯಿಸುವ ಶಕ್ತಿ ಇರುವುದು ಪಾರ್ಲಿಮೆಂಟಿಗೆ ಮಾತ್ರ. ಹೀಗೆ ಮಾಡಬೇಕಾದಲ್ಲಿ ಬಾರತದ ರಾಶ್ಟ್ರಪತಿಗಳು ಸಂಸತ್ತಿಗೆ ಕಾಯ್ದೆಯ ಕರಡನ್ನು ಕಳುಹಿಸಬೇಕು. ಇದರ ಜೊತೆಗೆ ಆ ರಾಜ್ಯದ ವಿದಾನಸಬೆಗೆ ಈ ಕಾಯ್ದೆಯ ಬಗ್ಗೆ ಕೇವಲ ತಮ್ಮ ಅನಿಸಿಕೆ ತಿಳಿಸುವ ಬಗ್ಗೆ ಇಂತಿಶ್ಟು ಸಮಯದಲ್ಲಿ ವಿದಾನಸಬೆಯಲ್ಲಿ ಮಂಡಿಸಿ ಅದರ ಬಗ್ಗೆ ಅನಿಸಿಕೆಯನ್ನು ವಿದಾನಸಬೆಯಿಂದ ಪಡೆದು ರಾಶ್ಟ್ರಪತಿಗೆ ಕಳುಹಿಸಬೇಕು. ತಾಂತ್ರಿಕವಾಗಿ ಈ ಆರ‍್ಟಿಕಲ್ ನಲ್ಲಿ ಎಲ್ಲೂ ಒಂದು ರಾಜ್ಯದಿಂದ ಹೊಸದೊಂದು ರಾಜ್ಯವನ್ನು ಮಾಡಲು ಕಡ್ಡಾಯವಾಗಿ ಆ ರಾಜ್ಯವನ್ನು ಪ್ರತಿನಿದಿಸುವ ವಿದಾನಸಬೆಯ ಒಪ್ಪಿಗೆ ಪಡೆಯಲೇಬೇಕು ಎನ್ನುವ ನಿಯಮವಿಲ್ಲ. ಹಾಗಾಗಿ ಒಂದು ವೇಳೆ ವಿದಾನಸಬೆ ತನಗೆ ರಾಜ್ಯವನ್ನು ಒಡೆಯುವ ಬಗ್ಗೆ ಒಪ್ಪಿಗೆಯಿಲ್ಲ ಎಂದು ತಿಳಿಸಿದರೂ ರಾಶ್ಟ್ರಪತಿಗಳು ಮತ್ತು ಪಾರ‍್ಲಿಮೆಂಟ್ ಇದನ್ನು ತಿರಸ್ಕರಿಸಿ ಹೊಸ ರಾಜ್ಯವನ್ನು ಮಾಡಬಹುದಾಗಿದೆ.

ಇದಕ್ಕೆ ಏನನ್ನುತ್ತವೆ ದೆಹಲಿ ಪಕ್ಶಗಳು:

ಇಂದು ನಮ್ಮ ಸಂವಿದಾನದಲ್ಲಿರುವ ಅನೇಕ ನಿಯಮಗಳು ಮಂದಿಯಾಳ್ವಿಕೆಯನ್ನು ಕಡೆಗಣಿಸಿ ಹೆಚ್ಚು ಕಡಿಮೆ ಎಲ್ಲಾ ಅದಿಕಾರವನ್ನು ಕೇಂದ್ರ ಸರಕಾರದ ಮತ್ತು ಪಾರ‍್ಲಿಮೆಂಟಿನ ಕಯ್ಯಲ್ಲಿ ಕೊಟ್ಟು ಕುಳಿತಿದೆ. ಒಕ್ಕೂಟದ ಹಾದಿಯಲ್ಲಿ, ಮಂದಿಯಾಳ್ವಿಕೆಯ ಮೂಲಕ ಜನರ ಕಯ್ಯಲ್ಲಿ ಅದಿಕಾರ ಕೊಡಬೇಕು ಎಂದು ಕಂಡಕಂಡಲ್ಲಿ ಮಾತನಾಡುವ ದೆಹಲಿಯ ಪಕ್ಶಗಳಿಗೆ ನಿಜಕ್ಕೂ ಮಂದಿಯಾಳ್ವಿಕೆಯಲ್ಲಿ ನಂಬಿಕೆ ಇದ್ದಿದ್ದೇ ಆದರೆ ಆಂದ್ರಪ್ರದೇಶ ರಾಜ್ಯದ ವಿದಾನಸಬೆಯ ನಿರ‍್ಣಯವನ್ನು ಕಡೆಗಣಿಸಿ ತೆಲಂಗಾಣ ರಾಜ್ಯವನ್ನು ಉಂಟುಮಾಡುತ್ತಿರಲಿಲ್ಲ. ಹೆಸರಿಗೆ ಮಾತ್ರ ಮಂದಿಯಾಳ್ವಿಕೆ, ಮಹಿಳಾ ಸಬಲೀಕರಣ, ದೇಶ ಪ್ರೇಮದ ಬಗ್ಗೆ ಮಾತನಾಡುವ ಈ ಪಕ್ಶಗಳಿಗೆ ನಿಜಕ್ಕೂ ಬಾರತದ ಬಗ್ಗೆಯಾಗಲಿ, ಜನರ ಬಗ್ಗೆಯಾಗಲಿ ಕಾಳಜಿ ಇಲ್ಲ.

ಬಾರತ ಬಲಿಶ್ಟವಾಗಬೇಕಿದ್ದಲ್ಲಿ ರಾಜ್ಯಗಳು ಬಲಿಶ್ಟವಾಗಬೇಕು, ರಾಜ್ಯಗಳು ಬಲಶಾಲಿಯಾಗಬೇಕಾದರೆ, ಅವುಗಳಿಗೆ ಹೆಚ್ಚಿನ ಅದಿಕಾರ ಬೇಕು, ಮಂದಿಯಾಳ್ವಿಕೆಯ ಮತ್ತು ಒಕ್ಕೂಟ ವ್ಯವಸ್ತೆಯ ಮೂಲ ತಳಹದಿಯೇ ಜನರು ತಮ್ಮ ಒಳಿತು ಕೆಡಕುಗಳನ್ನು ತಾವೇ ನಿರ‍್ದಾರ ಮಾಡುವುದು. ಹೀಗಾಗ ಬೇಕಾದರೆ ಬಾರತದ ಸಂವಿದಾನದಲ್ಲಿ ಹೆಚ್ಚಿನ ಅದಿಕಾರ ರಾಜ್ಯಗಳ ಕಯ್ಗೆ ಸಿಗುವಂತೆ ಮಾಡಬೇಕಾಗಿದೆ.

(ಚಿತ್ರ ಸೆಲೆ: opiniojuris.org)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. smhamaha says:

    ತೆಲಂಗಣ ಮಂದಿಗೆ ಆಂದ್ರದ ಜೊತೆ ಇರಲು ಇಸ್ಟವಿಲ್ಲ ಅವರಿಗೆ ಬೇರೆ ರಾಜ್ಯ ಬೇಕಿದೆ. ನೀವು ಹೇಳಿದ ಹಾಗೆ ಆಂದ್ರದ assembly ನಲ್ಲಿ ಒಪ್ಪುವ ತನಕ ಕಾಯುತಿದ್ದರೆ , ತೆಲಂಗಣ ಮಂದಿಯ ಗೋಳು ಯಾರು ಕೇಳುವರು (ಹೆಚ್ಚು mla seatu ಸೀಮಾಂದ್ರ ಗೆ ಇದೆ). ಅಲ್ಲಿಯ ಮಂದಿಗೆ ಒಟ್ಟಗೆ ಇರಲು ಇಸ್ಟವಿಲ್ಲ, ನೀವು ಹೇಳಿದ ಹಾಗೆ ರಾಜ್ಯಕ್ಕೆ ಹೆಚ್ಚು ಬಲ ಕೊಟ್ಟರೆ, ತೆಲಂಗಣ ಮಂದಿಯ ಈಳಿಗೆ ಎಲ್ಲಿ ಇರುತ್ತೆ ? ಅದನ್ನು ಕಸಿದುಕೊಂಡು ತೊತ್ತಿಗರಾಗುತ್ತಾರೆ ಅಲ್ಲವೇ ?…

ಅನಿಸಿಕೆ ಬರೆಯಿರಿ: