ಚುನಾವಣೆಗೆ ಮುನ್ನ ಚುನಾವಣೆಯ ಬಗ್ಗೆ – ಬಾಗ 2

– ಹರ‍್ಶಿತ್ ಮಂಜುನಾತ್.

BN-AG671_ivote_EA_20131105060629

ಈ ಹಿಂದೆ ಮೂಡಿಬಂದ ಚುನಾವಣೆಗೆ ಮುನ್ನ ಚುನಾವಣೆಯ ಬಗ್ಗೆ- ಬಾಗ ೧ ರಲ್ಲಿ ಚುನಾವಣೆಯ ಅರ‍್ತ, ಚುನಾವಣೆಯ ಹೆಚ್ಚುಗಾರಿಕೆ ಮತ್ತು ಸಾರ್ವತ್ರಿಕ ಚುನಾವಣೆಯ ಬಗ್ಗೆ ತಿಳಿದುಕೊಂಡಿದ್ದೆವು. ಮುಂದೆ ಚುನಾವಣೆ ಆಯೋಗ ಮತ್ತು ಅದರ ಕೆಲಸದ ವ್ಯಾಪ್ತಿಯ ಬಗ್ಗೆ ತಿಳಿದುಕೊಳ್ಳೋಣ.

ಚುನಾವಣೆ ಆಯೋಗ :-
ಇಂಡಿಯಾದಲ್ಲಿ ಚುನಾವಣೆಯನ್ನು ಸ್ವತಂತ್ರ ಮತ್ತು ನಿಶ್ಪಕ್ಶಪಾತವಾಗಿ ಮಾಡಲು ಸಂವಿದಾನವು ಚುನಾವಣೆ ಆಯೋಗದ ಸ್ತಾಪನೆಗೆ ಅವಕಾಶ ಮಾಡಿಕೊಟ್ಟಿದೆ. ಇದೊಂದು ಸಂವಿದಾನದ ಮೂಲಕ ಶುರುವಾಗಿ ಸ್ವಾಯತ್ತತೆ ಹೊಂದಿದ ಸಂಸ್ತೆ. 1950 ಜನವರಿ 26ರಂದು ಜಾರಿಗೆ ಬಂದ ಚುನಾವಣೆ ಆಯೋಗ, ಸಂವಿದಾನದ 15ನೇ ಬಾಗದಲ್ಲಿ 324 ರಿಂದ 329ರ ವರೆಗಿನ ವಿದಿಗಳು ಚುನಾವಣೆ ಆಯೋಗದ ರಚನೆ ಹಾಗೂ ಅದಿಕಾರ ಕೆಲಸಗಳ ಬಗ್ಗೆ ತಿಳಿಸುತ್ತದೆ. ಕೇಂದ್ರ ಮತ್ತು ರಾಜ್ಯಗಳಿಗೆ ಸಂಬಂದಪಟ್ಟ ಈ ಚುನಾವಣೆ ಆಯೋಗವು ಶಾಶ್ವತ ಸಂಸ್ತೆಯಾಗಿದ್ದು ರಾಶ್ಟ್ರಪತಿ, ಉಪರಾಶ್ಟ್ರಪತಿ, ಲೋಕಸಬೆ, ರಾಜ್ಯಸಬೆ, ವಿದಾನಸಬೆ ಹಾಗೂ ವಿದಾನ ಪರಿಶತ್ಗಳಿಗೆ ಚುನಾವಣೆ ನಡೆಸುತ್ತದೆ.

ಕಾಲಕ್ಕೆ ತಕ್ಕಂತೆ ಮೇಲ್ವಿಚಾರಣೆ, ನಿರ‍್ದೇಶನ ಮತ್ತು ನಿಯಂತ್ರಣ ಮಾಡುವುದರ ಮೂಲಕ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದರೆ ಸ್ತಳೀಯ ಸಂಸ್ತೆಗಳಿಗೆ ಚುನಾವಣೆ ನಡೆಸುವ ಜವಾಬ್ದಾರಿಯನ್ನು 1992ರಲ್ಲಿ 73 ಮತ್ತು 74 ಸಂವಿದಾನದ ತಿದ್ದುಪಡಿಗಳ ಪ್ರಕಾರ ಆಯಾ ರಾಜ್ಯಗಳಿಗೆ ನೀಡಲಾಗಿದೆ. ಚುನಾವಣೆ ನಡೆಸುವ ಮೊದಲು ಅದಕ್ಕೆ ಸಂಬಂದಪಟ್ಟ ಪೂರಕ ಕೆಲಸಗಳನ್ನು ಮಾಡಬೇಕಾದದ್ದು ಚುನಾವಣೆ ಆಯೋಗದ ಜವಬ್ದಾರಿ. ಉದಾಹರಣೆಗೆ ಮತದಾರರ ಪಟ್ಟಿಯ ಸಿದ್ದತೆ, ಪರಿಶ್ಕರಣೆ, ಚುನಾವಣೆಯ ದಿನಾಂಕ, ಪಲಿತಾಂಶದ ದಿನಾಂಕ ಮುಂತಾದವು. ಈ ರೀತಿಯಾಗಿ ಚುನಾವಣೆ ಆಯೋಗವು ಕೆಲಸ ಮಾಡಿದರೆ ಮತದಾರರಿಗೆ ರಾಜಕೀಯ ಶಿಕ್ಶಣ ದೊರೆಯುತ್ತದೆ ಜೊತೆಗೆ ರಾಜಕೀಯ ಜಾಗ್ರುತಿ ಬೆಳೆದು ಬುದ್ದಿವಂತ ಮತದಾರರಾಗಿ ಹೊರಹೊಮ್ಮುತ್ತಾರೆ. ಇದರಿಂದ ಮತಬ್ಯಾಂಕ್ ರಾಜಕೀಯ, ಕೋಮು ರಾಜಕೀಯ ಮತ್ತು ರಾಜಕೀಯದಂತಹ ಸಮಸ್ಯೆಗಳನ್ನು ಪರಿಹರಿಸಬಹುದು.

ಚುನಾವಣೆ ಆಯೋಗದ ರಚನೆ :-
ಬಾರತದ ಸಂವಿಬಾನದ 324 (2)ರ ಪ್ರಕಾರ ಚುನಾವಣೆ ಆಯೋಗದ ಮುಕ್ಯ ಚುನಾವಣೆ ಅದಿಕಾರಿಯ ನೇಮಕ ಮಾಡುವ ಅದಿಕಾರ ರಾಶ್ಟ್ರಪತಿಗಳಿಗಿದೆ. ಆದರೆ 1989ರ ವರೆಗೆ ಚುನಾವಣೆ ಆಯೋಗ ಒಬ್ಬನೇ ಸದಸ್ಯನಾಗಿದ್ದ ಆಯೋಗವಾಗಿತ್ತು. 1989 ಅಕ್ಟೋಬರ್ 16 ರಿಂದ ಮೂರು ಸದಸ್ಯರ ಆಯೋಗವಾಗಿ ಬದಲಾಗಿದೆ. ಅದರಂತೆ ಚುನಾವಣೆ ಆಯೋಗವು ತನ್ನದೇ ಆದ ಕೇಂದ್ರ ಕಚೇರಿ ಹೊಂದಿದ್ದು, 300 ಜನ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಇದಕ್ಕಾಗಿ ಪ್ರತ್ಯೇಕ ಬಜೆಟ್ ಒದಗಿಸಲಾಗುವುದು.

ಚುನಾವಣೆ ಆಯೋಗದ ಸ್ವಾತಂತ್ರ್ಯ :-
* ಮುಕ್ಯ ಚುನಾವಣೆ ಅದಿಕಾರಿಯನ್ನು ಪದಚ್ಯುತಿಗೊಳಿಸಲು ಇಂಡಿಯಾದ ಉಚ್ಚ ನ್ಯಾಯಾಲಯದ ತೀರ‍್ಪುಗಾರರಿಗೆ ಅನ್ವಯಿಸುವ ವಿದಾನವನ್ನು ಅನುಸರಿಸಬೇಕು.
* ಮುಕ್ಯ ಚುನಾವಣೆ ಅದಿಕಾರಿಯ ಆದೇಶದ ಮೇರೆಗೆ ಇತರ ಅತವಾ ಪ್ರಾದೇಶಿಕ ಚುನಾವಣೆ ಅದಿಕಾರಿಯನ್ನು ತೆಗೆದುಹಾಕಬಹುದು.
* ಮುಕ್ಯ ಚುನಾವಣೆ ಅದಿಕಾರಿಯನ್ನು ನೇಮಕ ಮಾಡಿದ ನಂತರ ಇವರಿಗೆ ಸಂಬಂದಿಸಿದ ಸೇವಾ ನಿಯಮವನ್ನು ಅನಾನೂಕೂಲವಾಗುವಂತೆ ಬದಲಾಯಿಸಬಾರದು.
* ಮುಕ್ಯ ಚುನಾವಣೆ ಅದಿಕಾರಿಗಳಿಗೆ ಇಂಡಿಯಾದ ಉಚ್ಚ ನ್ಯಾಯಾಲಯದ ತೀ‌ರ‍್ಪುಗಾರರ ಸ್ತಾನಮಾನ ಒದಗಿಸಬೇಕು.
* ಚುನಾವಣೆ ಆಯೋಗವು ವ್ಯವಸ್ತಿತವಾಗಿ ಚುನಾವಣೆ ನಡೆಸಲು ಬೇಕಾದ ಸಿಬ್ಬಂದಿಯನ್ನು ರಾಶ್ಟ್ರಪತಿಯವರು ಹಾಗೂ ರಾಜ್ಯಪಾಲರು ಒದಗಿಸಬೇಕು.

ಚುನಾವಣೆ ಆಯೋಗದ ಅದಿಕಾರ ಹಾಗೂ ಕೆಲಸಗಳು :-
* ಕೇಂದ್ರ ಸಂಸತ್ತಿಗೆ, ರಾಜ್ಯ ಶಾಸಕಾಂಗಗಳಿಗೆ, ರಾಶ್ಟ್ರಪತಿ, ಉಪರಾಶ್ಟ್ರಪತಿ ಹುದ್ದೆಗಳಿಗೆ ಚುನಾವಣೆ ನಡೆಸುವುದು.
* ಮತದಾರರ ಪಟ್ಟಿ ಸಿದ್ದಪಡಿಸಿ, ಪರಿಶೀಲಿಸುವುದು.
* ಮತದಾನದ ದಿನ ಗೊತ್ತುಪಡಿಸುವುದು.
* ರಾಜಕೀಯ ಪಕ್ಶಗಳಿಗೆ ಮಾನ್ಯತೆ ನೀಡಿ, ಚಿಹ್ನೆಗಳನ್ನು ಗೊತ್ತುಪಡಿಸುವುದು. ಒಂದು ವೇಳೆ ಚಿಹ್ನೆ ಬಗ್ಗೆ ವಿವಾದ ಕಂಡುಬಂದಲ್ಲಿ, ವಿವಾದವನ್ನು ತನ್ನ ಮುಂದಾಳತ್ವದಲ್ಲಿ ಬಗೆಹರಿಸುವುದು.
* ಚುನಾವಣೆ ನಡೆಸುವ ಪ್ರದೇಶ ಮತ್ತು ಸಂದರ್ಬವನ್ನು ತೀರ‍್ಮಾನಿಸುವುದು.
* ಕೇಂದ್ರ ಸಂಸತ್ತಿನ ಹಾಗೂ ರಾಜ್ಯ ಶಾಸಕಾಂಗಗಳ ಸ್ತಾನಗಳನ್ನು ತುಂಬಲು ಚುನಾವಣೆಗಳನ್ನು ನಡೆಸುವುದು.
* ಚುನಾವಣೆ ಸಮಯದಲ್ಲಿ ಪಕ್ಶಗಳಿಗೆ ನೀತಿಸಂಹಿತೆ ರಚಿಸುವುದು.
* ಚುನಾವಣೆಗೆ ಪಯ್ಪೋಟಿ ಮಾಡುವ ಅಬ್ಯರ‍್ತಿಯ ನಾಮಪತ್ರಗಳನ್ನು ಪರಿಶೀಲಿಸಿ, ಆತನ ಆಸ್ತಿ ಮತ್ತು ಆದಾಯದ ವಿವರ ಪಡೆಯುವುದು.
* ಮತದಾನ ನಡೆದ ಸಮಯದಲ್ಲಿ ಗಲಬೆ, ದೊಂಬಿ, ಹಿಂಸಾಚಾರಗಳಾದಲ್ಲಿ, ಅಲ್ಲಿನ ಮತದಾನ ನಿಲ್ಲಿಸಿ ಮರುಮತದಾನ ನಡೆಸುವುದು.
* ಚುನಾವಣೆಯ ಬಗೆ ಮಂದಿಯಲ್ಲಿ ಅರಿವು ಮೂಡಿಸುವುದು.
* ಚುನಾವಣೆ ನಂತರ ಮತಎಣಿಕೆ ಮಾಡಿ ಪಲಿತಾಂಶ ಪ್ರಕಟಿಸುವುದು ಮತ್ತು ಸಕಾರಾತ್ಮಕ ಕಾರಣಗಳಿದ್ದರೆ ಪಲಿತಾಂಶವನ್ನು ತಡೆಹಿಡಿಯುವುದು.
* ಚುನಾವಣೆಯಲ್ಲಿ ಆಯ್ಕೆಯಾಗುವ ಅಬ್ಯರ‍್ತಿಯ ಹೆಸರು ತಿಳಿಸುವುದು.

ಇಂಡಿಯಾದಲ್ಲಿ ಚುನಾವಣೆಯ ಕೆಲಸಗಳು :-
* ಚುನಾವಣೆ ಆಯೋಗದ ಸೂಚನೆಯ ಮೇರೆಗೆ ಲೋಕಸಬೆಗೆ ರಾಶ್ಟ್ರಪತಿಯವರು, ರಾಜ್ಯ ವಿದಾನಸಬೆಗೆ ರಾಜ್ಯಪಾಲರು ಆದೇಶ ಹೊರಡಿಸುತ್ತಾರೆ.
* ಚುನಾವಣೆ ದಿನಾಂಕ ಗೋಶಣೆ, ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ಹಿಂದಕ್ಕೆ ಪಡೆಯುವುದು ಹಾಗೂ ಅಂತಿಮವಾಗಿ ಅಬ್ಯರ‍್ತಿಯ ಹೆಸರು ಪ್ರಕಟಿಸುವುದು.
* ಅಬ್ಯರ‍್ತಿಯ ಹೆಸರು ಪ್ರಕಟವಾದ ನಂತರ ಚುನಾವಣೆ ಪ್ರಚಾರ ಆರಂಬಿಸುವುದು.
* ಮತದಾನ ನಡೆಯುವುದಕ್ಕೆ 36ಗಂಟೆಗಳ ಮುಂಚೆ ಚುನಾವಣೆ ಪ್ರಚಾರವನ್ನು ನಿಲ್ಲಿಸಬೇಕು.
* ಚುನಾವಣೆಯಲ್ಲಿ ಪಯ್ಪೋಟಿ ಮಾಡುತ್ತಿರುವ ಅಬ್ಯರ‍್ತಿ ತನ್ನ ಟೇವಣಿಯನ್ನು ವಾಪಸ್ಸು ಪಡೆಯಬೇಕಾದರೆ ಒಟ್ಟು ಮವ್ಲ್ಯಯುತ ಮತಗಳಲ್ಲಿ ನೂರಕ್ಕೆ 16ಕ್ಕಿಂತ ಹೆಚ್ಚು ಮತಪಡೆದಿರಬೇಕು.
* ಲೋಕಸಬೆಗೆ ಸ್ಪರ‍್ದಿಸುವವರು ದೇಶದ ಯಾವುದೇ ಕ್ಶೇತ್ರದಿಂದ ಸ್ಪರ‍್ದಿಸಬಹುದು, ವಿದಾನಸಬೆಗೆ ರಾಜ್ಯದ ಯಾವುದೇ ಕ್ಶೇತ್ರದಿಂದ ಸ್ಪರ‍್ದಿಸಬಹುದು.
* ಪಲಿತಾಂಶದ ನಂತರ ಹೊಸ ಲೋಕಸಬೆ, ಹೊಸ ವಿದಾನಸಬೆ ಅಸ್ತಿತ್ವಕ್ಕೆ ಬಂದಿದೆ ಎಂದು ಚುನಾವಣೆ ಆಯೋಗ ಅದಿಸೂಚನೆ ಹೊರಡಿಸುತ್ತದೆ.
* ಚುನಾವಣೆಯಲ್ಲಿ ಸ್ಪರ‍್ದಿಸುವ ಅಬ್ಯರ‍್ತಿಗಳು ಚುನಾವಣೆ ಆಯೋಗ ಗೋಶಣೆ ಮಾಡಿದ ಹಣಕ್ಕಿಂತ ಹೆಚ್ಚಿಗೆ ಕರ‍್ಚು ಮಾಡುವಂತಿಲ್ಲ.
* ಚುನಾವಣೆ ನಡೆದ 30 ದಿನಗಳೊಳಗಾಗಿ ಚುನಾವಣೆಯಲ್ಲಿ ಮಾಡಿದ ಕರ‍್ಚಿನ ಲೆಕ್ಕವನ್ನು ಜಿಲ್ಲಾ ಆಯ್ಕಣಿ ಅದಿಕಾರಿಗೆ ಒಪ್ಪಿಸಬೇಕು.

ಕೊನೆ ಮಾತು :-
ಮತದಾನ ಎಂಬುವುದು ಸಂವಿದಾನವು ಮಂದಿಗೆ ಕಲ್ಪಿಸಿಕೊಟ್ಟಿರುವ ಹಕ್ಕು. ಜೊತೆಗೆ ನಮ್ಮ ಕರ‍್ತವ್ಯ ಕೂಡ. ಮಂದಿಯ ಪ್ರತಿ ಮತವು ನಾಡಿನ ಬವಿಶ್ಯವನ್ನು ನಿರ‍್ದರಿಸುತ್ತದೆ. ಮಂದಿಯು ಪ್ರತಿನಿದಿಗಳ ಮೇಲೆ ನಿಯಂತ್ರಣ ಸಾದಿಸಲು ಚುನಾವಣೆ ಒಂದು ಅತಿಮುಕ್ಯ ಸಾದನವಾಗಿದೆ. ಹಾಗಾಗಿ ಮಂದಿಯಾಳ್ವಿಕೆಯ ನಯ್ಜತೆಯ ಮೂಲಕ ನಾಡಿನ ಬವಿಶ್ಯವನ್ನು ನಿರ‍್ದರಿಸುವಲ್ಲಿ ಮತದಾನ ಅವಶ್ಯವಾಗಿದೆ. ಮತದಾನದ ಮೂಲಕ ಪ್ರತಿಯೊಬ್ಬರಿಗೂ ಸರಕಾರದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿ ಆಳ್ವಿಕೆಯ ಅದಿಕಾರ ಮಂದಿಗೇ ಸೇರಿದೆ ಎಂಬುದನ್ನು ಇದು ಕಚಿತಪಡಿಸುತ್ತದೆ. ಬನ್ನಿ ನಮ್ಮ ಹಕ್ಕನ್ನು ಚಲಾಯಿಸೋಣ. ತಪ್ಪದೇ ಮತದಾನ ಮಾಡೋಣ. ನಿಮ್ಮ ಮತ ನಾಡಿನ ಏಳಿಗೆಗಾಗಿರಲಿ.

(ಚಿತ್ರ ಸೆಲೆ: wsj.com)

(ಮಾಹಿತಿ ಸೆಲೆ: wikipedia)Categories: ನಾಡು

ಟ್ಯಾಗ್ ಗಳು:, , , , , , , , , , , , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s