ಮಣ್ಣಿನ ಬಿಸಿಲ್ಗಾಯಿಸುವಿಕೆಯ ಬಳಕೆ
ಮಣ್ಣಿನ ಬಿಸಿಲ್ಗಾಯಿಸುವಿಕೆಯು ಕ್ರುಶಿಯಲ್ಲಿ ಬಳಸಲಾಗುವ ಒಂದು ಚಳಕವಾಗಿದೆ. ಯಾವುದೇ ಬಗೆಯ ರಾಸಾಯನಿಕಗಳಿಲ್ಲದೆ ಬರಿಯ ನೇಸರಿನ ಕಸುವನ್ನು ಜಾಣ್ಮೆಯಿಂದ ಬಳಸಿಕೊಂಡು ಬೆಳೆಯನ್ನು ಕಾಡುವ ಬೇಡದ ಕಳೆ ಹಾಗು ಗಿಡಕ್ಕಂಟುವ ರೋಗ ಮುಂತಾದವುಗಳಿಂದ ಕಾಪಾಡಲು ಈ ಚಳಕ ನೆರವಾಗುವುದು.
ಚಳಕದ ಹಿಂದಿರುವ ಅಡಿಕಟ್ಟಲೆ
ನೇಸರಿನಿಂದ ಬರುವ ಬೆಳಕಿನ ಸೂಸಿಕೆ ಮಣ್ಣನ್ನು ತಾಕಿ ಹಿಂಪುಟಿಯುತ್ತದೆ, ಮಣ್ಣಿನ ಬಿಸಿಲ್ಗಾಯಿಸುವಿಕೆಯ ಚಳಕದಲ್ಲಿ ತೇವಾಂಶವಿರುವ ಮಣ್ಣಿನ ಮೇಲೆ ಬೆಳಕು ತೂರಬಲ್ಲ ಸುಮಾರು 100 ಮಯ್ಕ್ರೋ ಮೀಟರ್ ನಶ್ಟು ತೆಳುವಾದ ಪ್ಲಾಸ್ಟಿಕ್ ಹಾಳೆಯನ್ನು ಹೊದಿಸಲಾಗುತ್ತದೆ. ಹಾಳೆಯ ಅಂಚುಗಳನ್ನು ಮಣ್ಣಲ್ಲಿ ಹುದುಗಿಸಿ ಗಾಳಿಯಾಡದಂತೆ ಬದ್ರವಾಗಿ ಮುಚ್ಚಲಾಗುವುದು.
ಪ್ಲಾಸ್ಟಿಕ್ ಹಾಳೆಯ ಮೂಲಕ ತೂರಿಬರುವ ನೇಸರಿನ ಸೂಸಿಕೆ ಹಿಂಪುಟಿಯುವಾಗ ತನ್ನ ಹುರುಪನ್ನು ಕಳೆದುಕೊಂಡು ಹಾಳೆ ಹಾಗು ನೆಲದ ನಡುವೆ ಸಿಕ್ಕಿಕೊಳ್ಳುವುದು. ಇದರಿಂದಾಗಿ ಮಣ್ಣಿನ ಕಾವಳತೆ 40 ರಿಂದ 45 ಡಿಗ್ರಿ ಸೆಲ್ಸಿಯಸ್ ವರೆಗೂ ಹೆಚ್ಚುವುದು. ಇದನ್ನು ಅರಿಮೆಯ ಪರಿಬಾಶೆಯಲ್ಲಿ ” ಹಸಿರುಮನೆ ಪರಿಣಾಮ ” ಎಂದು ಕರೆಯಲಾಗುವುದು. ತೇವಗೊಂಡ ಮಣ್ಣಿನಲ್ಲಿರುವ ನೀರಿನ ಅಂಶ ಬಿಸುಪನ್ನು ಚೆನ್ನಾಗಿ ಹರಡಲು ನೆರವಾಗುವುದರಿಂದ ಮೇಲ್ಮಣ್ಣಿನಲ್ಲಿರುವ ರೋಗದ ಸೂಕ್ಶ್ಮಾಣುಗಳು ಮತ್ತು ಕಳೆಯ ಬೀಜಗಳು ಸಾಯುತ್ತವೆ. 1976 ರಲ್ಲಿ ಕಟಾನ್ ಹಾಗು ಜೊತೆಯರಕೆಗಾರರು ಬೆಳೆಯ ರೋಗ ತಡೆಗಟ್ಟುವಲ್ಲಿ ಮಣ್ಣಿನ ಬಿಸಿಲ್ಗಾಯಿಸುವಿಕೆ ಚಳಕದ ಹೆಚ್ಚುಗಾರಿಕೆಯನ್ನು ತಿಳಿಯಪಡಿಸಿದರು. ಆಮೇಲೆ ಹಲವಾರು ನಾಡುಗಳಲ್ಲಿ ಅರಕೆಗಾರರು ಈ ನಿಟ್ಟಿನಲ್ಲಿ ದುಡಿದು ಹೊಸ ತಿಳಿವುಗಳನ್ನು ಕಂಡುಹಿಡಿದಿದ್ದಾರೆ.
ಕ್ರುಶಿಯಲ್ಲಿ ಬಳಕೆ
ಮಣ್ಣಿನ ಬಿಸಿಲ್ಗಾಯಿಸುವಿಕೆಯನ್ನು ಬಳಸಿಕೊಂಡು ಮಣ್ಣಿನ ಮೂಲಕ ಹರಡುವ ಬೇರು ಕೊಳೆತ, ತಾಳು ಕೊಳೆತ ಮತ್ತು ಸೊರಗುರೋಗ ಮುಂತಾದ ಬೆಳೆಗಳನ್ನು ಕಾಡುವ ರೋಗಗಳನ್ನು ತಡೆಗಟ್ಟಬಹುದು. ಕಳೆಗಳು ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಮುಂದುವರಿಯಬೇಕಾದರೆ ಮಣ್ಣಲ್ಲಿರುವ ಕಳೆಗಳ ಬೀಜದ ಸೆಲೆಯ ಇರುವಿಕೆ ತುಂಬಾ ಮುಕ್ಯವಾದದ್ದು.
(ಬಿಸಿಲ್ಗಾಯಿಸುವಿಕೆಯಲ್ಲಿ ಬೆಳೆಸುತ್ತಿರುವ ಟೊಮೆಟೋ ಗಿಡ)
ಬಿಸಿಲ್ಗಾಯಿಸುವಿಕೆಯಲ್ಲಿ ಉಂಟಾಗುವ ಕಡುಬಿಸುಪಿನಲ್ಲಿ ಕಳೆಬೀಜಗಳು ಕೊಲ್ಲಲ್ಪಟ್ಟು ಕಳೆಗಳ ಬೀಜಸೆಲೆ (Seed bank) ಹಾಳಾಗುವುದು. ಇದರಿಂದಾಗಿ ಗೇಕು, ಗರಿಕೆ, ಬರಗು ಮುಂತಾದ ಕಳೆಗಳ ಹಾವಳಿ ತಗ್ಗುವುದೆಂದು ಕಂಡುಬಂದಿದೆ. ಜಂತುಹುಳಗಳನ್ನು ಕೂಡಾ ಈ ಚಳಕದಿಂದ ಕಡಿತಗೊಳಿಸಬಹುದು.ಮಣ್ಣಿನ ಬಿಸಿಲ್ಗಾಯಿಸುವಿಕೆಯು ಪರಿಸರವನ್ನು ಯಾವುದೇ ಬಗೆಯಲ್ಲಿ ಮಯ್ಲಿಗೆ ಮಾಡದೆ ಬೆಳೆಕಾಪುಗೆ (crop protection)ಯಲ್ಲಿ ರಯ್ತನ ಕಯ್ಹಿಡಿಯುವ ಚಳಕವಾಗಿದೆ.
ಶುದ್ದ ಕನ್ನಡ ಪದಗಳನ್ನು ಬಳಸಿ ವೈಜ್ಞಾನಿಕ ಅಂಕಣಗಳನ್ನು ಬರೆಯುತ್ತಿರುವ ತಮ್ಮ ಪ್ರಯತ್ನಕ್ಕೆ ಧನ್ಯವಾದಗಳು. ಪ್ರಿಯಾಂಕ್ ರವರು ತಮ್ಮ ಓಡುತಿಟ್ಟವೊಂದರಲ್ಲಿ ಪ್ರಸ್ತಾಪಿಸಿದ ಹಾಗೆ ಕನ್ನಡದಲ್ಲಿ ಬಹಳಷ್ಟು ವೈಜ್ಞಾನಿಕ ವಿಷಯಗಳ ಅಂಕಣಗಳು ಮೂಡಿಬರಬೇಕಾಗಿದೆ. ಈ ಕಾರ್ಯ ಒಬ್ಬಿಬ್ಬರಿಂದ ಖಂಡಿತ ಸಾಧ್ಯವಿಲ್ಲ. ಆದ್ದರಿಂದ ವಿವಿಧ ಸಾಮಾಜಿಕ ಜಾಲಾತಾಣಗಳಲ್ಲಿ ಸಕ್ರಿಯವಾಗಿರುವ ಸಮಾನ ಮನಸ್ಕ ಸ್ನೇಹಿತರನ್ನು ಒಟ್ಟುಗೂಡಿಸುವ ಅಗತ್ಯ ಇದೆ ಅನ್ನುವುದು ನನ್ನ ಅಭಿಪ್ರಾಯ.
ನಿಮ್ಮ ಮೆಚ್ಚುಗೆಗೆ ದನ್ಯವಾದಗಳು… 🙂