ಕನ್ನಡ ಹುಡುಗರ ಹೊಸ ಗಾಡಿ
ಪೆಟ್ರೋಲ್, ಡಿಸೇಲ್ ಮುಂತಾದ ಉರುವಲುಗಳ ಮಿತಿ ಮೀರುತ್ತಿರುವ ಬೆಲೆ ಜತೆಗೆ ಬೇಸಿಗೆಗಾಲ ಬಂತೆಂದರೆ ನಾಡಿನಲ್ಲೆಡೆ ನೀರಿನ ಕೊರತೆ. ಇದರಿಂದಾಗಿ ಕರೆಂಟ್ ತಯಾರಿಕೆಯಲ್ಲಿ ಕಡಿತ, ಲೋಡ್ ಶೆಡ್ಡಿಂಗ್ ಬಗ್ಗೆ ಕೇಳಿಯೇ ಇರುತ್ತೇವೆ. ಮುಗಿದು ಹೋಗುವ ಪೆಟ್ರೋಲನಂತಹ ಉರುವಲು ಇಲ್ಲವೇ ಕರೆಂಟ್ ಕಡಿಮೆಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಗಾಳಿ ಮತ್ತು ಸೂರ‍್ಯನ ಕಸುವಿಗೆ ಹೆಚ್ಚು ಬೆಲೆಯಿದೆ.
ಇದನ್ನೇ ಬಳಸಿ ಕನ್ನಡದ ಹುಡುಗರು ತಯಾರಿಸಿದ ಇಗ್ಗಾಲಿ ಗಾಡಿ ಇಲ್ಲಿದೆ. ಹಾಸನದಲ್ಲಿ ಅಟೊಮೋಬಾಯ್ಲ್ ವಿಶಯವನ್ನು ಓದುತ್ತಿರುವ ದ್ಯಾವನೂರು ಮಂಜುನಾತ್ ಮುಂದಾಳುತನದ ತಂಡವು ಇಂತದೊಂದು ಗಾಳಿ ಮತ್ತು ಸೂರ‍್ಯನ ಕಸುವಿನ ಇಗ್ಗಾಲಿ ಗಾಡಿ ತಯಾರಿಸಿದ್ದಾರೆ.
ಸೂರ‍್ಯನ ಜೊತೆಗೆ ಈ ಗಾಡಿಯು ಗಾಳಿ ಕಸುವನ್ನು ಪಡೆದು ಬೆರಕೆ (Hybrid) ಕಸುವಿನ ಗಾಡಿಯಂತೆ ಸಾಗಬಲ್ಲದು. ಸೂರ‍್ಯ ಮತ್ತು ಗಾಳಿಯ ಕಸುವನ್ನು ಹಿಡಿದಿಟ್ಟುಕೊಂಡು ಅದನ್ನು ಮೋಟರಗೆ ನೀಡಿ ಅದರ ಮೂಲಕ ಗಾಲಿಗಳು ಓಡುವಂತೆ ಮಾಡುವುದು ಇದರ ಹಿಂದಿರುವ ಚಳಕ. ಬೆಳಗಿನ ಬಿಸಿಲಿನಲ್ಲಿ ಬೀಳುವ ಸೂರ‍್ಯನ ಸೂಸಿಕೆಯನ್ನು ಕೂಡಿಟ್ಟುಕೊಳ್ಳಲು ಗಾಡಿಯ ಮೇಲ್ಬಾಗದಲ್ಲಿ ಚಾವಣಿಯನ್ನು ಮಾಡಲಾಗಿದೆ. ಬಂಡಿಯ ಹಿಂಬದಿಯಲ್ಲಿ ಒಂದು ಬಿಸಣಿಗೆ ಇದ್ದು ವಿಂಡ್ ಮಿಲ್ ನಲ್ಲಿ ದೊಡ್ಡ ಬಿಸಣಿಗೆಗಳು ಗಾಳಿ ಕಸುವು ಹಿಡಿದಿಡುವಂತೆ ಈ ಬೀಸಣಿಗೆ ಕೆಲಸಮಾಡುತ್ತದೆ.
ಸೂರ‍್ಯನ ಕಸುವು ಬ್ಯಾಟರಿಗಳಲ್ಲಿ ಕೂಡಿಡಲಾಗುತ್ತದೆ, ಬ್ಯಾಟರಿಗಳು ಇಲೆಕ್ಟ್ರಿಕ್ ಮೋಟರ್ ನಡೆಸಲು ನೆರವಾಗುತ್ತವೆ. ಇದೇ ಮೋಟರನ ಕಸುವು ಗಾಲಿಗಳನ್ನು ಮುಂದೂಕಿ ಗಾಡಿ ಸಾಗುವಂತೆ ಮಾಡುತ್ತದೆ. ಈ ಕಡಿಮೆ ವೆಚ್ಚದಲ್ಲಿ ತಯಾರಿಸಲಾಗಿರುವ ಹೊಸ ಬಂಡಿಗೆ ” ಹಯ್ಬ್ರೀಡ್ ಜೀರೋ ಎಮಿಶನ್ ಏರ್-ಸೋ ವೆಹಿಕಲ್” (Hybrid Zero Emission Air-So Vehicle) ಎಂದು ಹೆಸರಿಸಿದ್ದಾರೆ. ಮೊದಲು ಮೂರುಗಾಲಿಯ ಕಯ್ತಿಟ್ಟ ಮಾಡಿಕೊಂಡು ಆಮೇಲೆ ಅದನ್ನು ಇಗ್ಗಾಲಿಯ ಬಂಡಿಯಂತೆ ಬದಲಾಯಿಸಿಕೊಂಡಿದ್ದಾರೆ.
ತಮ್ಮ ಡಿಪ್ಲೋಮಾ ಕಲಿಕೆಯ ಕೊನೆ ವರುಶದಲ್ಲಿರುವ ಮಂಜುನಾತ್, ಕೊನೆ ವರುಶದ ಹಮ್ಮುಗೆಯಾಗಿ ತಮ್ಮ ತಂಡದೊಂದಿಗೆ ಈ ಇಗ್ಗಾಲಿ ಬಂಡಿಯನ್ನು ತಯಾರಿಸಿದ್ದಾರೆ. ಇದರ ಬಗ್ಗೆ ಸಾಕಶ್ಟು ಅರಕೆ ಮಾಡಿರುವ ಮಂಜುನಾತ್ ಮತ್ತು ತಂಡ, ಹೆಚ್ಚಿನ ಬಂಡವಾಳದೊಂದಿಗೆ ಇದೇ ಮಾದರಿಯ ಕಾರು, ಹಲಬಳಕೆಯ ಬಂಡಿಯನ್ನು ತಯಾರಿಸಿಬಹುದು ಎಂದಿದ್ದಾರೆ. ಹೆಚ್ಚು ಕಾಲ ಬಾಳಿಕೆ ಬರುವ ಲಿತಿಯಮ್ ಆಯಾನ್ ಬ್ಯಾಟರಿಗಳನ್ನು ಇದರಲ್ಲಿ ಬಳಸಿದರೆ ಬಂಡಿಗಳು ಹೆಚ್ಚು ದೂರ ಸಾಗಬಹುದು ಮತ್ತು ಹೆಚ್ಚಿನ ಮಯ್ಲೇಜ್ (Mileage) ನೀಡಬಲ್ಲದು ಎಂಬುದು ಮಂಜುನಾತ್ ಅನಿಸಿಕೆ.
ಜಗತ್ತಿನಲ್ಲಿ ಈ ಬಗೆಯ ಗಾಡಿ ಮಾಡಿರುವ ಕೆಲವೇ ಕೆಲವರಲ್ಲಿ ಕನ್ನಡಿಗರ ಈ ತಂಡವೂ ಒಂದೆಂದು ತಂಡದ ಮುಂದಾಳು ಮಂಜುನಾತ್ ಹೊನಲಿಗೆ ತಿಳಿಸಿದ್ದಾರೆ. ಮಂಜುನಾತ್ ತಂಡ ಮಾಡಿದ ಬರೀ ಗಾಳಿ ಮತ್ತು ಸೂರ‍್ಯನ ಬೆಳಕಿನಿಂದ ಓಡುವ ಇಗ್ಗಾಲಿ ಗಾಡಿಯ ವಿಡಿಯೋ ಇಲ್ಲಿದೆ ನೋಡಿ,
[youtube http://www.youtube.com/watch?v=UyoytwcNEgU&w=560&h=315]
ಸರಕಾರಿ ಎಲ್.ವಿ. ಪಾಲಿಟೆಕ್ನಿಕ್, ಹಾಸನದ ಪ್ರದೀಪ್ ಕೆ.ವಿ. ಮತ್ತು HOD ಆಗಿರುವ ಮೇಜರ್ ವೆಂಕಟೇಶ್ ಅವರು ಮಂಜುನಾತ್ ಹಾಗು ಅವರ ತಂಡಕ್ಕೆ ಈ ಅರಕೆಯಲ್ಲಿ ದಾರಿತೋರುಗರಾಗಿದ್ದು, ಪ್ರಬು, ಯಶವಂತ್, ಶಕೀಲ್, ರಾಜ್ ಕಿರಣ್, ರಾಜ್ ಶೇಕರ್, ವೇಣುಗೋಪಾಲ್ ಮತ್ತು ಪ್ರವೀಣ್ ಅವರು ತಂಡದ ಇತರ ಸದಸ್ಯರಾಗಿದ್ದಾರೆ.
ಸುತ್ತಮುತ್ತ ಪುಕ್ಕಟೆಯಾಗಿ ಸಿಗುವ ಕಸುವನ್ನು ಬಳಸಿಕೊಂಡು ವಾತಾವರಣ ಹದಗೆಡದಂತೆ ಇಗ್ಗಾಲಿ ಗಾಡಿ ತಯಾರಿಸಿರುವ ಮಂಜುನಾತ್ ಮತ್ತು ತಂಡ ಇನ್ನೂ ಹೆಚ್ಚಿನದನ್ನು ಸಾದಿಸಲಿ. ಕನ್ನಡದ ಹುಡುಗರಿಗೆ ಗೆಲುವಾಗಲಿ.
ಇತ್ತೀಚಿನ ಅನಿಸಿಕೆಗಳು