ಮರಗಿಡಗಳು ಬೆಳೆಯುವುದು ಹೇಗೆ?
– ರತೀಶ ರತ್ನಾಕರ.
ಚಳಿಗಾಲ ಕಳೆದು ಮಳೆಯೊಂದು ಬಿದ್ದಿದೆ ಈಗ ಎಲ್ಲೆಲ್ಲೂ ಮರ-ಗಿಡಗಳು ಚಿಗುರುವ ಹೊತ್ತು. ಚಳಿಗಾಲದ ಮೊದಲು ತನ್ನ ಎಲೆಗಳನ್ನು ಉದುರಿಸಿ ಚಳಿಗಾಲದುದ್ದಕ್ಕೂ ಮರಗಿಡಗಳು ಯಾವುದೇ ಹೊಸ ಎಲೆಗಳನ್ನು ಚಿಗುರಿಸದೆ ಒರಗಿದ (dormant) ಸ್ತಿತಿಯಲ್ಲಿ ಇರುತ್ತವೆ. ಮಳೆ ಬಿದ್ದೊಡನೆ ಚಿಗುರಿಕೊಂಡು ತನ್ನ ಬೆಳವಣಿಗೆಯನ್ನು ಮುಂದುವರಿಸುತ್ತವೆ. ಮರಗಳ ಈ ಬೆಳವಣಿಗೆ ಹೇಗೆ ನಡೆಯುತ್ತದೆ ಎಂದು ಒಮ್ಮೆ ಇಣುಕಿ ನೋಡಿಕೊಂಡು ಬರೋಣ.
ಮೊಳಕೆಯೊಡೆದ ಗಿಡದ ಎಲೆಯು ನೇಸರನ ಬೆಳಕು, ಮಣ್ಣಿನಿಂದ ಸಿಗುವ ನೀರು, ಆರಯ್ಕೆ (Nutrition), ಗಾಳಿಯಲ್ಲಿರುವ ಕಾರ‍್ಬನ್ ಡಯ್ ಆಕ್ಸಯ್ಡ್ ಮತ್ತು ಎಲೆಯಲ್ಲಿರುವ ಎಲೆಹಸಿರು (Chlorophyl) ಅನ್ನು ಬಳಸಿಕೊಂಡು ‘ಬೆಳಕಿನ ಒಂದುಗೆ’ (Photo Synthesis)ಯ ಮೂಲಕ ಗಿಡಕ್ಕೆ ಬೇಕಾದ ಊಟವನ್ನು ಸಿದ್ದ ಮಾಡುತ್ತದೆ, ಜೊತೆಗೆ ಉಸಿರುಗಾಳಿ(Oxygen) ಯನ್ನು ಹೊರಗಾಳಿಗೆ ಬಿಡುತ್ತದೆ. ಹೀಗೆ ಸಿದ್ದ ಮಾಡಿದ ಊಟವು ಗಿಡದ ಉಳಿದ ಬಾಗಗಳಿಗೆ ಹರಡಲಾಗುತ್ತದೆ ಇದು ಗಿಡದ ಬೆಳವಣಿಗೆಯಲ್ಲಿ ಮುಕ್ಯವಾದ ಪಾತ್ರ ವಹಿಸುತ್ತದೆ. ಮರಗಿಡಗಳು ಎರೆಡು ಬಗೆಯಲ್ಲಿ ಬೆಳೆಯುತ್ತವೆ, ಅವಗಳ ಕುರಿತು ಅರಿಯೋಣ ಬನ್ನಿ.
ಮೊದಲನೆಯ ಬೆಳವಣಿಗೆಯು ಮರಗಿಡದ ಕೊಂಬೆ/ರಕ್ಕೆಗಳಲ್ಲಿ ನಡೆಯುತ್ತದೆ. ಗಿಡವು ಎತ್ತರವಾಗಿ ಬೆಳೆಯಲು ಇದು ನೆರವಾಗುತ್ತದೆ. ರಕ್ಕೆಯ ತುದಿಯಲ್ಲಿ ಕುಡಿ (Meristem) ಇರುತ್ತದೆ ಇದು ಗಿಡದ ಬೆಳವಣಿಗೆಗೆ ಬೇಕಾದ ಒಂದೇ ಬಗೆಯ ಸೂಲುಗೂಡುಗಳನ್ನು ಹೊಂದಿರುತ್ತದೆ. ಗಿಡದ ಬೇರಿನಿಂದ ನೀರು ಹಾಗು ಆರಯ್ಕೆ ದೊರೆತೊಡನೆ ಈ ಸೂಲುಗೂಡುಗಳು ಹಿಗ್ಗತೊಡಗುತ್ತವೆ ಮತ್ತು ಒಡೆದು ತನ್ನ ಎಣಿಕೆಯನ್ನು ಹೆಚ್ಚಿಸತೊಡಗುತ್ತದೆ. ಈ ಸೂಲುಗೂಡುಗಳ ಒಡೆಯುವಿಕೆಯಿಂದ ಗಿಡದ ಕೊಂಬೆಗಳಲ್ಲಿ ಕುಡಿಯು ಉದ್ದವಾಗಿ ಬೆಳೆದು ಹೊಸ ಎಲೆ/ಮೊಗ್ಗು ಚಿಗುರಲಾರಂಬಿಸುತ್ತದೆ. ಈ ಕೆಲಸ ನಡೆಯಲು ಗಿಡಕ್ಕೆ ಬೇಕಾದ ನೇಸರನ ಬೆಳಕು, ಬಿಸುಪು, ಗಾಳಿ, ನೀರು ಮತ್ತು ಮಣ್ಣಿನಿಂದ ಸಿಗುವ ಆರಯ್ಕೆಯ ಪಾತ್ರ ದೊಡ್ಡದಿದೆ. ಚಳಿಗಾಲದಲ್ಲಿ ಇರುಳಿಗಿಂತ ಹಗಲು ಚಿಕ್ಕದಾಗಿರುತ್ತದೆ, ಬಿಸುಪು ಕಡಿಮೆಯಿರುತ್ತದೆ, ಸಾಕಶ್ಟು ನೀರು ಸಿಗುವುದಿಲ್ಲ ಮತ್ತು ನೇಸರನ ಬೆಳಕಿನ ತೀವ್ರತೆ ಕೂಡ ಕಡಿಮೆಯಿರುತ್ತದೆ.
ಹಾಗಾಗಿ ಚಳಿಗಾಲದ ಗಾಳಿಪಾಡು ಒಟ್ಟಾರೆಯಾಗಿ ಮರಗಿಡಗಳ ಬೆಳವಣಿಗೆಗೆ ಅನುಕೂಲಕರವಾಗಿರುವುದಿಲ್ಲ. ಆದ್ದರಿಂದ ಇವು ಚಳಿಗಾಲದಲ್ಲಿ ಒರಗಿದ ಸ್ತಿತಿಯಲ್ಲಿ ಇರುತ್ತವೆ. ಬೇಸಿಗೆ ಆರಂಬವಾಗುವ ಮುನ್ನ ಒಂದು ಮಳೆ ಬಿದ್ದೊಡನೆ ಮರಗಿಡಗಳ ಬೆಳವಣಿಗೆಗೆ ಬೇಕಾದ ಗಾಳಿಪಾಡು ಸಿಗುತ್ತದೆ ಮತ್ತು ಇವು ಚಿಗುರತೊಡಗುತ್ತವೆ. ಇದಲ್ಲದೇ, ಬೇರುಗಳ ತುದಿಯಲ್ಲಿಯೂ ಕೂಡ ಈ ಬೇರಿನ ಕುಡಿ (Root apical meristem) ಇರುತ್ತದೆ, ಇವು ಕೂಡ ತನ್ನ ಬೆಳವಣಿಗೆಗೆ ಬೇಕಾದ ಗಾಳಿಪಾಡು ಸಿಕ್ಕೊಡನೆ ತನ್ನ ಸೂಲುಗೂಡುಗಳನ್ನು ಹಿಗ್ಗಿಸಿ, ಒಡೆದು ಬೆಳೆಯುತ್ತಾ ಹೋಗುತ್ತವೆ. ಮರಗಿಡಗಳ ತಳಿಗಳಿಗೆ ತಕ್ಕಂತೆ ಬೇರಿನ ಇಲ್ಲವೇ ಕಾಂಡದ ಬೆಳವಣಿಗೆ ನಡೆಯುತ್ತದೆ.
ಎರಡನೆ ಬಗೆಯ ಬೆಳವಣಿಗೆಯಲ್ಲಿ ಬಗೆಯಲ್ಲಿ ಮರದ ಕಾಂಡವು ತನ್ನ ಅಗಲವನ್ನು ಹೆಚ್ಚಿಸುತ್ತಾ ಹೋಗುತ್ತದೆ. ಮರದ ಕಾಂಡದಲ್ಲಿ ಒಟ್ಟು ನಾಲ್ಕು ಬಾಗಗಳಿರುತ್ತವೆ ಅವು ತೊಗಟೆ/ಸಿಪ್ಪೆ, ನೀರ‍್ಗೊಳವೆ (Xylem), ಕೂಳ್ಗೊಳವೆ(Phloem), ತಿರುಳು (Cambium) ಮತ್ತು ನಡುಮರ (heartwood). ಇವುಗಳ ಕುರಿತು ಮಾಹಿತಿಯನ್ನು ಪಡೆಯೋಣ.
ತಿರುಳು: ಕಾಂಡದಲ್ಲಿ ಬೆಳೆಯುವ ಅತಿ ಮುಕ್ಯ ಬಾಗ ಇದಾಗಿದೆ. ಇದರ ಸೂಲುಗೂಡುಗಳು ಅತಿ ಹೆಚ್ಚು ಹುರುಪಿನಿಂದ ಇರುತ್ತವೆ, ಗಿಡದ ಬೆಳವಣಿಗೆಗೆ ಅನುಕೂಲಕರ ಗಾಳಿಪಾಡು ಸಿಕ್ಕಾಗ ತಿರುಳಿನಲ್ಲಿರುವ ಸೂಲುಗೂಡುಗಳು ಬೆಳೆದು ಒಡೆದು ಹೊಸ ಹೊಸ ಸೂಲುಗೂಡುಗಳಾಗು ಮಾರ‍್ಪಾಡಾಗುತ್ತವೆ. ಹೀಗೆ ಮೂಡಿದ ಕೆಲವು ಹೊಸ ಸೂಲುಗೂಡುಗಳು ತಿರುಳಿನ ಹೊರ ಬಾಗಕ್ಕೆ ಸಾಗಿ ಕೂಳ್ಗೊಳವೆ ಆಗುತ್ತದೆ. ಮತ್ತೆ ಕೆಲವು ಹೊಸ ಸೂಲುಗೂಡುಗಳು ತಿರುಳಿನ ಒಳಬಾಗಕ್ಕೆ ಸಾಗಿ ನೀರ‍್ಗೊಳವೆ ಆಗುತ್ತದೆ. ಹಾಗಾಗಿ ಈ ತಿರುಳು ಕೂಳ್ಗೊಳವೆ ಮತ್ತು ನೀರ‍್ಗೊಳವೆಯ ನಡುವೆ ಇರುತ್ತದೆ.
ನೀರ‍್ಗೊಳವೆ: ತಿರುಳಿನ ಒಳಬಾಗಕ್ಕೆ ಇರುವ ಈ ಕೊಳವೆಯು ತಿರುಳಿನಿಂದ ಒಳಬಾಗಕ್ಕೆ ಸರಿದ ಹೊಸ ಸೂಲುಗೂಡುಗಳಿಂದ ಆಗಿರುತ್ತದೆ. ಮರಗಿಡಗಳ ಬೇರಿನಲ್ಲಿ ಸಣ್ಣ ಸಣ್ಣ ಬೇರು ಕೂದಲುಗಳು ಇರುತ್ತವೆ, ಈ ಕೂದಲುಗಳ ನೆರವಿನಿಂದ ಮಣ್ಣಿನಲ್ಲಿರುವ ನೀರು ಮತ್ತು ಆರಯ್ಕೆಯನ್ನು ಬೇರುಗಳು ಎಳೆದುಕೊಳ್ಳುತ್ತವೆ. ಹೀಗೆ ಎಳೆದುಕೊಂಡ ನೀರು ಮತ್ತು ಆರಯ್ಕೆಯನ್ನು ನೀರ‍್ಗೊಳವೆಯ ಮೂಲಕ ಗಿಡದ ಎಲೆಗಳಿಗೆ ಸಾಗಿಸುತ್ತದೆ. ಮೊದಲೆ ತಿಳಿಸಿದಂತೆ ಗಿಡದ ಎಲೆಗಳ ಬೆಳಗಿನ ಒಂದುಗೆಗೆ ಇದು ಬೇಕಾಗುತ್ತದೆ. ಹೀಗೆ ನೀರ‍್ಗೊಳವೆಗಳು ನೆರವಾಗುತ್ತವೆ.
ನಡುಮರ: ತಿರುಳಿನಿಂದ ಹೊಸ ಹೊಸ ಸೂಲುಗೂಡುಗಳು ನೀರ‍್ಗೊಳವೆಯ ಜಾಗಕ್ಕೆ ಸರಿಯುತ್ತಿರುತ್ತವೆ ಹಾಗಾಗಿ ನೀರ‍್ಗೊಳವೆಯ ಸೂಲುಗೂಡುಗಳು ಮತ್ತಶ್ಟು ಒಳಕ್ಕೆ ಸರಿದು ಗಟ್ಟಿಯಾಗುತ್ತಾ ಹೋಗುತ್ತವೆ ಹೀಗೆ ಮರದ ಒಳಬಾಗಕ್ಕೆ ಸರಿದು ಗಟ್ಟಿಯಾದ ಸೂಲುಗೂಡುಗಳಿಂದ ನಡುಮರ ಉಂಟಾಗಿರುತ್ತದೆ. ಮರವು ಮೇಲಕ್ಕೆ ಬೆಳೆಯುತ್ತಿದ್ದಂತೆ ಬೇಕಾದ ಗಟ್ಟಿತನವನ್ನು ಇದು ಒದಗಿಸುತ್ತದೆ.
ಕೂಳ್ಗೊಳವೆ: ಬೆಳಕಿನ ಒಂದುಗೆಯ ಮೂಲಕ ಎಲೆಗಳು ತನ್ನ ಊಟವನ್ನು ಸಿದ್ದ ಮಾಡುತ್ತವೆ ಎಂದು ಮೊದಲೇ ತಿಳಿದೆವು. ಹೀಗೆ ಸಿದ್ದ ಮಾಡಿದ ಊಟವನ್ನು ಗಿಡದ ಉಳಿದ ಬಾಗಗಳಿಗೆ ಕೂಳ್ಗೊಳವೆಯ ಮೂಲಕ ಹರಡುತ್ತದೆ. ಕೂಳ್ಗೊಳವೆಯು ತಿರುಳಿನ ಹೊರಬಾಗಕ್ಕೆ ಇದ್ದು, ತಿರುಳಿನ ಹೊಸ ಸೂಲುಗೂಡುಗಳಿಂದ ಉಂಟಾಗಿರುತ್ತದೆ.
ತೊಗಟೆ/ಸಿಪ್ಪೆ: ತಿರುಳಿನ ಹೊಸ ಹೊಸ ಸೂಲುಗೂಡುಗಳು ಕೂಳ್ಗೊಳವೆಯ ಜಾಗಕ್ಕೆ ಸರಿಯುತ್ತಿರುತ್ತವೆ ಹಾಗಾಗಿ ಕೂಳ್ಗೊಳವೆಯ ಸೂಲುಗೂಡುಗಳು ಮತ್ತಶ್ಟು ಹೊರಕ್ಕೆ ಸರಿದು ಗಟ್ಟಿಯಾಗಿ ತೊಗಟೆ/ಸಿಪ್ಪೆ ಆಗುತ್ತದೆ. ಕಾಂಡದ ಒಳಬಾಗವನ್ನು ಗಾಳಿಪಾಡಿನಿಂದ ಕಾಪಾಡಲು ಇದು ನೆರವಾಗುತ್ತದೆ.
ಹೀಗೆ, ಕಾಂಡದ ತಿರುಳಿನಲ್ಲಿರುವ ಸೂಲುಗೂಡುಗಳು ಬೆಳೆದು ಒಡೆದು ಹೊಸ ಹೊಸ ಸೂಲುಗೂಡುಗಳಾಗಿ, ನೀರ‍್ಗೊಳವೆ, ಕೂಳ್ಗೊಳವೆ, ನಡುಮರ ಮತ್ತು ತೊಗಟೆ ಸಿಪ್ಪೆಗಳಾಗಿ ಅಗಲವಾಗಿ ಬೆಳೆಯುತ್ತಾ ಹೋಗುತ್ತದೆ. ಒಟ್ಟಾರೆಯಾಗಿ, ಮರದ ಬೆಳವಣಿಗೆಯು ಬೇಸಿಗೆ ಹಾಗು ಮಳೆಗಾಲದಲ್ಲಿ ಹೆಚ್ಚಾಗಿ ಇರುತ್ತದೆ ಮರಕ್ಕೆ ಬೇಕಾದ ಗಾಳಿಪಾಡು ಈ ಕಾಲಗಳಲ್ಲಿ ಸಿಗುವುದು ಇದಕ್ಕೆ ಮುಕ್ಯ ಕಾರಣ. ಆದ್ದರಿಂದ ನಾವು ಮಾರ‍್ಚ್ ತಿಂಗಳಲ್ಲಿ ಬೀಳುವ ಮಳೆಗೆ ಮರಗಿಡಗಳ ತುಂಬೆಲ್ಲಾ ಚಿಗುರನ್ನು ನೋಡುತ್ತೇವೆ.
(ಮಾಹಿತಿ ಸೆಲೆ: education)
ಇತ್ತೀಚಿನ ಅನಿಸಿಕೆಗಳು