ಇದುವೇ ನಮ್ಮಯ ಹೊನಲು

ಯಶವನ್ತ ಬಾಣಸವಾಡಿ.

arimeya honalu

ಹರಿಯಲಿ ಅರಿಮೆಯ ಹೊನಲು
ತಿಳಿವಿನ ತಿಳಿಯಲಿ ತಣಿಸಲು
ಏರಲಿ ಚಳಕವು ಮುಗಿಲು
ನಮ್ಮಯ ನಾಳೆಗಳ ಕಟ್ಟಲು

ಉಕ್ಕಲಿ ನಲ್ಬರಹಗಳ ಹೊನಲು
ಜೇನ್ಗನ್ನಡದ ರುಚಿಯನು ಬಡಿಸಲು
ಮೂಡಲಿ ಕಟ್ಟೊರೆಗಳ ಸಾಲು
ಅಚ್ಚಗನ್ನಡದ ಕಂಪನು ಸೂಸಲು

ರಾಚಲಿ ನಡೆ-ನುಡಿಗಳ ಹೊನಲು
ಹಿನ್ನಡಿಗರ ಕೀಳರಿಮೆಯ ಅಳಿಸಲು
ಹೊಮ್ಮಲಿ ಹಿನ್ನಡವಳಿಗಳ ಕವಲು
ನಮ್ಮವರ ಹಿರಿಮೆಯ ಮೆರೆಸಲು

ಚಿಮ್ಮಲಿ ನಾಡೇಳ್ಗೆಯ ಹೊನಲು
ಕನ್ನಡಿಗರಲಿ ಆಳ್ಮೆಯರಿವನು ಮೂಡಿಸಲು
ದುಮ್ಮಿಕ್ಕಲಿ ಆಗುಹೋಗುಗಳ ತುಳಿಲು
ಕನ್ನಡಿಗನ ಹೊಣೆಗಾರಿಕೆಯನು ಬಡಿದೆಬ್ಬಿಸಲು

ಇದುವೇ ನಮ್ಮಯ ಹೊನಲು
ದುಡಿಯುತಿದೆ ನಾಳೆಗಳ ಕಟ್ಟಲು
ನಿಮ್ಮೊಲುಮೆ ನಮ್ಮೊಡನೆ ಇರಲು
ತೊಡಕಾಗದು ಕನ್ನಡತನವನು ಉಳಿಸಲು

(ಚಿತ್ರ: http://budgettripping.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: