ನಿದ್ದೆಗೆಡದಿರಿ

ಸುಜಯೀಂದ್ರ.ವೆಂ.ರಾ.

sleeploss2

ನಮಗೆಲ್ಲಾ ತಿಳಿದಿರುವಂತೆ ನಮ್ಮ ಬದುಕು ಸರಾಗವಾಗಿ ಸಾಗಲು ನೀರು, ಕೂಳು, ಕೆಲಸ, ನಿದ್ದೆ ಬಹಳ ಮುಕ್ಯ. ಬದುಕಲು ಬರಿ ನೀರಿದ್ದರೆ ಸಾಲದು, ಬಲ ಪಡೆಯಲು ಕೂಳು ಬೇಕು, ನೀರು-ಕೂಳೊಂದಿದ್ದರೆ ಸಾಲದು, ನಿದ್ದೆಯೂ ಬೇಕು. ನಿದ್ದೆಗೆ ಶ್ರಮಕೊಡುವ ಕೆಲಸಬೇಕು. ಇವೆಲ್ಲಾ ನಮಗೆ ಸಿಗುತ್ತಿವೆ ಎಂದರೆ ಅದು ಎಲ್ಲೆಡೆ ಸಮನಾಗಿಲ್ಲ. ಒಬ್ಬರ ಬದುಕು ಒಂದೊಂದು ತರವಿರುತ್ತದೆ. ಅವರು ತಿನ್ನುವ ಆಹಾರ, ಯೋಚನೆ, ನಿದ್ದೆ ಮಾಡುವ ರೀತಿ ಬೇರೆ ಬೇರೆಯೇ ಆಗಿರುತ್ತದೆ. ಹಾಗಾದರೆ ಇವರೆಲ್ಲರಿಗೂ ನೆಮ್ಮದಿಕೊಡುವ ನಿದ್ದೆ, ಬೇರೆಯೇ ಆಗಿದ್ದರೆ ಏನಾಗುತ್ತದೆ? ಅದಕ್ಕೆ ಉತ್ತರವೆಂಬಂತೆ ಕೆಲವು ಅರಕೆಯ ಕೆಲಸಗಳು ನರ-ಅರಿಮೆಯಲ್ಲಿ (neurology) ನಡೆದಿವೆ. ಬನ್ನಿ, ಅದರತ್ತ ಹೋಗೋಣ.

ಬಹಳ ಜನ ಹೊಗಳೋದುಂಟು,

ನೀವು ನಿದ್ದೆ ಗೆದ್ದವರು, ಯಾವಾಗಲು ಎಚ್ಚರದಲ್ಲಿರುತ್ತೀರಿ. ಅದ್ರುಶ್ಟವಂತರು ನೀವು, ಇದರಿಂದ ಅರಿವಿನಿಂದ (cognitive) ಹೆಚ್ಚು ಗೆಯ್ಮೆ (performance) ಮಾಡಲು ಆಗುತ್ತದೆ, ನಾವೇ ಯಾವಾಗಲು ನಿದ್ದೆ ಮಾಡುತ್ತೀವಿ.

ಇದೇ ಹೊತ್ತಿನಲ್ಲಿ ಲೂಸಿಯಾ ಚಿತ್ರದ ನಿಕ್ಕಿ ಮತ್ತು ಮದ್ದು ಮಾರುವವನ ನಡುವೆ ನಡೆದ ಮೊದಲ ಮಾತುಗಳು ನೆನಪಾದರೆ ಅಚ್ಚರಿಯೇನಿಲ್ಲ. ಈ ವಿಚಾರದಲ್ಲಿ ನಮಗೆ ಯಾವಾಗಲೂ ನೆನಪಾಗುವುದು ಸರದಿ ಕೆಲಸಗಾರರು (shift worker), ಓದುಗರು, ಬಾರಿ ವಾಹನ ಓಡಿಸುಗರು (truckers). ಇವರೆಲ್ಲರೂ ಹೆಚ್ಚು ಹೊತ್ತು ನಿದ್ದೆಗೆಟ್ಟು (chronically sleep-deprived) ತಮ್ಮ ದಿನನಿತ್ಯದ ಕೆಲಸ ಮಾಡುತ್ತಿರುತ್ತಾರೆ. ವಾರದ ಕೊನೆಯ ಎರಡು ದಿನ ಬಂದರೆ ಸಾಕು, ಕೆಲಸದ ದಿನದಲ್ಲಿ ಕಳೆದುಕೊಂಡ ನಿದ್ದೆಯನ್ನೆಲ್ಲಾ ಒಮ್ಮೆ ಮಾಡಿ ಆಸೆ ತೀರಿಸಿಕೊಳ್ಳುತ್ತಾರೆ.

ಒಂದು ಮಾತಿದೆ,

ಒಮ್ಮೆ ನಿದ್ದೆಗೆ ಜಾರಿದರೆ ಕಳೆದುಕೊಂಡ ಎಲ್ಲಾ ನಿದ್ದೆಯನ್ನು ಪಡೆದುಕೊಳ್ಳುತ್ತೇವೆ(sleep debt) ಇದರಿಂದ ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ.

ಆದರೆ ಹೆಚ್ಚು ನಿದ್ದೆಯಿಲ್ಲದಿರುವುದು ಇಲ್ಲವೆ ನಿದ್ದೆಗೆಡುವುದು ಅಶ್ಟು ಒಳ್ಳೆಯದೆ? ಹಾಗಿಲ್ಲವೆಂದು ಪೆನ್ ಮೆಡಿಸನ್ ಅರಕೆಗಾರರು ಹೇಳುತ್ತಾರೆ. ಅವರ ಪ್ರಕಾರ ಹೆಚ್ಚು ಹೊತ್ತು ನಿದ್ದೆಕಳೆದುಕೊಳ್ಳುವುದನ್ನು (chronic sleep loss) ಹಿಂದೆಂದಿಗಿಂತಲೂ ಗಂಬೀರವಾಗಿ ನೋಡಬೇಕಾಗಿದೆ. ಇದರಿಂದ ಮಯ್ಯಿಗೆ ಹಿಂತಿರುಗಿಸಲಾಗದ ಅಳಿವನ್ನು ಕೊಡುತ್ತದೆ ಮತ್ತು ನರಕೊಣಿಕೆಗಳ ಅಳಿವು ಕೂಡ ಆಗುತ್ತದೆ.

ಇದರ ಸಲುವಾಗಿ ಸಿಗ್ರಿಡ್ ವೀಸೆ. ಎಂ ಡಿ (Sigrid Veasey, MD) (ಇವರು ವಯ್‍ದ್ಯಕೀಯ ಸಹಾಯಕ ಉಪನ್ಯಾಸಕರು ಮತ್ತು ನಿದ್ದೆ ಮತ್ತು ನರ-ಉಸಿರರಿಮೆಯ ಹೊತ್ತಿನತಾಳ [Circadian Neurobiology] ತಿಳಿಯುವ ಕೇಂದ್ರದಲ್ಲಿ ಸದಸ್ಯರು, ಪೆರೆಲ್ಮನ್ ವಯ್ ದ್ಯಕೀಯ ಶಾಲೆ) ಮತ್ತು ಪೆಕ್ಕಿಂಗ್ ವಿಶ್ವವಿದ್ಯಾಲಯದಿಂದ ಬಂದ ನೆರವಿಗರು ಇಲಿಗಳನ್ನು ಮೊದಲು ಮನುಶ್ಯನ ಮಾದರಿಯನ್ನಾಗಿ ಮಾಡಿಕೊಂಡರು.

ಅಲ್ಲಿ ಅವರಿಗೆ ತಿಳಿದದ್ದೇನೆಂದರೆ ಹೆಚ್ಚು ಹೊತ್ತು ಎಚ್ಚರದಲ್ಲಿರುವಿಕೆ(extended wakefulness )ಯಿಂದ ಮಿದುಳಲ್ಲಿನ ನರಕೊಣಿಕೆ (neurons)ಗಳಿಗೆ  ಗಾಸಿಯುಂಟಾಗುತ್ತದೆ ಮತ್ತು ಅವು ಸಾವನ್ನಪ್ಪುತ್ತವೆ ಎಂದು. ಅದರಲ್ಲೂ ಮಿದುಳಲ್ಲಿನ ಎಚ್ಚರದಲ್ಲಿರುವಿಕೆಗೆ (alertness) ಹೊಂದಿಕೊಂಡಿರುವ ಮತ್ತು ಅರಿವಿಗೆ ಮುಕ್ಯವಾಗಿ (optimal cognition) ಕಾರಣವಾಗುವ, ಲೋಕಸ್ ಕೊಎರುಲಿಯಸ್(locus coeruleus (LC) neurons ) ನರಕೊಣಿಕೆಗಳ ಅಳಿವು ಉಂಟಾಗುತ್ತದೆ.

ವೀಸೆ ಅವರ ಪ್ರಕಾರ, ಕಡಿಮೆ ಹೊತ್ತು ನಿದ್ದೆಗೆಡುವುದರ ಮತ್ತು ಹೆಚ್ಚು ಹೊತ್ತು ನಿದ್ದೆಗೆಡುವುದರ ಅಡ್ಡಪರಿಣಾಮದಿಂದ ಬೇನಿಗರಲ್ಲಿನ ದೇಹದ ಅರಿವಿನ ಮರುಕಳಿಸುವಿಕೆ (recovery of cognition) ಸುದಾರಿಸುವುದೆಂದು ನಂಬಿದ್ದರಂತೆ. ಆದರೆ ಕೆಲ ಮನುಶ್ಯರಲ್ಲಿ ನಡೆದ ಅರಕೆಯಿಂದ ತಿಳಿದದ್ದೇನೆಂದರೆ ಮೂರು ದಿನಗಳ ನಿದ್ದೆಯಿಂದಲೂ ಗಮನವಿರುವಿಕೆ (attention span) ಮತ್ತು ಇತರ ಅರಿವಿಗೆ ಹೊಂದಿಕೊಂಡ ಹಲವು ಮಿದುಳಿನ ಕೆಲಸವನ್ನು ಮರುಪಡೆಯಲಾಗಲಿಲ್ಲವಂತೆ. ಇದರಿಂದ ಅವರು ನಿದ್ದೆಗೆಡುವಿಕೆಯೊಂದು ಮಿದುಳಿನ ನರಕೊಣಿಕೆಗಳ ಗಾಸಿಗೆ ಕಾರಣವಾಗುವುದೇ? ಮತ್ತು ಅದನ್ನು ವಾಸಿ ಮಾಡಲು ಆಗುವುದೇ? ಮತ್ತು ಮಿದುಳಿನ ಯಾವ ಯಾವ ನರಕೊಣಿಕೆಗಳು ಈ ಕೆಲಸಗಳಲ್ಲಿ ಸೇರಿವೆ? ಎಂಬುದನ್ನು ತಿಳಿಯಹೊರಟರಂತೆ.

ಇಲಿಗಳನ್ನು ಮನುಶ್ಯನ ಮಾದರಿಯನ್ನಾಗಿಸಿದ ಅರಿಗರು, ಇಲಿಗಳಿ ಮನುಶ್ಯನ ಬದುಕನ್ನು ಹೋಲುವ ಬದುಕಿನ ರೀತಿ ಕೊಟ್ಟರಂತೆ. ಅಂದರೆ ಹೆಚ್ಚು ಹೊತ್ತು ನಿದ್ದೆ ಇಲ್ಲವೆ ಹೆಚ್ಚು ಹೊತ್ತು ಎಚ್ಚರವಿರುವ ಹಾಗೆ. ಅವರ ಅರಕೆಯಲ್ಲಿ ತಿಳಿದದ್ದು, ಕಡಿಮೆ ಹೊತ್ತಿನ ನಿದ್ದೆಗೆಡುವಿಕೆಗೆ ಎಲ್ ಸಿ ನರಕೊಣಿಕೆಗಳು ಸಿರ‍್ಟುಇನ್ ಬಗೆ-3(sirtuin type 3-SirT3) ಎಂಬ ಮುನ್ನನ್ನು ಹೆಚ್ಚು ತಯಾರಿಸುತ್ತವೆಯಂತೆ. ಈ ಮುನ್ನು ಮಯ್ಟೋಕಾಂಡ್ರಿಯಾದ ಬಲವನ್ನು ತಯಾರಿಸುವಲ್ಲಿ ಮತ್ತು ರೆಡಾಂಕ್ಸ್ ಒಡನಾಟಕ್ಕೆ ನೆರವಾಗಲು ಬಹಳ ಬೇಕಾಗುವಂತದ್ದು ಹಾಗೂ ನರಕೊಣಿಕೆಗಳನ್ನು ಕಾಪಾಡಲು ನೆರವಾಗುವಂತದ್ದು ಆಗಿದೆ.

brain

ಆದ್ದರಿಂದ ಕಡಿಮೆ ಹೊತ್ತಿನ ನಿದ್ದೆಗೆಡುವಿಕೆ ಉಂಟಾದಾಗ ಸಿರ್ ಟಿ3 (SirT3) ದೇಹದಲ್ಲಿ ತರುಮಾರ‍್ಪುವ ಒನ್ನೆಲೆತದ ಕೆಲಸಗಳು(metabolic homeostasis) ನಡೆಯಲು ನೆರವಾಗುತ್ತದೆ. ಆದರೆ ಹೆಚ್ಚು ಹೊತ್ತು ಎಚ್ಚರದಲ್ಲಿರುವಿಕೆ ಉಂಟಾದಾಗ ಸಿರ್ ಟಿ3ರ ಒಡನಾಟ ಇರುವುದಿಲ್ಲ. ಈ ಮುನ್ನು ಹೆಚ್ಚು ಮತ್ತು ಕಡಿಮೆ ಇರುವ ಪ್ರಮಾಣವನ್ನು ಇಲಿಗಳ ಮಾದರಿಗಳಿಂದ ತಿಳಿದುಬಂದಿದೆಯಂತೆ. ಇಲಿಗಳಲ್ಲಿ ಈ ಮುನ್ನಿನ ಪ್ರಮಾಣ ಕುಸಿದಾಗ ನೂರಕ್ಕೆ 25ರಶ್ಟು ಅವುಗಳ ಮೆದುಳಿನ ನರಕೊಣಿಕೆಗಳನ್ನು ಕಳೆದಿಕೊಂಡಿದೆಯಂತೆ.

ಹಾಗಾಗಿ ಇದೇ ಮೊದಲ ಬಾರಿ ನಿದ್ದೆಗೆಡುವಿಕೆಯಿಂದ ಮಿದುಳಿನ ನರಕೊಣಿಕೆಗಳ ಹಾಳಾಗಿರುವುದು ಕಂಡುಬಂದಿದ್ದು ಒಂದು ದೊಡ್ಡ ದಾಕಲೆಯೇ ಆಗಿದೆ. ನರಕೊಣಿಕೆಗಳಲ್ಲಿನ ಬಲದ ಕೇಂದ್ರವಾದ ಮಯ್ಟೋಕಾಂಡ್ರಿಯಾಗಳು ನಿದ್ದೆಗೆಡುವಿಕೆಗೆ ತೋರಿಸಿರುವ ಒಡನಾಟವೂ ಕೂಡ ಕಂಡು ಬಂದಿದೆ. ಈ ನರಕೊಣಿಕೆಗಳ ಮಯ್ಟೋಕಾಂಡ್ರಿಯಾಗಳು ಕಡಿಮೆ ಹೊತ್ತಿನ ನಿದ್ದೆಗೆಡುವಿಕೆಗೆ ಹೊಂದಿಕೊಂಡಿವೆ. ಆದರೆ ಹೆಚ್ಚು ಹೊತ್ತಿನ ನಿದ್ದೆಗೆಡುವಿಕೆಗೆ ಇವುಗಳ ಹೊಂದಾಣಿಕೆ ಸೊನ್ನೆ.

ಹಾಗಾದರೆ ಸಿರ್ ಟಿ3 ಪ್ರೋಟೀನ್ ನ ಪ್ರಮಾಣವನ್ನು ಮಯ್ಟೋಕಾಂಡ್ರಿಯಾದಲ್ಲಿ ಹೆಚ್ಚಿಸಿದರೆ ಈ ನರಕೊಣಿಕೆಗಳು ಉಳಿಯುವುದೇ ಎಂಬ ಕೇಳ್ವಿಯನ್ನು ಮುಂದಿಡುತ್ತದೆಯೇ?ಅರಕೆ ಇದರಿಂದ ತಿಳಿಸುವುದೇನೆಂದರೆ, ಎಲ್ ಸಿ ನರಕೊಣಿಕೆಗಳಲ್ಲಿನ ಇತರ ಹೊಂದಿಕೊಂಡ ನರಕೊಣಿಕೆಗಳಲ್ಲಿನ ಮಯ್ಟೋಕಾಂಡ್ರಿಯಾದ ತರುಮಾರ‍್ಪುವ ಒನ್ನೆಲೆತದ ಕೆಲಸವನ್ನು ಮರುಪಡೆಯಲು ನಿದ್ದೆಯ ಬೇಕೆ ಬೇಕೆನ್ನುವುದು ಹಾಗೂ ಎಚ್ಚರದಲ್ಲಿದ್ದಾಗ ಬೇಕಾದ ಕೆಲಸಗಳನ್ನು ಮಾಡಲು ಸರಿಯಾದ ನಿದ್ದೆ ನೆರವಾಗುವುದು ಎಂದು.

ಮುಂದಿನ ಹಂತದ ಅರಕೆಯಲ್ಲಿ ಸಿರ್ ಟಿ3ರ ಮಾದರಿಯನ್ನು ಪರೀಕ್ಶೆಗೆ ಒಳಪಡಿಸುತ್ತಾರಂತೆ. ಎಲ್ ಸಿ ನರಕೊಣಿಕೆಗಳಲ್ಲಿ ಸಿರ್ ಟಿ3ರನ್ನು ಹೆಚ್ಚು ತೋಡಿಕೊಳ್ಳುವಂತೆ(overexpression) ಮಾಡಬಹುದಾಗಿದೆಯಂತೆ. ಇದರಿಂದ ಕೋಣಿಕೆಗಳನ್ನು ಉಳಿಸಿ ಎಚ್ಚರಗೊಳ್ಳುವಿಯನ್ನು ಕಾಪಾಡಿದರೆ, ಮುಂದೆ ದೊಡ್ಡದಾದ ನಂಬಿಕೆ ತರುವ ಚಿಕಿತ್ಸೆಯೊಂದನ್ನು ಸರದಿ ಕೆಲಸಗಾರಿಗೆ ಕೊಡಬಹುದಾಗಿದೆ ಎನ್ನಲಾಗಿದೆ.

ನೋಡಿ ಹೀಗೆ ಒಂದು ಬೇನೆಯ ಮದ್ದು ತಯಾರಾಗುತ್ತದೆ. ಅಲ್ಲಿ ಇಲಿಗಳು, ಮೊಲಗಳು, ಬೇನಿಗರ ಕೋಣಿಕೆಗಳ ನಕಲುಗಳು, ಸಾಗುವಳಿಗಳು(culture) ಇಲ್ಲಿ ಮಾದರಿಯಾಗುತ್ತವೆ. ಅವುಗಳಿಗೆ ಕೊಟ್ಟ ರಾಸಾಯನಿಕ ಒತ್ತಡಗಳಿಂದ ಒಂದು ಒಳ್ಳೆಯ ಮದ್ದು ತಯಾರಾಗುತ್ತದೆ. ಆದರೆ ಇನ್ನು ಮುಂದು ವರೆಯುತ್ತಿರುವ ನಮ್ಮ ದೇಶದಲ್ಲಿ ಇಂತಹ ಅರಕೆಗಳು ತುಂಬಾ ಕಡಿಮೆ. ಅದಕ್ಕೆ ಅನಿಸುತ್ತದೆ, ನಮ್ಮ ಹಳ್ಳಿಯ ಜನ(ಲೂಸಿಯಾದ ನಿಕ್ಕಿಯಂತ ಜನ) ಬೀದಿಯಲ್ಲಿ ಮಾರುವ, ಪರವಾನಗಿಯಿಲ್ಲದ ಮದ್ದು-ಗುಳಿಗೆ ಗಳಿಗೆ ಮಾರುಹೋಗಿ, ತಮ್ಮ ದೇಹದ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಾರೆ. ನಂತರ ಒಳ್ಳೆ ಆಸ್ಪತ್ರೆ, ಮದ್ದು ಎಂದು ಹುಡುಕಲು ಹೋಗಿ ಜೀವವನ್ನೇ ಕಳೆದುಕೊಳ್ಳುವ ಸ್ತಿತಿತಂದುಕೊಳ್ಳುತ್ತಾರೆ.

ಪೆನ್ ಮೆಡಿಸನ್ ಅರಕೆಗಾರರ ತಂಡ ಮುಂದೆ ಇನ್ನಶ್ಟು ಸರದಿ ಕೆಲಸಗಾರರ ಸಾವನ್ನಪ್ಪಿದ ದೇಹಗಳ ಸಾವಿನ ನಂತರದ ದೇಹ ಪರೀಕ್ಶೆ(post-mortem) ನಡೆಸುತ್ತಾರಂತೆ. ಅಲ್ಲಿ ಅವರು ಎಲ್ ಸಿ ನರಕೊಣಿಕೆಗಳ ಕಳೆದುಕೊಳ್ಳುವಿಕೆಯನ್ನು ಮತ್ತು ನರಹಾಳುಮಾಡುವಿಕೆಯಿಂದಾಗುವ (neurodegenerative disorders ) ತೊಂದರೆಗಳಾದ ಅರಳುಮರಳು ಕಾಯಿಲೆ, ಪಾರ‍್ಕಿನ್ಸನ್ ಕಾಯಿಲೆಗಳ (Alzheimer’s and Parkinson’s) ಚಿಹ್ನೆಗಳನ್ನು ಪತ್ತೆ ಹಚ್ಚುತ್ತಾರಂತೆ. ಇಲಿ ಮಾದರಿಗಳಲ್ಲಿ ಹಿಂದೆ ನಡೆಸಿದ ಅರಕೆಯು ನರಕೊಣಿಕೆಗಳ ಸಾವು, ಈ ಕಾಯಿಲೆಗಳು ಚುರುಕುಗೊಂಡು ಮುಂಬರುವಿಕೆಯನ್ನು ತಿಳಿಸಿತ್ತು. ಇನ್ನು ಮೊದಲೇ ಈ ಕಾಯಿಲೆಗಳಿದ್ದವರು ನಿದ್ದೆಗೆಡುವುದರಿಂದ ಇನ್ನಶ್ಟು ಬೇಗನೇ ನರಹಾಳುಮಾಡುವಿಕೆಯುಂಟಾಗಿ ಕಾಯಿಲೆಗಳು ಚುರುಕುಗೊಳ್ಳುಲು ನೆರವಾಗುತ್ತದೆ ಎನ್ನಲಾಗಿದೆ.

ಅದೇನೇ ಆದರೂ ಇನ್ನಶ್ಟು ನರ-ಅರಿಮೆ ಅರಕೆಯ ಕೆಲಸಗಳು ನರಹಾಳುಮಾಡುವಿಕೆಗೂ ಹಾಗೂ ನಿದ್ದೆಗೆಡುವಿಕೆಗೂ ಇರುವ ನಂಟನ್ನು ತಿಳಿಸಬೇಕಿದೆ. ಕೊನೆಯದಾಗಿ ಇಂತಹ ಅರಕೆಯ ಕೆಲಸವೊಂದು ನಿದ್ದೆಗೆಡುವಿಕೆಗೂ, ಮಿದುಳಲ್ಲಿನ ಎಚ್ಚರದಲ್ಲಿರುವಿಕೆಗೆ (alertness) ಹೊಂದಿಕೊಂಡಿರುವ ಮತ್ತು ಅರಿವೆಗೆ ಮುಕ್ಯವಾಗಿ (optimal cognition) ಕಾರಣವಾಗುವ, ಲೋಕಸ್ ಕೊಎರುಲಿಯಸ್ (locus coeruleus (LC) neurons ) ನರಕೊಣಿಕೆಗಳ ಅಳಿವಿಗೂ ಏನು ನಂಟು ಎಂಬು ತಿಳಿದಂತಾಗಿದೆ. ಇದರಿಂದ ಪೆನ್ ಮೆಡಿಸನ್ ಅರಿಗರು ಬೇನಿಗರಿಗೆ ಒಳ್ಳೆಯ ಮದ್ದೊಂದನ್ನು ಪರವಾನಗಿಯಿಂದ ತಯಾರಿಸಿಕೊಡುತ್ತಾರೆ ಎನ್ನಬಹುದೇ? ಹಾಗೆಯೇ ಬೀದಿಯಲ್ಲಿ ಮಾರುವ ಮದ್ದು-ಗುಳಿಗೆಗಳ ಕೊಂಡುಕೊಳ್ಳುವಿಕೆಗೆ ಹಾಗೂ ಮಾರುವಿಕೆಗೂ ಇಂತಹ ಅರಕೆ ಓದುವುದರಿಂದ ಕಡಿವಾಣ ಹಾಕಬಹುದೆ?

ಎಶ್ಟೇ ಅರಿಮೆಯ ಅರಕೆ ಓದಿದರೂ, ಮದ್ದು ತಿಂದರೂ ಒಳ್ಳೆಯ ನಿದ್ದೆಗೆ, ವಚನಗಳು ಮತ್ತು ದಾಸರ ಪದಗಳು ಹೇಳುವಂತೆ ಒಂದರ-ಮೇಲೊಂದು ಹಚ್ಚಿಕೊಳ್ಳುವ ’ಚಿಂತೆ’ಯನ್ನು ಬಿಡಬೇಕಶ್ಟೇ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: