ಮೊದಲೊಲವ ಬೆಳಕು

– ರತೀಶ ರತ್ನಾಕರ.

ದೀಪ

ಅಂದೇಕೋ ‘ಗಮನ್’ ಗೆ ಮಯ್ ತುಂಬಾ ಜ್ವರ! ದಿನಾ ಸಂಜೆ ಕಚೇರಿಯ ಓಟದ ಬಯಲಿಗೆ ಹೋಗಿ ಕಸರತ್ತು ಮಾಡುತ್ತಿದ್ದವನಿಗೆ ಅಂದು ಸಂಜೆ ಮಾತ್ರ ರಜ. ಆದರೂ ಅಬ್ಯಾಸ ಬಲ,  ಸುಮ್ಮನಾದರು ಸಂಜೆ ಆಟದ ಬಯಲಿಗೆ ಬೇಟಿ ಕೊಡಬೇಕು ಇಲ್ಲವಾದರೆ ಅವನಿಗೆ ನಿದ್ದೆ ಬರುವುದಿಲ್ಲ. ಕೆಲವು ಹವ್ಯಾಸಗಳು ಹೀಗೆ ಅನಿಸುತ್ತೆ ಒಮ್ಮೆ ಅವನ್ನು ನಾವು ಹಚ್ಚಿಕೊಂಡರೆ ಸಾಕು, ಚಟದಂತೆ ನಮ್ಮನ್ನು ಆವರಿಸಿಕೊಂಡು ಬಿಡುತ್ತವೆ. ನಾವು ಬಿಡಬೇಕೇಂದರೂ ಅವು ನಮ್ಮನ್ನು ಬಿಡವು!

ಹೀಗೆ, ಆ ಸಂಜೆ ಬೇರೆಯವರು ಬೆವರಿಳಿಸುವುದನ್ನು ನೋಡುತ್ತಾ, ಹರಟುತ್ತಾ ಕುಳಿತಿದ್ದ ಗಮನ್ ಗೆ ಅವನ ಹಿಂದಿನಿಂದ ಯಾರೋ ಬರುತ್ತಿರುವ ಸೂಚನೆಯನ್ನು ಅವನ ಒಳಗು ನೀಡಿತು. ಬಯಲಿನ ಸುತ್ತಲಿದ್ದ ಮೆಟ್ಟಿಲುಗಳನ್ನು ಇಳಿಯುತ್ತ ಅವಳು ಬಂದಳು. ಹವ್ದು, ಅವಳೇ… ’ಗರಿ’. ಅವಳ ಅಂದದ ಬಗ್ಗೆ ಹೆಚ್ಚೇನು ಹೇಳುವುದು ಬೇಡ ಗಂಡು ನವಿಲಿನ ಗರಿಯ ಅಂದ ಆ ಹೆಣ್ಣಿನಲ್ಲಿತ್ತು. ನವಿಲುಗರಿ ಮತ್ತು ಈ ‘ಗರಿ’ ಎರೆಡೂ ಮೇಲೆನಿವನ ಕಯ್ ಚಳಕಗಳೇ! ಬಿಸಿ ರಕ್ತದ ಹಸಿ ವಯಸ್ಸಿನ ಹುಡುಗರ ನೋಟಗಳು ತಾನಾಗಿಯೇ ಅವಳೆಡೆಗೆ ಬೀಳುವಂತಹ ಅಂದ ಅವಳದು.

ಹಾಗಂತ ಗಮನ್ ಕೂಡ ಕಡಿಮೆಯೇನಲ್ಲ, ಹೆಸರಿಗೆ ತಕ್ಕ ಹಾಗೆ ಹೆಚ್ಚಿನವರ ಗಮನ ಸೆಳೆಯುವಂತಹ ಮುಕ ಮತ್ತು ಮಯ್ಕಟ್ಟು. ಕಾಲೇಜಿನ ದಿನಗಳಲ್ಲಿ ಓದಿ ಉದ್ದಾರ ಆಗಲೇ ಬೇಕು ಎಂಬ ದಿಟ್ಟ

ಗುರಿಯಿದ್ದರಿಂದ ಒಲವು-ಗಿಲವು ಅಂತ ‍ಏನೂ ತಲೆಕೆಡಿಸಿಕೊಂಡಿರಲಿಲ್ಲ. ಓದು ಮುಗಿದು ಕೆಲಸಕ್ಕೆ ಸೇರಿ, ಇನ್ನು ಮದುವೆಯ ವಯಸ್ಸು ಹತ್ತಿರವಾಗುತ್ತಿತ್ತು. ಮನೆಯಲ್ಲಿ ಅಪ್ಪ-ಅಮ್ಮ ಒಂದೆರೆಡು ನಂಟಸ್ತಿಕೆಗಳನ್ನು ನೋಡಿದ್ದರು. ಆದರೆ ಇನ್ನೊಂದೆರೆಡು ವರುಶ ಮದುವೆ ಆಗುವುದಿಲ್ಲ ಎಂದು ಇವನು ಹೇಳಿದ್ದರಿಂದ ಮದುವೆ ಮಾತುಕತೆ ಮುಂದೆ ಹೋಗಿರಲಿಲ್ಲ.

ಇಂತಿರ್‍ಪ ಗಮನ್ ಗೆ ಯಾವ ಹುಡಿಗಿಯ ಮೇಲೆ ಅಶ್ಟು ಮನಸಾಗಿರಲಿಲ್ಲ. ಸುಮಾರು ಒಂದು ವರುಶದಿಂದ ‘ಗರಿ’ ಯನ್ನು ನೋಡುತ್ತಿದ್ದರೂ ಅವಳ ಪರಿಚಯ ಇರಲಿಲ್ಲ. ಕೆಲವೇ ಕೆಲವು ದಿನಗಳ ಹಿಂದೆ ಇದೇ ಆಟದ ಬಯಲಿನಲ್ಲಿ ಬೇರೆಯವರ ಜೊತೆ ನಡೆಯುತ್ತಿದ್ದ ಯಾವುದೋ ಸಿನಿಮಾ ವಿಶಯದ ಚರ್‍ಚೆಯಲ್ಲಿ ಅವರಿಬ್ಬರ ನಡುವೆ ಮಾತುಗಳು ನಡೆಯಿತು. ಬಳಿಕ ಅವರ ನಡುವೆ ಗೆಳೆತನ ಬೆಳೆಯಿತು. ಅತಿ ಕಡಿಮೆ ದಿನದಲ್ಲಿ ಹಲವು ವರುಶಗಳಶ್ಟು ಹಳೆಯ ಗೆಳೆಯರಾಗಿ ಹೋದರು. ಸುಮ್ಮನಿದ್ದ ಗಮನ್ ಗೆ ಒಮ್ಮೆಲೆ ಅವಳ ಮೇಲೆ ಮನಸಾಯಿತು. ‘ಮದುವೆ ಅಂತ ಆದರೆ ಅವಳನ್ನೇ ಆಗಬೇಕು’ ಎಂದು ಮನಸು ಮಾಡಿಕೊಂಡ! ಈ ಬಯಕೆ ಹಾಗು ಒಲವು ಎಂಬುದು ಹೀಗೆಯೇ ಅನಿಸುತ್ತದೆ ಕೆಲವೊಮ್ಮೆ ಅವು ಬರುವುದಕ್ಕೆ ಕಾರಣಗಳೇ ಇರುವುದಿಲ್ಲ. ಒಲವಿನ ಒತ್ತಡ ಹೆಚ್ಚಾಗಿ “ಬಾಳ ಸಂಗಾತಿಯಾಗಿ ನನಗೊಂದು ಬಾಳುಕೊಡು!” ಎಂದು ಅವಳನ್ನು ಕೇಳಿಕೊಳ್ಳುವ ಹಾಗೆ ಮಾಡಿತು, ಮತ್ತು ಅವನು ಅವಳನ್ನು ಹಾಗೆಯೇ ಕೇಳಿದ. ಇಂದಿಗೆ ಗಮನ್ ಗರಿಯ ಒಲವನ್ನು ಬೇಡಿ ನಾಲ್ಕು ದಿವಸ, ಗರಿಯು ಆ ಒಲವನ್ನು ಬೇಡವೆಂದು ಹೇಳಿ ಮೂರು ದಿವಸ!

ಒಲವು ಒಪ್ಪಿ ಬಂದರೆ ಬಾಳು ಹೂವಾದಂತೆ
ಒಲವು ತಪ್ಪಿ ಹೋದರೆ ಮುಳ್ಳು ಹೊಕ್ಕಿದಂತೆ
ಆದರು ಸಾಗಬೇಕಿದೆ ಮುಂದೆ ಬಾಳ ಹಾದಿಯಲಿ
ಎದೆಗೊಂದು ಚಪ್ಪಲಿ ಹಾಕಿರುವೆ ಮುಂದೇನು ಚುಚ್ಚದಿರಲಿ!

ಮುಳ್ಳು ಚುಚ್ಚಿದ ನೋವಿಗೆ ಇವನಿಗೇನಾದರು ಜ್ವರ ಬಂದಿರಬಹುದೇ? ಏನೋ, ಯಾರಿಗೆ ಗೊತ್ತು? ಮೂರು ದಿನದ ಹಿಂದೆ ಆದ ಗಾಯ ಬೇಗ ಮಾಯವಾಗಲಿ ಎಂದು ಆತ ತನ್ನ ಕಣ್ಣುಗಳನ್ನು ಕುರುಡು ಮಾಡಿಕೊಂಡಿದ್ದ. ಅದು ಅವಳ ಮೇಲಿನ ಕುರುಡು. “ನಾಲ್ಕು ದಿವಸ ಅವಳ ಕಣ್ಣಿಗೆ ಬೀಳೋಕೆ ಹೋಗ ಬೇಡ. ಒಂದು ವೇಳೆ ಎದುರಿಗೆ ಸಿಕ್ಕರೂ ನೀನು ನೋಡೋಕೆ ಹೋಗ್ ಬೇಡ. ಎಲ್ಲಾ ಸರಿಹೋಗುತ್ತೆ.” ಎಂದು ಆತನ ಜೀವದ ಗೆಳೆಯರು ಕೊಟ್ಟ ಉಪದೇಶವದು. ಗೆಳೆಯರು ಹೇಳಿದ್ದನ್ನು ಪಾಲಿಸುವ ಪ್ರಯತ್ನದಲ್ಲಿ ಅವನಿದ್ದ.

ಆಟದ ಬಯಲಿನಲ್ಲಿದ್ದ ಗಮನ್ ಬಳಿಯೇ ಬರುತ್ತಿರುವ ಹಾಗೆನಿಸಿತು ಇವನಿಗೆ, ಬಂದೇ ಬಿಟ್ಟಳು. ಹತ್ತಿರ ಬಂದವಳೆ “ಗಮನ್, ನಿಮ್ಮನ್ನೆ ಹುಡುಕಿಕೊಂಡು ಬಂದೆ. ಎಲ್ರೀ, ಕಯ್ಗೇ ಸಿಗಲ್ವಲ್ಲ ನೀವು. ಈಗ, ನಿಮ್ಮನ್ನ ಎತ್ ಹಾಕ್ಕೊಂಡು ಹೋಗೋಣ ಅಂತಾನೇ ಬಂದೆ.” ಎಂದು ಮೊದಲು ಮಾತನಾಡಿಸುತ್ತಿದ್ದ ರೀತಿಯಲ್ಲೇ ಮಾತನಾಡಿದಳು.

‘ಹಳೆಯ ಸಲುಗೆಯಿಂದ ಮತ್ತೆ ಮಾತನಾಡಿಸುತ್ತಿರುವ ಇವಳು ಅವಳೇನಾ?’ ಎಂದು ಗಮನ್ ಗೆ ಅನಿಸಿತು.

“ನನ್ನ ಜೊತೆ ಬನ್ನಿ, ಸ್ವಲ್ಪ ಕೆಲ್ಸ ಇದೆ.” ಎಂದವಳೆ ಹೊರಡನುವಾದಳು. ಯಾಕೆ? ಏನು? ಎತ್ತ? ಯಾವುದನ್ನೂ ಕೇಳದೆ ಅವಳ ಹಿಂದೆ ಹೊರಟನು. ಹ್ಹ ಹ್ಹ ಹ್ಹ… ಗೆಳೆಯರು ಉಪದೇಶ ಅದೆಲ್ಲೋ ಗಾಳಿಗೆ ಹಾರಿಹೋಗುತ್ತಿತ್ತು.

ಅದೇನು ಮಾಯೆಯೋ ಅರಿಯಲಾಗದು
ಹೊಸ ಹಾದಿಯ ಹಿಡಿದವನ ಮರುಸೆಳೆದು
ಒಲವ ಸುಳಿಯ ಸುತ್ತ ಸುತ್ತಿಸುತಿಹುದು
ಮರೆತೆಲ್ಲವ ಮುಂದೆ ಹರಿಯಲೂ ಬಿಡದು

“ಗಮನ್, ಊಟ ಮಾಡೋಕೆ ಒಂದು ಒಳ್ಳೆ ಸಸ್ಯಹಾರಿ ಹೊಟೇಲ್ ಹೆಸರು ಹೇಳಿ” ಅಂದಳು. ಆತ ಒಳಗೇ ನಕ್ಕೆ. ಮಿಲ್ಟ್ರಿ ಹೊಟೇಲಿಗೆ ಬಂದು ಮೊಸರನ್ನ ಕೇಳಿದ ಹಾಗಯ್ತು, ದೇವರ ತಲೆ ಮೇಲೆ ಹೂವು ತಪ್ಪಿದರು ಇವನ ಹೊಟ್ಟೆಗೆ ಕೋಳಿ ತುಂಡು ತಪ್ಪಲ್ಲ, ಅಂತಹದರಲ್ಲಿ ಇವನಿಗ್ಯಾವ ಸಸ್ಯಹಾರಿ ಊಟದ ಮನೆ ಗೊತ್ತಿರುತ್ತೆ ಹೇಳಿ? ಅಶ್ಟರಲ್ಲೇ ಯೋಚಿಸುತ್ತಾ ನಿಂತ, ’ಅಯ್ಯೊ! ಈ ಕಾರಣಕ್ಕೆ ಏನಾದರು ಅವಳು ನನ್ನನ್ನು ಬೇಡ ಅಂದಳೇ? ನಮ್ಮದೋ ಬಾಡೂಟದ ಮನೆತನ ಅವರದೋ ಹಸಿರೂಟದ್ದು. ಇದರ ದೆಸೆಯಿಂದ ಏನಾದರು ಬೇಡ ಎಂದಳೆ?’ ಎಂದು ಅವನೊಳಗೇ ಬಗೆಹರಿಕೆಗೆ ತಡಕಾಡುತ್ತಿದ್ದ. ಆಗ ಅವನದೇ ಒಳಗು ಇದನ್ನು ಬಗೆಹರಿಸಿತು. ’ಇಲ್ಲ, ಸಾದ್ಯವಿಲ್ಲ ಅವಳಿಗಾಗಿ ನಾನು ಕೋಳಿ ತಿನ್ನೋದು ಬೇಕಾದರು ಬಿಡುವೆನು ಅನ್ನೋದು ಅವಳಿಗೆ ಗೊತ್ತು. ಅದಕ್ಕಿಂತ ಮಿಗಿಲಾಗಿ ಒಲವನ್ನು ಬೇಡವೆನ್ನಲು ಇವೆಲ್ಲ ಕಾರಣಗಳೇ ಅಲ್ಲ.’

ಕೊನೆಗೂ ಯಾವ ಹೊಟೇಲ್‍ಗೆ ಹೋಗುವುದು ಅವಳೇ ತೀರ‍್ಮಾನಿಸಿದಳು. ಹೊಟೇಲ್‍ಗೆ ಹೋಗವುದು ಅವಳ ಗಾಡಿಯಲ್ಲೇ ಎಂಬುದು ಕೂಡ ನಿರ‍್ದಾರವಾಯಿತು. ಅವಳ ಗಾಡಿ ಹಿಂದೆ ಸುಮ್ಮನೆ ಕುಳಿತಿದ್ದ. ಹೊರಗಿನ ಗಾಳಿ ತಂಪಾಗಿಯೇ ಇತ್ತು. ಇನ್ನೇನು ಕೆಲವೇ ಹೊತ್ತಿನಲ್ಲಿ ಮಳೆ ಬರುವ ಮುನ್ಸೂಚನೆಗಳು ಕಾಣುತಿತ್ತು. ಗಾಳಿಗೆ ಹಾರುವ ಕೂದಲುಗಳು ಅವನ ಮೋರೆಗೆ ಕಚಗುಳಿಯನ್ನಿಡುತ್ತಿತ್ತು, ಅವಳ ಬೆನ್ನನ್ನು ತಾಕಿಯು ತಾಕದಂತಿತ್ತು ಇವನ ಎದೆ, ಅವಳ ಹೆಗಲನ್ನು ಒರಗಿಕೊಳ್ಳಲು ನೋಡುತ್ತಿತ್ತು ಇವನ ಗಲ್ಲ. ಇವೆಲ್ಲದರ ಜೊತೆ ಜ್ವರದ ಚಳಿ ಚಳಿ, ಆದರೂ ಬೆಚ್ಚನೆಯ ಅನುಬವ.

ತುಂಬಿದ ಹರೆಯ ಒಮ್ಮೆ ತಬ್ಬಿ ಬಿಡು ಅವಳನ್ನ ಎಂದು ಒಳಗೊಳಗೇ ಒತ್ತಿ ಒತ್ತಿ ಹೇಳುತ್ತಿತ್ತು. ಆದರೂ ಗೆರೆ ದಾಟಲಾದೀತೆ? ಬಯಕೆಗಳ ಅದುಮಿಟ್ಟು ಕುಳಿತಿದ್ದ ಹಿಂದೆ. ಜೊತೆಗೆ ಒಳಗೊಂದು ಬಿರುಗಾಳಿ ಎದ್ದಿತ್ತು. ’ಇವಳು ನನ್ನನ್ನೇಕೆ ಇಂದು ಕರೆದುಕೊಂಡು ಹೊರಟಿಹಳು? ’ಮೊನ್ನೆ ಹೇಳಿದ್ದಲ್ಲ ಸುಳ್ಳು, ನಿನ್ನ ಒಲವನ್ನು ನಾನು ಒಪ್ಪಿಕೊಂಡಿದ್ದೇನೆ, ಒಟ್ಟಿಗೆ ಮುಂದೆ ಬಾಳೋಣ’ ಎಂದೇನಾದರು ಹೇಳುವಳೆ?’ ಯಾವುದು ತಿಳಿಯಾಗಿ ತಿಳಿಯುತ್ತಿರಲಿಲ್ಲ. ಅವಳ ಈ ನಡೆ ಇವನ ಒಳಗನ್ನು ಗೊಂದಲದ ಗೂಡಾಗಿಸಿತ್ತು.

ಅಂತು ಇಂತು ಹೊಟೇಲ್ ಬಂತು. ಒಳ್ಳೆಯ ಜಾಗವನ್ನು ನೋಡಿ ಕುಳಿತರು. ಹೊಟೇಲ್ ಮಾಣಿ ತಿನಿಸು ಪಟ್ಟಿಯನ್ನು ತಂದು ಕಯ್ಗಿಟ್ಟ. ಒಮ್ಮೆ ತೆರೆದು ನೋಡಿದೆ ಎಲ್ಲಾ ಇಂಗ್ಲೀಶುಮಯವಾಗಿತ್ತು,

“ಕನ್ನಡ ಮೆನು ಕಾರ‍್ಡ್ ಕೊಡಿ.” ಗಮನ್ ಕೇಳಿದ.

ಸ್ವಲ್ಪ ತಬ್ಬಿಬ್ಬಾದ ಆತ, “ಈಗ ಕನ್ನಡ ಮೆನು ಇಲ್ಲ ಸರ್, ನೀವು ಮುಂದಿನ ಬಾರಿ ಬಂದಾಗ ಅದು ಇರುವಂತೆ ಕಂಡಿತಾ ಏ‍ರ‍್ಪಾಡು ಮಾಡ್ತೀನಿ.” ಎಂದು ಸಂಬಾಳಿಸಿಕೊಂಡು ಹೇಳಿದ.

ಈ ತಪ್ಪಿಗಾಗಿ ಆತನಿಗೆ ದಂಡವೊಂದು ಕಾದಿತ್ತು. ಕಯ್ಗಿತ್ತ ಊಟದ ಪಟ್ಟಿಯಲ್ಲಿ ಏನೇನು ಇದೆ ಎಂದು ಆತ ಓದಿ ಅವರಿಗೆ ಹೇಳಬೇಕಿತ್ತು. ಆತ ಹೇಳಿದ ಪಟ್ಟಿಯಲ್ಲಿ ಬೇಕಾದ್ದನ್ನು ಆರಿಸಿದರು. ಅದನ್ನು ತರಲು ಆತ ಹಿಂತಿರುಗಿದ.

“ಗಮನ್, ನಿಮ್ಮ ಈ ನಡೆ ನನಗೆ ತುಂಬಾ ಇಶ್ಟ. ಮೊನ್ನೆ ಬೆಂಗಳೂರಿಗೆ ಹೋಗುವಾಗ ಬಸ್ಸಿನಲ್ಲಿ ಹಿಂದಿ ಹಾಡು ಹಾಕಿದ್ರು, ನಾನೆದ್ದು ಹೋಗಿ ಕನ್ನಡ ಹಾಕೋಕೆ ಕೇಳ್ದೆ. ಆಮೇಲೆ ಕನ್ನಡ ಹಾಡು ಹಾಕಿದ್ರು. ನೋಡಿ, ನಿಮ್ ಗಾಳಿ ನನಗೂ ಬಿಸಿ ಬಿಟ್ಟಿದೆ.” ಎಂದು ಮೆಚ್ಚುಗೆಯ ನುಡಿಗಳ ಜೊತೆ ತನ್ನ ಕೆಲಸವನ್ನು ಹೇಳಿಕೊಂಡಳು.

“ಅಯ್ಯೋ… ನಮ್ಮೂರಲ್ಲಿ ನಮ್ಮ ನುಡಿಯಲ್ಲಿ ಎಲ್ಲಾ ಸೇವೆ ಸಿಗಬೇಕು, ಆದ್ರೆ ಅದು ಸಿಗ್ತಿಲ್ಲ. ಅದೇ ದೊಡ್ಡ ಕೊರಗು. ಹಾಗಾಗಿ ಅದನ್ನು ಕೇಳಿ ಪಡೆಯಬೇಕು. ಇಲ್ಲಾ ಅಂದ್ರೆ ನಮ್ಮ ನುಡಿಯ ಜೊತೆ ನಾವು ಎಲ್ಲಾದ್ರು ಕಳೆದು ಹೋಗಿ ಬಿಡ್ತೀವಿ. ಈಗ ನಾವು ‘ಡಯ್ನೋಸಿರಸ್ ಎಂಬ ಪ್ರಾಣಿ ಸುಮಾರು ವರುಶಗಳ ಹಿಂದೆ ಬದುಕಿತ್ತು ಎಂದು ಓದುತ್ತೀವಲ್ಲಾ, ಹಾಗಯೇ ‘ಕನ್ನಡ ಅನ್ನೋ ನುಡಿ ಮತ್ತು ಕನ್ನಡಿಗರು ಅನ್ನೋ ಜನಾಂಗ ಕೆಲವು ವರುಶಗಳ ಹಿಂದೆ ಉಳಿದಿತ್ತು ಆದರೆ ಈಗಿಲ್ಲ.’ ಎಂದು ನಮ್ಮ ಮುಂದಿನ ಜನಾಂಗ ವಿಕಿಪೀಡಿಯಾದಲ್ಲೋ, ಹಳಮೆಯ ಹೊತ್ತಗೆಯಲ್ಲೋ ಒದುವ ಪರಿಸ್ತಿತಿ ಬರುತ್ತೆ.” ಎಂದ.

“ಆದ್ರೂ, ಹೆಚ್ಚಿನವರು ಮಾಡದೇ ಇರುವ ಕೆಲಸ ಇದು.” ಎಂದು ಸಣ್ಣ ಬೇಸರದ ಮಾತನಾಡಿದಳು.

“ಹೆಚ್ಚಿನವರು ಮಾಡ್ತಾ ಇಲ್ಲ ಎಂದು ನಾವು ಹಾಗೆ ಕಯ್ ಕಟ್ಟಿ ಕುಳಿದರೆ ಆಗುತ್ತ್ಯೇ? ಯಾರಾದರು ಒಬ್ಬರು ಬೆಕ್ಕಿನ ಕುತ್ತಿಗೆಗೆ ಗಂಟೆ ಕಟ್ಟಲೇ ಬೇಕು. ನಾವ್ ಈಗ ನಮ್ಮ ನುಡಿಯ ಬಳಸಿದರೆ ಅದು ಮುಂದಿನ ತಲೆಮಾರಿಗೆ ಉಳಿಯುತ್ತೆ ಇಲ್ಲಾ ಅಂದ್ರೆ ಪಳೆಯುಳಿಕೆ ಆಗುತ್ತೆ.” ಇವನು ನುಡಿದ.

ಊಟದ ನಡುವೆ ರುಚಿಸುವಂತಹ ಉಳಿದ ಯಾವ ಮಾತುಗಳು ಇರಲಿಲ್ಲ. ಊಟ ರುಚಿ ಇತ್ತೋ ಇಲ್ಲವೋ ಗೊತ್ತಿಲ್ಲ ಅಂತು ಊಟ ಆಗುತ್ತಾ ಇತ್ತು. ಗಮನ್ ತಲೆಯೊಳಗೆ ಲೆಕ್ಕಚಾರೆಗಳೇ ಹೆಚ್ಚಾಗಿದ್ದವು. ‘ಒಲವು ಬೇಡ ಎಂದ ಮೇಲು ತನ್ನ ಜೊತೆ ಅದೇ ಹಳೆಯ ಸಲುಗೆಯಿಂದ ಇದ್ದಾಳಲ್ಲ? ಏನಿದರ ಒಳಗುಟ್ಟು ? ನಾನು ಇನ್ನು ಕೆಲವು ದಿನ ಕಾಡು ನೋಡಲೇ ? ಇವಳಿಂದ ದೂರವಾಗುವ ಪ್ರಯತ್ನ ನಾನಾಗಿಯೇ ಏಕೆ ಮಾಡಲಿ?’ … ಹೀಗೆ ಅವನ ಲೆಕ್ಕಾಚಾರಗಳಿಗೆ ಕೊನೆಯೇ ಇರಲಿಲ್ಲ.

ಒಲವಿನ ಕೋರಿಕೆಯ ತಳ್ಳಿ ಹಾಕಾಯ್ತು
ಒಡನಾಟದ ಗುಡಿಯ ಬಾಗಿಲನು ತೆರೆದಿತ್ತು
ಮತ್ತೊಮ್ಮೆ ಅಡಿಯಿಟ್ಟೆ ನನ್ನ ನಾ ಮರೆತು
ಎದೆಯ ಚಪ್ಪಲಿಯದು ಹೊಸ್ತಿಲಲೆ ನಗುತಿತ್ತು।

ಊಟ ಮುಗಿಯಿತು. ಹೊರಗೆ ಬಂದು ನೋಡಿದರೆ ಜೋರಾದ ಮಳೆ ಬಂದು ಉಳಿದ ಹನಿಗಳು ಸೋನೆ ಸುರಿಸುತ್ತಿದ್ದವು.

“ಗಾಡಿ ನಾನು ಓಡಿಸ್ತಿನಿ” ಎಂದು ಹೇಳಿದ.

“ಏನೂ ಬೇಡ. ನಾನೇ ಓಡಿಸ್ತಿನಿ, ಮೊದ್ಲು ಕೂತ ಹಾಗೆ ಸುಮ್ನೆ ಹಿಂದೆ ಕುತ್ಗಳಿ.” ಗರಿಯ ಕಟ್ಟಪ್ಪಣೆ.

ಮರುಮಾತನಾಡದೆ ಸುಮ್ಮನೆ ಹಿಂದೆ ಕುಳಿತ. ಮಬ್ಬು ಮಬ್ಬು ದಾರಿ, ಗಾಡಿಯ ದೀಪಕ್ಕೆ ಸರಿಯಾಗಿ ದಾರಿ ಕಾಣುತ್ತಿರಲಿಲ್ಲ, ಮಳೆ ಬೇರೆ ತೊಟ್ಟಿಕ್ಕಿತ್ತಿತ್ತು. ಕೂಡಲೇ ದಾರಿಯ ಉಬ್ಬು ಎದುರುಗೊಂಡಿತು, ಗಟ್ಟಿಯಾಗಿ ಗಾಡಿಯ ಬ್ರೇಕ್ ಹಿಡಿದಳು, ಮೊದಲೇ ಕುದಿಯುತ್ತಿದ್ದ ಇವನ ಎದೆ ಗರಿಯ ಬೆನ್ನಿಗೆ ಜೋರಾಗಿ ಗುದ್ದಿತು.

“ರೀ, ಪಾಪದ ಹುಡುಗನ ಹಿಂದೆ ಕೂರುಸ್ ಕೊಂಡು, ಬೇಕಂತಲೆ ಬ್ರೇಕ್ ಹಿಡಿದು ಬೆನ್ನಿಗೆ ನನ್ನೆದೆಯನ್ನ ತಾಗಿಸಿ ಕೊಳ್ತೀರಾ? ಹಿಂದೆ ಕೂರಿಸ್ಕೊಂಡ್ ಹೀಗೆಲ್ಲಾ ಮಾಡೋದ…?”

ಅವಳಿಗೆ ತಡೆಯಲಾಗದ ನಗು…. “ಗಮನ್, ನೀವು ತುಂಬಾ ಚೆನ್ನಾಗಿ ಮಾತಾಡ್ತೀರ. ನಿಮ್ಮ ಮಾತಿಗೆ ಯಾರಾದ್ರು ಬಿದ್ದ ಹೋಗ್ ಬಿಡ್ತಾರೆ.”

“ಹಾಗಾದ್ರೆ ನೀವು ಬೀಳಲಿಲ್ವಲ್ಲ!”

“ಬೀಳಲ್ಲ”

“ಯಾಕೆ ಬೀಳಲ್ಲ? ಯಾಕೆ ನನ್ನ ಒಲವು ಬೇಡ?”

“ಅದನ್ನೆಲ್ಲಾ ಹೇಳೋಕೆ ಆಗಲ್ಲ, ನೀವು ಅಂದ್ರೆ ಇಶ್ಟ ಆಗುತ್ತೆ ಆದ್ರೆ ಈ ಒಲವು-ಗಿಲವು ಇದೆ ಅಂತ ಹೇಳೋಕೆ ಆಗಲ್ಲ. ನಿಮ್ ಬಗ್ಗೆ ನಾನು ಯೋಚನೆ ಮಾಡಿಯೇ ನಿರ್‍ದಾರ ತೆಗೆದುಕೊಂಡಿದ್ದೇನೆ. ನಾನು ಒಂದ್ಸಲ ಇಲ್ಲ ಅಂದಮೇಲೆ ಇಲ್ಲ.”

“ನನ್ನ ಮೇಲೆ ಒಲವಿಲ್ಲ ಎಂದ ಮೇಲೆ ನನ್ನ ಜೊತೆ ತಿರುಗೋದೇಕೆ? ನಾನು ಯಾಕೆ ಬೇಡ ಅಂತ ಒಂದು ಕಾರಣನಾದ್ರು ಕೊಡಿ. ನನ್ನನ್ನು ಕಂಡ್ರೆ ನಿಮಗೆ ಯಾಕೆ ಇಶ್ಟವಿಲ್ಲ?”

“ನಿಮ್ಮನ್ನ ಕಂಡ್ರೆ ಇಶ್ಟ ಇಲ್ಲ ಅಂತ ಯಾರು ಹೇಳಿದ್ದು? ಇಶ್ಟಾನೇ ಬೇರೆ, ಒಲವೇ ಬೇರೆ. ನಿಮ್ ಜೊತೆ ನನಗೆ ಮನಸ್ಸು ಬಿಚ್ಚಿ ಮಾತಡ್ಕೊಂಡು ಇರಬೇಕು ಅನ್ಸುತ್ತೆ, ಹಾಗೆಯೇ ಇರ್‍ತೀನಿ. ನಾನು ಮೊದ್ಲು ಹೇಗೆ ಇದ್ದೆನೋ ಈಗಲೂ ಹಾಗೇ ಇದ್ದೀನಿ. ನಾನು ನಿಮ್ಮೊಡನೆ ಮಾತನಾಡುವುದನ್ನು, ನಿಮ್ಮ ಕೆಲಸಗಳನ್ನು ಇಶ್ಟ ಪಡುವುದನ್ನು, ಒಟ್ಟಿನಲ್ಲಿ ನಿಮ್ಮ ಜೊತೆಗಿನ ಒಡನಾಟಗಳನ್ನೆಲ್ಲಾ ‘ಒಲವು’ ಎಂದು ಯಾಕೆ ಅಂದುಕೊಳ್ತೀರಾ? ಒಬ್ಬರನ್ನ ಪ್ರೀತಿ ಮಾಡದೇ ಅವರ ನಡೆ-ನುಡಿಗಳನ್ನ ಮೆಚ್ಚಬಾರದೇ? ಒಬ್ಬರ ನಡತೆಯನ್ನ, ಮಾತು-ಕತೆಗಳನ್ನು ಮೆಚ್ಚಬೇಕು ಅಂದರೆ ಪ್ರೀತಿ ಮಾಡಲೇ ಬೇಕಾ?” ಎಂದು ಗರಿಗೆ ಸರಿ ಎನಿಸಿದ ಮಾತುಗಳನ್ನು ಹೇಳಿದಳು.

“ಇಲ್ಲಾ ನಾನು ಹಾಗೆ ಹೇಳಿಲ್ಲ. ನಾನು ನಿಮ್ಮನ್ನ ಪ್ರೀತಿಸ್ತೀನಿ, ಮುಂದೆ ನಿಮ್ಮೊಟ್ಟಿಗೆ ಬಾಳಬೇಕು ಎಂದು ಬಯಸಿದ್ದೀನಿ. ಹೀಗಿರುವಾಗ ನಿಮ್ಮ ಹೊಗಳಿಕೆಗಳು, ಮೆಚ್ಚುಗೆಗಳು ಎಲ್ಲವೂ ನೀವು ನನ್ನನ್ನು ಪ್ರೀತಿಸ್ತೀರಾ ಎನ್ನುವ ಸೂಚನೆ ಕೊಡುತ್ತವೆ. ಅದೆಲ್ಲಾ ಹೋಗಲಿ, ನನ್ನ ನಡತೆಗಳು ನಿಮಗೆ ಮೆಚ್ಚುಗೆ ಎಂದಮೇಲೆ ನನ್ನನ್ನು ಪ್ರೀತಿಸದೇ ಇರಲು ಕಾರಣಗಳಾದರು ಏನು? ಅದನ್ನಾದರು ಹೇಳಿ ಆಗ ನನಗೆ ಸಮಾದಾನವಾಗುತ್ತೆ.” ಕಾರಣ ತಿಳಿಯಲು ಗಮನ್ ಪ್ರಯತ್ನ.

“ಮೊದಲೇ ಹೇಳಿದೆನಲ್ಲಾ ದೊಡ್ಡ ಕಾರಣಗಳು ಏನೂ ಇಲ್ಲಾ ಅಂತ, ನಿಮ್ಮನ್ನು ಪ್ರೀತಿಸಿ ಮದುವೆ ಆಗುವ ಮನಸ್ಸು ನನಗಿಲ್ಲ, ಹಾಗೆಂದ ಮಾತ್ರಕ್ಕೆ ನಿಮ್ಮ ಗೆಳೆತನಕ್ಕೆ ಎಳ್ಳು ನೀರು ಬೀಡಬೇಕೇಂದು ಇಲ್ಲವಲ್ಲಾ. ನಿಮ್ಮ ಜೊತೆಗಿನ ಗೆಳೆತನ ನನಗೆ ಇಶ್ಟ ಆಗುತ್ತೆ ಅದಕ್ಕೆ ಹೀಗೆ ಇರ್‍ತಿನಿ. ನೀವು ಅದನ್ನು ಪ್ರೀತಿ ಅಂದುಕೊಂಡರೆ ನಿಮ್ಮ ತಪ್ಪಾಗುತ್ತೆ. ಮುಂದೇ ಏನು ಕೇಳಬೇಡಿ ಸುಮ್ಮನೆ ಕೂತ್ಕೊಳ್ಳಿ. ಈ ಕತ್ತಲೆಗೆ ದಾರಿ ಬೇರೆ ಸರಿಯಾಗಿ ಕಾಣ್ತಾ ಇಲ್ಲ…”

“ಹವ್ದು ನನಗು ಯಾವ ದಾರಿ ಎಂದು ಸರಿಯಾಗಿ ಕಾಣಿತ್ತಿಲ್ಲ” – ಗಮನ್ ತನ್ನಲ್ಲೇ ಅಂದುಕೊಂಡನು

ಕೇಳಲು ಸಾಕಶ್ಟು ಇತ್ತು, ಆದರೆ ಇವನ ಬಾಯಿ ಮುಚ್ಚಿಸಿದಳು. ಗರಿಯ ಮಾತು ಸರಿಯಾಗಿ ತಿಳಿಯುತ್ತಾ ಇರಲಿಲ್ಲ ಗಮನ್ ಗೆ. ಇವನ ಒಲವು ಬೇಡ, ಆದರೆ ಇವನೆಂದರೆ ಇಶ್ಟ! ಅದರಲ್ಲೂ, ಒಲವು ಬೇಡವಾದ ಮೇಲು ಯಾಕೆ ಈ ಒಡನಾಟ? ಅವಳ ಕಣ್ಣಿಗೆ ಇವನು ತೋರುವ ಪ್ರೀತಿ ಗೆಳೆತನವಾಗಿ ಕಾಣುತ್ತಿರುವಾಗ, ಇವನ ಕಣ್ಣಿಗೆ ಅವಳು ತೋರುವ ಗೆಳೆತನ ಪ್ರೀತಿಯಾಗಿ ಕಾಣುತ್ತಿದೆ. ಈ ಮಾತು ಅವಳಿಗೇಕೆ ತಿಳಿಯುತ್ತಿಲ್ಲ ಎಂಬುದು ಇವನಿಗೆ ಅರಿಯದಾಗಿತ್ತು. ಅಯ್ಯೋ… ಗೆಳೆಯರು ಹೇಳಿದ ಬುದ್ದಿಮಾತುಗಳು ಗಾಳಿಗೆ ತೋರಿಹೋದವು, ಇವಳಿಂದ ದೂರವಿರಬೇಕು ಎಂದುಕೊಂಡಿದ್ದ ತೀರ್‍ಮಾನ ಮಳೆಯಲ್ಲಿ ತೊಳೆದು ಹೋಗಿತ್ತು. ಇವಳೊಡನೆ ಓಡಾಡಿಕೊಂಡು, ಮಾತನಾಡಿಕೊಂಡು ಇದ್ದರೆ ಇವಳನ್ನು ಮರೆಯಲು ನಿಜವಾಗಿಯೂ ಆಗುವುದೇ? ಸಕ್ಕರೆ ಬೇನೆ ಬಂದವನಿಗೆ ಸಕ್ಕರೆಯನ್ನೇ ಊಟವಾಗಿ ಕೊಟ್ಟಂತೆ. ಈ ಎಲ್ಲಾ ಗೋಳಿನಲ್ಲಿ ಇವನ ಜ್ವರ ಎಲ್ಲಿ ಹೋಯಿತೋ ಗೊತ್ತಿಲ್ಲ.

ಹೊರಗಡೆ ಮಿಂಚು ಮಿಣುಕುತ್ತಿತ್ತು, ಗುಡುಗು ಬಡಿಯುತ್ತಿತ್ತು, ಹನಿಗಳು ಹನಿಯುತ್ತು. ಒಳಗೂ ಹಾಗೆ, ಒಲವು ಮಿಣುಕುತ್ತಿತ್ತು, ಬಯಕೆಗಳು ಬಡಿಯುತ್ತಿತ್ತು, ಹನಿಗಳೂ ಹನಿಯುತ್ತಿತ್ತು.

ನಾ ಹಚ್ಚಿದ ಒಲವಿನ ಹಣತೆ
ತನ್ನ ಬತ್ತಿಯ ತಾನೇ ಸುಡುತಲಿದೆ
ನಿನ್ನೊಪ್ಪಿಗೆಯ ಎಣ್ಣೆಯಿಲ್ಲದೇ…
ಬೇಡವೆನಿಸಿದರೆ ನಿನಗೆ
ಒಮ್ಮೆಲೆ ಕೆಡಿಸಿಬಿಡು ಗಾಳಿಯೂದಿ|
ಕುಗುರುತ್ತಾ ಕೊನೆಯಾಗದಿರಲಿ
ನನ್ನ ಮೊದಲೊಲವ ಬೆಳಕು|

(ಚಿತ್ರ: http://anuheegesummane.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: