ಕನ್ನಡ ಮಾದ್ಯಮದಲ್ಲಿ ಓದುತ್ತಿರುವವರೇ ಹೆಚ್ಚು

– ಪ್ರಿಯಾಂಕ್ ಕತ್ತಲಗಿರಿ.

masters-degree

ತಾಯ್ನುಡಿಯಲ್ಲಿ ಮೊದಲ ಹಂತದ ಕಲಿಕೆ ನಡೆಯಬೇಕು ಎಂಬುದನ್ನು ಕಡ್ಡಾಯ ಮಾಡುವಂತಿಲ್ಲ ಎಂದು ಸುಪ್ರೀಮ್ ಕೋರ‍್ಟ್ ಇತ್ತೀಚೆಗೆ ತೀರ‍್ಪು ನೀಡಿತ್ತು. ಈ ತೀರ‍್ಪನ್ನು ಹಲವರು ಕೊಂಡಾಡಿದರು. ಕೊಂಡಾಡುವ ಹುರುಪಿನಲ್ಲಿ “ಕನ್ನಡ ಮಾದ್ಯಮದಲ್ಲಿ ಯಾರೂ ಓದುತ್ತಲೇ ಇಲ್ಲ” ಎಂಬ ಮಾತುಗಳನ್ನೂ ಹಲವರು ಆಡಿದರು. ನಮ್ಮ ಸುತ್ತಮುತ್ತಲ ಜನರನ್ನು ಮಾತನಾಡಿಸಿ ನೋಡಿದರೂ ಕೇಳಿಬರುವುದು “ಇವಾಗ ಎಲ್ಲಾ ಇಂಗ್ಲೀಶ್ ಮೀಡಿಯಮ್ಮು, ಯಾರೂ ಕನ್ನಡ ಮೀಡಿಯಮ್ಮಿಗೆ ಹೋಗ್ತಾನೇ ಇಲ್ಲ” ಎಂಬಂತಹ ಅನಿಸಿಕೆಗಳೇ.

ಇವತ್ತಿಗೂ ಕನ್ನಡ ಮಾದ್ಯಮದಲ್ಲಿ ಓದುತ್ತಿರುವವರೇ ಹೆಚ್ಚು:
ಹವ್ದು. ಇಶ್ಟೆಲ್ಲಾ ತಪ್ಪುಪ್ರಚಾರಗಳ ನಡುವೆ ದಿಟವೇನು ಎಂದು ಹುಡುಕಿದರೆ ಕಾಣುವುದು, “ಕರ‍್ನಾಟಕದಲ್ಲಿ ಹೆಚ್ಚು ಮಕ್ಕಳು ಓದುತ್ತಿರುವುದು ಕನ್ನಡ ಮಾದ್ಯಮದಲ್ಲಿಯೇ” ಎಂಬ ಸತ್ಯ. 2014ರಲ್ಲಿ ನಡೆಸಲಾದ ಹತ್ತನೇ ತರಗತಿಯ ಪರೀಕ್ಶೆಯನ್ನು ಕನ್ನಡ ಮಾದ್ಯಮದಲ್ಲಿ ಎದುರಿಸಿದವರು 5.48ಲಕ್ಶಗಳಶ್ಟಿದ್ದರೆ, ಇಂಗ್ಲೀಶ್ ಮಾದ್ಯಮದಲ್ಲಿ ಎದುರಿಸಿದವರು 2.25ಲಕ್ಶಗಳಶ್ಟಿದ್ದಾರೆ. ಸಿ.ಬಿ.ಎಸ್‍.ಇ/ಅಯ್.ಸಿ.ಎಸ್.ಇ ಶಾಲೆಗಳಲ್ಲಿ ಓದಿ ಹತ್ತನೇ ತರಗತಿಯ ಪರೀಕ್ಶೆ ಎದುರಿಸುವವರು, ಪ್ರತೀ ವರುಶ ಕರ‍್ನಾಟಕದಲ್ಲಿ ಸುಮಾರು 30 ಸಾವಿರದಶ್ಟಿರುತ್ತಾರೆ. ಎಲ್ಲಾ ಬಗೆಯ ಇಂಗ್ಲೀಶ್ ಮಾದ್ಯಮ ಶಾಲೆಗಳಲ್ಲಿ ಓದುತ್ತಿರುವವರನ್ನು ಸೇರಿಸಿಕೊಂಡರೂ, ಕನ್ನಡ ಮಾದ್ಯಮದಲ್ಲಿ ಓದುತ್ತಿರುವವರ ಎಣಿಕೆಯೇ ಹೆಚ್ಚು.

ಈ ಮಕ್ಕಳ ಒಳಿತಿಗೆ ಏನು ಮಾಡಬಹುದು?
ಹೆಚ್ಚಿನ ಉನ್ನತ ಕಲಿಕೆಯೆಲ್ಲವೂ ಇಂಗ್ಲೀಶ್ ಮಾದ್ಯಮದಲ್ಲಿಯೇ ಇರುವುದರಿಂದ, ಹತ್ತನೇ ತರಗತಿಯವರೆಗೆ ಕನ್ನಡ ಮಾದ್ಯಮದಲ್ಲಿ ಓದಿದ್ದ ಮಕ್ಕಳಿಗೆ ಒಮ್ಮೆಗೇ ಹೊಂದಿಕೊಳ್ಳಲು ಕಶ್ಟವಾಗುತ್ತದೆ. ನಾನೂ ಅಂತದೇ ಕಶ್ಟವನ್ನು ಎದುರಿಸಿ ಬಂದವನಾದ್ದರಿಂದ, ಒಮ್ಮೆಗೇ ಇಂಗ್ಲೀಶ್ ಮಾದ್ಯಮಕ್ಕೆ ಜಿಗಿದಾಗ ಉಂಟಾಗುವ ಕಶ್ಟಗಳನ್ನು ಬಲ್ಲೆ. ಕೆಲವು ತಿಂಗಳುಗಳಲ್ಲಿ ಇಂಗ್ಲೀಶ್ ಮಾದ್ಯಮಕ್ಕೆ ಹೊಂದಿಕೊಂಡು ಓದು ಮುನ್ನಡೆಸುವುದು ಸಲೀಸಾಗುತ್ತಾದರೂ, ಈ ಬಗೆಯ ಕಶ್ಟಕ್ಕೆ ನಮ್ಮಲ್ಲಿ ವಯ್ಗ್ನಾನಿಕವಾಗಿ ತಯಾರಿಸಲಾದ ಮಾದ್ಯಮ ಸೇತುವೆ ಪಟ್ಯಕ್ರಮ ಇಲ್ಲದಿರುವುದು ಒಂದು ಕಾರಣ. ಮೊದಲ ಹಂತದ ಕಲಿಕೆಯನ್ನು ಕನ್ನಡ ಮಾದ್ಯಮದಲ್ಲಿ ನಡೆಯಿಸಿ, ಬಳಿಕ ಇಂಗ್ಲೀಶ್ ಮಾದ್ಯಮಕ್ಕೆ ದಾಟಬಯಸುವವರಿಗೆ, ಸೇತುವೆ ಪಟ್ಯಕ್ರಮದ ಅವಶ್ಯಕತೆಯಿದೆ. ಇಂತಹ ಸೇತುವೆ ಪಟ್ಯಕ್ರಮದಲ್ಲಿ ಒಂದು ವರುಶ ಓದಿ ಬಳಿಕ ಇಂಗ್ಲೀಶ್ ಮಾದ್ಯಮಕ್ಕೆ ದಾಟುವವರಿಗೆ ಇವತ್ತಿನ ದಿನ ಆಗುತ್ತಿರುವಶ್ಟು ತೊಡಕುಗಳಾಗುವುದಿಲ್ಲ. ಮಕ್ಕಳ ಮುಂದಿನ ಓದೂ ಸಲೀಸಾಗಿರುತ್ತದೆ.

ಇಂದಿಗೆ ಕರ‍್ನಾಟಕದಲ್ಲಿ ಉನ್ನತ ಕಲಿಕೆಗೆ ಸೇರುತ್ತಿರುವವರ ಎಣಿಕೆಯೂ ಕಡಿಮೆಯಿದೆ. ಕರ‍್ನಾಟಕದಲ್ಲಿರುವ 18-24 ವರುಶ ವಯಸ್ಸಿನ 100 ಜನರಲ್ಲಿ 25-26 ಜನರು ಮಾತ್ರ ಡಿಗ್ರಿ ಹಂತದ ಕಲಿಕೆ ನಡೆಸುತ್ತಿದ್ದಾರೆ/ನಡೆಸಿದ್ದಾರೆ. ಮುಂದುವರೆದ ನಾಡುಗಳಲ್ಲಿ ಈ ಎಣಿಕೆ ಹೆಚ್ಚಿದೆ. ಮುಂದುವರೆದ ನಾಡುಗಳಾದ ಜಪಾನ್, ಜರ‍್ಮನಿ, ತೆಂಕಣ ಕೊರಿಯಾ, ಇಲ್ಲೆಲ್ಲಾ 18-24 ವರುಶ ವಯಸ್ಸಿನ 100 ಜನರಲ್ಲಿ, 40-60 ಮಂದಿ ಡಿಗ್ರಿ ಹಂತದ ಕಲಿಕೆ ನಡೆಸುತ್ತಿರುತ್ತಾರೆ/ನಡೆಸಿರುತ್ತಾರೆ. ಹೆಚ್ಚುಪಾಲು ಉನ್ನತ ಕಲಿಕೆ ಇಂಗ್ಲೀಶಿನಲ್ಲೇ ಇರುವುದು ನಮ್ಮಲ್ಲಿನ ಈ ಪರಿಸ್ತಿತಿಗೆ ಒಂದು ಕಾರಣವಾಗಿದೆ. ಕರ‍್ನಾಟಕದಲ್ಲೂ ಹೆಚ್ಚುಮಂದಿ ಉನ್ನತ ಕಲಿಕೆ ನಡೆಸುವಂತಾಗಬೇಕಾದರೆ, ಉನ್ನತ ಕಲಿಕೆಯು ಕನ್ನಡದಲ್ಲೂ ಒದಗುವಂತಾಗಬೇಕು. ಇಂಗ್ಲೀಶಿನಲ್ಲಿ ಉನ್ನತ ಕಲಿಕೆ ಓದಬಯಸುವವರು ಇಂಗ್ಲೀಶಿನಲ್ಲಿ, ಕನ್ನಡದಲ್ಲಿ ಉನ್ನತ ಕಲಿಕೆ ಓದಬಯಸುವವರು ಕನ್ನಡದಲ್ಲಿ ಓದಲು ಆಗುವಂತಹ ಏರ‍್ಪಾಡು ಇರಬೇಕು. ಈ ಎರಡು ಕೆಲಸಗಳು ನಮ್ಮಲ್ಲಿ ಸರಿಯಾಗಿ ಮಾಡಿದರೆ, ಮಾದ್ಯಮದ ಬಗೆಗಿನ ದಿಕ್ಕು ತಪ್ಪಿಸುವ ವಾದಗಳ ನಡುವೆಯೂ ನಮ್ಮ ಏಳಿಗೆಯ ಹಾದಿ ಸರಿಯಾದುದಾಗಿರುತ್ತದೆ.

(ಮಾಹಿತಿ ಸೆಲೆ: mhrd.gov.in)

(ಚಿತ್ರ ಸೆಲೆ: blog.credit)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: