ಚುನಾವಣಾ ಸಮೀಕ್ಶೆಗೆ ಕಡಿವಾಣ ಅಗತ್ಯವಲ್ಲವೇ…?

ಮಹದೇವ ಪ್ರಕಾಶ.

exit-poll

ಚುನಾವಣೆಗಳು ಹತ್ತಿರ ಬಂದ ಹಾಗೆ, ರಾಶ್ಟ್ರಾದ್ಯಂತ ಒಂದು ಬಗೆಯ ಹವಾ ಸ್ರುಶ್ಟಿಯಾಗುತ್ತದೆ. ಹಳ್ಳಿಯಿಂದ ದಿಲ್ಲಿಯವರೆಗೆ ಪ್ರತಿಯೊಬ್ಬರ ಬಾಯಲ್ಲಿಯೂ ಚುನಾವಣೆಯದೇ ಮಾತು. ಅನೇಕರು ಚುನಾವಣೆಯ ಒಟ್ಟು ಪ್ರಕ್ರಿಯೆಯನ್ನು ಅರೆದು ಕುಡಿದವರಂತೆ ಮಾತನಾಡುತ್ತಾರೆ. ಇಂತಹ ರಾಜಕೀಯ ಪಕ್ಶ ಇಂತಿಶ್ಟೇ ಸ್ತಾನ ಗೆಲ್ಲುತ್ತದೆ ಎಂದು ಕರಾರುವಕ್ಕಾಗಿ ಹೇಳುವ ಪ್ರಯತ್ನ ಅನೇಕರಿಂದ ನಡೆಯುತ್ತದೆ. ಪ್ರತಿಯೊಂದು ಗ್ರಾಮ ಪಂಚಾಯ್ತಿಯ ಅರಳಿಕಟ್ಟೆಯ ಮೇಲೆ ಚುನಾವಣಾ ಪಲಿತಾಂಶ ಏನಾಗಬಹುದು ಊಹಿಸಿ ಹೇಳುವ ಸೇಪಾಲಜಿಸ್ಟ್ ಗಳು ಸಾಕಶ್ಟು ಸಂಕ್ಯೆಯಲ್ಲಿರುತ್ತಾರೆ. ಸಾರ‍್ವಜನಿಕ ಬದುಕಿನ ಪ್ರತಿಯೊಂದು ನೆಲೆಗಳಲ್ಲಿಯೂ ಇಂತಹ ಚುನಾವಣಾ ವೀಕ್ಶಕರು ಸಾಕಶ್ಟು ಸಂಕ್ಯೆಯಲ್ಲಿರುವುದನ್ನು ನಾವು ಕಾಣಬಹುದು.

ಇತ್ತೀಚಿನ ದಶಕಗಳಲ್ಲಿ ಚುನಾವಣಾ ಸಮೀಕ್ಶೆಗಳನ್ನು ಅತ್ಯಂತ ವಯ್ಜ್ನಾನಿಕವಾಗಿ ನಡೆಸಿ ಯಾವ ಪಕ್ಶ ಎಶ್ಟು ಸ್ತಾನ ಗೆಲ್ಲುತ್ತದೆ, ಯಾವ ಪಕ್ಶ ಎಶ್ಟು ಸ್ತಾನ ಕಳೆದುಕೊಳ್ಳಬಹುದು, ಅದಿಕಾರದ ಗದ್ದುಗೆ ಏರುವ ಪಕ್ಶ ಯಾವುದು…? ಅದಿಕಾರ ಕಳೆದುಕೊಳ್ಳುವ ಪಕ್ಶ ಯಾವುದು…? ಎನ್ನುವುದನ್ನು ಕರಾರುವಕ್ಕಾಗಿ ವಿಶ್ಲೇಶಿಸುವ ಸಾಕಶ್ಟು ಸಂಸ್ತೆಗಳು ಹುಟ್ಟಿಕೊಂಡಿವೆ. ಇಂತಹ ಸಂಸ್ತೆಗಳು ಹುಟ್ಟಿಕೊಂಡಿವೆ. ಇಂತಹ ಸಂಸ್ತೆಗಳು ಅಂತೆ ಕಂತೆಗಳ ಆದಾರದ ಮೇಲೆ ಗೆಲುವು-ಸೋಲಿನ ಆಟ ನಿರ‍್ದರಿಸುವುದಿಲ್ಲ. ರಾಶ್ಟ್ರದ ಉದ್ದಗಲ ಪ್ರತಿಯೊಂದು ಲೋಕಸಬಾ ಕ್ಶೇತ್ರದಲ್ಲಿ ವ್ಯಾಪಕ ಸಂಚಾರ ನಡೆಸಿ, ಜಾತಿ ದರ‍್ಮ, ಆರ‍್ತಿಕ ಸ್ತಿತಿಗತಿ, ಮತದಾರರ ಒಲವು ನಿಲುವು, ಅದಿಕಾರರೂಡ ಪಕ್ಶ ಎದುರಿಸುವ ಆಡಳಿತ ವಿರೋದಿ ಅಲೆ, ಚುನಾವಣಾ ಕಣಕ್ಕಿಳಿಯುವ ಅಬ್ಯರ‍್ತಿಗಳ ಶಕ್ತಿ ಸಾಮರ‍್ತ್ಯ-ದವ್ರ್ಬಲ್ಯಗಳ ಲೆಕ್ಕಾಚಾರಕ್ಕೆ ಸಂಬಂದಿಸಿದ ಎಲ್ಲ ರೀತಿಯ ಅಂಕಿ ಅಂಶಗಳನ್ನಾದರಿಸಿ, ಗೆಲುವು-ಸೋಲಿನ ಲೆಕ್ಕಾಚಾರ ಮಾಡುತ್ತಾರೆ.

ಮಾದ್ಯಮ ಕ್ಶೇತ್ರದಲ್ಲಿ ವಿದ್ಯುನ್ಮಾನ ಮಾದ್ಯಮ ಪ್ರಬುತ್ವ ಸಾದಿಸಿದ ಹಾಗೆ, ವಯ್ಜ್ನಾನಿಕವಾಗಿ ಚುನಾವಣಾ ಸಮೀಕ್ಶೆ ನಡೆಸುವ ಸಂಸ್ತೆಗಳು ಸಾಕಶ್ಟು ಸಂಕ್ಯೆಯಲ್ಲಿ ಜನ್ಮ ತಾಳಿವೆ. ವಿದ್ಯುನ್ಮಾನ ಸಂಸ್ತೆಗಳು ಚುನಾವಣೆಗೆ ಪೂರ‍್ವಬಾವಿಯಾಗಿ ಚುನಾವಣಾ ಸಮೀಕ್ಶೆ ನಡೆಸಿ ಇಂತಹ ಪಕ್ಶ ಗೆಲ್ಲಲಿದೆ, ಇಂತಹ ಪಕ್ಶ ಸೋಲಲಿದೆ ಎನ್ನುವುದನ್ನು ಆ ಪಕ್ಶಗಳು ಮತ್ತು ಆ ಪಕ್ಶಗಳ ಅಬ್ಯರ‍್ತಿಗಳು ಸ್ಪರ‍್ದಿಸುವ ಕ್ಶೇತ್ರಗಳ ಜನ್ಮ ಕುಂಡಲಿ-ಜಾತಕವನ್ನು ಜನಮಾನಸದ ಮುಂದೆ ಬಿಚ್ಚಿಡುತ್ತಾರೆ.

ಹೀಗೆ ವಿದ್ಯುನ್ಮಾನ ಮಾದ್ಯಮದಲ್ಲಿ ಬಿತ್ತರಗೊಳ್ಳುವ ಚುನಾವಣಾ ಪೂರ‍್ವ ಸಮೀಕ್ಶೆಗಳನ್ನು ಬಾರತದಾದ್ಯಂತ ಚುನಾವಣಾಸಕ್ತರು ತದೇಕ ಚಿತ್ತದಿಂದ ನೋಡುತ್ತಾರೆ. ಇದು ಅವರಿಗೊಂದು ದೊಡ್ಡ ಮನರಂಜನೆಯೂ ಆಗುತ್ತದೆ. ಚುನಾವಣೆಗೆ ಪೂರ‍್ವಬಾವಿಯಾಗಿ ನಡೆಯುವ ಇಂತಹ ಸಮೀಕ್ಶೆಗಳು ಜನಾಬಿಪ್ರಾಯ ರೂಪಿಸುವಲ್ಲಿಯೂನಿರ‍್ಣಾಯಕ ಪಾತ್ರ ವಹಿಸುತ್ತದೆ. ಇಂತಹ ಸಮೀಕ್ಶೆ ನಡೆಸಿದ ಸಂಸ್ತೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹಣ ಸಂದಾಯವಾಗುತ್ತದೆ. ಈ ಸಂಸ್ತೆಗಳು ಸಾಕಶ್ಟು ಲಾಬ ಗಳಿಸಿಕೊಳ್ಳುತ್ತವೆ. ಚುನಾವಣಾ ಸಮೀಕ್ಶೆ ಪ್ರಸಾರ ಮಾಡಿದ ವಿದ್ಯುನ್ಮಾನ ಮಾದ್ಯಮ ಸಂಸ್ತೆಯ ಟಿ. ಆರ್. ಪಿಯೂ ಹೆಚ್ಚುತ್ತದೆ. ಒಂದು ರೀತಿಯಲ್ಲಿ ಇದು ಒಂದು ದೊಡ್ಡ ಉದ್ಯಮವಾಗಿ ಬೆಳೆದಿದೆ.

ಕೆಲವು ಸಂದರ‍್ಬಗಳಲ್ಲಿ ರಾಜಕೀಯ ಪಕ್ಶಗಳು ಎರೆಡು ನೆಲೆಗಳಲ್ಲಿ ಇಂತಹ ಚುನಾವಣಾ ಸಮೀಕ್ಶೆಗಳನ್ನು ನಡೆಸುತ್ತವೆ. ಚುನಾವಣೆಯಲ್ಲಿ ನಿರ‍್ದಿಶ್ಟ ಪಕ್ಶದ ಶಕ್ತಿ ಸಾಮರ‍್ತ್ಯಗಳನ್ನು ಅರಿತುಕೊಳ್ಳುವ ದಿಸೆಯಲ್ಲಿ ನಡೆಸುವ ಆಂತರಿಕ ಸಮೀಕ್ಶೆ. ಈ ಸಮೀಕ್ಶೆಯ ಮೂಲಕ ಗೆಲ್ಲುವ ಅಬ್ಯರ‍್ತಿ ಯಾರು…? ಸೋಲುವ ಅಬ್ಯರ‍್ತಿ ಯಾರು…? ಯಾವ್ಯಾವ ಕ್ಶೇತ್ರದಲ್ಲಿ ತಮ್ಮ ಪಕ್ಶ ಪ್ರಬಲವಾಗಿದೆ…? ಯಾವ್ಯಾವ ಕ್ಶೇತ್ರದಲ್ಲಿ ತಮ್ಮ ಪಕ್ಶ ದುರ‍್ಬಲವಾಗಿದೆ…? ಎನ್ನುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡು ಸಂಬವನೀಯ ಅಡ್ಡಿ-ಆತಂಕಗಳನ್ನು ನಿವಾರಿಸಿಕೊಳ್ಳುವುದಕ್ಕೆ ಪೂರ‍್ವಬಾವಿಯಾಗಿ ರೂಪಿಸಬೇಕಾದ ಕಾರ‍್ಯತಂತ್ರಕ್ಕೆ ಬೂಮಿಕೆ ಸಿದ್ದಪಡಿಸಲಾಗುವುದು. ಇಂತಹ ಸಮೀಕ್ಶೆಯನ್ನು ಸಾಮಾನ್ಯವಾಗಿ ಪ್ರತಿಯೊಂದು ರಾಜಕೀಯ ಪಕ್ಶಗಳು ನಡೆಸುತ್ತವೆ. ಇದು ಚುನಾವಣಾ ಪ್ರಕ್ರಿಯೆಯ ಮೇಲೆ ಯಾವುದೇ ನೆಗೆಟಿವ್ ಅತವಾ ಪಾಸಿಟಿವ್ ಪರಿಣಾಮ ಬೀರುವುದಿಲ್ಲ.

ಆದರೆ, ಚುನಾವಣಾ ಸಮೀಕ್ಶೆಗಳು ಹಲವು ಸಂದರ‍್ಬದಲ್ಲಿ ನಿರ‍್ದಿಶ್ಟ ರಾಜಕೀಯ ಪಕ್ಶ ಅತವಾ ಜನನಾಯಕ ಪ್ರಾಯೋಜಿಸಿದ ಸಮೀಕ್ಶೆಗಳಾಗಿರುತ್ತವೆ. ಇಂತಹ ಬಹುಪಾಲು ಸಮೀಕ್ಶೆಗಳು ಮುಕ್ತವಾಗಿರಲು ಸಾದ್ಯವೇ ಇಲ್ಲ. ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಸಂಕಲ್ಪ ಮಾಡಿದವರು, ಅತವಾ ಚುನಾವಣೆಯಲ್ಲಿ ಸೋಲಿನ ಬೀತಿ ಎದುರಿಸುತ್ತಿರುವ ರಾಜಕೀಯ ಪಕ್ಶ ಹಾಗು ವ್ಯಕ್ತಿಗಳು, ಇಂತಹ ಪ್ರಾಯೋಜಿತ ಸಮೀಕ್ಶೆಗಳನ್ನು ನಡೆಸಲು ದನ ಸಹಾಯ ಮಾಡುತ್ತಾರೆ. ಈ ಮೂಲಕ ಜನಾಬಿಪ್ರಾಯವನ್ನು ತಮ್ಮ ಮೂಗಿನ ನೇರಕ್ಕೆ ರೂಪಿಸುವುದು ಇಂತಹ ಜನನಾಯಕರ ಆಶಯವಾಗಿರುತ್ತದೆ.

ಮಾದ್ಯಮ ಸಂಸ್ತೆಯೊಂದು ಚುನಾವಣಾ ಸಮೀಕ್ಶೆಗಳಲ್ಲಿಯೂ ಗೋಲ್ ಮಾಲ್ ನಡೆದಿದೆ ಎನ್ನುವುದನ್ನು ಕುಟುಕು ಕಾರ‍್ಯಾಚರಣೆಯ ಮೂಲಕ ಪತ್ತೆ ಹಚ್ಚಿವೆ. ಪ್ರಸಕ್ತ ಹಿನ್ನಲೆಯಲ್ಲಿ, ಚುನಾವಣಾ ಪೂರ‍್ವಬಾವಿ ಸಮೀಕ್ಶೆಗೆ ಸಂಬಂದಿಸಿದ ಹಾಗೆ ಸಿ-ಪೋರ್ ಸಂಸ್ತೆಯ ಜೊತೆ ಮಾಡಿಕೊಂಡಿದ್ದ ಒಪ್ಪಂದವನ್ನು ಇಂಡಿಯಾ ಟುಡೆ ಇಂಗ್ಲೀಶ್ ಸಾಪ್ತಾಹಿಕ ರದ್ದುಪಡಿಸಿದೆ. ಹಾಲಿ ಬೆಳವಣಿಗೆ ನಿಜಕ್ಕೂ ಚುನಾವಣೆ ಸಮೀಕ್ಶೆಗೆ ಸಂಬಂದಿಸಿದ ಹಾಗೆ ಸಾರ‍್ವಜನಿಕವಾಗಿ ಸ್ರುಶ್ಟಿಯಾಗಿದ್ದ ನಂಬಿಕೆಯ ನೆಲೆಯನ್ನೇ ಸಂಪೂರ‍್ಣ ದೂಳಿಪಟ ಮಾಡಿದೆ. ಬಾರತ ಜನತೆ ಚುನಾವಣಾ ಸಮೀಕ್ಶೆಗಳನ್ನು ಗಂಬೀರವಾಗಿ ಪರಿಗಣಿಸಿದ್ದರು. ವಾಸ್ತವವಾಗಿ ಕೆಲವು ಚುನಾವಣಾ ಸಮೀಕ್ಶಾ ಸಂಸ್ತೆಗಳು ನಡೆಸಿದ್ದ ಚುನಾವಣಾ ಸಮೀಕ್ಶೆ ಶೇಕಡ ಎಂಬತ್ತರಶ್ಟು ಯಶಸ್ವಿ ಆಗಿದ್ದವು. ಇದು ಜನತೆಯ ನಂಬಿಯ ನೆಲೆಯನ್ನು ಗಟ್ಟಿಗೊಳಿಸಿತ್ತು.

ಆದರೆ ಚುನಾವಣಾ ಸಮೀಕ್ಶೆಗಳು ಪೂರ‍್ವಯೋಜಿತವಾಗಿರುತ್ತವೆ. ಪ್ರಬಲ ರಾಜಕೀಯ ಪಕ್ಶಗಳು ಹಾಗೂ ಪ್ರಬಾವಿ ಜನನಾಯಕರ ಮೂಗಿನ ನೇರಕ್ಕೆ ರೂಪುಗೊಳ್ಳುತ್ತವೆ ಅನ್ನುವುದು ಚುನಾವಣಾ ಸಮೀಕ್ಶೆಗಳ ಮೇಲಿದ್ದ ನಂಬಿಕೆ ವಿಶ್ವಾಸವನ್ನು ಅಲುಗಾಡಿಸಿದೆ. ಪ್ರಸಕ್ತ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಚುನಾವಣಾ ಸಮೀಕ್ಶೆಗಳಿಗೆ ಕಾಯಂ ಕಡಿವಾಣ ಹಾಕುವ ಬಗ್ಗೆ ಗಂಬೀರವಾಗಿ ಆಲೋಚಿಸಬೇಕಿದೆ.

(ಈ ಬರಹವು ‘ಬಾನುವಾರ‘ ಸುದ್ದಿಹಾಳೆಯಲ್ಲಿ ಈ ಹಿಂದೆ ಪ್ರಕಟಗೊಂಡಿದೆ)

(ಚಿತ್ರಸೆಲೆ: madhyamam)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: