ಹತ್ತನೇ ತರಗತಿ ಪಲಿತಾಂಶ – ನಾವು ತಿಳಿಯಬೇಕಾಗಿದ್ದೇನು?

– ಅನ್ನದಾನೇಶ ಶಿ. ಸಂಕದಾಳ.

ಪ್ರತೀ ವರುಶ ಮಾರ‍್ಚ್ ತಿಂಗಳು ಬಂತೆಂದರೆ ಪರೀಕ್ಶೆಗಳದ್ದೇ ಕಾರುಬಾರು. ಹತ್ತನೇ ತರಗತಿಯ ಅತವಾ ಹನ್ನೆರಡನೇ ತರಗತಿಯ ಪರೀಕ್ಶೆಗಳು ಈ ತಿಂಗಳಲ್ಲಿ ನಡೆಯುತ್ತವೆ. ಹಾಗೆ ಏಪ್ರಿಲ್-ಮೇ ತಿಂಗಳು ಬಂತೆಂದರೆ ಹಿಂದಿನ ತಿಂಗಳಲ್ಲಿ ನಡೆದ ಪರೀಕ್ಶೆಗಳ ಪಲಿತಾಂಶಗಳ ಸುಗ್ಗಿ. ಕರ‍್ನಾಟಕದ ಈ ವರುಶದ ಹತ್ತನೇ ತರಗತಿಯ ಪಲಿತಾಂಶವು ಹೊರ ಬಂದಿದ್ದು, ಶೇ 77.47 ರಶ್ಟು ವಿದ್ಯಾರ‍್ತಿಗಳು ತೇರ‍್ಗಡೆ ಹೊಂದಿದ್ದಾರೆ. ಅಂದರೆ 100 ರಲ್ಲಿ 77 ಮಂದಿ ಮುಂದಿನ ಕಲಿಕೆ ಹಂತಕ್ಕೆ ಹೋಗಬಹುದು, ಉಳಿದ 23 ಮಂದಿ ಮತ್ತೊಮ್ಮೆ ಪರೀಕ್ಶೆ ಬರೆದು ಅದರ ಪಲಿತಾಂಶಕ್ಕೆ ಕಾಯಬೇಕು ಅಂತ ಅರ‍್ತ. 100 ಕ್ಕೆ 77 ಎಂದರೆ ಆ ಅಂಕಿ ಸ್ವಲ್ಪ ಕಮ್ಮಿಯೇ ಆಯಿತು ಎಂದು ಹೇಳಬಹುದು. ಕರ‍್ನಾಟಕದ ಅಂಕಿ-ಅಂಶ ಏನೋ ಹೀಗಿದೆ, ನಮ್ಮ ನೆರೆಯ ರಾಜ್ಯಗಳಲ್ಲೂ ಹೀಗೆ ಇದೆಯಾ? ಈ ವಿಶಯದಲ್ಲಿ ಅವರು ನಮಗಿಂತ ಮುಂದಿದ್ದಾರಾ ಅತವಾ ಹಿಂದಿದ್ದಾರಾ? ಅಲ್ಲಿನ ಅಂಕಿ-ಅಂಶಗಳು ಏನು ಹೇಳುತ್ತವೆ? ಅಂಕಿ-ಅಂಶಗಳಿಂದ ಏನು ತಿಳಿಯಬಹುದು? ಎಂಬ ಕುತೂಹಲ ಸಹಜವಾಗಿ ಮೂಡುತ್ತದೆ. 2014ರ ಹತ್ತನೇ ತರಗತಿಯ ಪಲಿತಾಂಶಗಳು ಕೆಲ ರಾಜ್ಯಗಳಲ್ಲಿ ಇನ್ನೂ ಬಂದಿಲ್ಲವಾದ್ದರಿಂದ, 2013ರ ಪಲಿತಾಂಶಗಳನ್ನು ಬಳಸಿಕೊಂಡು ಈ ಎಲ್ಲ ರಾಜ್ಯಗಳನ್ನು ಹೋಲಿಸಿ ನೋಡೋಣ ಮತ್ತು ಅದರಿಂದ ನಮ್ಮ ರಾಜ್ಯವು ತಿಳಿಯಬೇಕಾದುದು ಏನೆಂದು ಅರಿಯೋಣ.

2013ರ ಹತ್ತನೇ ತರಗತಿಯ ಪಲಿತಾಂಶ:

image

 

ಮೇಲೆ ನೀಡಿರುವ ಪಟ್ಟಿಯಲ್ಲಿ ಒಟ್ಟು ಮಂದಿ ಪರೀಕ್ಶೆ ಬರೆದವರು ಮತ್ತು ಒಟ್ಟು ಮಂದಿ ತೇರ‍್ಗಡೆಯಾದವರ ಅಂಕಿ ಇದೆ. ಈ ಅಂಕಿ-ಸಂಕೆಗಳು ಲಕ್ಶಗಳಲ್ಲಿದ್ದು, ಅದನ್ನು ನೂರಕ್ಕೆ ಇಳಿಸಿ ನೂರರ ಲೆಕ್ಕದಲ್ಲಿ ನೋಡಿದಾಗ ಇನ್ನೂ ಸುಲಬವಾಗಿ ಅರ‍್ತ ಮಾಡಿಕೊಳ್ಳಬಹುದು. ಚಿಕ್ಕ ರಾಜ್ಯವಾದ ನೆರೆಯ ಕೇರಳದಲ್ಲಿ 100ರಲ್ಲಿ 94 ವಿದ್ಯಾರ‍್ತಿಗಳು, ಪಕ್ಕದ ತಮಿಳುನಾಡಿನಲ್ಲಿ 100ರಲ್ಲಿ 89 ವಿದ್ಯಾರ‍್ತಿಗಳು, ಪಕ್ಕದಲ್ಲೇ ಇರುವ ಇನ್ನೊಂದು ರಾಜ್ಯವಾದ ಆಂದ್ರಪ್ರದೇಶದಲ್ಲಿ (ಈ ವರುಶ ಆಂದ್ರವು ಸೀಮಾಂದ್ರ ಮತ್ತು ತೆಲಂಗಾಣ ಎಂದು ಎರಡು ರಾಜ್ಯವಾಗಿದೆ) 100ರಲ್ಲಿ 88 ವಿದ್ಯಾರ‍್ತಿಗಳು, ಮಗ್ಗುಲಿನಲ್ಲಿರುವ ಮಹಾರಾಶ್ಟ್ರದಲ್ಲಿ 100ರಲ್ಲಿ 84 ವಿದ್ಯಾರ‍್ತಿಗಳು ಮತ್ತು ನಮ್ಮ ರಾಜ್ಯದಲ್ಲಿ 100ರಲ್ಲಿ 77 ವಿದ್ಯಾರ‍್ತಿಗಳು ತೇರ‍್ಗಡೆಯಾಗಿದ್ದಾರೆ ಎಂದು ಹೇಳಬಹುದು.

ಪರೀಕ್ಶೆ ಬರೆದ ವಿದ್ಯಾರ‍್ತಿಗಳ ಸಂಕೆ ರಾಜ್ಯದಿಂದ ರಾಜ್ಯಕ್ಕೆ ಬೇರೆಯದೇ ಆಗಿರುತ್ತದೆ. ಆದ್ದರಿಂದ ಆಯಾ ರಾಜ್ಯದ ಒಟ್ಟು ಮಂದಿಯನ್ನೂ ಮತ್ತು ಪರೀಕ್ಶೆ ಬರೆದವರ ಸಂಕೆಯನ್ನು ಬಳಸಿ ರಾಜ್ಯಗಳನ್ನು ಹೋಲಿಸುವುದು ಹೆಚ್ಚು ಸರಿಯಾಗಿ ಕಾಣುತ್ತದೆ. 2011ರ ಆಳೆಣಿಕೆ(ಸೆನ್ಸಸ್) ಪ್ರಕಾರ ಈಗ ಹೋಲಿಕೆಗೆ ಆಯ್ಕೆ ಮಾಡಿಕೊಂಡಿರುವ ರಾಜ್ಯಗಳಲ್ಲಿನ ಮಂದಿಯೆಣಿಕೆ (ಕೋಟಿಗಳಲ್ಲಿ) ಹೀಗಿದೆ:

image (1)
ಪರೀಕ್ಶೆ ಬರೆದವರ ಸಂಕೆಯನ್ನು ಒಟ್ಟು ಮಂದಿಯ ಜೊತೆ ಹೋಲಿಸಿದಾಗ, ಕೇರಳದಲ್ಲಿ – ಅಲ್ಲಿನ ಒಟ್ಟು ಮಂದಿಯ ಶೇ 1.4ರಶ್ಟು, ತಮಿಳುನಾಡಿನಲ್ಲಿ – ಅಲ್ಲಿನ ಒಟ್ಟು ಮಂದಿಯ ಶೇ 1.4ರಶ್ಟು, ಆಂದ್ರಪ್ರದೇಶದಲ್ಲಿ – ಅಲ್ಲಿನ ಒಟ್ಟು ಮಂದಿಯ ಶೇ 1.53ರಶ್ಟು, ಮಹಾರಾಶ್ಟ್ರದಲ್ಲಿ – ಅಲ್ಲಿನ ಒಟ್ಟು ಮಂದಿಯ ಶೇ 1.33ರಶ್ಟು ಮತ್ತು ನಮ್ಮ ರಾಜ್ಯದಲ್ಲಿ – ಒಟ್ಟು ಮಂದಿಯ ಶೇ 1.36ರಶ್ಟು ಮಂದಿ ಹತ್ತನೇ ತರಗತಿವರೆಗೂ ಕಲಿಕೆಯನ್ನು ಮುಂದುವರೆಸಿಕೊಂಡು ಬರುವರು ಎಂದು ಹೇಳಬಹುದು.

image (2) ಇದರಿಂದ ತಿಳಿಯುವುದೇನು:

ಒಟ್ಟಾರೆಯಾಗಿ ಇದೆಲ್ಲವನ್ನು ನೋಡಿದಾಗ ತಿಳಿಯೋದೇನೆಂದರೆ, ನಮ್ಮ ರಾಜ್ಯದಲ್ಲಿ ಹತ್ತನೇ ತರಗತಿಯವರೆಗೂ ಓದುವವರು ಅತವಾ ಹತ್ತನೇ ತರಗತಿಯ ಪರೀಕ್ಶೆಯಲ್ಲಿ ತೇರ‍್ಗಡೆ ಹೊಂದುವವರ ಎಣಿಕೆ, ನೆರೆಯ ರಾಜ್ಯಗಳಿಗೆ ಹೋಲಿಸಿದಾಗ ಕಡಿಮೆಯೇ ಇದೆ. ಒಂದು ನಾಡಿನ ಏಳಿಗೆಗೆ ಮತ್ತು ಜನರ ಜೀವನ ಮಟ್ಟ ಮೇಲೇರಲು ಕಲಿಕೆ ಎಂಬುದು ತುಂಬಾ ಮುಕ್ಯವಾದುದು. ಹತ್ತನೇ ತರಗತಿ ಎಂಬುದು ಕಲಿಕೆಯಲ್ಲಿ ಒಂದು ಮುಕ್ಯವಾದ ಮಯ್ಲಿಗಲ್ಲು. ಈ ಮಯ್ಲಿಗಲ್ಲನ್ನು ಮುಟ್ಟುವವರೇ ಕಡಿಮೆ ಆದರೆ ಮುಂದಿನ ಹಂತದ ಕಲಿಕೆಯನ್ನು ಮುಗಿಸಿ ದೊಡ್ಡ ಮಟ್ಟದ ಕಲಿಕೆಪಟ್ಟ (ಡಿಗ್ರಿ) ಪಡೆಯುವವರ ಎಣಿಕೆ ಇನ್ನೂ ಕಡಿಮೆ ಆಗುತ್ತದೆ ಎಂಬ ದಿಟವನ್ನು ಬಿಡಿಸಿ ಹೇಳಬೇಕಿಲ್ಲ. ಜಾಗತೀಕರಣದಿಂದ ದೊಡ್ಡ ಮಟ್ಟದಲ್ಲಿ ಕೆಲಸಗಳು ಹುಟ್ಟಿಕೊಳ್ಳುತ್ತಿರುವುದು ಗೊತ್ತೇ ಇದೆ. ನಮ್ಮ ನಾಡಿನ ಮಂದಿ, ಕಲಿಕೆಯಲ್ಲಿ ಹಿಂದೆ ಬಿದ್ದಶ್ಟೂ, ಇಲ್ಲಿ ಹುಟ್ಟುವ ಕೆಲಸಗಳು ನಮ್ಮ ಮಂದಿಗೆ ದಕ್ಕದೇ ಬೇರೆಯವರ ಪಾಲಾಗುತ್ತವೆ. ನಮ್ಮ ನಾಡಿನಲ್ಲಿ ನಮ್ಮ ಜನರೇ ಕೆಲಸ ಸಿಗದೇ ಪರದಾಡುವಂತ ಸನ್ನಿವೇಶ ಉಂಟಾಗುತ್ತದೆ.

ಮುಂದಾಗಬೇಕಿರುವುದು:

ಇಂತಾ ಸನ್ನಿವೇಶವು ಉಂಟಾಗದಂತೆ ಮಾಡುವಲ್ಲಿ ನಮ್ಮ ನಾಡಿನ ಜನರ ಪಾಂಗು(ಪಾತ್ರ) ಎಶ್ಟಿದೆಯೋ ಅದಕ್ಕಿಂತ ದೊಡ್ಡ ಪಾಂಗು ಸರಕಾರದ್ದಿದೆ. ಮಂದಿಯ ಬಗ್ಗೆ ಹೇಳಬೇಕೆಂದರೆ ಅವರು ಕಲಿಕೆಯನ್ನು ಗಂಬೀರವಾಗಿ ತೊಗೊಳ್ಳಲೇಬೇಕಿದೆ. ತಂದೆ-ತಾಯಂದಿರು ತಮ್ಮ ಮಕ್ಕಳ ಕಲಿಕೆ ಬಗ್ಗೆ ಹೆಚ್ಚು ಗಮನ ಕೊಡಬೇಕಿದೆ. ಸರಕಾರದ ಬಗ್ಗೆ ಹೇಳುವುದಾದರೆ, ತಾನು ರೂಪಿಸಿದ ಕಲಿಕೆ ವ್ಯವಸ್ತೆಯಲ್ಲಿ ಏನು ತೊಡಕಿದೆ? ತೊಡಕುಗಳನ್ನು ಸರಿ ಪಡಿಸುವ ಬಗೆ ಏನು? ಕಲಿಸುವವರು ಕಲಿಸುವಲ್ಲಿ ಎಡುವುತ್ತಿದ್ದಾರಾ? ಹತ್ತನೇ ತರಗತಿ ಓದುವವರ ಎಣಿಕೆ ಹೆಚ್ಚು ಮಾಡಲು ಏನು ಮಾಡಬಹುದು? ಎಂಬ ಹಲವಾರು ಕೇಳ್ವಿಗಳಿಗೆ ಉತ್ತರ ಕಂಡುಕೊಂಡು ದೂರಗಾಮಿ ಹಮ್ಮುಗೆಗಳನ್ನು ಹಾಕಿಕೊಳ್ಳಲೇಬೇಕಿದೆ. ಪಯ್ಪೋಟಿಯ ಇಂದಿನ ದಿನಗಳಲ್ಲಿ ನಾಡಿನ ಮಂದಿಯನ್ನು ಆ ನಿಟ್ಟಿನಲ್ಲಿ ಅಣಿಗೊಳಿಸದಿದ್ದರೆ – ನಮ್ಮ ನಾಡಿಗೆ ಮತ್ತು ನಾಡಿನ ಜನರಿಗೇ ನಶ್ಟ ಎಂದು ಎಲ್ಲರೂ ಮನಗಾಣಬೇಕಿದೆ.

(ಮಾಹಿತಿ ಮೂಲ: census.nic, careerindia, spiderkerala, thehindu, govjobindia, quizvook, employmentnews, indiatoday1, indiatoday2, indiatoday3, settlesoon, jagranjosh, careerindia1, indiatoday4 )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: