ಒಟ್ಟುಗಳನ್ನು ಸೇರಿಸದೆ ಎಸಕಪದಗಳಿಂದ ಹೆಸರುಪದಗಳು
ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-6
ಒಟ್ಟುಗಳನ್ನು ಸೇರಿಸದೆ ಎಸಕಪದಗಳನ್ನು ಹೆಸರುಪದಗಳಾಗಿ ಬಳಸುವುದು
ಇಂಗ್ಲಿಶ್‌ನ ಹಲವು ಎಸಕಪದಗಳನ್ನು ಅವುಗಳಿಗೆ ಯಾವ ಒಟ್ಟನ್ನೂ ಸೇರಿಸದೆ ಹಾಗೆಯೇ ಹೆಸರುಪದಗಳನ್ನಾಗಿ ಬಳಸಲು ಬರುತ್ತದೆ; ಎತ್ತುಗೆಗಾಗಿ, cover ಎಂಬ ಪದವನ್ನು ಹೊದೆ ಎಂಬ ಹುರುಳಿನಲ್ಲಿ ಒಂದು ಎಸಕಪದವಾಗಿಯೂ ಬಳಸಬಹುದು, ಮತ್ತು ಹೊದಿಕೆ ಎಂಬ ಹುರುಳಿನಲ್ಲಿ ಒಂದು ಹೆಸರುಪದವಾಗಿಯೂ ಬಳಸಬಹುದು. (ಇವನ್ನು ಎಸಕಪದಗಳಿಗೆ ಸೊನ್ನೆ ಒಟ್ಟನ್ನು ಸೇರಿಸಿ ಪಡೆದ ಹೆಸರುಪದಗಳೆಂದೂ ಹೇಳಲಾಗುತ್ತದೆ.)
ಕನ್ನಡದಲ್ಲಿಯೂ ಕೆಲವು ಎಸಕಪದಗಳನ್ನು ಈ ರೀತಿ ಅವಕ್ಕೆ ಯಾವ ಒಟ್ಟನ್ನೂ ಸೇರಿಸದೆ ಹೆಸರುಪದಗಳಾಗಿ ಬಳಸಲು ಬರುತ್ತದೆ; ಎತ್ತುಗೆಗಾಗಿ, ಕೂಗು, ಓದು, ಕೆಮ್ಮು, ನಗು ಮೊದಲಾದ ಕೆಲವು ಎಸಕಪದಗಳನ್ನು ಹಾಗೆಯೇ ಹೆಸರುಪದಗಳಾಗಿಯೂ ಬಳಸಲು ಬರುತ್ತದೆ. ಕೆಲವೆಡೆಗಳಲ್ಲಿ ಈ ರೀತಿ ಎಸಕಪದ ಮತ್ತು ಹೆಸರುಪದಗಳೆಂಬ ಎರಡು ಬಗೆಯ ಪದಗಳಾಗಿ ಬಳಕೆಯಾಗುವ ಕನ್ನಡ ಪದಗಳು ಅಂತಹವೇ ಇಂಗ್ಲಿಶ್ ಪದಗಳಿಗೆ ಸಾಟಿಯಾಗಿಯೂ ಇರುತ್ತವೆ:
ಕರೆ | call, a call | ತಿರುವು | turn, a turn | |
ಅಳುಕು | fear, a fear | ಉಲಿ | sound, a sound | |
ತುರಿ | itch, an itch | ಅಳು | cry, a cry | |
ಒದೆ | kick, a kick | ನಗು | laugh, a laugh | |
ಗುದ್ದು | box, a box | ಹೇರು | load, a load |
ಆದರೆ, ಬೇರೆ ಹಲವೆಡೆಗಳಲ್ಲಿ ಇಂಗ್ಲಿಶ್ ಎಸಕಪದಗಳಿಗೂ ಕನ್ನಡ ಎಸಕಪದಗಳಿಗೂ ನಡುವ ಇಂತಹ ಸಾಟಿ ಕಾಣಿಸುವುದಿಲ್ಲ; ಹಾಗಾಗಿ, ಈ ಎರಡು ಬಗೆಯ ಬಳಕೆಗಳಿರುವ ಇಂಗ್ಲಿಶ್ ಪದಗಳಿಗೆ ಬದಲಾಗಿ ಕನ್ನಡದಲ್ಲಿ ಒಟ್ಟುಗಳನ್ನು ಸೇರಿಸಿರುವ ಹೆಸರುಪದಗಳನ್ನು ಇಲ್ಲವೇ ಎಸಕಪದಗಳನ್ನು ಹೊಸದಾಗಿ ಉಂಟುಮಾಡಬೇಕಾಗುತ್ತದೆ.
ಇದಲ್ಲದೆ, ಹೆಸರುಪದಗಳಾಗಿ ಬಳಕೆಯಾಗಬಲ್ಲ ಬೇರೆ ಕೆಲವು ಇಂಗ್ಲಿಶ್ ಎಸಕಪದಗಳಿಗೆ ಸಾಟಿಯಾಗುವಂತಹ ಎಸಕಪದಗಳು ಕನ್ನಡದಲ್ಲಿದ್ದರೂ ಅವೆರಡು ಬೇರೆ ಬೇರೆ ಹುರುಳುಗಳಲ್ಲಿ ಈ ರೀತಿ ಹೆಸರುಪದಗಳಾಗಿ ಬಳಕೆಯಾಗುತ್ತಿರಬಹುದು. ಎತ್ತುಗೆಗಾಗಿ, ಇಂಗ್ಲಿಶ್‌ನ step ಮತ್ತು ಕನ್ನಡದ ಮೆಟ್ಟು ಎಂಬ ಎರಡು ಎಸಕಪದಗಳೂ ಹೆಸರುಪದಗಳಾಗಿ ಬಳಕೆಯಾಗಬಲ್ಲುವು; ಆದರೆ, ಇಂಗ್ಲಿಶ್‌ನ step ಎಂಬುದಕ್ಕೆ ಕನ್ನಡದ ಮೆಟ್ಟಲು ಎಂಬ ಪದದ ಹುರುಳಿದೆ, ಮತ್ತು ಕನ್ನಡದ ಮೆಟ್ಟು ಎಂಬುದಕ್ಕೆ ಇಂಗ್ಲಿಶ್‌ನ slipper(s) ಎಂಬ ಪದದ ಹುರುಳಿದೆ.
ಇಂಗ್ಲಿಶ್‌ನಲ್ಲಿ ಎಸಕಪದಗಳು ಹಲವು ಬಗೆಯ ಹುರುಳುಗಳಲ್ಲಿ ಈ ರೀತಿ ಹೆಸರುಪದಗಳಾಗಿ ಬಳಕೆಯಾಗುತ್ತವೆ: (1) ಎಸಕ ನಡೆಸುವ, ಇಲ್ಲವೇ ಎಸಕಕ್ಕೆ ಒಳಗಾಗುವ ಮಂದಿಯನ್ನು ಇಲ್ಲವೇ ಬೇರೆ ಬಗೆಯ ಪಾಂಗುಗಳನ್ನು ಅವು ಗುರುತಿಸಬಹುದು; (2) ಎಸಕವನ್ನು ಇಲ್ಲವೇ ಎಸಕದ ದೊರೆತವನ್ನು ಗುರುತಿಸಬಹುದು, ಮತ್ತು (3) ಎಸಕದ ಮುಟ್ಟನ್ನು ಇಲ್ಲವೇ ಜಾಗವನ್ನು ಗುರುತಿಸಬಹುದು; ಅವು ತಿಳಿಸುವ ಈ ಹುರುಳುಗಳಿಗೆ ಹೊಂದಿಕೆಯಾಗುವಂತೆ ಕನ್ನಡದಲ್ಲಿ ಒಟ್ಟುಗಳನ್ನು ಇಲ್ಲವೇ ಪದಗಳನ್ನು ಆರಿಸಿಕೊಂಡು ಅವಕ್ಕೆ ಸಾಟಿಯಾಗುವ ಹೆಸರುಪದಗಳನ್ನು ಕಟ್ಟಬೇಕಾಗುತ್ತದೆ.
(1) ಹೆಸರುಪದಗಳಾಗಿ ಬಳಕೆಯಾಗುವ ಎಸಕಪದಗಳು ಎಸಕ ನಡೆಸುವ ಇಲ್ಲವೇ ಅದಕ್ಕೆ ಒಳಗಾಗುವ ಮಂದಿಯನ್ನು ಗುರುತಿಸುತ್ತಿದೆಯಾದರೆ, ಅವಕ್ಕೆ ಸಾಟಿಯಾಗಬಲ್ಲ ಪದಗಳನ್ನು ಉಂಟುಮಾಡಲು ಕನ್ನಡದಲ್ಲಿ ಗ ಇಲ್ಲವೇ ಗಾರ ಒಟ್ಟನ್ನು ಬಳಸಬಹುದು, ಮತ್ತು ಇವು ಮಂದಿಯನ್ನು ಗುರುತಿಸದೆ ಬೇರೆ ಬಗೆಯ ಪಾಂಗುಗಳನ್ನು ಗುರುತಿಸುತ್ತಿವೆಯಾದರೆ ಕ ಒಟ್ಟನ್ನು ಬಳಸಬಹುದು:
(1) ಮಂದಿಯನ್ನು ಗುರುತಿಸುವವು:
ಎಸಕಪದ | ಹೆಸರುಪದವಾಗಿ ಬಳಕೆ | |||
cheat | ಆಳವಾಡು | cheat | ಆಳಿಗ | |
coach | ಕಲಿಸು | coach | ಕಲಿಸುಗ | |
cook | ಅಡು | cook | ಅಟ್ಟುಳಿಗ |
(2) ಬೇರೆ ಬಗೆಯ ಪಾಂಗುಗಳನ್ನು ಗುರುತಿಸುವವು:
ಎಸಕಪದ | ಹೆಸರುಪದವಾಗಿ ಬಳಕೆ | |||
bore | ಕೊರೆ | bore | ಕೊರಕ | |
lift | ಎತ್ತು | lift | ಎತ್ತುಕ |
(2) ಹೆಸರುಪದವಾಗಿ ಬಳಕೆಯಾಗುವ ಎಸಕಪದಗಳು ಎಸಕವನ್ನು ಇಲ್ಲವೇ ಅದರ ನೆನಸಿನ ದೊರೆತವನ್ನು ಗುರುತಿಸುತ್ತಿದೆಯಾದರೆ, ಕನ್ನಡದಲ್ಲಿ ಇಕೆ ಇಲ್ಲವೇ ತ ಒಟ್ಟನ್ನು ಬಳಸಬಹುದು; ಇವುಗಳಲ್ಲಿ ಇಕೆ ಒಟ್ಟು ಉಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳ ಬಳಿಕ ಬರುತ್ತದೆ, ಮತ್ತು ತ ಒಟ್ಟು ಎಕಾರ ಇಲ್ಲವೇ ಇಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳ ಬಳಿಕ ಬರುತ್ತದೆ:
ಎಸಕಪದ | ಹೆಸರುಪದವಾಗಿ ಬಳಕೆ | |||
study | ಕಲಿ | study | ಕಲಿಕೆ | |
fear | ಹೆದರು | fear | ಹೆದರಿಕೆ | |
offer | ನೀಡು | offer | ನೀಡಿಕೆ | |
want | ಬಯಸು | want | ಬಯಕೆ | |
divide | ಬಗೆ | divide | ಬಗೆತ | |
display | ಮೆರೆ | display | ಮೆರೆತ | |
dance | ಕುಣಿ | dance | ಕುಣಿತ | |
hold | ಹಿಡಿ | hold | ಹಿಡಿತ |
(3) ಹೆಸರುಪದವಾಗಿ ಬಳಕೆಯಾಗುವ ಎಸಕಪದಗಳು ಗುರುತಿಸುವ ದೊರೆತ ನನಸಿನದಾಗಿದ್ದಲ್ಲಿ, ಇಲ್ಲವೇ ಅವು ಎಸಕದ ಮುಟ್ಟನ್ನು (instrumentನ್ನು) ಗುರುತಿಸುವುದಿದ್ದಲ್ಲಿ ಇಗೆ/ಗೆ ಒಟ್ಟನ್ನು ಬಳಸಲು ಬರುತ್ತದೆ:
ಎಸಕಪದ | ಹೆಸರುಪದವಾಗಿ ಬಳಕೆ | |||
cover | ಮುಚ್ಚು | cover | ಮುಚ್ಚಿಗೆ | |
comb | ಬಾಚು | comb | ಬಾಚಣಿಗೆ | |
drink | ಕುಡಿ | drink | ಕುಡಿಗೆ | |
dress | ತೊಡು | dress | ತೊಡುಗೆ |
(4) ಕೆಲವೆಡೆಗಳಲ್ಲಿ ಈ ರೀತಿ ಹೆಸರುಪದಗಳಾಗಿ ಬಳಕೆಯಾಗಬಲ್ಲ ಇಂಗ್ಲಿಶ್ ಎಸಕಪದಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ಹೆಸರುಪದಗಳೇ ಇರುತ್ತವೆ. ಎತ್ತುಗೆಗಾಗಿ, ಇಂಗ್ಲಿಶ್‌ನ hunt ಎಂಬ ಎಸಕಪದವನ್ನು ಬೇಟೆಯಾಡು ಎಂಬ ಹುರುಳಿನಲ್ಲಿ ಎಸಕಪದವಾಗಿಯೂ ಬಳಸಬಹುದು ಮತ್ತು ಬೇಟೆ ಎಂಬ ಹುರುಳಿನಲ್ಲಿ ಹೆಸರುಪದವಾಗಿಯೂ ಬಳಸಬಹುದು.
ಇಂತಹ ಕಡೆಗಳಲ್ಲಿ, ಮೇಲಿನ ಎತ್ತುಗೆಯೇ ತಿಳಿಸುವ ಹಾಗೆ, ಇಂಗ್ಲಿಶ್‌ನ ಈ ಪದಗಳು ಎಸಕಪದಗಳಾಗಿ ಬಳಕೆಯಾಗುವಂತಹ ಸಂದರ‍್ಬಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ಹೊಸಪದಗಳನ್ನು ಕಟ್ಟಬೇಕಾಗುತ್ತದೆ, ಮತ್ತು ಇದಕ್ಕಾಗಿ ಈ ಇಂಗ್ಲಿಶ್ ಪದಗಳು ಎಸಕಪದಗಳಾಗಿ ಬಳಕೆಯಾಗುವಾಗ ಯಾವ ಹುರುಳನ್ನು ಕೊಡುತ್ತವೆಯೋ ಅವನ್ನು ತಿಳಿಸುವಂತಹ ಎಸಕಪದಗಳನ್ನು ಹೆಸರುಪದದೊಂದಿಗೆ ಸೇರಿಸಿರುವ ಕೂಡುಪದಗಳನ್ನು ಬಳಸಬೇಕಾಗುತ್ತದೆ:
ಎಸಕಪದ | ಹೆಸರುಪದವಾಗಿ ಬಳಕೆ | |||
charge | ದಾಳಿಮಾಡು | charge | ದಾಳಿ | |
deal | ಹರದುಗೆಯ್ಯು | deal | ಹರದು | |
hunt | ಬೇಟೆಯಾಡು | hunt | ಬೇಟೆ | |
delay | ತಡಮಾಡು | delay | ತಡ | |
escape | ಪಾರಾಗು | escape | ಪಾರು | |
excuse | ಹೆಳೆಯೊಡ್ಡು | excuse | ಹೆಳೆ | |
grip | ಪಟ್ಟುಹಿಡಿ | grip | ಪಟ್ಟು | |
cost | ಬೆಲೆಬೀಳು | cost | ಬೆಲೆ | |
permit | ಸೆಲವುಕೊಡು | permit | ಸೆಲವು |
ತಿರುಳು:
ಇಂಗ್ಲಿಶ್ ಎಸಕಪದ(verb)ಗಳಿಂದ ಹೆಸರುಪದ(noun)ಗಳನ್ನು ಪಡೆಯಲು ಹಲವು ಒಟ್ಟುಗಳನ್ನು ಬಳಸಲಾಗುತ್ತದೆ; ಇವು ಕೊಡುವ ಹುರುಳನ್ನವಲಂಬಿಸಿ ಕನ್ನಡದಲ್ಲಿ ಬೇರೆ ಬೇರೆ ಒಟ್ಟುಗಳನ್ನು ಬಳಸಬೇಕಾಗುತ್ತದೆ.
(1) ಎಸಕಪದಗಳಿಂದ ಪಡೆದ ಹೆಸರುಪದಗಳು ಎಸಕವನ್ನು ನಡೆಸುವ ಮಂದಿಯನ್ನು ಹೆಸರಿಸುತ್ತಿವೆಯಾದರೆ, ಕನ್ನಡದಲ್ಲಿ ಎಸಕಪದಕ್ಕೆ ಗ/ಇಗ ಒಟ್ಟನ್ನು ಸೇರಿಸಿ ಹೊಸ ಪದಗಳನ್ನು ಉಂಟುಮಾಡಿಕೊಳ್ಳಬಹುದು (read ಓದು, reader ಓದುಗ);
(2) ಎಸಕಕ್ಕೆ ಒಳಗಾದ ಮಂದಿಯನ್ನು ಹೆಸರಿಸುತ್ತಿವೆಯಾದರೆ ಹೆಸರುಪದದೊಂದಿಗೆ ಪಡೆಗ ಎಂಬುದನ್ನು ಸೇರಿಸಿರುವ ನುಡಿತವನ್ನು ಬಳಸಬಹುದು (payee ಹಣ ಪಡೆಗ);
(3) ಎಸಕವನ್ನು ನಡೆಸುವಲ್ಲಿ ಬಳಕೆಯಾಗುವ ಮುಟ್ಟು(instrument)ಗಳನ್ನು ಹೆಸರಿಸುತ್ತಿವೆಯಾದರೆ ಕ ಒಟ್ಟನ್ನು ಬಳಸಬಹುದು (peel ಸುಲಿ peeler ಸುಲಿಕ);
(4) ಎಸಕವನ್ನು ಇಲ್ಲವೇ ಅದರ ನೆನಸಿನ ದೊರೆತ(abstract result)ವನ್ನು ಹೆಸರಿಸುತ್ತಿವೆಯಾದರೆ ಇಕೆ/ಕೆ (ಇಲ್ಲವೇ ತ) ಒಟ್ಟನ್ನು ಬಳಸಬಹುದು (read ಓದು reading ಓದಿಕೆ, pierce ಇರಿ piercing ಇರಿತ); ಮತ್ತು
(5) ಎಸಕದ ನನಸಿನ (concrete) ದೊರೆತವನ್ನು ಹೆಸರಿಸುತ್ತಿವೆಯಾದರೆ ಗೆ/ಇಗೆ ಒಟ್ಟನ್ನು ಬಳಸಬಹುದು (sew ಹೊಲಿ sewing ಹೊಲಿಗೆ).
(6) ಹಲವೆಡೆಗಳಲ್ಲಿ ಇಂಗ್ಲಿಶ್ ಎಸಕಪದಗಳಿಗೆ ಸಾಟಿಯಾಗುವಂತಹ ಎಸಕಪದಗಳು ಕನ್ನಡದಲ್ಲಿರುವುದಿಲ್ಲ; ಅಂತಹ ಕಡೆಗಳಲ್ಲಿ ಕೂಡುಪದಗಳನ್ನು, ಇಲ್ಲವೇ ಬೇರೆ ಬಗೆಯ ನುಡಿತಗಳನ್ನು ಕನ್ನಡದಲ್ಲಿ ಉಂಟುಮಾಡಬೇಕಾಗುತ್ತದೆ.
ಕೂಡುಪದಗಳನ್ನು ಬಳಸಿರುವಲ್ಲಿ ಅವುಗಳಿಗೆ ನೇರವಾಗಿ ಮೇಲೆ ತಿಳಿಸಿದ ಒಟ್ಟುಗಳನ್ನು ಸೇರಿಸಬಹುದು (translate ನುಡಿಮಾರು, translator ನುಡಿಮಾರುಗ), ಇಲ್ಲವೇ ಅವುಗಳ ಮೊದಲನೆಯ ಪದವಾಗಿ ಬಂದ ಹೆಸರುಪದಕ್ಕೆ ಬೇರೆ ಒಟ್ಟುಗಳನ್ನು ಸೇರಿಸಿ ಇಂಗ್ಲಿಶ್ ಹೆಸರುಪದಗಳು ಕೊಡುವ ಹುರುಳನ್ನು ಪಡೆಯಬಹುದು (print ಅಚ್ಚುಹಾಕು, printer ಅಚ್ಚುಗಾರ).
(7) ಎಸಕಪದಕ್ಕೆ ಗ/ಇಗ ಒಟ್ಟನ್ನು ಸೇರಿಸಿ ಹೆಸರುಪದವನ್ನು ಪಡೆಯುವ ಬದಲು ಎಸಕಪದದಿಂದ ಪಡೆದ ಹೆಸರುಪದಕ್ಕೆ ಗಾರ ಒಟ್ಟನ್ನು ಸೇರಿಸಿಯೂ ಮಂದಿಯನ್ನು ಹೆಸರಿಸುವ ಮೇಲಿನ ಇಂಗ್ಲಿಶ್ ಪದಗಳಿಗೆ ಸಾಟಿಯಾದ ಕನ್ನಡ ಪದಗಳನ್ನು ಪಡೆಯಲು ಬರುತ್ತದೆ (play ಆಡು, ಆಟ; player ಆಟಗಾರ).
(8) ಇಂಗ್ಲಿಶ್‌ನ ಹಲವು ಎಸಕಪದಗಳನ್ನು ಹಾಗೆಯೇ ಯಾವ ಒಟ್ಟನ್ನೂ ಸೇರಿಸದ ಹೆಸರುಪದಗಳಾಗಿ ಬಳಸಲಾಗುತ್ತದೆ; ಈ ಹೆಸರುಪದಗಳು ಕೊಡುವ ಹುರುಳನ್ನವಲಂಬಿಸಿ, ಅವಕ್ಕೆ ಸಾಟಿಯಾಗಬಲ್ಲ ಹೆಸರುಪದಗಳನ್ನು ಮೇಲಿನ ಹಮ್ಮುಗೆಗಳನ್ನು ಬಳಸಿ ಪಡೆಯಲು ಬರುತ್ತದೆ.
1 Response
[…] << ಬಾಗ-6 […]