ಈಗ ಬೆರಳ ತುದಿಯಲ್ಲೇ ಶಂಕರ ಬಟ್ಟರ ವಿಚಾರಗಳು

– ರತೀಶ ರತ್ನಾಕರ.

DNS mindana_1

ಒಂದು ನಾಡಿನ ಏಳಿಗೆ ಆ ನಾಡಿನ ಮಂದಿಯ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೊಂದಿಗೆ ನೇರವಾದ ಸಂಬಂದವನ್ನು ಹೊಂದಿದೆ. ಕಲಿಕೆ ಹಾಗು ದುಡಿಮೆಗಳನ್ನು ಗಟ್ಟಿಯಾಗಿ ಕಟ್ಟುವಲ್ಲಿ ಆ ನಾಡಿನ ಮಂದಿ ನುಡಿಯ ಪಾತ್ರ ಬಹು ದೊಡ್ಡದಾಗಿದೆ. ಒಂದು ನುಡಿಯಲ್ಲಿನ ಮಾತು ಮತ್ತು ಬರಹಗಳು ಒಂದಕ್ಕೊಂದು ಹತ್ತಿರವಾಗಿದ್ದು, ಅವುಗಳ ನಡುವೆ ಗೊಂದಲಗಳು ಕಡಿಮೆಯಾದಶ್ಟು ಕಲಿಕೆ ಮತ್ತು ದುಡಿಮೆಯನ್ನು ಗಟ್ಟಿಯಾಗಿ ಕಟ್ಟಲು ನೆರವಾಗುತ್ತದೆ, ಆ ಮೂಲಕ ಒಗ್ಗಟ್ಟನ್ನು ಸಾದಿಸಬಹುದಾಗಿದೆ. ಕನ್ನಡ ನುಡಿಯ ವಿಚಾರದಲ್ಲಿ ಹೇಳಬೇಕೆಂದರೆ ಮಾತು ಮತ್ತು ಬರಹದ ನಡುವಿನ ಗೊಂದಲವನ್ನು ಕಡಿಮೆ ಮಾಡುವಲ್ಲಿ ‘ಎಲ್ಲರ ಕನ್ನಡ’ವು ಬಹು ದೊಡ್ಡ ಪಾತ್ರವನ್ನು ವಹಿಸುತ್ತಿದೆ.

ಎಲ್ಲರ ಕನ್ನಡವು ನಿನ್ನೆ ಮೊನ್ನೆ ಬಂದಿದ್ದಲ್ಲ, ಅರಿಮೆಯ ತಳಹದಿಯಲ್ಲಿ ನುಡಿಯರಿಗರು ನಡೆಸಿದ ಹಲವಾರು ಅರಕೆಗಳ ಆದಾರದ ಮೇಲೆ ಎಲ್ಲರ ಕನ್ನಡವು ಹೊರಹೊಮ್ಮಿದೆ. ಇದಕ್ಕಾಗಿ ಹಲವಾರು ವರುಶಗಳಶ್ಟು ಕೆಲಸವನ್ನು ನುಡಿಯರಿಗರು ಮಾಡಿದ್ದಾರೆ. ಹೀಗೆ ನಾಡಿನ ಏಳಿಗೆಗೆ ಬೇಕಾದ ಎಲ್ಲರ ಕನ್ನಡವನ್ನು ಕಟ್ಟುವಲ್ಲಿ ಮುಂಚೂಣಿಯಲ್ಲಿರುವವರು ಹೆಸರಾಂತ ನುಡಿಯರಿಗರಾದ ಡಾ. ಡಿ. ಎನ್. ಶಂಕರ ಬಟ್ಟರು. ಕನ್ನಡದಲ್ಲಿ ಈಗಿರುವ ಲಿಪಿಯಲ್ಲಿ ಆಗಬೇಕಾದ ಸುದಾರಣೆಗಳನ್ನು ನುಡಿಯರಿಮೆಯ ತಳಹದಿಯ ಮೇಲೆ ತಿಳಿಸಿಕೊಟ್ಟು, ಕನ್ನಡದ ಬರಹವನ್ನು ಮಾತಿಗೆ ಹತ್ತಿರವಾಗಿಸಲು ಆಗಬೇಕಾದ ಮತ್ತಶ್ಟು ಕೆಲಸಗಳ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ.

ಮದ್ರಾಸ್ ವಿಶ್ವವಿದ್ಯಾಲಯದಿಂದ ಸಂಸ್ಕ್ರುತದಲ್ಲಿ ಎಂ.ಎ. ಮತ್ತು ಪುಣೆ ವಿಶ್ವವಿದ್ಯಾಲದಿಂದ ನುಡಿಯರಿಮೆ(linguistics)ಯಲ್ಲಿ ಪಿ.ಎಚ್.ಡಿ. ಪಡೆದಿರುವ ಬಟ್ಟರು, ಅಮೇರಿಕಾದ ಸ್ಟ್ಯಾನ್ಪೋರ್‍ಡ್ ಯುನಿವರ್‍ಸಿಟಿ, ಆಸ್ಟ್ರೇಲಿಯಾದ ಲಾ ಟ್ರೋಬೆ ಯುನಿವರ್‍ಸಿಟಿ, ಬೆಲ್ಜಿಯಂ ದೇಶದ ಆಂಟ್ವೆರ್‍ಪ್ ಯುನಿವರ್‍ಸಿಟಿ, ಜರ್‍ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್‍ನಂತಹ ಜಗತ್ತಿನ ಹಲವಾರು ಮುಂಚೂಣಿಯ ವಿಶ್ವವಿದ್ಯಾಲಯಗಳಲ್ಲಿ ಮತ್ತು ಮಯ್ಸೂರಿನಲ್ಲಿರುವ ಬಾರತೀಯ ಬಾಶಾ ಸಂಸ್ತಾನ, ಮಣಿಪುರ ವಿಶ್ವವಿದ್ಯಾಲಯ, ಪುಣೆಯಲ್ಲಿರುವ ಡೆಕ್ಕನ್ ಕಾಲೇಜ್ ಮುಂತಾದೆಡೆ ಕಲಿಸುಗರಾಗಿ, ಅರಕೆಗಾರರಾಗಿ ಕೆಲಸ ಮಾಡಿದ್ದಾರೆ. ನುಡಿಯರಿಮೆಯ ಸುತ್ತ ಬರೆದಿರುವ ಅವರ ಹತ್ತಾರು ಹೊತ್ತಗೆಗಳು ಮತ್ತು ಅರಕೆಯ ಪೇಪರ್ ಗಳು (research papers) ಜಗತ್ತಿನೆಲ್ಲೆಡೆ ಹೆಸರುಗಳಿಸಿವೆ.

ಈ ಮೇಲಿನದು ಶಂಕರ ಬಟ್ಟರ ಕುರಿತ ಒಂದು ಸಣ್ಣ ಪರಿಚಯವಶ್ಟೆ. ಅವರ ಕಲಿಕೆ ಹಾಗು ಕೆಲಸಗಳಂತೆ ಅವರು ಕನ್ನಡಕ್ಕೆ ಕೊಟ್ಟ ಕೊಡುಗೆಯೂ ದೊಡ್ಡದು. ಕನ್ನಡ ನುಡಿಯ ಹಳಮೆ, ಕನ್ನಡದ ಸೊಲ್ಲರಿಮೆ, ಈಗಿನ ಕನ್ನಡ ನುಡಿಯಲ್ಲಿನ ಸೊಲ್ಲರಿಮೆಯ ತೊಡಕುಗಳು ಮತ್ತು ಬರಹದ ತೊಡುಕುಗಳು ಮತ್ತು ಅವುಗಳ ಬಗೆಹರಿಕೆ, ಮಕ್ಕಳ ಕಲಿಕೆಯಲ್ಲಿ ತಾಯ್ನುಡಿಯ ಪಾತ್ರ, ಕನ್ನಡಿಗರ ಮಾತು ಮತ್ತು ಬರಹದ ನಡುವಿನ ಗೊಂದಲ, ಅರಿಮೆಯ ಪದಗಳಿಗೆ ಕನ್ನಡದ್ದೇ ಪದಗಳನ್ನು ಕಟ್ತುವ ಬಗೆ… ಹೀಗೆ ಒಂದು ನುಡಿಯ ಏಳಿಗೆಗೆ ಬೇಕಾದ ಎಲ್ಲಾ ವಿಶಯಗಳ ಕುರಿತು ಅರಕೆಯನ್ನು ನಡೆಸಿ ತಮ್ಮ ಅರಿವನ್ನು ಹೊತ್ತಗೆಗಳ ರೂಪದಲ್ಲಿ ಹರಿಯಬಿಟ್ಟಿದ್ದಾರೆ.

ಕನ್ನಡ ನುಡಿಯ ಸೊಲ್ಲರಿಮೆ ಮತ್ತು ಒಳಗುಟ್ಟನ್ನು ಅರಿಯುವ ಮಟ್ಟಿಗೆ ಶಂಕರ ಬಟ್ಟರ ಹೊತ್ತಗೆ ಮತ್ತು ವಿಚಾರಗಳು ಸೀಮಿತವಾಗಿಲ್ಲ. ಅವರ ವಿಚಾರಗಳು ಕನ್ನಡ ಮತ್ತು ಕನ್ನಡಿಗನ ಏಳಿಗೆಗೆ ಪೂರಕವಾಗಿವೆ. ಎತ್ತುಗೆಗೆ, ಗಟ್ಟಿಯಾದ ಕಲಿಕೆಯನ್ನು ಕಟ್ಟುವಲ್ಲಿ ನುಡಿಯನ್ನು ಒಂದೊಳ್ಳೆ ಸಾದನವಾಗಿ ಹೇಗೆ ಬಳಸಬಹುದು ಎಂದು ತಿಳಿಸಿಕೊಟ್ಟಿದ್ದಾರೆ. ಪರಿಣಾಮಕಾರಿಯಾದ ಕಲಿಕೆಯನ್ನು ನಡೆಸುವುದರ ಕುರಿತು ಇವರು ಬೆಳಕು ಚೆಲ್ಲುತ್ತಾರೆ. ಕೂಡಣದ ಏರ‍್ಪಾಡಿನಲ್ಲಿ ಕನ್ನಡಿಗನಿಗೆ ತನ್ನ ಕನ್ನಡ ನುಡಿಯ ಮೇಲಿರುವ ಕೀಳರಿಮೆಯನ್ನು ಹೊಡೆದುಹಾಕಿ ಎಲ್ಲರಂತೆ ತಾನು ಮುಂದುವರಿಯಲು ಬೇಕಾಗಿರುವ ವಿಚಾರಗಳನ್ನು ಹರಿಯಬಿಟ್ಟಿದ್ದಾರೆ.

ಬರಹಗನ್ನಡವನ್ನು ಆಡುಗನ್ನಡಕ್ಕೆ ಮತ್ತಶ್ಟು ಹತ್ತಿರವಾಗಿಸಲು ಕನ್ನಡಕ್ಕೆ ಬೇಕಿರದ ಮಹಾಪ್ರಾಣಗಳನ್ನು ಕಯ್ಬಿಟ್ಟು, ಅದರ ಜಾಗದಲ್ಲಿ ಕನ್ನಡಿಗರ ಮಾತಿನಲ್ಲಿರುವಂತೆಯೇ, ಅಲ್ಪಪ್ರಾಣಗಳನ್ನೇ ಬಳಸುವಂತಹ ಲಿಪಿ ಸುದಾರಣೆಗಳನ್ನು ನಮ್ಮ ಮುಂದಿಟ್ಟಿದ್ದಾರೆ. ಶಂಕರ ಬಟ್ಟರ ಇಂತಹ ವಿಚಾರಗಳ ಮತ್ತು ಹೊತ್ತಗೆಗಳ ಕುರಿತು ವಿವರಗಳು ಈಗ ಒಂದೇ ಕಡೆ ಸಿಗುತ್ತಿದೆ. ಇವರ ವಿಚಾರ ಮತ್ತು ಹೊತ್ತಗೆಗಳನ್ನು ಹೆಚ್ಚು ಮಂದಿಯ ಮುಂದಿಡುವ ನಿಟ್ಟಿನಲ್ಲಿ http://dnshankarabhat.net/ ಮಿಂದಾಣವು ಹೊರಬಂದಿದೆ. ಶಂಕರ ಬಟ್ಟರ ಪರಿಚಯ, ಹೊತ್ತಗೆಗಳು ಮತ್ತು ವಿಡಿಯೋಗಳು ಇಲ್ಲಿ ನೋಡಸಿಗುತ್ತವೆ.

ಶಂಕರ ಬಟ್ಟರ ವಿಚಾರಗಳು ಕನ್ನಡ ಹಾಗು ಕನ್ನಡಿಗನ ಏಳಿಗೆಗೆ ದಾರಿದೀಪವಾಗಿ ಕಾಣುತ್ತಿವೆ. ಈ ದಾರಿದೀಪವನ್ನು ಕನ್ನಡಿಗರ ಕಯ್ಗೆಟುಕುವಂತೆ ಮಾಡುವತ್ತ dnshankarabhat.net ಮಿಂದಾಣವು ಕೆಲಸ ಮಾಡುತ್ತಿದೆ. ಈ ಮಿಂದಾಣವು ಹೆಚ್ಚು ಹೆಚ್ಚು ಕನ್ನಡಿಗರನ್ನು ತಲುಪಿ, ಕನ್ನಡಿಗರ ನಾಳೆಗಳನ್ನು ಕಟ್ಟುವಲ್ಲಿ ಕನ್ನಡ ನುಡಿಯ ಪಾತ್ರದ ಬಗ್ಗೆ ಹೆಚ್ಚು ಚರ‍್ಚೆಗಳು ನಡೆದು, ಕನ್ನಡಿಗರ ಏಳಿಗೆಗೆ ವೇಗ ತುಂಬಲು ಕನ್ನಡ ಬರಹದಲ್ಲಿ ಆಗಬೇಕಾದ ಮಾರ‍್ಪಾಟುಗಳ ಬಗ್ಗೆ ತೆರೆದ ಮನಸಿನ ಚರ‍್ಚೆಯಾಗಲಿ. ಅದಕ್ಕಾಗಿ, ಈ ಮಿಂದಾಣವು ಎಲ್ಲಾ ಬಗೆಯಲ್ಲಿ ನೆರವಾಗಲಿ.

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: